ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿದು ಬಂದ ಜನಸಾಗರ..!

Last Updated 12 ಅಕ್ಟೋಬರ್ 2012, 9:20 IST
ಅಕ್ಷರ ಗಾತ್ರ

ಬೆಳಗಾವಿ: ಕರ್ನಾಟಕ ಏಕೀಕರಣಗೊಂಡ 50 ವರ್ಷಗಳ ಸವಿನೆನಪಿಗಾಗಿ ರಾಜ್ಯದ ಉತ್ತರದ ತುತ್ತತುದಿಯಲ್ಲಿರುವ ಕುಂದಾನಗರಿಯಲ್ಲಿ ನಿರ್ಮಿಸಲಾಗಿರುವ `ಸುವರ್ಣಸೌಧ~ದ ಲೋಕಾ ರ್ಪಣೆ ಗುರುವಾರ ಅದ್ದೂರಿಯಾಗಿ ನಡೆದಿದ್ದು, ಸಹಸ್ರಾರು ಜನರು ಸಾಕ್ಷಿಯಾದರು.

ರಾಜ್ಯದ ಹೆಮ್ಮೆಯ ಸಂಕೇತವಾಗುವ ಮೂಲಕ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ಸಾರಿ ಹೇಳುವಂತಿರುವ ಈ ಕಟ್ಟಡವನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸಮರ್ಪಿಸಿದರು. ಉತ್ತರ ಕರ್ನಾಟಕದಲ್ಲಿ ಜರುಗಿದ ಐತಿಹಾಸಿಕ ಕ್ಷಣವನ್ನು ಸವಿಯಲು ಜನಸಾಗರವೇ ಹರಿದು ಬಂದಿತ್ತು.

ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಂದ ಸಹಸ್ರಾರು ಜನರು ಸಮಾರಂಭಕ್ಕೆ ಆಗಮಿಸಿದ್ದರು. ಕನ್ನಡ ಪರ ಘೋಷಣೆಗಳು ಮುಗಿಲು ಮುಟ್ಟಿದ್ದವು. ಜನಸಾಗರದ ಜೊತೆಗೆ ರಾಜ್ಯದ ಆಡಳಿತ ಯಂತ್ರವೇ ಆಗಮಿಸಿತ್ತು.

ಸಮಾರಂಭದಲ್ಲಿ ಭಾಗವಹಿಸಿದ್ದ ಜನರು ತಮ್ಮ ನಾಯಕರನ್ನು ಕಾಣುತ್ತಿದ್ದಂತೆಯೇ ಘೋಷಣೆ ಗಳನ್ನು ಕೂಗಿದರು.  ಬೆಳಿಗ್ಗೆಯಿಂದಲೇ ಜನರು ಸುವರ್ಣ ವಿಧಾನಸೌಧದ ಕಡೆಗೆ ತಂಡೋಪ ತಂಡವಾಗಿ ಆಗಮಿಸಿದರು. ಮಧ್ಯಾಹ್ನದ ಹೊತ್ತಿಗೆ ಸುವರ್ಣ ವಿಧಾನಸೌಧ ಆವರಣ ಜನಸಾಗರದಿಂದ ತುಂಬಿತ್ತು.

ಮಧ್ಯಾಹ್ನ 12.35ಕ್ಕೆ ಆಗಮಿಸಿದ ರಾಷ್ಟ್ರಪತಿ ಗಳು ನೇರವಾರಿ ಸಾರ್ವಜನಿಕ ಸಮಾರಂಭ ನಡೆಯುವ ಸ್ಥಳಕ್ಕೆ ತೆರಳಿದರು. ಅಲ್ಲಿಂದಲೇ ಗುಂಡಿ ಒತ್ತುವ ಮೂಲಕ ಸುವರ್ಣ ವಿಧಾನಸೌಧವನ್ನು ಲೋಕಾರ್ಪಣೆ ಮಾಡಿದರು. ನಂತರ ಅಶ್ವದಳದ ಗೌರವದೊಂದಿಗೆ ರಾಷ್ಟ್ರಪತಿಗಳನ್ನು ಸುವರ್ಣ ವಿಧಾನಸೌಧಕ್ಕೆ ಬರಮಾಡಿಕೊಳ್ಳಲಾಯಿತು.

ರಾಷ್ಟ್ರಪತಿಗಳು ಪೂರ್ಣಕುಂಭದಿಂದ ಭವ್ಯ ಸ್ವಾಗತ ನೀಡಲಾಯಿತು. ಜೊತೆಗೆ ಕರಡಿ ಮಜಲು ವಾದ್ಯ ಮೇಳ ಹೆಚ್ಚಿನ ಮೆರಗು ನೀಡಿತು.

ರಾಷ್ಟ್ರಪತಿಗಳಿಗೆ ಉತ್ತರ ಕರ್ನಾಟಕ ಭಾಗದ ಪೇಟಾವನ್ನು ಮುಖ್ಯಮಂತ್ರಿ ಜಗದೀಶ ಶೆಟ್ಟರ ತೊಡಿಸಿ, ವೀರರಾಣಿ ರಾಣಿ ಚನ್ನಮ್ಮನ ಬೆಳ್ಳಿ ಮೂರ್ತಿ ನೀಡಿ ಗೌರವಿಸಿದರು. ರಾಜ್ಯಪಾಲರಿಗೆ ಉಮೇಶ ಕತ್ತಿ ಚನ್ನಮ್ಮನ ಮೂರ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಪ್ರೇಕ್ಷಕರಿಂದ ಕರತಾಡನ ಮುಗಿಲು ಮುಟ್ಟಿತ್ತು.

ಪ್ರತಿಭಟನೆ, ವಾಗ್ವಾದ: ಸಮಾರಂಭಕ್ಕೆ ಪಾಸ್ ಇದ್ದವರಿಗೆ ಮಾತ್ರ ಪ್ರವೇಶ ಎಂದು ಪೊಲೀಸರು ಹೇಳಿದ್ದರಿಂದ ಜೆಡಿಎಸ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ಐತಿಹಾಸಿಕ ಕ್ಷಣವನ್ನು ನೋಡಲು ಎಲ್ಲರಿಗೂ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್‌ದವರು ಪ್ರವೇಶದ್ವಾರದ ಎದುರು ಪ್ರತಿಭಟನೆ ನಡೆಸಿದರು. ಈ ಹಂತದಲ್ಲಿ ಮಾತಿನ ಚಕಮಕಿ ನಡೆಯಿತು. ಜೆಡಿಎಸ್ ನಾಯಕರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಗಣ್ಯರಿಗೆ ನಿಗದಿಯಾಗಿದ್ದ ಸ್ಥಳಗಳಲ್ಲಿ ಆಸನಗಳು ಖಾಲಿ ಇದ್ದಿದ್ದರಿಂದ ಅಲ್ಲಿ ಅವಕಾಶ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಗ್ರಹಿಸಿದರು. ಈ ಸಂದರ್ಭದಲ್ಲೂ ಮಾತಿನ ಚಕಮಕಿ ನಡೆಯಿತು. ಎರಡೂ ಘಟನೆಗಳಲ್ಲಿ ಪೊಲೀಸರು ಬೆತ್ತದ ರುಚಿ ತೋರಿಸಿದರು.

ಲಘು ಲಾಠಿ ಪ್ರಹಾರ: ರಾಷ್ಟ್ರಪತಿಗಳು ಸುವರ್ಣ ವಿಧಾನಸೌಧದಿಂದ ನಿರ್ಗಮಿಸಿದ ನಂತರ ಹೊರಗೆ ಬಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರನ್ನು ನೋಡಲು ಅಭಿಮಾನಿಗಳು ಮುಗಿ ಬಿದ್ದರು. ನೂಕುನುಗ್ಗಲು ಉಂಟಾಗಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಯಡಿಯೂರಪ್ಪ ಪರ ಘೋಷಣೆ ಕೂಗಿದ ಜನರು, ಸುವರ್ಣ ವಿಧಾನಸೌಧದೊಳಗೆ ನುಗ್ಗಲು ಯತ್ನಿಸಿದರು. ಜನರನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಯಡಿಯೂರಪ್ಪ ಅವರು ತಮ್ಮ ವಾಹನದ ಬಾಗಿಲಲ್ಲೇ ನಿಂತು ಅಭಿಮಾನಿಗಳತ್ತ ಕೈಬೀಸುತ್ತ ನಡೆದರು.

ಒಳಗೆ ನುಗ್ಗಲು ಯತ್ನ: ಸಾರ್ವಜನಿಕ ಸಮಾರಂಭ ಮುಗಿದ ನಂತರ ಸಾರ್ವಜನಿಕರು ಸುವರ್ಣ ವಿಧಾನಸೌಧದೊಳಗೆ ನುಗ್ಗಲು ಯತ್ನಿಸಿದರು. ಬಹು ದಿನಗಳ ಬೇಡಿಕೆ ಈಡೇರಿದ್ದನ್ನು ಕಂಡ ಜನರು, ಒಳಗೆ ಪ್ರವೇಶಿಸಿ ಆನಂದದ ಕ್ಷಣ ಸವಿಯಲು ಯತ್ನಿಸಿದರು. ಆದರೆ ಗಣ್ಯಾತಿಗಣ್ಯರು ಸುವರ್ಣ ವಿಧಾನಸೌಧ ದೊಳಗೆ ಇದ್ದಿದ್ದರಿಂದ ಯಾರನ್ನೂ ಬಿಡಲಿಲ್ಲ. ಜನರನ್ನು ನಿಯಂತ್ರಿಸುವಲ್ಲಿ ಪೊಲೀಸರು ಪ್ರಯಾಸಪಟ್ಟರು.

ಬಸ್ಸಿನಲ್ಲಿ ಬಂದ ಶಾಸಕರು...!
ಬೆಳಗಾವಿ: ಸುವರ್ಣ ವಿಧಾನಸೌಧ ಉದ್ಘಾಟನೆಗೆ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರು ವೋಲ್ವೋ ಬಸ್‌ಗಳಲ್ಲಿ ಬಂದರು. ಜೆಡಿಎಸ್ ಶಾಸಕರು ಎರಡು ಬಸ್ಸುಗಳಲ್ಲಿ ಬಂದರೆ, ಬಿಜೆಪಿಯ ವಿಧಾನ ಪರಿಷತ್ ಸದಸ್ಯರು ಪ್ರತ್ಯೇಕವಾಗಿಯೇ ಮತ್ತೊಂದು ಬಸ್ಸಿನಲ್ಲಿ ಬಂದಿಳಿದರು.

ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯರು ಪ್ರತ್ಯೇಕ ಬಸ್ಸಿನಲ್ಲಿಯೇ ಆಗಮಿಸಿದರು. ಕೆಲವು ಶಾಸಕರು ತಮ್ಮ ಸ್ವಂತ ವಾಹನದಲ್ಲಿ ಬಂದು, ಪಾಸು ಇರದ ಕಾರಣ ತೊಂದರೆ ಅನುಭವಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT