ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿವ ನೀರು: ಕಳೆದುಕೊಂಡವರು

Last Updated 5 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಸಿಮ್ಲಾದಿಂದ ವಾಪಾಸು ದೆಹಲಿಗೆ ಮರಳುವ ಮಾರ್ಗದಲ್ಲಿದ್ದೇವೆ. ದೆಹಲಿಯಿಂದ ಕಾಲ್ಕಾದವರೆಗೆ ಶತಾಬ್ದಿ ಟ್ರೇನಿನಲ್ಲಿ ಬಂದು, ಕಾಲ್ಕಾದಿಂದ ಸಿಮ್ಲಾಕ್ಕೆ ಬರುವಾಗ ಆದಷ್ಟು ಬೇಗ ತಲುಪುವ ಉದ್ದೇಶದಿಂದ ಟ್ಯಾಕ್ಸಿ ಮಾಡಿಕೊಂಡು ಬಂದಿದ್ದೆವು. ಆದರೆ ಮರಳುವಾಗ ‘ಟಾಯ್ ಟ್ರೇನಿನಲ್ಲಿ ಪ್ರಯಾಣ ಮಾಡಿ. ನೂರಾಹದಿಮೂರು ಸುರಂಗ ದಾಟುತ್ತ ಸಾಗುವ ಸಿಮ್ಲಾದ ರೈಲು ಪಯಣದ ಅನುಭವ ಬಹಳ ವಿನೂತನವಾದ್ದು. ಅಲ್ಲಿಂದ ದೆಹಲಿಗೆ ತೆರಳುವ ಶತಾಬ್ದಿಇದರ ಕನೆಕ್ಷನ್ನಿಗಾಗಿ ಕಾಯುತ್ತದೆ. ಇದು ಬಾರದೆ ಅದು ಹೊರಡುವುದಿಲ್ಲ. ಏನೂ ಹೆದರಿಕೆ ಬೇಡ’ ಅಂತ ಮಿತ್ರರೆಲ್ಲ ಸೂಚಿಸಿದ್ದರಿಂದ ಟ್ರೇನಿನಲ್ಲಿ ಹೊರಟಿದ್ದೆವು. ಹೊರ ದೃಶ್ಯಗಳೆಲ್ಲ ಚೆನ್ನಾಗಿ ಕಾಣುವಂತೆ ತೆರೆದ ಕಿಟಿಕಿಗಳ, ತೆರೆದ ಬಾಗಿಲಿನ ರೈಲು. ಕುರ್ಚಿಯಂತಹ ಸೀಟು. ಸಂಜೆ ಐದು ಗಂಟೆಯವರೆಗೆ ಹೀಗೆ ಒಂದಿಷ್ಟೂ ಒರಗದೆ ಸರ್ತ ಕುಳಿತುಕೊಂಡೇ ಕಾಲ್ಕಾವರೆಗೆ ಹೇಗೆ ಪಯಣಿಸುವುದೋ!
 
ಆತಂಕವಾಯ್ತು. ಹತ್ತಿ ಕುಳಿತು ಆಚೆ ಈಚೆ ನೋಡುತಿದ್ದೇವಷ್ಟೆ. ಒಬ್ಬ ದಢೂತಿ ಮುದುಕಿ ಜೊತೆಗೆ ಒಬ್ಬ ಆಳೆತ್ತರದ ವ್ಯಕ್ತಿ ಪ್ರವೇಶಿಸಿದರು. ತಮ್ಮ ಸೀಟನ್ನು ಹುಡುಕುತ್ತ ನಮ್ಮ ಬಳಿಯೇ ಬಂದರು. ಅಲ್ಲೆ ಆಚೆಗಿನ ಸೀಟು ಅವರದು, ಹುಡುಕಿ ಕುಳಿತರು. ಜೊತೆಗಿದ್ದವ ಲಗೇಜುಗಳನ್ನೆಲ್ಲ ಅಚ್ಚುಕಟ್ಟಾಗಿ ಸೇರಿಸಿಟ್ಟ. ರೈಲು ಪಯಣಕ್ಕೆ ಹುಟ್ಟಿದಾರಭ್ಯ ಒಗ್ಗಿ ಹೋದವರು ಅವರೆಲ್ಲ. ಬಸ್ಸು ಪಯಣಕ್ಕೆ ಒಗ್ಗಿ ಹೋದ ನಮ್ಮಂತೆ ಯಾವ ಗೊಂದಲಗಳಿಲ್ಲ. ಮುದುಕಿಗೆ ಸುಮಾರು ಎಂಭತ್ತು ವರ್ಷವಿರಬಹುದು. ವಾಲು ನಡಿಗೆ ಹಾಗೂ ಮುಖದ ನಿರಿಗೆಗಳಿಂದ ವಯಸ್ಸು ಹಚ್ಚಬೇಕು ಹೊರತು ಉಳಿದಂತೆ ಎತ್ತರ, ಹೊಂಬಣ್ಣ, ಮುದುಕಿಯಾದರೂ ಬಾಗದ ಬೆನ್ನು, ನೋಟದಲ್ಲಿ ದೃಢತೆ. ಕುಳಿತೊಡನೆ ಮತ್ತೊಮ್ಮೆ ಲಗೇಜುಗಳೆಲ್ಲ ಸರಿಯಾಗಿ ಬಂದವೆ ಅಂತ ಜೊತೆಗಿದ್ದವನನ್ನು ಕೇಳಿದಳು. ಅತ್ತ ಇತ್ತ ನೋಡುತ್ತ ಕುಳಿತಲ್ಲೇ ಅಲ್ಲಾಡಿ ತನ್ನ ಸೀಟಿಗೆ ತನ್ನನ್ನು ಸರಿಯಾಗಿ ಹೊಂದಿಸಿಕೊಂಡಳು.
 
ಆಮೇಲೆ ಮೆಲ್ಲ ಬೋಗಿಯೊಳಗೆ ಕಣ್ಣಾಡಿಸಿದಳು. ದೃಷ್ಟಿ ನಮ್ಮನ್ನು ಹಾದು ಹೋಗುತ್ತಲೂ ನಾವೂ ಅವಳನ್ನೇ ನೋಡುತಿದ್ದುದರಿಂದ ಪರಸ್ಪರ ದೃಷ್ಟಿ ಸೇರಿ ಮುಗುಳ್ನಕ್ಕಳು. ‘ಸಿಮ್ಲಾಕ್ಕೆ ಬಂದದ್ದೆ?’ ಕೇಳಿದಳು. ಹಳೆಯ ತಲೆಮಾರು, ಮಾತು ಆರಂಭಿಸುವ ಬಗೆಯೇ ಹೀಗಷ್ಟೆ? ಆಚೀಚಿನವರು ಇಲ್ಲವೇ ಇಲ್ಲವೆಂಬಂತೆ, ತನ್ನ ಸುತ್ತ ಮೌನದ ಕೋಟೆ ಕಟ್ಟಿ ಸುಮ್ಮನೆ ಕುಳಿತುಕೊಳ್ಳಲಾರದ ಜ್ಹಮಾನಾದವಳು. ‘ಹೂಂ ಹೌದು’.  ಸರಿ ಇನ್ನು ನಾವು ಸ್ನೇಹಿತರೇ ಎಂಬಂತೆ ಒಂದು ಉದ್ದ ಮುಗುಳುನಗೆ ನೀಡಿ ‘ಇದೇ ಮೊದಲ ಸಲ ಬರುವುದ?’ ಎಂದಳು. ಹೌದು ಎಂದೆವು. ‘ಮೇರಾ ಬೇಟಾ’ ಅಂತ ಜೊತೆಗಿದ್ದವನನ್ನು ತೋರಿಸಿದಳು. ಅರ್ವತ್ತು ಸಮೀಪಿಸಿದವನ ಹಾಗೆ ಕಾಣುವ ಬೇಟಾ ಬ್ಯಾಗಿನಿಂದ ಯಾವುದೋ ಪುಸ್ತಕ ಹೊರ ತೆಗೆಯುತ್ತ ಇದ್ದ. ಪ್ರಾಯಶಃ ಮಾತೇ ಬಲವಾಗಿರುವ ಮುದುಕಿ ಆಕೆ. ಸುಮ್ಮನೆ ಕುಳಿತಾಳು ಹೇಗೆ? ತನ್ನನ್ನೂ ಪರಿಚಯಿಸಿಕೊಂಡಳು. ತಾನು ಇಲ್ಲಿನವಳು. ಹಿಮಾಚಲೀ. ಆದರೇನು, ಕೊನೆಗಾಲಕ್ಕೆ ತನ್ನ ನೆಲದ ಋಣ ದೆಹಲಿ ಅಂತ ಬರೆದಿದೆ. ತಪ್ಪಿಸಲು ಸಾಧ್ಯವೆ?... ನೀವು? ಎಲ್ಲಿಂದ ಬಂದವರು?... ಲೋಕಾಭಿರಾಮದ ನಡುವೆ ಶಿಳ್ಳು ಹೊಡೆಯುತ್ತ ರೈಲು ಹೊರಟಿತು. ಅದರೊಡನೆ ನಾವು ಪ್ರಶ್ನಿಸಿಯೂ ಪ್ರಶ್ನಿಸದೆಯೂ ಆಕೆ ಮಾತಾಡುತ್ತ ಹೋದಂತೆ ಅವಳ ಕತೆಯೂ ಸಾಗಿತು. ಅದೇನು ಎಲ್ಲೂ ಇಲ್ಲದ ಕತೆಯಲ್ಲ.
 
ಆದರೆ ಅವಳಿಗೋ ಸಿಮ್ಲಾದಿಂದ ತನ್ನ ಬೇರು ಕಿತ್ತು ಅಲ್ಲಿ ದೆಹಲಿಯಲ್ಲಿ ನೆಡಬೇಕಾಗಿ ಬಂದ ನೋವನ್ನು ಹೇಳಿದಷ್ಟೂ ಕಳೆಯದು. ಮಾತಾಡಲು ಹಸಿದವಳಂತಿದ್ದಳು ಆಕೆ. ಕೇಳಲು ಸದ್ಯ ನಾವು ಸಿಕ್ಕಿದ್ದೆವು. ನಮಗಾದರೂ ಬೇರೆ ಕೆಲಸ ಏನಿತ್ತು? ಅತ್ತ ಸೂರ್ಯ ಮೂಡುತ್ತ ಮೇಲೆ ಮೇಲೆ ಬರುತ್ತ ಇದ್ದ. ಇಲ್ಲಿ ನೋಡಿದರೆ ಎಷ್ಟು ತಣ್ಣಗಿರುವನೀತ! ನಮ್ಮೂರಲ್ಲಿ ಯಾಕೆ ಅಷ್ಟು ಸಿಟ್ಟಲ್ಲಿ ಅಷ್ಟಪ್ಪ ಬಿಸಿ ಕಾರುತಾನೋ!

ನಾವು ಮಾಡಿದ ತಪ್ಪೇನು? ಇಲ್ಲಿನವರ ಸುಭಗತನವೇನು? ಸೂರ್ಯನಂಥವರೂ ಪಕ್ಷಪಾತದಿಂದ ಹೊರತಲ್ಲ, ಅಷ್ಟೆ. ಎಲ್ಲಿ ನೋಡಿದರೂ ನೋಡಿದಷ್ಟೂ ಮುಗಿಯದ ತೆರೆತೆರೆ ಪರ್ವತ ಶ್ರೇಣಿ, ಚಳಿಗೆ ಬೆಳಗಿನ ರಂಗು ರಂಗಿನ ಶಾಲು ಹೊದೆದು, ಮಲೆನಾಡಿನಲ್ಲಿ ಬಿಸಿಲ ಕಿರಣಕೆ ಮೈಯೊಡ್ಡಿ ಕುಳಿತವರಂತೆ, ಕಮ್ಮಗೆ ಕುಳಿತು ನೋಡುತಿತ್ತು. ಗುಡ್ಡದಜಾರಿಕೆಯಲ್ಲಿ ಒಂದರ ಜೊತೆ ಒಂದು ಬೆನ್ನುತಾಗಿತಾಗಿ ನಿಂತಂತಿರುವ ಮನೆಗಳು. ಒಂದು ಉರುಳಿದರೆ ಎಲ್ಲವೂ ಇಸ್ಪೀಟುರೈಲಿನಂತೆ ಬುಡುಬುಡು ಉರುಳುತ್ತವೇನೋ ಅಂತನಿಸುವ ಹಾಗೆ. ‘ತಾವಿಲ್ಲಿ ಯಾಕೆ ಬಂದೆವೆಂದರೆ ಇಲ್ಲೊಂದು ಮನೆಯಿದೆ ತಮಗೆ. ಹಳೆಯದು, ಪಿತ್ರಾರ್ಜಿತವಾಗಿ ಬಂದಿರೋದು. ಅದರ ಉಸ್ತುವಾರಿಯನ್ನು ಒಬ್ಬರಿಗೆ ಬಿಟ್ಟಿದ್ದೇವೆ. ಅಲ್ಲಿ ಎಲ್ಲ ಹೇಗಿದೆ ಅಂತ ಒಮ್ಮೆ ನೋಡಿ ಹೋಗುವ ಅಂತ  ಬಂದೆವು’- ಎಂದಳು ಮುದುಕಿ, ತಾನಾಗಿಯೇ. ತನ್ನ ತಾಯಿ ಮನೆಯೂ ಇಲ್ಲಿಯೇ. ಗಂಡನ ಮನೆಯೂ ಇಲ್ಲಿಯೇ. ಗಂಡನ ಕೆಲಸದ ಕ್ಷೇತ್ರ ಮಾತ್ರ ಬೇರೆ ಕಡೆ ಇತ್ತು. ಹಾಗಾಗಿ ಮದುವೆಯಾದ ಮೇಲೆ ಅವರೊಡನೆ ವರ್ಗವಾದಲ್ಲೆಲ್ಲ ತಿರುಗಿದೆ. ಒಬ್ಬ ಮಗಳು ಒಬ್ಬ ಮಗ. ‘ಇವನೆ’. ಒಮ್ಮೆ ತೋರಿಸಿ ಆಗಿದ್ದರೂ ಪಿಸುದನಿಯಲ್ಲಿ ಕಣ್ಣಲ್ಲೆ ತೋರಿಸಿದಳು. ಮಗ ತೆರೆದ ಪುಸ್ತಕದಲ್ಲಿ ಮೈಮರೆತಂತೆ ಕಾಣುತಿದ್ದ. ಗಂಡನೊಡನೆ ಊರೂರು ತಿರುಗುತ್ತ ಇದ್ದೆ ತಾನು. ಹಾಗಾಗಿ ತಿರುಗುವ ಆಸೆ ಜೋರು, ಮುಗಿಯುವುದೆಂತಲೇ ಇಲ್ಲ. ಮಗ, ಅಮೆರಿಕೆಯಲ್ಲಿದ್ದಾನೆ. ಬಂದಾಗೆಲ್ಲ ಅವನೊಡನೆ ತಿರುಗುತ್ತೇನೆ... ತಾಯಿಯ ಮಾತು ಕಿವಿಯ ಮೇಲೆ ಬಿತ್ತು ಎಂಬಂತೆ ಮಗ ಪುಸ್ತಕದಿಂದ ಕಣ್ಣೆತ್ತರಿಸಿ ಒಮ್ಮೆ ನೋಡಿ, ಮತ್ತೆ ತಗ್ಗಿಸಿದ. ‘ಇವ ಮತ್ತು ಇವನ ತಂಗಿ ವರ್ಷಕ್ಕೊಮ್ಮೆ ನಾನು ಎಲ್ಲಿಗೆ ಹೋಗಬೇಕೆನ್ನುವೆನೋ ಅಲ್ಲಿಗೆ ಹೊರಡಿಸಿಕೊಂಡು ಹೋಗುತ್ತಾರೆ’ ಎಂದಳು. ಹೊ! ಎಷ್ಟು ಅಪರೂಪ ಇದು!

ಇವತ್ತು ತಾಯಿಗೆ ಇಷ್ಟು ಪ್ರಾಧಾನ್ಯ ಕೊಡುವ ಮಕ್ಕಳಿದ್ದಾರೆ ಎನ್ನುವುದೇ ದೊಡ್ಡದು ಎಂದು ನಮ್ಮಲ್ಲೊಬ್ಬರು, ಚೆನ್ನಾಗಿ ಹಿಂದಿ ಬಲ್ಲವರು, ಉತ್ತರಿಸಿದರು. ಆತ ಪುಸ್ತಕದಲ್ಲಿ ಇನ್ನಷ್ಟು ಮಗ್ನವಾದಂತೆ ಕಂಡ. ತಾನು ಚಿಕ್ಕವಳಿದ್ದಾಗ ಸಿಮ್ಲಾದಲ್ಲಿದ್ದದ್ದು ಕೇವಲ ಐದು ಸಾವಿರ ಜನ. ಆಗಿನ ಸಿಮ್ಲಾ ಎಂದರೆ ಏನು, ಸ್ವರ್ಗ ಅದು ಸ್ವರ್ಗ. ಮದುವೆಯಾಗಿ ಗಂಡನೊಡನೆ ಅವರ ಕೆಲಸದ ಜಾಗಕ್ಕೆ ಹೊರಟುಹೋಗುವಾಗ ಊರು ಬಿಡಲಾಗದೆ ತಾನು ಅತ್ತೂ ಅತ್ತೂ ಇಟ್ಟಿದ್ದೆ. ಈಗ ನೋಡಿ, ತಾನೇ ಊರು ಬಿಟ್ಟಿದ್ದೇನೆ.

ಪ್ರಶ್ನೆ: ಯಾಕೆ? ಇಂಥ ಊರು ಬಿಟ್ಟು ದೆಹಲಿಯಲ್ಲಿ ಯಾಕೆ ಇದ್ದೀರಿ? ಮನೆ ಇದೆ ಇಲ್ಲಿ ಮತ್ತೆ!
ಉತ್ತರ: ಆಗೆಲ್ಲ ಮಕ್ಕಳು ವಿದೇಶಕ್ಕೆ ಹೋಗುವುದು ದೊಡ್ಡ ವಿಷಯ. ನಮ್ಮ ಕನಸೇ ಅದಾಗಿತ್ತು. ಅದಕ್ಕೆ ಸರಿಯಾಗಿ ಮಗ ಎಂಜಿನಿಯರ್ ಆಗಿ ಅಮೆರಿಕಕ್ಕೆ ಹೊರಟು ಹೋದ. ಮದುವೆಯಾಗಿ ಅಲ್ಲಿಯೇ ನೆಲೆಸಿದ. ನನ್ನ ಗಂಡನಿಗಂತೂ ಫಾರಿನ್ನು ಅಂದರೆ ಅಷ್ಟೂ ಒಂದು ಖುಶಿ. ಮಗಳನ್ನು ಫಾರಿನ್ನಿನಲ್ಲಿ ಇರುವವನಿಗೇ ಸೈ ಕೊಡುವುದು ಅಂತ ಹಟ ಹಿಡಿದು- ಆಗೆಲ್ಲ ಹಾಗೆಯೇ. ಈಗ ಅದೆಲ್ಲ ಸ್ವಲ್ಪ ಕಡಿಮೆಯಾಗಿದೆ- ಅಂತೂ ಅಂಥ ಸಂಬಂಧ ಹುಡುಕಿ ಮದುವೆ ಮಾಡಿದರು. ಮಕ್ಕಳು ಫಾರಿನ್ನಿನಲ್ಲಿ ಇದ್ದಾರಂತ ಬಹಳ ಹೆಮ್ಮೆ ಇತ್ತು ನಮಗೆ. ನಾನಂತೂ ಜಬರ್ದಸ್ತಿನಿಂದ ಅದನ್ನು ಎಲ್ಲರೊಡನೆ ಹೇಳಿಕೊಳ್ಳುತಿದ್ದೆ. ನೀವಲ್ಲ ಜೀವನದಲ್ಲಿ ಗೆದ್ದವಳು, ನಾನು ಎಂಬಂತಿದ್ದೆ. ಮಕ್ಕಳು ಮೊಮ್ಮಕ್ಕಳು ವರ್ಷಕ್ಕೊಮ್ಮೆ ಬರುವುದೇನು, ಅಲ್ಲಿಂದ ಸಾಮನುಗಳನ್ನು ತರುವುದೇನು, ಫಾರಿನ್ನಿನ ವಸ್ತುಗಳೆಂದರೆ ಭಾರೀ ಆಸೆ ಇತ್ತು ನನಗೆ...
ದೀರ್ಘ ಕತ್ತಲಿನ ಸುರಂಗಗಳು, ಬೇಗನೇ ಕತ್ತಲು ದಾಟಿ ಬೆಳಕು ಬರುವ ಛೋಟಾ ಸುರಂಗಗಳು... ಅರೆವಾಸಿ ಸುರಂಗಗಳು ದಾಟಿ ಹೋಗಿದ್ದವು. ಒಂದೆಡೆ ರೈಲು ನಿಂತಿತು. ಇಳಿದರೆ ಅಲ್ಲೇ ಎರಡೇ ಹೆಜ್ಜೆಯಲ್ಲಿ ಪುಟ್ಟದೊಂದು ಅಂಗಡಿ. ರೈಲಿನೊಳಗೆ ಯಾವುದೂ ಮಾರಿಕೊಂಡು ಬರುವುದಿಲ್ಲ, ಇನ್ನು ಬಹಳ ಹೊತ್ತು ಅದು ಎಲ್ಲಿಯೂ ನಿಲ್ಲುವುದಿಲ್ಲ ಅಂತೆಲ್ಲ ತಿಳಿದು ಜನ ಇಳಿದರು. ಇರುವುದೊಂದೇ ಅಂಗಡಿಗೆ ಮುತ್ತಿಗೆ ಹಾಕಿ ಬಾಳೆಹಣ್ಣು, ಸಮೋಸಾ, ಕಾಫಿ, ಟೀ, ಪೆಪ್ಸಿ, ಕೋಲಾ. ಏನೇನು ಬೇಕೋ ಕೊಂಡುಕೊಂಡರು. ಮುದುಕಿಯ ಮಗನೂ ಇಳಿದ. ಏನೋ ಕೊಂಡು, ಅದನ್ನು ಖಾಲಿ ಮಾಡಿ, ಮೇಲೆ ಹತ್ತಿದ. ರೈಲು ಕೂಗು ಹಾಕಿತು. ಅದು ಕೂಗುವವರೆಗೂ ಮೇಲೆ ಬರದೆ ಅಲ್ಲಲ್ಲೆ ನಿಂತು ನೋಡುತಿದ್ದವರೆಲ್ಲ ಬಡಬಡ ರೈಲು ಹತ್ತಿದರು. ‘ನಿಮಗೆ? ಇಗೊಳ್ಳಿ ಬಾಳೆಹಣ್ಣು ಇದೆ, ತಿನ್ನಿ’ ಎಂದು ಕೊಟ್ಟರೆ, ‘ಇಲ್ಲ, ನಾನು ಪ್ರಯಾಣದಲ್ಲಿ ಏನೂ ತಿನ್ನುವುದಿಲ್ಲ’ ಎಂದಳು ಮುದುಕಿ ‘ದೆಹಲಿ ಮುಟ್ಟುವವರೆಗೂ’.

‘ದೆಹಲಿ ಮುಟ್ಟುವಾಗ ಗಂಟೆ ರಾತ್ರಿ ಹತ್ತಾಗುತ್ತದೆ!’
‘ಹ್ಞೂಂ, ಅಲ್ಲಿವರೆಗೂ ನೀರು. ನನಗದು ಅಭ್ಯಾಸ...’
ಮಗ ಪುಸ್ತಕದಲ್ಲಿ ಮತ್ತೆ ಮಗ್ನನಾದ.
‘ಇದು ಸಿಮ್ಲವೆ? ಅದರ ನೆರಳು ಅಷ್ಟೆ. ನಾವಿರುವಾಗ ಹೇಗಿತ್ತು. ಬರೆ ಐದು ಸಾವಿರ ಜನ ಇರುವಲ್ಲಿ ಈಗ ಐದು ಲಕ್ಷ ಅಂದರೆ! ಊರು ಗಬ್ಬೆದ್ದು ಹೋಗಿದೆ’- ವಾಸನೆ ಬರುತಿದೆಯೋ ಎಂಬಂತೆ ಮೂಗುಮುಚ್ಚಿಕೊಂಡು ಅಭಿನಯ ಪೂರ್ವಕ ಹೇಳಿ ‘ಅದಕ್ಕೇ ಈ ಊರು ಬೇಡವೇ ಬೇಡ ಅಂತ ದೆಹಲಿಗೆ ಹೋಗಿಬಿಟ್ಟೆ. ಅಲ್ಲಿ ಇವನ ಒಂದು ಫ್ಲ್ಯಾಟ್ ಇದೆ. ಅದರಲ್ಲಿ ಇದ್ದೇನೆ’.
‘ಒಬ್ಬರೆ!’
‘ಒಬ್ಬಳೆ. ಅದೆಲ್ಲ ಹೆದರಿಕೆ ಇಲ್ಲ ನನಗೆ. ಬ್ಯಾಂಕಿಗೆಲ್ಲ ಹೋಗುವುದೂ ನಾನೆ. ಹೇ ಭಗವಾನ್! ಇವರೆಲ್ಲ ಎಲ್ಲಿ ಸಿಗುತ್ತಾರೆ?’
*
ಓದುತಿರುವಂತೆ ಕಾಣುತಿದ್ದ ಮಗ, ತಾಯಿಯ ಮಾತು, ನಾವಷ್ಟು ಜನರ ಮಾತುಕತೆ ನಗೆ, ಅಚಲಗಳೂ ಹಿಂದೋಡುವ ಚಂಚಲತೆಗಳು. ಸಾಗುವ ರೈಲು ಬೆಳಗು ಸೀಳಿ, ಮಧ್ಯಾಹ್ನ ತಲುಪಿ, ಮಧ್ಯಾಹ್ನ ಸೀಳಿ ಸಂಜೆ ತಲುಪಿ, ಅಂತೂ ಕಾಲ್ಕಾ ಮುಟ್ಟಿತು. ಅಲ್ಲಿ ದೆಹಲಿಗೆ ಹೊರಡುವ ಶತಾಬ್ದಿ ನಿಂತಿದೆ. ಇನ್ನೂ ಬೋಗಿಗಳ ಬಾಗಿಲು ತೆರೆದಿಲ್ಲ. ಪ್ರಯಾಣಿಸುವವರ ಹೆಸರಚೀಟಿ ಅಂಟಿಸಿಲ್ಲ. ಟೀ ಕುಡಿದು ಬರಲು ನಮ್ಮವರೆಲ್ಲ ಅತ್ತ ಹೋದರು. ನನಗೆ ಬೇಡ ಎಂದು ನಾನು ಅಲ್ಲಿಯೇ ಬೆಂಚಲ್ಲಿ ಕುಳಿತೆ. ಅತ್ತ ಸೂರ್ಯಗೆಂಪು ಆವರಿಸಿದ ಸಂಜೆಯಾಕಾಶ, ತಣ್ಣನೆಯ ಗಾಳಿ ಬೀಸು. ಆಹ, ಎಂಥಾ ಸುಖ ಪಯಣವೇ ಇರಲಿ ಅದರ ದೀರ್ಘ ಚೌಕಟ್ಟಿನಿಂದ ಹೊರಬಂದ ಸುಖ ಹೊರಬಂದಾಗಲೇ ಗೊತ್ತು.
ಇನ್ನು ಮುಂದಿನ ಪಯಣಕ್ಕೆ ಸಜ್ಜಾಗಬೇಕು. ಆಚೆ ನೋಡುತ್ತೇನೆ, ಮಗ, ಹಿಂದಿನಿಂದ ಅತ್ತ ಇತ್ತ ವಾಲುತ್ತ ಸಾವಕಾಶದ ಹೆಜ್ಜೆಯಲ್ಲಿ ತಾಯಿ, ನಾನಿರುವ ಕಡೆಯೇ ಬರುತಿದ್ದಾರೆ. ತಾಯಿಯನ್ನು ನನ್ನ ಬಳಿ ಕೂಡಿಸಿದ ಮಗ ‘ಒಂದು ಟೀ ಕುಡಿದು ಬರಲೆ? ನೀವು ಇಲ್ಲಿದ್ದೀರಲ್ಲ?’ ಎಂದ.

‘ಹೋ, ಅಡ್ಡಿಲ್ಲ, ಹೋಗಿ ಬನ್ನಿ’ ಎಂದೆ. ಲಗೇಜನ್ನು ಹಿಡಿದುಕೊಂಡೇ ಆತ ಅತ್ತ ಹೋದ. ಆತ ಹೋದ ದಿಕ್ಕನ್ನೇ ನೋಡುತ್ತ ಇದ್ದ ಆಕೆ ‘ಒಮ್ಮೆ ವಿದೇಶಕ್ಕೆ ಹೋದ ಮೇಲೆ ಅವರೆಲ್ಲಿ ಬರುತ್ತಾರೆ! ಆಯಿತು, ಎಲ್ಲ ಮುಗಿದು ಬಿಟ್ಟಿತು’ ಎಂದಳು, ನಿಧಾನವಾಗಿ, ತನ್ನಷ್ಟಕ್ಕೇ. ಏನೆಂಬಂತೆ ಅವಳತ್ತ ನೋಡಿದೆ. ‘ಬೀಗಿ ಬಿಟ್ಟಿದ್ದೆ ನಾನು, ಮಕ್ಕಳೆಲ್ಲ ಅಲ್ಲಿದ್ದಾರೆ, ಬಹಳ ದುಡಿಯುತಿದ್ದಾರೆ ಅಂತ. ಅದಕ್ಕೇ ದೇವರು ನನಗೆ ಶಿಕ್ಷೆ ಕೊಟ್ಟ’- ನೋವಿನೆಳೆಯ ನಗೆ ನಕ್ಕಳು. ‘ಯಾಕೆ? ಯಾಕೆ ಹಾಗೆನ್ನುತೀರಿ?’. ‘ಮತ್ತಿನ್ನೇನು? ನನಗೆ ಅಲ್ಲಿಗೆ ಹೋಗಲು ಮನಸ್ಸಿಲ್ಲ. ಒಮ್ಮೆ ಹೋಗಿಯೇ ಸಾಕಾಯಿತು. ಅಲ್ಲಿ ಎಲ್ಲ ಅವರವರ ಕೆಲಸದಲ್ಲಿ. ನಾನೊಬ್ಬಳು ಮೂಕುದೈವದಂತೆ ಇಡೀ ದಿನ ಮನೆಯಲ್ಲಿದ್ದು ಏನು ಮಾಡಲಿ?

ಮೊಮ್ಮಕ್ಕಳೋ ಮಾತೇ ಆಡಿಸುವುದಿಲ್ಲ! ನನ್ನೊಡನೆ ಮಾತಾಡಲು ಅವರಿಗೆ ಭಾಷೆಯಿಲ್ಲ. ಅಲ್ಲಿ ನನ್ನ ಯಾವ ಮಾತೂ ನಡೆಯುವುದೂ ಇಲ್ಲ. ‘ನಾನಿಲ್ಲಿ ಇರಲಾರೆ, ಕಳಿಸಿಕೊಡಿ’ ಎಂದೆ. ‘ಹಾಗಾದರೆ ಈ ವಯಸ್ಸಿನಲ್ಲಿ ನೀನು ಒಬ್ಬಳೇ ಸಿಮ್ಲಾದಲ್ಲಿ ಇರುವುದು ಬೇಡ. ದೆಹಲಿಯಲ್ಲಿರು. ನಮಗೆ ಬಂದು ಹೋಗಲು ಸುಲಭ ಅಂತ ಇಲ್ಲಿ ತಂದು ಹಾಕಿದರು’. ಧ್ವನಿ ಕ್ಷಣ ಕಾಲ ಅಲ್ಲೇ ಗಢಕ್ಕನೆ ಕಂತಿತು. ಮತ್ತೆ ಸುಧಾರಿಸಿಕೊಂಡು ‘ಫ್ಲ್ಯಾಟಿನಲ್ಲಿಯೂ ನಾನು ಒಂಟಿಭೂತವೇ, ಆದರೂ ಪೂರಾ ಭೂತವಲ್ಲ. ಒಬ್ಬರಲ್ಲ ಒಬ್ಬರು ಸಿಗುತ್ತಾರೆ, ಮಾತಾಡಿಸುತ್ತಾರೆ, ಇವ, ಇವ ಇದ್ದಾನಲ್ಲ, ಇವ, ಅಲ್ಲಿ ಕಳೆದೇ ಹೋದ. ಇಲ್ಲಿಗೆ ನನಗಾಗಿ ಬರುತ್ತಾನೆ, ಇನ್ನು ಮೇಲೆ ಅದೂ ಕಷ್ಟ, ತನಗೂ ವಯಸ್ಸಾಯಿತು, ನೀನೇ ಬಾ ಎನ್ನುವ ಇರಾದೆಯಲ್ಲಿದ್ದಾನೆ. ಬಾಯಿಬಿಟ್ಟು ಹೇಳುವುದಿಲ್ಲ, ಆದರೆ ನನಗೆ ತಿಳಿಯುವುದಿಲ್ಲವೆ? ನಾನು ಸತ್ತರೂ ಅಲ್ಲಿಗೆ ಹೋಗುವುದಿಲ್ಲ’.
‘ಮಗಳು?’

‘ಮಗಳು ಇನ್ನೇನು? ಅಲ್ಲಿಗೇ ಒಗ್ಗಿ ಹೋಗಿದ್ದಾಳೆ. ಇಲ್ಲಿಗೆ ಬರುವುದಿಲ್ಲ. ಯಾರ ಶಾಪವೋ. ‘ಇವರು’ ತೀರಿಕೊಂಡರು, ಮಕ್ಕಳು ಮೊಮ್ಮಕ್ಕಳು ಇದ್ದೂ ಇಲ್ಲ, ಒಂಟಿ ಬದುಕು ನನ್ನದಾಯ್ತು’.

‘... ಯಾಕೆ ಹಾಗಂತೀರಿ? ಇವತ್ತಿನ ದಿನಕ್ಕೆ ನಿಮ್ಮ ಮಕ್ಕಳು ಎಷ್ಟೋ ಬೇಕು...’
... ಹೇಳಿದ್ದೇ ಸರಿ, ಏನು ಅನಿಸಿತೋ, ನನಗೇನು ಗೊತ್ತು ಒಳವಿಚಾರಗಳೆಲ್ಲ. ಆದರೆ ಮಾತೆಂದರೆಯೇ ಹಾಗೆ ತಾನೆ? ಎಷ್ಟೋ ಸಲ ತಲೆಬುಡ ಗೊತ್ತಿಲ್ಲದೆಯೂ ಬಾಯಿಪಾಠದಂತೆ ಹೊರಬರುತ್ತದೆ. ಯಾಕಾದರೂ ಹಾಗೆಂದೆ ನಾನು! ಅಧಿಕ ಬೇಕಿತ್ತೆ? ಬೆಳಗಿಂದ ಆಹಾರ ಕೂಡ ಮುಟ್ಟದೆ ಕುಳಿತ ಮುದುಕಿಗೆ ಶಕ್ತಿ ಎಲ್ಲಿತ್ತೋ. ಮನದಲ್ಲಿ, ತೆರೆದುಕೊಳ್ಳಲು ಕಾಯುತ್ತಿದ್ದ ಯಾಯಾವ ಪುಟಗಳೆಲ್ಲ ಸಟಪಟನೆ ತೆರೆದುಕೊಂಡವೋ. ಅದುವರೆಗೆ ಅತ್ಯಂತ ಶಿಸ್ತಿನ ಭಾಷೆಯಾಡುತಿದ್ದ ಮುದುಕಿ ರೋಷಾವೇಷ ತಾಳಿ ಅದೇ ಭಾಷೆಯನ್ನು ಮುರಿಮುರಿದು ಮನಸೇಚ್ಛೆ ಮಕ್ಕಳನ್ನು ರಪ್ಪರಪ ಹೊಡೆದಳು. ಬೈಗಳಲ್ಲಿ ಮೀಯಿಸಿದಳು. ಕೆಂಪುಕೆಂಪಾಗಿ ಮೈಯೆಲ್ಲ ಸಿಟ್ಟಿಂದ ನಡುಗಿ ವಾಚಾಮಗೋಚರ ಸುರುಮಾಡಿದಳು. ‘ಈಗ ಆ ಮನೆಯನ್ನೇ ಮಾರಲು ಹೊರಟಿವೆ. ಅಯ್ಯಿ! ಆ ಪ್ರಯತ್ನಕ್ಕೇ ನನ್ನನ್ನು ಕರಕೊಂಡು ಹೋಗಿದ್ದು... ವ್ಯಾಪಾರ ಕುದುರಲಿಲ್ಲ. ನನ್ನ ಪುಣ್ಯ! ಅದೂ ಹೋದರೆ, ನಾನೆಲ್ಲಿ (ಮನಸಿನಲ್ಲಾದರೂ) ತಿರುಗಾಡಿಕೊಂಡಿರಲಿ ದೇವರೇ!...’ ಮುದುಕಿ ಸ್ವಗತಕ್ಕಿಳಿದಳು.

ನೀರೊಣಗಿದ ಕಣ್ಣನ್ನು ಒರೆಸಿಕೊಂಡಳು. ನಿಧಾನ ಮೌನವಾದಳು. (ಸಿಮ್ಲಾ ಬಿಟ್ಟ ಕಾರಣ, ಆಗ ಹೇಳಿದ್ದು, ತೋರಿಕೆಯದೆ!) ಬೆಪ್ಪಾಗಿ ನಾನು ಅವಳನ್ನೇ ನೋಡತೊಡಗಿದೆ. ನೋಡುತಿದ್ದಂತೆ ಅರೆ, ನಾನಿವಳನ್ನು ಎಲ್ಲಿಯೋ ನೋಡಿದ್ದೇನೆ ಅನಿಸತೊಡಗಿತು. ಬಹಳ ಪರಿಚಿತ ಮುದುಕಿ ಈಕೆ. ಎಲ್ಲಿಯೋ ನೋಡಿದ್ದೇನೆ, ಎಲ್ಲಿ, ಎಲ್ಲಿರಬಹುದು ಎಂದು ತಲೆಯೊಳಗೆಲ್ಲ ವೇಗವಾಗಿ ಸಂಚರಿಸಿ ಹುಡುಕತೊಡಗಿದೆ. ಹುಡುಕುತಿದ್ದಂತೆ, ಟಿಟಿ ಬಂದ. ಪ್ರಯಾಣಿಕರ ಚೀಟಿ ಅಂಟಿಸತೊಡಗಿದ. ಮಗ ಈಚೆ ಬರುತ್ತ ತುಸು ದೂರದಿಂದಲೇ ತಾಯಿಯನ್ನು ಸನ್ನೆಯಲ್ಲಿ ಕರೆದ. ತಾಯಿ ಎದ್ದು ಕಣ್ಣಲ್ಲೆ ವಿದಾಯ ಹೇಳಿ ದೀರ್ಘ ಕುಳಿತು ಬಂದ ಪರಿಣಾಮದಿಂದಾಗಿ ಬಾತಿದ ಪಾದದಲ್ಲಿ, ಅತ್ತಇತ್ತ ವಾಲುಹೆಜ್ಜೆಯಲ್ಲಿ, ಹೊರಟು ಬಿಟ್ಟಳು.

ಅವರಿಬ್ಬರೂ ಒಟ್ಟಿಗೇ ಹೋಗುವುದನ್ನು ನೋಡುತಿದ್ದರೆ, ಅಲ, ವಿಚಿತ್ರವೆ! ಆ ದೃಶ್ಯ ಪ್ರೀತಿ ವಾತ್ಸಲ್ಯ ಕಾಳಜಿ ಹೊಮ್ಮುವ ಎರಡು ಜೀವಗಳು ಪರಸ್ಪರ ಬಾಂಧವ್ಯ ಸುಖಿಸುತ್ತ ಸಾಗುತ್ತಿರುವ ಚಲಿಸುವ ಚಿತ್ರದಂತೆ ಕಾಣುತ್ತಿತ್ತು!

ಇಷ್ಟಕ್ಕೂ ಬೇಕಾದಂತೆ ಇದ್ದು ಕೂಡ ಈ ವಯಸ್ಸಿನಲ್ಲಿ, ಕುಳಿತೇ, ಮತ್ತೆ ರೈಲು ಪಯಣ, ನಿರಾಹಾರ, ದೆಹಲಿವರೆಗೆ! ಯಾಕೆ?
ಅಂದಹಾಗೆ- ಪಯಣದುದ್ದಕ್ಕೂ ಆತ ಅವಳೊಡನೆ ಮದ್ದಿಗೂ ಒಂದಾದರೂ ಮಾತು ಆಡಿದ್ದು ಕಾಣಲಿಲ್ಲ; ತಾಯಿಯೊಡನೆಯ ಮಾತು ನಂದಿಯೇ ಹೋದಂತಿದ್ದ, ಅಲ್ಲವೆ!

... ಏನೋ. ಕಂಡದ್ದೇ ಕೇಳಿದ್ದೇ ಯಥಾರ್ಥವೆನ್ನುವುದಾದರೂ ಹೇಗೆ?
... ಅಲ್ಲ ಎನ್ನುವುದಾದರೂ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT