ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿವ ನೀರು ಬೆಳಕ ಚೆಲ್ಲಿ...

Last Updated 3 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಹಿಮಾಲಯದ ತೆಹ್ರಿ ಜಿಲ್ಲೆ ನಾಗಿನಿ ಹಳ್ಳಿಯಿಂದ ಮಸ್ಸೂರಿಗೆ ಸಾಗುತ್ತಿದ್ದಾಗ, ಜತೆಗಿದ್ದ ಕೃಷಿಕ ವಿಜಯ್ ಜರ್ದಾರಿ ಚಾಲಕನಿಗೆ ಹೇಳಿ ವಾಹನ ನಿಲ್ಲಿಸಿದರು. ನಮ್ಮೆಲ್ಲರ ಪ್ರಶ್ನಾರ್ಥಕ ಭಾವನೆ ಗಮನಿಸಿ, ಹೇಳಿದರು: `ಇಲ್ಲೊಂದು ವಾಟರ್‌ಮಿಲ್ ಇದೆ. ನೋಡಿ ಮುಂದೆ ಸಾಗೋಣ~.

ವಿಂಡ್‌ಮಿಲ್, ಫ್ಲೋರ್‌ಮಿಲ್ ಬಗ್ಗೆ ಕೇಳಿ, ನೋಡಿದ್ದೆವು. ಇದಾವುದು ವಾಟರ್‌ಮಿಲ್?
ರಸ್ತೆ ಪಕ್ಕ ಕಿರುದಾರಿಯಲ್ಲಿ ಅರ್ಧ ಕಿಲೋಮೀಟರ್ ಕ್ರಮಿಸಿದಾಗ, ಅಲ್ಲೊಂದು ಕಟ್ಟಡದ ಹೊರಗೆ ಮಹಿಳೆಯರು ಗುಂಪಾಗಿ ನಿಂತ್ದ್ದಿದರು. `ಅದೇ ವಾಟರ್‌ಮಿಲ್. ಅವರೆಲ್ಲ ಬಂದಿರುವುದು ಹಿಟ್ಟು ಮಾಡಿಸಿಕೊಂಡು ಹೋಗಲು~ ಎಂದರು ಜರ್ದಾರಿ.

ನಿರಂತರವಾಗಿ ಹರಿಯುವ ನದಿ ನೀರಿಗೆ ಒಡ್ಡು ಹಾಕಿ, ತಮಗೆ ಬೇಕೆಂದ ಹಾಗೆ ಹರಿಸಿಕೊಂಡು ಅದರಿಂದ ಲಾಭ ಪಡೆದ `ಪಲಾಸ್~ ಎಂಬ ಗ್ರಾಮದ ಜನರ ತಂತ್ರವಿದು. ಕಡಿಮೆ ಹಣ ವೆಚ್ಚ ಮಾಡಿ, ಬೆಳಕು ಪಡೆದ ಯಶೋಗಾಥೆಯಿದು.

ಸುಮಾರು ಒಂದೂವರೆ ಸಾವಿರ ಜನಸಂಖ್ಯೆಯ ಗ್ರಾಮದ ಅರ್ಧ ಭಾಗ ರಸ್ತೆಯ ಆಸುಪಾಸು ಇದ್ದರೆ, ಉಳಿದರ್ಧ ತಗ್ಗು ಪ್ರದೇಶದಲ್ಲಿದೆ. ಸಣ್ಣ ನದಿಯೊಂದು ಪಕ್ಕದಲ್ಲೇ ಹರಿಯುತ್ತದೆ. ವಿದ್ಯುತ್ ಸೌಲಭ್ಯ ಇಲ್ಲಿಗೆ ತಲುಪಿದ್ದರೂ ಅದು ಸಿಕ್ಕಿದ್ದು ಕೆಲವು ಜನರಿಗೆ ಮಾತ್ರ. ಅದರಲ್ಲೂ ತಗ್ಗು ಭಾಗದ ಬಳಿಯ ಮನೆಗಳಿಗೆ ವಿದ್ಯುತ್ ಬೆಳಕಿನ ಯೋಗ ಇಲ್ಲ.
 
ಇನ್ನೊಂದು ಮುಖ್ಯ ಸಮಸ್ಯೆಯೆಂದರೆ, ಹಿಟ್ಟಿನ ಗಿರಣಿಗೆ ಸಮರ್ಪಕ ಪ್ರಮಾಣದಷ್ಟು ವಿದ್ಯುತ್ ಸಿಗುತ್ತಲೇ ಇರಲಿಲ್ಲ. `ಬೀಸುವಕಲ್ಲು ಬಳಸಿ ಹಿಟ್ಟು ಮಾಡುವಷ್ಟು ವ್ಯವಧಾನ, ಶಕ್ತಿ ಈಗಿನವರಿಗೆ ಎಲ್ಲಿದೆ? ಹಾಗಾಗಿ ಹತ್ತಾರು ಕಿಲೋಮೀಟರ್ ದೂರದ ಕಾಂಘರಾ ಪಟ್ಟಣಕ್ಕೆ ಹೋಗಿ ಗೋಧಿ ಹಿಟ್ಟು ಮಾಡಿಸಿಕೊಂಡು ಬರುತ್ತಿದ್ದೆವು~ ಎಂದು ನೆನಪಿಸಿಕೊಳ್ಳುತ್ತಾರೆ, ಗ್ರಾಮಸ್ಥ ಕನ್ಹಯ್ಯಲಾಲ್.

ಇದಕ್ಕೆಲ್ಲ ಪರಿಹಾರ ಎಲ್ಲಿದೆ ಎಂದು ಯೋಚಿಸಿದಾಗ ಕಂಡಿದ್ದು- ಊರನ್ನು ಸುತ್ತುವರಿದು ಮುಂದೆ ಸಾಗುವ ನದಿ. ನದಿ ನೀರನ್ನು ವಿದ್ಯುತ್‌ಗೆ ಬಳಸಿಕೊಳ್ಳುವ ವಾಟರ್‌ಮಿಲ್‌ಗಳ ಬಗ್ಗೆ ಜನರಿಗೆ ಮಾಹಿತಿಯಿತ್ತು. ಇದನ್ನು ಅಳವಡಿಸಿಕೊಳ್ಳಲು ಮುಂದಾದಾಗ ಅವರ ನೆರವಿಗೆ ಬಂದಿದ್ದು `ಹಿಮಾಲಯನ್ ಎನ್ವಿರಾನ್‌ಮೆಂಟಲ್ ಸ್ಟಡೀಸ್ ಅಂಡ್ ಕನ್ಸರ್ವೇಶನ್ ಆರ್ಗನೈಸೇಶನ್~ (ಹೆಸ್ಕೊ) ಎನ್ನುವ ಸ್ವಯಂಸೇವಾ ಸಂಸ್ಥೆ.

ಯೋಜನೆಯೊಂದು ರೂಪುಗೊಂಡಿತು. ಸರ್ಕಾರದ ಸಹಾಯಧನ, ಜನರ ವಂತಿಗೆ ಸೇರಿದಂತೆ ಒಟ್ಟು ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ವಾಟರ್‌ಮಿಲ್ ಸಿದ್ಧವಾಯಿತು. ಕಳೆದ ವರ್ಷ ಆಗಸ್ಟ್‌ನಲ್ಲಿ ಆರಂಭವಾದ ಈ ಮಿಲ್, ಸತತ ಕೆಲಸ ಮಾಡುತ್ತಲೇ ಇದೆ.
ಇಲ್ಲಿನ ಮಿಲ್ ಅನ್ನು ಎರಡು ಉದ್ದೇಶಕ್ಕೆ ಬಳಕೆಯಾಗುವಂತೆ ರೂಪಿಸಲಾಗಿದೆ. ಹಗಲು ಹೊತ್ತಿನಲ್ಲಿ ಹಿಟ್ಟಿನ ಗಿರಣಿಯಾದರೆ, ರಾತ್ರಿ ವಿದ್ಯುತ್ ಉತ್ಪಾದನೆ.

ಇದನ್ನು ನಿರ್ಮಿಸಿದ ವಿಧಾನ ಅಷ್ಟು ಕಷ್ಟದ್ದೇನಲ್ಲ. ನದಿ ಹರಿಯುವ ಒಂದು ಸ್ಥಳದಲ್ಲಿ ಸಣ್ಣ ಕಟ್ಟೆ ಕಟ್ಟಿ, ಅಲ್ಲಿಂದ ಕಿರು ಕಾಲುವೆಯ ಮೂಲಕ ನೀರನ್ನು ನೂರು ಮೀಟರ್ ದೂರದ ಮಿಲ್‌ವರೆಗೆ ತರಲಾಗಿದೆ. ಇಲ್ಲೊಂದು ದೊಡ್ಡ ಟ್ಯಾಂಕ್ ಇದೆ. ಇದರ ತಳಭಾಗದಿಂದ ಪೈಪ್ ಮೂಲಕ ಹರಿಯುವ ನೀರು, ಮಿಲ್‌ನ ಚಕ್ರವನ್ನು ತಿರುಗಿಸುತ್ತದೆ.

ಚಕ್ರಕ್ಕೆ ಬೇರಿಂಗ್‌ನಿಂದ ಮೇಲ್ಭಾಗದಲ್ಲಿ ಜೋಡಿಸಿದ ಕಬ್ಬಿಣದ ಸರಳಿಗೆ ಹಲವು ಬಗೆಯ ಗಾಲಿಗಳಿವೆ. ರಭಸದ ನೀರು ಮೇಲಿಂದ ಬಿದ್ದಾಗ, ಚಕ್ರ ತಿರುಗಿದರೆ ಅದರೊಂದಿಗೆ ಸರಳಿನ ಜತೆಗೆ ಗಾಲಿಗಳೂ ತಿರುಗುತ್ತವೆ. ಇವುಗಳಿಗೆ ಬೆಲ್ಟ್ (ಪಟ್ಟಿ) ಹಾಕಿ ಮೇಲಿರುವ ಗಿರಣಿಯ ಗಾಲಿಯನ್ನು ತಿರುಗಿಸಲಾಗುತ್ತದೆ.

ಹಿಮಾಲಯದ ತಪ್ಪಲಲ್ಲಿ ವರ್ಷದ ಹನ್ನೆರಡು ತಿಂಗಳೂ ನದಿಗಳು ಹರಿಯುತ್ತಲೇ ಇರುತ್ತವೆ. ಇದನ್ನೇ `ಬಂಡವಾಳ~ ಮಾಡಿಕೊಂಡು ಈ ಪ್ರಯೋಜನ ಪಡೆಯಲಾಗುತ್ತಿದೆ. ಹಗಲು ಹೊತ್ತಿನಲ್ಲಿ ಆಹಾರಧಾನ್ಯ ಹಿಟ್ಟು ಮಾಡುವ ಗಿರಣಿಗೆ ಪಟ್ಟಿ ಜೋಡಿಸಿದರೆ, ರಾತ್ರಿ ಸಮಯದಲ್ಲಿ ಇದನ್ನು ಕಳಚಿ ಡೈನಮೋಗೆ ಇನ್ನೊಂದು ಪಟ್ಟಿ ಜೋಡಿಸಲಾಗುತ್ತದೆ. ಹಗಲು ಹಿಟ್ಟು ಮಾಡುವ ನೀರು, ರಾತ್ರಿ ಬೆಳಕಿನ ಧಾರೆ ಹರಿಸುತ್ತದೆ!

`ಇದನ್ನು ಹಾಕಿಕೊಂಡಾಗಿನಿಂದ ನಮಗೆ ದೂರದೂರಿನ ಗಿರಣಿಗೆ ಹೋಗುವುದು ತಪ್ಪಿದೆ. ಇನ್ನು ಸುತ್ತಲಿನ ಮನೆಗಳಿಗೆ ಎರಡರಿಂದ ಮೂರು ಬಲ್ಬ್ ಹಾಕಿಕೊಳ್ಳುವಷ್ಟು ಕರೆಂಟ್ ಸಿಗುತ್ತಿದೆ. ಎರಡರಿಂದ ಸಿಗುವ ಆದಾಯವನ್ನು ವಾಟರ್‌ಮಿಲ್ ನಿರ್ವಹಣೆ ಹಾಗೂ ಇದರ ಕಾರ್ಮಿಕರಿಗೆ ಕೊಡಲಾಗುತ್ತಿದೆ.

ನೀರು ಯಾವಾಗಲೂ ಹರಿಯುವ ಕಾರಣ, ಪವರ್ ಕಟ್ ಎಂಬ ಸಮಸ್ಯೆ ನಮ್ಮನ್ನು ಕಾಡುವುದೇ ಇಲ್ಲ~ ಎಂದು ಹೇಳುತ್ತಾರೆ, ಗ್ರಾಮಸ್ಥ ಕಿಶೋರ್‌ಚಂದ್

ಬೆಳಿಗ್ಗೆ 9ಕ್ಕೆ ಮಿಲ್ ಕಾರ್ಯಾರಂಭ. ತಾಸಿಗೆ ಅರ್ಧ ಕ್ವಿಂಟಲ್‌ನಂತೆ ದಿನಕ್ಕೆ ಸುಮಾರು ನಾಲ್ಕು ಕ್ವಿಂಟಲ್ ಧಾನ್ಯವನ್ನು ಹಿಟ್ಟು ಮಾಡಿಕೊಡುವ ಈ ಗಿರಣಿಯ ಸಾಮರ್ಥ್ಯವು, ಪಲಾಸ್ ಹಳ್ಳಿಯ ಜತೆಗೆ ಸುತ್ತಲಿನ ಇನ್ನೆರಡು ಗ್ರಾಮಕ್ಕೂ ಸಾಕಾಗುವಷ್ಟಿದೆ. `ರಾಗಿ, ಗೋಧಿ, ಜೋಳ ಹಿಟ್ಟು ಮಾಡಿಸಿಕೊಂಡು ಹೋಗಲು ಪಕ್ಕದ ಹಳ್ಳಿಯಿಂದಲೂ ಜನರು ಬರುತ್ತಾರೆ~ ಎಂದು ಗಿರಣಿ ಉಸ್ತುವಾರಿ ವಹಿಸಿರುವ ಪೂರಣಸಿಂಗ್ ಹೇಳುತ್ತಾರೆ.

ರಾತ್ರಿಯಾಗುತ್ತಲೇ ಹಿಟ್ಟಿನ ಗಿರಣಿಯ ಸಂಪರ್ಕ (ಬೆಲ್ಟ್) ತಪ್ಪಿಸಿ, ಡೈನಮೋಕ್ಕೆ ಜೋಡಿಸಲಾಗುತ್ತದೆ. ಇದರಿಂದ ವಿದ್ಯುತ್ ಲಭ್ಯ. ಬೆಳಗಿನವರೆಗೆ ಈ ಗಿರಣಿಯಲ್ಲಿ ಉತ್ಪಾದನೆಯಾಗುವ ಕರೆಂಟ್, ಹತ್ತೆಂಟು ಮನೆಗಳಿಗೆ ಬೆಳಕು ನೀಡುತ್ತದೆ. ಇದಕ್ಕಾಗಿ ಆ ಗ್ರಾಹಕರು ತಿಂಗಳಿಗೆ ಇಪ್ಪತ್ತೈದು ರೂಪಾಯಿ ಶುಲ್ಕ ನೀಡಬೇಕು. ಪೂರಣಸಿಂಗ್‌ನ ವೇತನ ಹಾಗೂ ಇತರ ನಿರ್ವಹಣೆ ಇದರಲ್ಲೇ ನಡೆಯುತ್ತದೆ.

ನೀರಿನ ಹರಿವು ನೋಡಿಕೊಂಡು ಅಳವಡಿಸಿಕೊಂಡ ಈ ವಾಟರ್‌ಮಿಲ್ ಈಗ ಈ ಭಾಗದಲ್ಲಿ ಜನಮನ್ನಣೆ ಗಳಿಸಿದೆ. `ಇದರ ಯಶಸ್ಸನ್ನು ಗಮನಿಸಿ, ಇದೇ ಮಾದರಿಯ ಇನ್ನೂ ನಾಲ್ಕು ಯಂತ್ರಗಳನ್ನು ವರ್ಷವೊಂದರಲ್ಲೇ ನಮ್ಮ ಪ್ರಾಂತ್ಯದಲ್ಲಿ ಸ್ಥಾಪಿಸಲಾಗಿದೆ. ಅವೆಲ್ಲ ಉತ್ತಮವಾಗಿ ಕೆಲಸ ಮಾಡುತ್ತಿವೆ.

ಎಲ್ಲದಕ್ಕೂ ಸರ್ಕಾರವನ್ನೇ ನಂಬಿಕೊಂಡು ಕಾಯುವುದಕ್ಕಿಂತ ಇದೇ ಒಳ್ಳೆಯದಲ್ಲವೇ?~ ಎಂದು ವಿಜಯ್ ಜರ್ದಾರಿ ದೂರವಾಣಿಯಲ್ಲಿ ಆ ಪರ್ವತದ ತುದಿಯಿಂದ ಕೇಳುವಾಗ, ಹಿನ್ನೆಲೆಯಾಗಿ ನೀರು ರಭಸದಿಂದ ಸುರಿಯುತ್ತಿರುವ ಸದ್ದು ಕೇಳಿಬಂತು. ್ಢ

ಪಾನ್ ಚಕ್ಕಿ
ವಾಟರ್‌ಮಿಲ್‌ಗಳಿಗೆ ಇಲ್ಲಿನ ಗ್ರಾಮಸ್ಥರು ಕರೆಯುವುದು ಪಾನ್ ಚಕ್ಕಿ ಅಥವಾ ಘಾರಟ್ ಎಂದು. ಹಿಮಾಲಯ ಪ್ರದೇಶಕ್ಕೂ ಪಾನ್ ಚಕ್ಕಿಗಳಿಗೂ ಅವಿನಾಭಾವ ಸಂಬಂಧ. ಶತಮಾನಗಳಿಂದಲೂ ಚಾಲನೆಯಲ್ಲಿರುವ ಇಲ್ಲಿನ ನೂರಾರು ಘಾರಟ್‌ಗಳಿಗೆ ಬಳಸಿದ ತಂತ್ರಜ್ಞಾನ ತೀರಾ ಹಳೆಯದು.

ಪರಿಸರಕ್ಕೆ ಹಾನಿ ಮಾಡದ ವಾಟರ್‌ಮಿಲ್‌ಗಳಿಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿದ್ದು- `ಹೆಸ್ಕೊ~. ಸುಧಾರಿತ ಬೇರಿಂಗ್, ನೀರಿನ ಒತ್ತಡ ಹೆಚ್ಚು ಮಾಡಿ ಜೋರಾಗಿ ಗಾಲಿ ತಿರುಗುವಂತೆ ಮಾಡುವ ವಿನ್ಯಾಸವನ್ನು `ಹೆಸ್ಕೊ~ ರೂಪಿಸಿದೆ. ಹಳೆಯ ಘಾರಟ್‌ಗಳನ್ನು ಪುನರುಜ್ಜೀವನಗೊಳಿಸುವ ಯತ್ನಕ್ಕೂ ಇದು ಕೈ ಹಾಕಿದೆ.

ಮೇಲಿನಿಂದ ಬೀಳುವ ನೀರು ಗಿರಣಿ ಗಾಲಿ ತಿರುಗುವಂತೆ ಮಾಡಿ ಮುಂದೆ ಹೋಗುವುದು ಹೊಲ-ಗದ್ದೆಗಳಿಗೆ. ಇದರಿಂದ ಮಾಲಿನ್ಯವಾಗಲೀ, ಪರಿಸರಹಾನಿಯಾಗಲೀ ಇಲ್ಲ. ದೊಡ್ಡ ದೊಡ್ಡ ಅಣೆಕಟ್ಟು ಕಟ್ಟಿ, ಲಕ್ಷಾಂತರ ಎಕರೆ ಕಾಡು-ಜಮೀನು ಮುಳುಗಿಸಿ ಸಾವಿರಾರು ಜನರನ್ನು ಒಕ್ಕಲೆಬ್ಬಿಸುವ ವಿದ್ಯುತ್ ಉತ್ಪಾದಿಸುವ ಯೋಜನೆಗಳಿಗಿಂತ ಇದೇ ಒಳ್ಳೆಯದಲ್ಲವೇ?!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT