ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಯಾಣಕ್ಕೆ ಆಘಾತ ನೀಡಿದ ಆತಿಥೇಯರು

Last Updated 13 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ವಿಜಾಪುರ: ರೋಚಕ ಕ್ಷಣಗಳಿಂದ ತುಂಬಿ ತುಳುಕಿದ ಪಂದ್ಯದಲ್ಲಿ ಭಾನುವಾರ ರಾತ್ರಿ ಚಾಂಪಿಯನ್ ಹರಿಯಾಣ ತಂಡವನ್ನು ಸದೆಬಡಿದ ಕರ್ನಾಟಕದ ಹುಡುಗರನ್ನು ವಿಜಾಪುರದ ವಾಲಿಬಾಲ್ ಪ್ರಿಯರು ತಲೆ ಮೇಲೆ ಹೊತ್ತು ಮೆರೆಸಿದರು!

ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 37ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಬಾಲಕರ ‘ಎ’ ಗುಂಪಿನ ಪಂದ್ಯದಲ್ಲಿ ವಿರೋಚಿತವಾಗಿ ಹೋರಾಡಿದ ಕರ್ನಾಟಕದ ನಿಖಿಲ್ ಗೌಡ ಬಳಗ 25-21, 25-20, 25-27, 25-16ರಿಂದ ಬಲಿಷ್ಠ ಹರಿಯಾಣಕ್ಕೆ ಸೋಲುಣಿಸಿ ಕ್ವಾರ್ಟರ್‌ಫೈನಲ್‌ಗೆ ಸಾಗಿತು. 

ಮೊದಲ ಸೆಟ್‌ನಲ್ಲಿ ಏಟಿಗೆ ಎದಿರೇಟು ಎನ್ನುವಂತೆ ಒಬ್ಬರನ್ನೊ ಬ್ಬರು ಮಣಿಸುವ ಆಟ ಮೈನವಿರೇಳಿಸಿತ್ತು. ಆದರೆ, ಬಿ. ಮನೋಜ್ ಗೋವಿಂದಸ್ವಾಮಿ, ಚಂದನಕುಮಾರ ಅವರ ಆಟ ಕರ್ನಾಟಕದ ಪಾಲಿಗೆ ಗೆಲುವು ತಂದುಕೊಟ್ಟಿತು. ಹರಿಯಾ ಣದ ಪರ ಆರು ಆಡಿ ಎತ್ತರದ ಮೋಹನ್ ಸಿಂಗ್ ಸ್ಮ್ಯಾಷ್‌ಗಳ ಮೂಲಕ ಪಾಯಿಂಟ್ ಕಲೆಹಾಕಿದರು.

ಎರಡನೇ ಸೆಟ್‌ನಲ್ಲಿ ಕರ್ನಾಟಕದ ಬಾಲಕರು ಸಾಕಷ್ಟು ಬೆವರು ಹರಿಸಬೇಕಾಯಿತು. ಕರ್ನಾಟಕ 24 ಪಾಯಿಂಟ್ ಗಳಿಸಿದ್ದಾಗ 16 ಅಂಕ ಗಳಿಸಿದ್ದ ಹರಿಯಾಣ ತಂಡ ಪಟಪಟನೆ ನಾಲ್ಕು ಪಾಯಿಂಟ್ ಗಳಿಸಿಬಿಟ್ಟಿತು. ಆದರೆ, ಇದನ್ನು ಮುಂದುವರೆಯಲು ಬಿಡದ ಮನೋಜ್ ಸ್ಮ್ಯಾಷ್ ಮೂಲಕ ಒಂದು ಪಾಯಿಂಟ್ ಗಳಿಸಿ ಎರಡನೇ ಸೆಟ್ ಅನ್ನೂ ತಮ್ಮ ಮಡಿಲಿಗೆ ಹಾಕಿಕೊಂಡರು.

ಕೋಚ್ ಬಲವಾನ್‌ಸಿಂಗ್‌ರಿಂದ ‘ಪಾಠ’ ಹೇಳಿಸಿಕೊಂಡು ಮೂರನೇ ಸೆಟ್ ಆಡಲು ಇಳಿದ ಹರಿಯಾಣ ತಂಡ ತಿರುಗೇಟು ನೀಡಿತು. ಅವರು 8 ಪಾಯಿಂಟ್‌ಗಳನ್ನು ಗಳಿಸಿದ್ದಾಗ ಕರ್ನಾಟಕದ ಖಾಲಿಯಿತ್ತು. ಮನೋಜ್ ಸ್ಮ್ಯಾಷ್ ಮೂಲಕ ಆರಂಭವಾದ ಖಾತೆಗೆ ಒಂದೊಂದೇ ಪಾಯಿಂಟ್ ಸೇರುತ್ತಿದ್ದವು. ಆದರೆ, ಅತ್ತ ಹರಿಯಾಣ ತಂಡ ವೇಗವಾಗಿ ಮುನ್ನಡೆಯುತ್ತಿತ್ತು.

ಒಂದು ಹಂತದಲ್ಲಿ ಹರಿಯಾಣದ 21 ಮತ್ತು ಕರ್ನಾಟಕ 12 ಪಾಯಿಂಟ್ ಗಳಿಸಿತ್ತು. ಟೈಮ್ ಆಫ್‌ನಲ್ಲಿ ಕೋಚ್ ಹೊಸಮಠ ಮತ್ತು ಪರಶುರಾಮ ನೀಡಿದ ‘ಟಿಪ್ಸ್’ ಅನ್ನು ಅಕ್ಷರಶಃ ಪಾಲಿಸಿದ ಹುಡುಗರು   ಪಾಯಿಂಟ್ ಕಲೆಹಾಕಿದರು. ಅಲ್ಲದೇ ಎದುರಾಳಿಗಳಿಗೆ ಪಾಯಿಂಟ್ ಬಿಟ್ಟು ಕೊಡಲಿಲ್ಲ. (17-21, 18-22, 19-22, 20-22, 21-22, 22-22) ನಿಧಾನವಾಗಿ ಎದುರಾಳಿಗಳೊಂದಿಗೆ ಸಮಬಲ ಸಾಧಿಸಿತು. ಆದರೆ, 25-25 ಆಗಿದ್ದ ಸಂದರ್ಭದಲ್ಲಿ ಹರಿಯಾಣದ ಸುನೀಲಕುಮಾರ ಹೊಡೆದ ಚೆಂಡು ಅಂಕಣ ದಾಟುವ ಹಂತದಲ್ಲಿತ್ತು.

ಆಗ ಲೆಫ್ಟ್ ಕಾರ್ನರ್‌ನಲ್ಲಿದ್ದ ನಿಖಿಲ್ ಕೈ ಅಡ್ಡ ಬಂದು ಒಂದು ಪಾಯಿಂಟ್ ಹೋಯಿತು. ನಂತರ ಸೆಟ್ ಗೆಲ್ಲಲು ಸುನೀಲ ಬಳಗ ತಡಮಾಡಲಿಲ್ಲ. ಆದರೆ ನಾಲ್ಕನೇ ಸೆಟ್‌ನಲ್ಲಿ ನಿಖಿಲ್ ಬಳಗ ಎದುರಾಳಿಗಳಿಗೆ ಯಾವುದೇ ಅವಕಾಶ ನೀಡಲೇ ಇಲ್ಲ. ಆರಂಭದಲ್ಲಿಯೇ (4-0) ಅಂತರವನ್ನು ಕಾಪಾಡಿಕೊಂಡು ಬಂದು 25-16ರಿಂದ ಗೆಲ್ಲುವಲ್ಲಿ ಯಶಸ್ವಿಯಾಯಿತು. ಹೊನಲು ಬೆಳಕಿನಲ್ಲಿ ಜನರ ಸಂಭ್ರಮ ಮುಗಿಲುಮುಟ್ಟಿತು. ಶನಿವಾರ ರಾತ್ರಿ ಆತಿಥೇಯ ತಂಡವು 25-18, 25-9, 25-12ರಿಂದ ಮಧ್ಯಪ್ರದೇಶವನ್ನು ಸೋಲಿಸಿತ್ತು.

ಎಂಟರಘಟ್ಟಕ್ಕೆ ಬಾಲಕಿಯರು: ಬಾಲಕರ ಪಂದ್ಯಕ್ಕೂ ಮುನ್ನ ಮುಗಿದ ಪಂದ್ಯದಲ್ಲಿ ಕರ್ನಾಟಕದ ಬಾಲಕಿ ಯರು, ಜಾರ್ಖಂಡ್ ತಂಡದ ವಿರುದ್ಧ ಸುಲಭ ಜಯ ಸಾಧಿಸಿ ಎಂಟರ ಘಟ್ಟಕ್ಕೆ ಲಗ್ಗೆ ಹಾಕಿತು.

ಲೀಗ್ ಹಂತದ ಬಿ ಗುಂಪಿನಲ್ಲಿ ಕರ್ನಾಟಕದ ಬಾಲಕಿಯರು 25-4, 25-10, 25-3ರಿಂದ ಜಾರ್ಖಂಡ್ ತಂಡವನ್ನು ನಿರಾಯಾಸವಾಗಿ ಮಣಿ ಸಿತು. ನಾಯಕಿ ಮೇಘಾ, ಅಭಿಲಾಷಾ ನೀಡಿದ ಉತ್ತಮ ಪ್ರದರ್ಶನದ ಮುಂದೆ ಜಾರ್ಖಂಡ್‌ನ ಆಟಗಾರ್ತಿ ಯರು ಸುಲಭವಾಗಿ ಶರಣಾದರು. ಫೆಬ್ರುವರಿ 15ರಂದು ಬಾಲಕ ಮತ್ತು ಬಾಲಕಿಯರ ವಿಭಾಗಗಳ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿವೆ. ಲೀಗ್ ಹಂತದ ಅಂತಿಮ ಸುತ್ತಿನ ಪಂದ್ಯಗಳು ಸೋಮವಾರ ನಡೆಯಲಿವೆ.

ಫಲಿತಾಂಶಗಳು:
ಬಾಲಕರು:
ಗೋವಾ 26-24, 25-23, 25-16ರಿಂದ ದೆಹಲಿ ವಿರುದ್ಧ, ಉತ್ತರಖಂಡ 25-18, 25-19, 25-20ರಿಂದ ಪಾಂಡಿಚೇರಿ ವಿರುದ್ಧ, ಕೇರಳ 24-26, 25-23, 21-25, 25-21, 15-13ರಿಂದ ಉತ್ತರಪ್ರದೇಶ ವಿರುದ್ಧ, ಅಸ್ಸಾಂ 25-12, 25-12, 25-12ರಿಂದ ತ್ರಿಪುರಾದ ವಿರುದ್ಧ ಜಯ ಗಳಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT