ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಮಾಲಿ ಕಾರ್ಮಿಕರ ಕಲ್ಯಾಣಕ್ಕೆ ಆಗ್ರಹಿಸಿ ಮನವಿ

Last Updated 16 ಫೆಬ್ರುವರಿ 2011, 9:55 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಬಜೆಟ್‌ನಲ್ಲಿ ಹಮಾಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಹೆಚ್ಚಿನ ಅನುದಾನ ನೀಡಬೇಕು ಎಂದು ಆಗ್ರಹಿಸಿ ಲಕ್ಷ್ಮೇಶ್ವರ ಎಪಿಎಂಸಿ ಲೈಸೆನ್ಸ್‌ದಾರರ ಹಮಾಲಿ ಕೆಲಸಗಾರರ ಸಂಘ ಮಂಗಳವಾರ ಪ್ರತಿಭಟನಾ ರ್ಯಾಲಿ ನಡೆಸಿ ಉಪ ತಹಸೀಲ್ದಾರ ಕೊಪ್ಪಳ ಅವರಿಗೆ ಮನವಿ ಸಲ್ಲಿಸಿತು.

‘ಹಮಾಲಿ ಕಾರ್ಮಿಕರು ಸೇರಿದಂತೆ ಮತ್ತಿತರ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ-2009ರ ಮೂಲಕ ಸೌಲಭ್ಯಗಳನ್ನು ನೀಡಲು ಪ್ರಸ್ತುತ ಬಜೆಟ್‌ನಲ್ಲಿ ಅವಶ್ಯಕ ಅನುದಾನ ನೀಡಬೇಕು. ಎಲ್ಲ ಹಮಾಲಿ ಕಾರ್ಮಿಕರಿಗೂ ಮಂಡಳಿ ಮುಖಾಂತರ ಗುರುತಿನ ಚೀಟಿ, ಪಿಂಚಣಿ, ವಸತಿ ಸೌಲಭ್ಯ, ಹಮಾಲರ ಮಕ್ಕಳಿಗೆ ವಿದ್ಯಾರ್ಥಿ ವೇತನ, ವೈದ್ಯಕೀಯ ನೆರವು, ಮರಣ ಪರಿಹಾರ, ಕೆಲಸದ ವೇಳೆಯಲ್ಲಿ ಸಂಭವಿಸುವ ಅಪಘಾತಕ್ಕಾಗಿ ಪರಿಹಾರ ಸೇರಿದಂತೆ ಮತ್ತಿತರ ಸಾಮಾಜಿಕ ಸೌಲಭ್ಯ ಒದಗಿಸಬೇಕು.

ಎಲ್ಲ ಹಮಾಲಿ ಕಾರ್ಮಿಕರಿಗೂ ಕೇಂದ್ರ ಸರ್ಕಾರದ ರಾಷ್ಟ್ರೀಯ ಸ್ವಾಸ್ಥ ಭೀಮಾ, ಜನಶ್ರೀ ಭೀಮಾ ಯೋಜನೆಗಳನ್ನು ಜಾರಿಗೆ ತರಬೇಕು. ಕಾರ್ಮಿಕ ಕಾನೂನುಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಹಾಗೂ ಸ್ವಾವಲಂಬನ ನೂತನ ಪಿಂಚಣಿ ಯೋಜನೆ ಕೈಬಿಟ್ಟು ಖಾತ್ರಿಯಾದ ಹಾಗೂ ಕಾರ್ಮಿಕರ ಮುಪ್ಪಿನ ಕಾಲದಲ್ಲಿ ಸಹಾಯ ಮಾಡಬಲ್ಲ ಪಿಂಚಣಿ ಯೋಜನೆ ಜಾರಿಗೆ ತರಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಗೋವಿಂದಪ್ಪ ಶೆರಸೂರಿ ಹಾಗೂ ಕಾರ್ಯದರ್ಶಿ ಮಲ್ಲಪ್ಪ ಚಕ್ರಸಾಲಿ ಇವರ ನೇತೃತ್ವದಲ್ಲಿ ಸ್ಥಳೀಯ ಎಪಿಎಂಸಿಯಿಂದ ಆರಂಭವಾದ ಪ್ರತಿಭಟನಾ ರ್ಯಾಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಉಪ ತಹಸೀಲ್ದಾರರ ಕಚೇರಿಗೆ ಆಗಮಿಸಿ ಅಲ್ಲಿ ಮನವಿ ಸಲ್ಲಿಸಲಾಯಿತು.

ಹನಮಂತಪ್ಪ ಶೆರಸೂರಿ, ಮಲ್ಲಪ್ಪ ಗದ್ದಿ, ನಿಂಗಪ್ಪ ಕನವಳ್ಳಿ, ಹನಮಪ್ಪ ಶೆರಸೂರಿ, ಮುದಕಪ್ಪ ಗದ್ದಿ, ಯಲ್ಲಪ್ಪ ಮೆಣಸಿನಕಾಯಿ, ಅಮರೇಶಪ್ಪ ಗುಡಗುಂಟಿ, ಹೆಗ್ಗಪ್ಪ ಗದ್ದಿ, ಬಸಪ್ಪ ಗುದಗಿ, ಮಲ್ಲಪ್ಪ ಬನ್ನಿ, ಗಂಗಪ್ಪ ಕರಿಗಾರ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಉಪ ತಹಸೀಲ್ದಾರ ಕೊಪ್ಪಳ ಮನವಿ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT