ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಫೀಜ್ ಬಂಧಿಸಲು ಪುರಾವೆ ಇಲ್ಲ - ಗಿಲಾನಿ

Last Updated 13 ಮೇ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಲಷ್ಕರ್-ಎ-ತೊಯ್ಬಾ ಸಂಸ್ಥಾಪಕ ಹಫೀಜ್ ಸಯೀದ್‌ನನ್ನು ಬಂಧಿಸಲು ಸೂಕ್ತ ಸಾಕ್ಷ್ಯಾಧಾರಗಳು ಇಲ್ಲ ಮತ್ತು ಒಂದುವೇಳೆ ಆತನನ್ನು ಬಂಧಿಸಿದರೆ ಕೋರ್ಟ್ ಮತ್ತೆ ಆತನನ್ನು ಬಿಡುಗಡೆ ಮಾಡುತ್ತದೆ ಎಂದು ಪಾಕಿಸ್ತಾನದ ಪ್ರಧಾನಿ ಯೂಸುಫ್ ರಜಾ ಗಿಲಾನಿ ಹೇಳಿದ್ದಾರೆ.

ಸದ್ಯ ಪಾಕಿಸ್ತಾನದಲ್ಲಿ ಸ್ವತಂತ್ರವಾಗಿ ಓಡಾಡಿಕೊಂಡಿರುವ ಸಯೀದ್ ಬಂಧನಕ್ಕೆ ವಾರೆಂಟ್ ಹೊರಡಿಸಲು ಸೂಕ್ತ ಪುರಾವೆಗಳಿಲ್ಲ ಎಂದು ಗಿಲಾನಿ ತಿಳಿಸಿದ್ದಾರೆ.

`ಒಂದು ವೇಳೆ ಆತನನ್ನು ಬಂಧಿಸಿದರೆ ಕೋರ್ಟ್ ಬಿಡುಗಡೆ ಮಾಡುತ್ತದೆ. ಕೋರ್ಟ್‌ಗೆ ಸರಿಯಾದ ಸಾಕ್ಷ್ಯಾಧಾರಗಳು ಅಗತ್ಯ. ಪಾಕಿಸ್ತಾನದಲ್ಲಿ ನ್ಯಾಯಾಂಗ ಸಂಪೂರ್ಣ ಸ್ವತಂತ್ರವಾಗಿದೆ~ ಎಂದು ಗಿಲಾನಿ `ಡೈಲಿ ಟೆಲಿಗ್ರಾಫ್~ಗೆ ಹೇಳಿದ್ದಾರೆ.

ಅಲ್ ಖೈದಾದ ಹೊಸ ನಾಯಕ ಅಯಾಮನ್ ಅಲ್-ಜವಾಹಿರಿ ಪಾಕಿಸ್ತಾನದಲ್ಲಿಯೇ ಇದ್ದಾನೆ ಎಂಬ ವರದಿಗಳನ್ನು ಅಲ್ಲಗಳೆದಿರುವ ಗಿಲಾನಿ, ಜವಾಹಿರಿ ಪಾಕಿಸ್ತಾನದಲ್ಲಿ ಅಡಗಿದ್ದಾನೆ ಎಂದು ನಾವೇಕೆ ಭಾವಿಸಬೇಕು ಎಂದು ಪ್ರಶ್ನಿಸಿದ್ದಾರೆ.

`ಅಮೆರಿಕದ ಸಿಐಎ ಮತ್ತು ಪಾಕಿಸ್ತಾನದ ಐಎಸ್‌ಐ ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸುತ್ತಿವೆ. ಖಚಿತ ಮತ್ತು ಕ್ರಮ ತೆಗೆದುಕೊಳ್ಳಬಹುದಾದಂತಹ ಮಾಹಿತಿಗಳನ್ನು ಸಿಕ್ಕರೆ ಜವಾಹಿರಿಯನ್ನು ಹಿಡಿಯುತ್ತೇವೆ. ಜವಾಹಿರಿ ಪಾಕಿಸ್ತಾನದಲ್ಲಿಯೇ ಇರುವುದಾಗಿ ಯಾರಾದರೂ ಹೇಳಿದರೆ, ಅವರು ಆ ಮಾಹಿತಿಯನ್ನು ನಮ್ಮಂದಿಗೆ ವಿನಿಮಯ ಮಾಡಿಕೊಳ್ಳಲಿ~ ಎಂದಿದ್ದಾರೆ.

`ಜವಾಹಿರಿ ಪಾಕಿಸ್ತಾನದಲ್ಲಿ ಅಡಗಿ ಕುಳಿತಿದ್ದಾನೆ ಎಂಬ ಬಗ್ಗೆ ನಿಮ್ಮ ದೃಷ್ಟಿಕೋನ ಏನು~ ಎಂಬ ಪ್ರಶ್ನೆಗೆ, `ನಾವು ಹಾಗೆ ಭಾವಿಸುವುದಿಲ್ಲ~ ಎಂದು ಗಿಲಾನಿ ಚುಟುಕಾಗಿ ಉತ್ತರಿಸಿದ್ದಾರೆ.

2013ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಮಾಜಿ ಕ್ರಿಕೆಟಿಗ, ರಾಜಕೀಯ ಮುಖಂಡ ಇಮ್ರಾನ್ ಖಾನ್ ಅವರಿಂದ ಯಾವುದೇ ಪ್ರಬಲ ಪ್ರತಿಸ್ಪರ್ಧೆ ಎದುರಾಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಆತ್ಮವಿಶ್ವಾಸದಿಂದ ಉತ್ತರಿಸಿದ್ದಾರೆ.

ಜವಾಹಿರಿ ಪಾಕಿಸ್ತಾನದಲ್ಲಿಯೇ ಆಶ್ರಯ ಪಡೆದಿದ್ದಾನೆ ಎಂದು ಇತ್ತೀಚಿಗೆ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಹೇಳಿದ್ದರು.

166 ಜನರ ಸಾವಿಗೆ ಕಾರಣವಾದ ಮುಂಬೈ ದಾಳಿಯ ಪ್ರಮುಖ ಸೂತ್ರಧಾರ ಹಫೀಜ್ ಸಯೀದ್‌ನನ್ನು ಹಿಡಿದುಕೊಟ್ಟವರಿಗೆ 10 ದಶಲಕ್ಷ ಡಾಲರ್ ಬಹುಮಾನ ನೀಡುವುದಾಗಿ ಇತ್ತೀಚಿಗಷ್ಟೇ ಅಮೆರಿಕ ಘೋಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT