ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿದ್ವರ್ಣದ ಕಚೇರಿ!

Last Updated 13 ಜೂನ್ 2011, 19:30 IST
ಅಕ್ಷರ ಗಾತ್ರ

ಪರಿಸರದ ನಿತ್ಯೋತ್ಸವ
ಬೃಹತ್ ಬೇರಿಂಗ್ ಚಕ್ರದ ಎದುರು ನಿಂತ ಗಾಜಿನ ಕಟ್ಟಡ. ಸುತ್ತಲೂ ನೆರಳು ಚೆಲ್ಲುವ ಮರಗಳು. ಮಾವು, ಸೀಬೆ, ಸಪೋಟ, ಸೀತಾಫಲ, ಪಪ್ಪಾಯ, ದಾಳಿಂಬೆಯಂತಹ ನೂರಾರು ಹಣ್ಣಿನ ಗಿಡಗಳು. ನೆಲ ಕಾಣದಷ್ಟು ಹರಡಿಕೊಂಡ ಸುವರ್ಣ ಪುಷ್ಪದ ಪೊದೆಗಳು, ಪುಷ್ಪವೃಷ್ಟಿಯೆರೆಯುವ ಆಕಾಶ ಮಲ್ಲಿಗೆ ಮರಗಳು. ಇದು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಟಿಮ್ಕೆನ್ ಕಂಪೆನಿಯ ಆವರಣ.

ಕಂಪೆನಿಯ ಏಳು ಎಕರೆ ಪೈಕಿ ಅರ್ಧದಷ್ಟು ಜಾಗವಿಲ್ಲಿ ಸಸ್ಯೋದ್ಯಾನಕ್ಕೆ ಮೀಸಲು. ಇಲ್ಲಿ ವೈವಿಧ್ಯಮಯ ಮರಗಳಿವೆ. ಬಳ್ಳಿ-ತರಕಾರಿ ತೋಟವಿದೆ. ಔಷಧ ಸಸ್ಯಗಳ ಉದ್ಯಾನ, ತೋಟಗಾರಿಕಾ ಬೆಳೆಗಳು, ಅಲಂಕಾರಿಕ ಪುಷ್ಪಗಳು ಹೀಗೆ ಕಂಪೆನಿ ಅಂಗಳದ ತುಂಬಾ ಸಸ್ಯ ಶಾಲಿನಿಯ ಮೇಳ!

ಬೇರಿಂಗ್ ಟು ಗಾರ್ಡ್‌ನಿಂಗ್
ಟಿಮ್ಕೆನ್ `ಲೋಹದ ಹಕ್ಕಿ~ಗಳಿಗೆ (ವಿಮಾನಗಳಿಗೆ) ಬೇರಿಂಗ್ ಉತ್ಪಾದಿಸುವ ಕಂಪೆನಿ. ಅದಕ್ಕೆ ನೂರರ ಪ್ರಾಯ. ವಿಶ್ವದ ಹಲವೆಡೆ ಶಾಖೆಗಳಿವೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವುದು ಮಾರಾಟ, ಮಾರುಕಟ್ಟೆ ಹಾಗೂ ಕಾರ್ಪೊರೇಟ್ ಕಚೇರಿ.

1998ರಲ್ಲಿ ಬೆಂಗಳೂರಿನಲ್ಲಿ ಶುರುವಾದ ಕಚೇರಿಯು ಇಲ್ಲಿನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು 2004ರಲ್ಲಿ. `ಕಟ್ಟಡ ಕಟ್ಟುವಾಗಲೇ ಸಸ್ಯೋದ್ಯಾನಕ್ಕೆ ಸ್ಥಳಾವಕಾಶ ಕಲ್ಪಿಸಲಾಗಿತ್ತು~ ಎನ್ನುತ್ತಾರೆ ಸಂಸ್ಥೆಯ ಆಡಳಿತ ಮತ್ತು ಸೌಲಭ್ಯ ವಿಭಾಗದ ಮುಖ್ಯಸ್ಥ ಬಿ.ಎನ್.ಶ್ರೀನಾಥ್. ಕಂಪೆನಿಯ ವಾತಾವರಣ ಪರಿಸರ ಪೂರಕವಾಗಿರಬೇಕು. ಉದ್ಯೋಗಿಗಳು ಒತ್ತಡ ರಹಿತವಾಗಿರಬೇಕು. ಇದು ಕಂಪೆನಿಯ ಬಯಕೆ.

ಅಂಗಳದಲ್ಲಿ ವಿವಿಧ ಜಾತಿಯ 228 ಮರಗಳಿವೆ. ಸೀತಾಫಲ, ಸೀಬೆ, ಚಕ್ಕೋತ, ಮೋಸಂಬಿ, ಪಪ್ಪಾಯ ಗಿಡಗಳು ಫಸಲು ನೀಡುತ್ತಿವೆ. ಮಾವಿನ ಮರಗಳು ಹಣ್ಣು ಕೊಡುವ ಹಂತದಲ್ಲಿವೆ. ಅಂಗಳದ ಒಂದು ಭಾಗದಲ್ಲಿ ಬಾಳೆ ತೋಟವಿದೆ.

ಪಚ್ಚಬಾಳೆ ಮತ್ತು ಏಲಕ್ಕಿ ಬಾಳೆ ಎರಡೂ ಉಂಟು. ಬಾಳೆಯ ರುಚಿ ಚಪ್ಪರಿಸುವ ಹಿರಿಯ ಎಂಜಿನಿಯರ್ ಮಂಜುನಾಥ್ ಪ್ರಕಾರ `ಮೂರು ವರ್ಷದಿಂದ ನೂರಾರು ಗೊನೆಗಳನ್ನು ಪಡೆದಿದ್ದೇವೆ. ಒಂದೊಂದು ಗೊನೆ ಕನಿಷ್ಠ 50ರಿಂದ 60 ಕೆ.ಜಿ ತೂಗುತ್ತದೆ. ಈ ಸಲ ಎರಡೂವರೆ ಟನ್ ಬಾಳೆಹಣ್ಣು ಸಿಕ್ಕಿದೆ~. 

 ಅಂಗಳದ ಅಂದಕ್ಕೆ ತಕ್ಕಂತೆ ಹೂವು-ಹಣ್ಣಿನ ಗಿಡಗಳ ವಿನ್ಯಾಸವಿದ್ದು, ಸೊಪ್ಪು ಬೆಳೆಯಲು ವಿಶಾಲ ಸ್ಥಳ ಮೀಸಲು. ಋತುವಿಗೆ ತಕ್ಕ ಸೊಪ್ಪು ಇಲ್ಲಿ ನಗುತ್ತದೆ. ಈಗ ಕಾಣುವುದು ಪಾಲಕ್ ಸೊಪ್ಪಿನ ರಾಶಿ. ಪಡವಲ, ಹೀರೆ, ಸೀಮೆಬದನೆ.. ಹೀಗೆ ಒಂದು ವರ್ಷಕ್ಕೆ ಅಂದಾಜು ಒಂದು ಟನ್ ತರಕಾರಿ ಬೆಳೆಯಲೂ ಪ್ರತ್ಯೇಕ ಸ್ಥಳವಿದೆ.
 
`ಯಾವ ಬೆಳೆಗೂ ರಸಗೊಬ್ಬರ, ಕೀಟನಾಶಕ ಬಳಸುವುದಿಲ್ಲ. ಮರಗಳ ಎಲೆಗಳಿಂದಲೇ ಗೊಬ್ಬರ.ಇದು ಅಪ್ಪಟ ಸಾವಯವ ಹಣ್ಣು, ತರಕಾರಿ ~ ಎನ್ನುತ್ತಾರೆ ರೊಮಾನಿಯೋ ಲ್ಯಾಂಡ್‌ಸ್ಕೇಪ್‌ನ ಮುಖ್ಯಸ್ಥ ರಂಜಿತ್ ಕುಮಾರ್. 

 ಮಳೆ ನೀರಿನ ಮೇಲೆ ಅವಲಂಬನೆ
ಕಂಪೆನಿಯಲ್ಲಿ ಕೊಳವೆ ಬಾವಿಯಿಲ್ಲ. ಎಲೆಕ್ಟ್ರಾನಿಕ್ ಸಿಟಿ ಅಸೋಸಿಯೇಷನ್‌ನಿಂದ ನೀರು ಎರವಲು ಪಡೆಯುತ್ತಾರೆ. ಉಳಿದಂತೆ ಮಳೆ ನೀರೇ ಆಧಾರ. ಇಡೀ ಅಂಗಳದಲ್ಲಿ ಮಳೆ ನೀರು ಇಂಗುವ ವ್ಯವಸ್ಥೆ ಇದೆ. ವಾಕಿಂಗ್ ಪಾತ್, ಪಾರ್ಕಿಂಗ್ ಜಾಗ ಹೀಗೆ ಎಲ್ಲೆಡೆ ಮಳೆ ನೀರು ಭೂಮಿ ಸೇರುತ್ತದೆ. ಇಂಗಿ ಹೆಚ್ಚಾದ ಮೇಲೆ ಭೂಗತ ಟ್ಯಾಂಕ್‌ನಲ್ಲಿ ಸಂಗ್ರಹವಾಗುತ್ತದೆ. ಒಂದು ಹದ  ಮಳೆಗೆ ಒಂದು ಬಾರಿಗೆ ಏಳು ಲಕ್ಷ ಲೀಟರ್ ನೀರು ಭೂಮಿಗಿಳಿದರೆ, ಮೂರು ಲಕ್ಷ ಲೀಟರ್ ನೀರು ಟ್ಯಾಂಕ್ ಸೇರುತ್ತದೆ.

ಈ ನೀರೇ ಗಿಡಗಳಿಗೆ ಜೀವದ್ರವ. `ಮಳೆ ನೀರಿನ ಜೊತೆಗೆ ಬಳಸಿದ ನೀರನ್ನು ಶುದ್ಧೀಕರಿಸಿ ಮತ್ತೆ ಬಳಸುತ್ತೇವೆ. ಶುದ್ಧೀಕೃತ ನೀರನ್ನೂ ಗಿಡಗಳಿಗೆ ಉಪಯೋಗಿಸುತ್ತಿದ್ದೇವೆ~ ಎನ್ನುತ್ತಾರೆ ಮಂಜುನಾಥ್.

ಅಂದಹಾಗೆ, ಕಂಪೆನಿಯ ಸಸ್ಯೋದ್ಯಾನದಲ್ಲಿ ಉತ್ಪಾದನೆಯಾಗುವ ಹಣ್ಣು - ತರಕಾರಿ, ಹೂವು ಯಾವುದೂ ಬಿಕರಿಗಲ್ಲ. ದುಡಿಯುವ ನೌಕರರಿಗೆ ಹಣ್ಣು, ತರಕಾರಿಯೇ ಬೋನಸ್ಸು. ಬಳಸಿ ಇನ್ನೂ ಹೆಚ್ಚಾದರೆ ಮಾತ್ರ ಕಂಪೆನಿಯ ಕ್ಯಾಂಟಿನ್‌ನಲ್ಲಿ ಅಡುಗೆಗೆ ಬಳಕೆಯಾಗುತ್ತದೆ.

ಪ್ರಸ್ತುತ ಕಾರ್ಪೊರೇಟ್ ವಲಯದಲ್ಲಿ ಸೋಷಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್‌ಆರ್) ಹೆಸರಲ್ಲಿ ತೋರಿಕೆಯ ಪರಿಸರ ಕಾಳಜಿ ಪ್ರದರ್ಶನವಾಗುತ್ತಿದೆ. ಅಂಥವುಗಳ ನಡುವೆ ಟಿಮ್ಕೆನ್ ಸಂಸ್ಥೆಯ ಧೋರಣೆ ಭಿನ್ನವೆನ್ನಿಸುತ್ತದೆ. `ಪರಿಸರದಿಂದ ಎಷ್ಟೆಲ್ಲ ಒಳ್ಳೆಯದನ್ನು ಪಡೆಯುತ್ತೇವೆ. ಪರಿಸರಕ್ಕೆ ನಾವು ಕಿಂಚಿತ್ತಾದರೂ ಒಳ್ಳೆಯದನ್ನು ಮಾಡಬೇಕು~- ಈ ಧ್ಯೇಯ ವಾಕ್ಯದೊಂದಿಗೆ ಟಿಮ್ಕೆನ್ ಪರಿಸರ ಸಂರಕ್ಷಣೆಗೆ ಬದ್ಧವಾಗಿದೆ.

ಚೆರ‌್ರಿ ಗಿಡದ ಪಾರ್ಕಿಂಗ್ ತಾಣ
ಟಿಮ್ಕೆನ್ ಕಂಪೆನಿಯ ಅಂಗಳ ನೋಡುವಾಗ ಥಟ್ಟನೆ ಆಕರ್ಷಿಸುವುದು ಚೆರ‌್ರಿ ಗಿಡಗಳ ಪಾರ್ಕಿಂಗ್ ತಾಣ. ಸುಮಾರು 30ರಿಂದ 40 ಸಿಂಗಪೂರ್ ಚೆರ‌್ರಿ ಗಿಡಗಳನ್ನು ಬೆಳೆಸಿರುವ ಕಂಪೆನಿ, ಅವುಗಳ ಕೆನಾಪಿಯನ್ನು ಸವರಿ ಕಾರ್‌ಗಳಿಗೆ ನೆರಳಾಗಿಸಿದೆ. ಕಂಪೆನಿಯ ಮುಖ್ಯಸ್ಥರಿಂದ ಎಕ್ಸಿಕ್ಯೂಟಿವ್‌ವರೆಗೂ ಎಲ್ಲರೂ ಚೆರ‌್ರಿ ಮರಗಳ ಅಡಿಯಲ್ಲೇ ವಾಹನಗಳನ್ನು ನಿಲ್ಲಿಸುತ್ತಾರೆ. ಹಾಗೆ ನಿಲ್ಲಿಸುವ ವಿನ್ಯಾಸ ಕೂಡ ಆಕರ್ಷಣೀಯವಾಗಿದೆ.

ಕಾರ್ ಪಾರ್ಕಿನಿಂದ ಉತ್ತೇಜಿತಗೊಂಡಿರುವ ಅಧಿಕಾರಿಗಳು ಕಂಪೆನಿಯ ಸಾಮಾನ್ಯ ಸಭೆ, ಚರ್ಚೆಗಳನ್ನು ಹಸಿರು ಚಪ್ಪರದಡಿ ನಡೆಸಲು ತೀರ್ಮಾನಿಸಿದ್ದಾರೆ. ಅದಕ್ಕಾಗಿ ಸೀಮೆಬದನೆ, ದ್ರಾಕ್ಷಿ ಹಾಗೂ ಬಳ್ಳಿಯಾಗಿ ಬೆಳೆದು ಚಪ್ಪರವಾಗುವಂತಹ ತರಕಾರಿ ಹಣ್ಣುಗಳನ್ನು ಬೆಳೆಸುತ್ತಿದ್ದಾರೆ. ಕೆಲವೇ ತಿಂಗಲ್ಲಿ `ಗ್ರೀನ್ ಮೀಟಿಂಗ್ ಹಾಲ್~ ಕೂಡ ಸಿದ್ಧವಾಗುತ್ತದೆ. ಇದನ್ನು ಹಸಿರು ಕಚೇರಿ ಎನ್ನಲು ಇನ್ಯಾವ ಸಾಕ್ಷಿ ಬೇಕು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT