ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಕಥೆ ಪ್ರತಿಭೆ ಶ್ರೀನಿವಾಸ

ಸಾಧಕರು ದೇಸಿ
Last Updated 11 ಜನವರಿ 2014, 10:28 IST
ಅಕ್ಷರ ಗಾತ್ರ

ಕುಣಿಗಲ್‌ ದೊಡ್ಡಪೇಟೆ ನಿವಾಸಿ ಜಿ.ಎಸ್.ಶ್ರೀನಿವಾಸ್ ಮೂಲತಹ ಕೃಷಿಕರು. ಆದರೂ ಕಲೆ, ಸಾಹಿತ್ಯ, ನಾಟಕ, ಹರಿಕಥೆ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜನಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.

ಎಚ್.ಗೋವಿಂದರಾವ್ ಸಿಂಧ್ಯಾ ಮತ್ತು ಸೀತಾಬಾಯಿ ಪುತ್ರ ಜಿ.ಎಸ್.ಶ್ರೀನಿವಾಸ ರಾವ್ ಸಿಂಧೆ ಪಿಯುಸಿ ವರೆಗೆ ಶಿಕ್ಷಣ ಪಡೆದು ನಂತರ ಜೀವನೋಪಾಯಕ್ಕೆ ಕೃಷಿ ಚಟುವಟಿಕೆಯಲ್ಲಿ ತೊಡಗಿದರು. ರಂಗಭೂಮಿ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಅವರು, ಜಾತ್ರಾ ಮಹೋತ್ಸವಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದ ನಾಟಕಗಳಿಂದ ಪ್ರೇರಿತರಾಗಿ ರಂಗಭೂಮಿ ಪ್ರವೇಶಿಸಿದರು.

ಸುಮಾರು 35 ವರ್ಷಗಳ ಕಾಲ ರಾಜ ವಿಕ್ರಮ, ಭಕ್ತ ಪುರೂರವ, ರಾಜ ಸತ್ಯವ್ರತ, ಮಹಾಂಧಾತ ನಲ್ಲತಂಗ ನಾಟಕಗಳಲ್ಲಿ ಶನಿದೇವರ ಪಾತ್ರ ಅಭಿನಯಿಸಿ, ಸಾವಿರಾರು ಪ್ರದರ್ಶನ ನೀಡಿದ್ದಾರೆ. ಇವರ ನಟನ ಚಾತುರ್ಯವನ್ನು ಗಮನಿಸಿದ ಅಂದಿನ ಪುರಸಭೆ ಅಧ್ಯಕ್ಷ ಕೆ.ವಿ.ಶೇಷಪ್ಪ, ನಟಭಯಂಕರ ಪ್ರಶಸ್ತಿ ನೀಡಿದ್ದರು.

ಗೋದೂರು ಅಂತರಗಂಗಾ ಮಠಾಧೀಶ್ವರಾದ ಶಂಕರಭಾರತೀ ಸ್ವಾಮೀಜಿ ಮಾರ್ಗದರ್ಶನದಲ್ಲಿ ಹರಿಕಥೆ, ಪ್ರವಚನ ಕಲಿತರು. ಸುಮಾರು 20 ವರ್ಷದಿಂದ ಕೋಲಾರ, ಬೆಂಗಳೂರು, ರಾಮನಗರ, ಚೆನ್ನಪಟ್ಟಣ ಮತ್ತು ತುಮಕೂರು ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಶನಿದೇವರ ಕುರಿತು ಹರಿಕಥೆ ನಡೆಸಿಕೊಟ್ಟಿದ್ದಾರೆ.

ಹರಿಕಥೆ ಜೊತೆಗೆ ಸಂಗೀತದಲ್ಲೂ ಆಸಕ್ತಿ ಬೆಳೆಸಿಕೊಂಡು ವಿದ್ವಾನ್‌ ಪುಟ್ಟಸ್ವಾಮಾಚಾರ್, ವಿದ್ವಾನ್ ಜಿ.ರಾಮಕೃಷ್ಣಯ್ಯ, ವಿದ್ವಾನ್ ಕೆ.ಆರ್.ಚಿನ್ನಸ್ವಾಮಿ ಮಾರ್ಗದರ್ಶನದಲ್ಲಿ ಸಂಗೀತ ಕಲಿತಿದ್ದಾರೆ. ಅಲ್ಲದೆ ಕೊಲ್ಲಾಪುರದಮ್ಮ ಗರಡಿ ಮನೆಯಲ್ಲಿ ಪೈಲ್ವಾನ್ ಸಿದ್ದಾಪ್ಪ ಶಿಷ್ಯರಾಗಿ ತರಬೇತಿ ಪಡೆದ್ದಿದ್ದು, ಆಂಬೂರಿನ ಫೈಟರ್ ಕೃಷ್ಣಪ್ಪ ಶಿಷ್ಯನಾಗಿ ದೊಣ್ಣೆ ವರಸೆ ಕಲಿತಿದ್ದಾರೆ.

ಶನಿ ದೇವರ ಹರಿಕಥಾ ಪ್ರವಚನದಲ್ಲಿನ ಗಣನೀಯ ಸಾಧನೆಗೆ ಶಂಕರಭಾರತ ಸ್ವಾಮಿಯವರಿಂದ ‘ಶನಿ ಕಥಾಶ್ರವಣ ದುರಂಧರ’, ತುಮಕೂರು ರಾಮಕೃಷ್ಣ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅವರಿಂದ ‘ಹರಿಕೀರ್ತನಕಾರ’, ಭದ್ರಾವತಿ ಗೊಂದೂರು ಮಠದ ನಾಮದೇವ ಭಾರತಿ ಸ್ವಾಮೀಜಿ ಅವರಿಂದ ‘ಹರಿಕಥಾ ವಿದ್ವಾನ್’ ಹಾಗೂ ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ.

ದಿನಕಳೆದಂತೆ ಹರಿಕಥೆಗಳಿಂದ ಮಾನಸಿಕ ಪರಿವರ್ತನೆಗೊಂಡು ಮನಸ್ಸು ಅಧ್ಯಾತ್ಮದ ಕಡೆ ವಾಲಿತು.  ಸಹೋದರ ದೇವರಾವ್ ಸಿಂಧೆ ಮತ್ತು ಅಭಿಮಾನಿಗಳ ಸಹಕಾರದಿಂದ ದೊಡ್ಡಪೇಟೆಯಲ್ಲಿ ಚಕ್ರವರ್ತಿ ಶನಿದೇವರ ದೇವಾಲಯ ನಿರ್ಮಿಸಿ ಅರ್ಚಕ ವೃತ್ತಿ ಮತ್ತು ಕೃಷಿಕರಾಗಿ ಜೀವನ ನಡೆಸುತ್ತಿದ್ದಾರೆ.

ಹರಿಕಥೆಯಲ್ಲಿ ಶನಿದೇವರ ಪಾತ್ರ ಪೋಷಣೆಗೆ ಸಿದ್ಧರಿದ್ದು, ಯುವ ಜನತೆ ಮನಸ್ಸು ಮಾಡಿದರೆ ತರಬೇತಿ ನೀಡುವುದಾಗಿ ಶ್ರೀನಿವಾಸರಾವ್ ಸಿಂಧೆ ಹೇಳುತ್ತಾರೆ. ಸಂಪರ್ಕ ಸಂಖ್ಯೆ: 8861529670
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT