ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿತ್ ಪ್ರದೇಶದಲ್ಲಿ ಜಾಟ-ಜಾಟವಾರ ಕಾಳಗ

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮೇರಠ್: ಉತ್ತರಪ್ರದೇಶದ ಪೂರ್ವಭಾಗದಿಂದ ಆಗ್ರಾ ಮೂಲಕ ಪಶ್ಚಿಮಕ್ಕೆ ಪ್ರವೇಶಿಸಿದರೆ ಒಂದು ಕ್ಷಣ ಮಂಡ್ಯ-ಮೈಸೂರಿನ ಯಾವುದೋ ಹಳ್ಳಿಯ ಮೂಲಕ ಹಾದುಹೋಗುತ್ತಿದ್ದೆವೇನೋ ಎಂದನಿಸುತ್ತದೆ. ಯಮುನೆಯ ನೀರಿನಿಂದ ಸಮೃದ್ಧವಾದ ಫಲವತ್ತಾದ ಗದ್ದೆಗಳು, ಕಬ್ಬು ಮತ್ತು ಭತ್ತದ ಬೆಳೆಗಳು, ಟ್ರಾಕ್ಟರ್ ಓಡಿಸುತ್ತಿರುವ ರೈತರು, ದನ-ಕರುಗಳ ಹಿಂಡು...ಹೀಗೆ.


 
ನೋಡುನೋಡುತ್ತಿದ್ದಂತೆಯೇ ಈ ಭಾಗದ ಜನರ ಜಾತಿ, ವೃತ್ತಿ, ಸಾಮಾಜಿಕ ಜೀವನ, ಸ್ವಭಾವ ಎಲ್ಲದರಲ್ಲಿಯೂ ಹಳೆಮೈಸೂರು ಕಾಣತೊಡಗುತ್ತದೆ. ಇದು `ಹರಿತ್ ಪ್ರದೇಶ~ ಎಂದು ಹೇಳಾಗುತ್ತಿರುವ ಪಶ್ಚಿಮ ಉತ್ತರಪ್ರದೇಶ.

 ಏಳನೆ ಹಂತದ ಚುನಾವಣೆ ನಡೆಯಲಿರುವ ಈ ಪ್ರದೇಶ ಜಾಟ- ದಲಿತ (ಜಾಟವಾ)-ಮುಸ್ಲಿಮ್ ಪ್ರಾಬಲ್ಯದ ನೆಲೆ. ಒಂದು ಕಾಲದಲ್ಲಿ ಇಲ್ಲಿನ ರಾಜಕೀಯದ ಒಲವು-ನಿಲುವುಗಳನ್ನು ತೀರ್ಮಾನಿಸುತ್ತಿದ್ದವರು ಮಾಜಿ ಪ್ರಧಾನಿ ಚರಣ್‌ಸಿಂಗ್.

ಅವರ ನಂತರ  ಮಹೇಂದ್ರಸಿಂಗ್ ಟಿಕಾಯತ್ ಎಂಬ ಇನ್ನೊಬ್ಬ ಜಾಟರ ನಾಯಕ ಕಾಣಿಸಿಕೊಂಡರು. ಅವರು ನೇರವಾಗಿ ರಾಜಕೀಯ ಪ್ರವೇಶಿಸದೆ ಇದ್ದರೂ ತಮ್ಮ ಭಾರತ ಕಿಸಾನ್ ಯೂನಿಯನ್ ಮೂಲಕ ಜಾಟರ ರಾಜಕೀಯ ನಿರ್ಧಾರದ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದ್ದರು.ಈ ಮಧ್ಯೆ ಅಪ್ಪನ ಮುಂಡಾಸು ಧರಿಸಿ ರಾಜಕೀಯ ಪ್ರವೇಶಿಸಿದ ಅಜಿತ್‌ಸಿಂಗ್ ಈಗ ಇಲ್ಲಿನ ಜಾಟರ ಪ್ರಶ್ನಾತೀತ ನಾಯಕ.
 
ಭೂಮಾಲೀಕರದಾದ ಜಾಟರು ಇತ್ತೀಚಿನವರೆಗೂ ಪಾಳೆಪಟ್ಟು ರೀತಿಯಲ್ಲಿ ಈ ಪ್ರದೇಶವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿದ್ದರು. 

 ಆದರೆ 90ರ ದಶಕದಲ್ಲಿ ಇಲ್ಲಿ ಪ್ರವೇಶಿಸಿದ ಕಾನ್ಸಿರಾಮ್ ನಿಧಾನವಾಗಿ ಇಲ್ಲಿನ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸಿಬಿಟ್ಟರು. `ಎಷ್ಟೋ ವರ್ಷಗಳ ಕಾಲ ಇಲ್ಲಿ ದಲಿತರು ಮತಚಲಾಯಿಸಿರಲೇ ಇಲ್ಲ, ಆ ಮಟ್ಟದ ಜಾಟರ ದಬ್ಬಾಳಿಕೆ ಇತ್ತು~ ಎನ್ನುತ್ತಾರೆ ಇಲ್ಲಿನ ದಲಿತ ನಾಯಕರು ಸಣ್ಣದನಿಯಲ್ಲಿ.

ತಮ್ಮ ಶ್ರಮದ ಫಲವನ್ನು ನೋಡಲು ಕಾನ್ಸಿರಾಮ್ ಜೀವಂತವಾಗಿರಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿನ 68 ಸ್ಥಾನಗಳ ಪೈಕಿ 35ರಲ್ಲಿ ಬಿಎಸ್‌ಪಿ ಅಭ್ಯರ್ಥಿಗಳು ಗೆದ್ದಿದ್ದರು. ಅಜಿತ್‌ಸಿಂಗ್ ಅವರ ರಾಷ್ಟ್ರೀಯ ಲೋಕದಳಕ್ಕೆ ಸಿಕ್ಕಿದ್ದು ಕೇವಲ ಹತ್ತು.
 
ಒಂದು ಕಾಲದಲ್ಲಿ `ಜಾಟರ ನಾಡು~ ಎಂದು ಕರೆಯಲಾಗುತ್ತಿದ್ದ ಈ ಪ್ರದೇಶ  `ಜಾಟ-ಜಾಟವರ ನಾಡು~ ಎಂದು ಕರೆಯುವಷ್ಟು ಬದಲಾಗಿದ್ದು ಈ ರಾಜಕೀಯ ಪಲ್ಲಟದ ನಂತರದ ದಿನಗಳಲ್ಲಿ.

 ಪಕ್ಷಾಂತರ ಮತ್ತು ನಿಷ್ಠಾಂತರಗಳಲ್ಲಿ ಅಜಿತ್‌ಸಿಂಗ್ ನಿಸ್ಸೀಮರು. ಈ ಚಾಳಿಯಿಂದ ಅವರಷ್ಟು ರಾಜಕೀಯ ಲಾಭ ಪಡೆದ ಇನ್ನೊಬ್ಬ ರಾಜಕಾರಣಿಯನ್ನು ಹುಡುಕುವುದು ಕಷ್ಟ.

ಮೊದಲು ಲೋಕದಳದಿಂದ ಹೊರಬಂದು ತನ್ನದೇ ಪಕ್ಷ `ಲೋಕದಳ (ಅಜಿತ್‌ಸಿಂಗ್)~ ಕಟ್ಟಿದ್ದ ಅಜಿತ್‌ಸಿಂಗ್ ಅದನ್ನು ಜನತಾಪಕ್ಷದ ಜತೆ ವಿಲೀನ ಮಾಡಿ ವಿ.ಪಿ.ಸಿಂಗ್ ಸಂಪುಟದಲ್ಲಿ ಕೃಷಿಸಚಿವರಾಗಿದ್ದರು. ಪಿ.ವಿ.ನರಸಿಂಹರಾವ್ ಕಾಲದಲ್ಲಿ ಕಾಂಗ್ರೆಸ್ ಸೇರಿ ಅಲ್ಲಿಯೂ ಸಚಿವರಾಗಿದ್ದರು.

ಅಲ್ಲಿಂದಲೂ ಹೊರಬಂದು ಇನ್ನೊಂದು ಪಕ್ಷ ಕಟ್ಟಿದ್ದರು. 2001ರಲ್ಲಿ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗೆ ಮೊದಲು ಎನ್‌ಡಿಎ ಸೇರಿ ಸಚಿವರಾಗಿದ್ದರು. 2003ರಲ್ಲಿ ಮಾಯಾವತಿ    ಅವರ ಸರ್ಕಾರಕ್ಕೆ ಮೊದಲು ಬೆಂಬಲ        ನೀಡಿ ನಂತರ ಅದನ್ನು ಹಿಂದೆಗೆದುಕೊಂಡು ಅದರ ಪತನಕ್ಕೆ ಕಾರಣವಾಗಿದ್ದರು.    

 ಅದರ ನಂತರ ಸಮಾಜವಾದಿ ಪಕ್ಷದ ಸರ್ಕಾರಕ್ಕೆ 2007ರ ವರೆಗೂ ಬೆಂಬಲ ನೀಡಿದ್ದರು. 2009ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಜತೆ ಹೋಗಿ ಐದು ಸ್ಥಾನಗಳನ್ನು ಗೆದ್ದಿದ್ದ ಅಜಿತ್‌ಸಿಂಗ್ ಉತ್ತರಪ್ರದೇಶದ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡು ಕೇಂದ್ರ ಸಂಪುಟದಲ್ಲಿ ಸಚಿವರಾದರು.
 
ಎಪ್ಪತ್ತಮೂರು ವರ್ಷದ ಅಜಿತ್‌ಸಿಂಗ್ ಈ ಚುನಾವಣೆಯ ಮೂಲಕ ಮಗ ಜಯಂತ್ ಚೌದರಿಯನ್ನು ತನ್ನ ರಾಜಕೀಯ ಉತ್ತರಾಧಿಕಾರಿಯಾಗಿ ಪ್ರತಿಷ್ಠಾಪಿಸಲು ಹೊರಟಿದ್ದಾರೆ.

ರಾಹುಲ್ ಮತ್ತು ಅಖಿಲೇಶ್ ನಂತರ ಈ ಚುನಾವಣೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಮೂರನೆ ಯುವ ನಾಯಕ ಜಯಂತ್ ಚೌದರಿ.  ರಾಹುಲ್-ಜಯಂತ್ ನಡುವಿನ ಸ್ನೇಹ ಕೂಡಾ ಎರಡು ಪಕ್ಷಗಳ ಮೈತ್ರಿ ಈ ವರೆಗೆ ಸುಗಮವಾಗಿ ಮುಂದುವರಿದುಕೊಂಡು ಹೋಗಲು ಕಾರಣ. ಈ ಮೈತ್ರಿ ಇಲ್ಲಿನ ಚುನಾವಣೆಯ ರಾಜಕೀಯವನ್ನೇ ಬದಲಾಯಿಸಿಬಿಟ್ಟಿದೆ.

  ಕಳೆದ ಚುನಾವಣೆಯಲ್ಲಿ ಕೇವಲ ಎರಡು ಸ್ಥಾನಗಳನ್ನಷ್ಟೇ ಗಳಿಸಿದ್ದ ಕಾಂಗ್ರೆಸ್ ಈಗಿನ ಮೈತ್ರಿಬಲದಿಂದ ಕನಿಷ್ಠ ಒಂದಂಕಿ ದಾಟುವ ನಿರೀಕ್ಷೆಯಲ್ಲಿದೆ. ಜಾಟರು ರಾಜ್ಯದ ಜನಸಂಖ್ಯೆಯಲ್ಲಿ ಶೇಕಡಾ ಎರಡೂವರೆಯಷ್ಟು ಮಾತ್ರ ಇದ್ದರೂ ಪಶ್ಚಿಮ ಉತ್ತರಪ್ರದೇಶದಲ್ಲಿ ಶೇಕಡಾ ಆರರಷ್ಟಿದ್ದಾರೆ.
 
ಚರಣ್‌ಸಿಂಗ್ ಅವರ ಕಾಲದಿಂದಲೂ ಇಲ್ಲಿ ಜಾಟರು ಮತ್ತು ಮುಸ್ಲಿಮರು ಒಂದು ಗುಂಪಾಗಿ ಮತದಾನ ಮಾಡುತ್ತಾ ಬಂದವರು.  ಬಾಬ್ರಿಮಸೀದಿ ಧ್ವಂಸದ ನಂತರ ರಾಜ್ಯದ ಮುಸ್ಲಿಮರು ಸಮಾಜವಾದಿ ಪಕ್ಷದ ಕಡೆ ಹೋದರೂ ಇಲ್ಲಿನವರು ಅಜಿತ್‌ಸಿಂಗ್‌ಜತೆಯಲ್ಲಿಯೇ ಇದ್ದರು.

ಆದರೆ ಬಿಜೆಪಿ ಜತೆ ಆರ್‌ಎಲ್‌ಡಿ ಮೈತ್ರಿ ಮಾಡಿಕೊಂಡ ನಂತರ ಈ ಗುಂಪು ಕೂಡಾ ಒಡೆದುಹೋಗಿತ್ತು. ಆ ನಷ್ಟವನ್ನು ಕಾಂಗ್ರೆಸ್ ಜತೆಗಿನ ಮೈತ್ರಿ ತುಂಬಿಕೊಡಬಲ್ಲದು ಎನ್ನುವ ಲೆಕ್ಕಚಾರ ಆರ್‌ಎಲ್‌ಡಿಯದ್ದು.
 ಪ್ರಾರಂಭದಿಂದಲೂ ಸಮಾಜವಾದಿ ಪಕ್ಷಕ್ಕೆ ಕಾಲೂರಲು ಸಾಧ್ಯವಾಗದ ಭೂಪ್ರದೇಶ ಇದು.

ಕಳೆದ ಚುನಾವಣೆಯಲ್ಲಿ ಈ ಪಕ್ಷ ಗೆದ್ದಿರುವುದು ಕೇವಲ ಮೂರು ಸ್ಥಾನ. ಈ ಬಾರಿ ರಾಜ್ಯದ ಉಳಿದೆಲ್ಲ ಕಡೆಗಳಲ್ಲಿ ಬಲವರ್ಧನೆಯಾಗಬಹುದೆಂಬ ನಿರೀಕ್ಷೆಯಲ್ಲಿರುವ ಸಮಾಜವಾದಿ ಪಕ್ಷಕ್ಕೆ `ಹರಿತ್ ಪ್ರದೇಶ~ ದೊಡ್ಡ ಸವಾಲು. 

 ಇದನ್ನು ಎದುರಿಸಲು ಹೊರಟಿರುವ ಮುಲಾಯಂಸಿಂಗ್ ಇತ್ತೀಚಿನ ವರೆಗೆ ಅಜಿತ್‌ಸಿಂಗ್ ಅವರ ಪರಮಾಪ್ತೆಯಾಗಿದ್ದ ಅನುರಾಧಾ ಚೌದರಿ ಅವರನ್ನೇ ತಮ್ಮ ಕಡೆ ಸೆಳೆದುಕೊಂಡು ಅವರ ಮೂಲಕ ಒಂದಷ್ಟು ಜಾಟರ ಮತಗಳನ್ನು ಪಡೆಯುವ ಲೆಕ್ಕಚಾರದಲ್ಲಿದ್ದಾರೆ. ಕಳೆದ ಲೋಕಸಭಾ ಚುನಾವಣೆಯ ಕಾಲದಲ್ಲಿ ತಮ್ಮಿಂದ ದೂರವಾಗಿ ಈಗ ಮರಳಿ ಬಂದಿರುವ ಅಜಮ್‌ಖಾನ್ ಮೂಲಕ ಮುಸ್ಲಿಮರನ್ನು ಒಲಿಸಿಕೊಳ್ಳುವ ಪ್ರಯತ್ನವೂ ನಡೆದಿದೆ. 

 ರಾಮಮಂದಿರ ನಿರ್ಮಾಣದ ಚಳುವಳಿಯ ಕಾಲದಲ್ಲಿ ಈ ಪ್ರದೇಶ ಬಿಜೆಪಿ ಕಡೆ ವಾಲಿತ್ತು. ಇದಕ್ಕೆ ಒಂದು ಕಾರಣ ಲೋಧ್ ಜಾತಿಗೆ ಸೇರಿರುವ ಆಗಿನ ಮುಖ್ಯಮಂತ್ರಿ ಕಲ್ಯಾಣ್‌ಸಿಂಗ್. ಆಲಿಗಡ್ ಮತ್ತು ಬುಲಂದಶಹರ ಜಿಲ್ಲೆಗಳಲ್ಲಿ ಈ ಜಾತಿ ಮತದಾರರು ನಿರ್ಣಾಯಕ ಸ್ಥಾನದಲ್ಲಿದ್ದಾರೆ. 

 ಪಕ್ಷ ಬಿಟ್ಟು ಹೋಗಿರುವ ಕಲ್ಯಾಣ್‌ಸಿಂಗ್ ಈಗ  ಪ್ರತ್ಯೇಕ ಪಕ್ಷ ಕಟ್ಟಿ ಚುನಾವಣೆ ಎದುರಿಸುತ್ತಿದ್ದಾರೆ.  ಲೋಧ್ ಮತಗಳನ್ನು ಈಗ ಬಿಜೆಪಿ ನೆಚ್ಚಿಕೊಳ್ಳುವಂತಿಲ್ಲ. ಈ ನಷ್ಟವನ್ನು ತುಂಬಿಕೊಳ್ಳಲಿಕ್ಕಾಗಿಯೇ ಲೋಧ್ ಜಾತಿಗೆ ಸೇರಿರುವ ಉಮಾಭಾರತಿಯರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡಿರುವುದು. 

 ಆದರೆ ಕಲ್ಯಾಣ್‌ಸಿಂಗ್ ಅವರಂತೆ ಉಮಾಭಾರತಿಯವರಿಗೂ ಬಿಜೆಪಿ ಅನ್ಯಾಯ ಮಾಡಿದೆ ಎಂಬ ಭಾವನೆ ಲೋಧ್ ಜನರಲ್ಲಿರುವುದರಿಂದ ಸನ್ಯಾಸಿನಿಯ ಸೇರ್ಪಡೆಯಿಂದ ಪಕ್ಷಕ್ಕೆ ಹೆಚ್ಚಿನ ಲಾಭವಾಗಲಾರದು.

 ಉಳಿದೆಲ್ಲ ಕಡೆಗಳಂತೆ ಬಹುಜನ ಸಮಾಜ ಪಕ್ಷವನ್ನು ಬಹಿರಂಗವಾಗಿ ಬೆಂಬಲಿಸಿ ಮಾತನಾಡುವವರು ಈ ಪ್ರದೇಶದಲ್ಲಿ  ಹೆಚ್ಚು ಸಿಗುವುದಿಲ್ಲ. ಆದರೆ ಮಂಗಳವಾರ ಆಗ್ರಾದಲ್ಲಿ ನಡೆದ ಬಿಎಸ್‌ಪಿ ನಾಯಕಿ ಮಾಯಾವತಿ ಅವರ ರ‌್ಯಾಲಿ ಉಳಿದೆಲ್ಲ ಪಕ್ಷಗಳ ರ‌್ಯಾಲಿಗಳಿಗೆ ಹೋಲಿಸಿದರೆ ಈ ಚುನಾವಣೆಯಲ್ಲಿನ ಅತ್ಯಂತ ದೊಡ್ಡ ರಾಜಕೀಯ ಶಕ್ತಿ ಪ್ರದರ್ಶನ ಎಂದು ಹೇಳಲಾಗುತ್ತಿದೆ. ಇದನ್ನು ಹೇಗೆ ಬೇಕಾದರೂ ವ್ಯಾಖ್ಯಾನಿಸಬಹುದಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT