ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ-ಕೊಟ್ಟೂರು ರೈಲು ಸಂಚಾರ ಆರಂಭವಾದೀತೇ?

Last Updated 1 ಜೂನ್ 2011, 9:50 IST
ಅಕ್ಷರ ಗಾತ್ರ

ದಾವಣಗೆರೆ: ಮಧ್ಯ ಕರ್ನಾಟಕದ ಬಹುನಿರೀಕ್ಷಿತ ಹರಿಹರ-ಕೊಟ್ಟೂರು ಬ್ರಾಡ್‌ಗೇಜ್ ರೈಲ್ವೆ ಮಾರ್ಗ ಯೋಜನೆಗೆ ದಶಕ ಕಳೆದರೂ ಮುಕ್ತಿಯ ಭಾಗ್ಯ ದೊರೆತಿಲ್ಲ.ಹರಿಹರ-ಕೊಟ್ಟೂರು ನಡುವೆ 68 ಕಿ.ಮೀ. ವ್ಯಾಪ್ತಿಯ ರೈಲ್ವೆ ಮಾರ್ಗದ ಕಾಮಗಾರಿ ಆರಂಭವಾದದ್ದು 2001-2002ರಲ್ಲಿ. 2009ಕ್ಕೆ ಕಾಮಗಾರಿ ಮುಗಿದು ರೈಲು ಸಂಚಾರ ಆರಂಭವಾಗಬೇಕಿತ್ತು. ಆದರೆ, ದಶಕ ಕಳೆದರೂ ರೈಲ್ವೆಮಾರ್ಗ ಕಾಮಗಾರಿಗೆ ಮುಕ್ತಿಯ ಭಾಗ್ಯ ದೊರೆತಿಲ್ಲ.

ರೈಲ್ವೆ ಮಾರ್ಗಕ್ಕಾಗಿ ಸ್ವಾಧೀನ ಪಡಿಸಿಕೊಂಡ ರೈತರ ಜಮೀನಿನ ಪರಿಹಾರದ ಸಮಸ್ಯೆಯೇ ಕಾಮಗಾರಿಗೆ ಅಡ್ಡಗಾಲು ಹಾಕಿದೆ. ಇದರಿಂದಾಗಿ ಹರಿಹರ-ಕೊಟ್ಟೂರು ಮಾರ್ಗದಲ್ಲಿ ರೈಲಿನ `ಚುಕುಬುಕು~ ಸದ್ದು ಕೇಳುವ ದಿನ ಇನ್ನೂ ಸಮೀಪಿಸಿಲ್ಲ.

ಯೋಜನೆಗೆ ಇದುವರೆಗೆ ರೂ380 ಕೋಟಿ ವೆಚ್ಚವಾಗಿದೆ. ರೈಲ್ವೆ ಮಾರ್ಗಕ್ಕಾಗಿ ಒಟ್ಟು ಇದುವರೆಗೆ 930 ಎಕರೆ ಜಮೀನು ಭೂಸ್ವಾಧೀನ ಪಡಿಸಿಕೊಳ್ಳಲಾಗಿದೆ. ಸುಮಾರು ರೂ19 ಕೋಟಿ ಹಣವನ್ನು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರೈತರಿಗೆ ಪರಿಹಾರ ನೀಡಲಾಗಿದೆ.

ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಮೂದಿಸಿರುವ ಜಮೀನಿನ ಪ್ರಸಕ್ತ ಮಾರುಕಟ್ಟೆ ದರದಲ್ಲೇ ರೈತರಿಗೆ ಪರಿಹಾರ ನೀಡಲಾಗಿದೆ. ಆದರೆ, ಜಿಲ್ಲೆಯ ಹರಿಹರ ತಾಲ್ಲೂಕಿನ 6 ಗ್ರಾಮಗಳ ರೈತರು ಮಾತ್ರ ಹೆಚ್ಚಿನ ಪರಿಹಾರಬೇಕೆಂದು ಜಿಲ್ಲೆಯ ಸಿವಿಲ್ ಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ರೈತರಿಗೆ `ಜನರಲ್ ಅವಾರ್ಡ್~ನಲ್ಲಿ ಎಕರೆಗೆ ರೂ 30ರಿಂದ 50ಸಾವಿರ ಪರಿಹಾರ ನೀಡಲಾಗಿದೆ. ಆದರೆ, ದೊಡ್ಡಬಾತಿ-ಕೋಡಿಹಳ್ಳಿ, ಅಮರಾವತಿ-ದೊಗ್ಗಳ್ಳಿಯ ಮಧ್ಯೆ ರೈಲ್ವೆ ಗೂಡ್ಸ್‌ಶೆಡ್‌ಗಾಗಿ ಭೂಸ್ವಾಧೀನ ಪಡಿಸಿಕೊಂಡ ರೈತರಿಗೆ `ಕನ್‌ಸರ್ನ್ ಅವಾರ್ಡ್~ನಲ್ಲಿ ಎಕರೆಗೆ ರೂ 6.75 ಲಕ್ಷ- ರೂ7.50 ಲಕ್ಷದವರೆಗೆ  ಪರಿಹಾರ ನೀಡಲಾಗಿದೆ. ಹಾಗಾಗಿ, ಉಳಿದ ರೈತರು ತಮಗೂ ಹೆಚ್ಚಿನ ಮೊತ್ತದ ಪರಿಹಾರ ನೀಡಬೇಕೆಂದು ಒತ್ತಾಯಿಸಿ, ರೈಲ್ವೆಮಾರ್ಗ ಕಾಮಗಾರಿಗೆ ತಡೆಯೊಡ್ಡುತ್ತಿದ್ದಾರೆ.

ಈ ಸಂಬಂಧ ಕೋರ್ಟ್‌ನಲ್ಲಿರುವ ಎಲ್ಲಾ ಪ್ರಕರಣಗಳನ್ನು`ಲೋಕ್‌ಅದಾಲತ್~ ಮೂಲಕ ಇತ್ಯರ್ಥ ಮಾಡಬೇಕೆಂದು ಹಿಂದಿನ ಜಿಲ್ಲಾಧಿಕಾರಿ ಕೆ. ಅಮರನಾರಾಯಣ ರಾಜ್ಯ ಸರ್ಕಾರಕ್ಕೆ ಒಂದೂವರೆ ವರ್ಷದ ಹಿಂದೆಯೇ ಪತ್ರ ಬರೆದಿದ್ದರು. ಈ ರೀತಿಯ ಪ್ರಕರಣ ಅಪರೂಪವಾದ್ದರಿಂದ ತಕ್ಷಣಕ್ಕೆ ತೀರ್ಮಾನ ತೆಗೆದುಕೊಳ್ಳದ ಸರ್ಕಾರ 2011ರ ಏಪ್ರಿಲ್‌ನಲ್ಲಿ ಈ ಕುರಿತು ಒಪ್ಪಿಗೆ ಪತ್ರ ನೀಡುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದೆ. ರೈಲ್ವೆ ಇಲಾಖೆಗೂ ಈ ರೀತಿಯ ಪ್ರಕರಣ ಹೊಸದು. ಹಾಗಾಗಿ, ಕಾನೂನು ತಜ್ಞರ ಸಲಹೆ ಪಡೆದು, ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂಬುದು ಇಲಾಖೆಯ ಬಲ್ಲ ಮೂಲಗಳ ಸಮಜಾಯಿಷಿ.

ರೈತ ಮುಖಂಡರ ಪ್ರಕಾರ, `ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ರೈತರು ತಮ್ಮ ಜಮೀನಿನ ಅಸಲಿ ಬೆಲೆ ನಮೂದಿಸದೇ ಕಡಿಮೆ ದರ ನಮೂದಿಸಿದ್ದಾರೆ. ಹಾಗಾಗಿ, ಸರ್ಕಾರ ಆ ದರ ಪರಿಗಣಿಸಿ, ಪರಿಹಾರ ನೀಡಿದರೆ ರೈತರಿಗೆ ಅನ್ಯಾಯವಾಗುತ್ತದೆ. ಹಾಗಾಗಿ, ಕೋರ್ಟ್ ಮೊರೆ ಹೋಗಿದ್ದಾರೆ~ ಎನ್ನುತ್ತಾರೆ.

ಪಟ್ಟಣಪ್ರದೇಶ ವ್ಯಾಪ್ತಿಯೊಳಗೆ ಬರುವ ಜಮೀನಿಗೆ ಮಾತ್ರ `ಕನ್‌ಸರ್ನ್ ಅವಾರ್ಡ್~ನಲ್ಲಿ ಪರಿಹಾರ ನೀಡಬಹುದು. ಇದಕ್ಕೆ ತಜ್ಞರ ಸಮಿತಿಯ ವರದಿ ಆಧರಿಸಲಾಗಿರುತ್ತದೆ. ಆದರೆ, `ಜನರಲ್ ಅವಾರ್ಡ್~ನಲ್ಲಿ ಪಟ್ಟಣ ಪ್ರದೇಶದ  ವ್ಯಾಪ್ತಿಯೊಳಗೆ ಬಾರದ ಜಮೀನಿಗೆ ಕಡಿಮೆ ಮೊತ್ತದ ಪರಿಹಾರ ನೀಡಬಹುದು ಎನ್ನುತ್ತವೆ ಮೂಲಗಳು.

ಈ ರೈಲ್ವೆಮಾರ್ಗದಿಂದಾಗಿ ಹರಪನಹಳ್ಳಿ ತಾಲ್ಲೂಕಿನ ತೆಲಗಿ ಮತ್ತಿತರರ ಭಾಗಗಳಲ್ಲಿ ನಿವೇಶನ ದರದಲ್ಲಿ ಏರಿಕೆಯಾಗಿದೆ. ರೈಲು ಸಂಚಾರ ಆರಂಭವಾದಲ್ಲಿ ಮಧ್ಯಕರ್ನಾಟಕದ ಜನರಿಗೆ ಅನುಕೂಲವಾಗಲಿದೆ. ಈ ಹಿಂದೆ ಹೊಸಪೇಟೆಗೆ ತೆರಳಲು ಹುಬ್ಬಳ್ಳಿಗೆ ಹೋಗಿ ಅಲ್ಲಿಂದ ರೈಲು ಬದಲಿಸಬೇಕಿತ್ತು.

ಆದರೆ, ಇನ್ಮುಂದೆ ಹಾಗಾಗದು. ಹೈದರಾಬಾದ್, ಉತ್ತರಭಾರತದ ಪ್ರಮುಖ ನಗರಗಳಿಗೆ ಈ ಮಾರ್ಗ ಮುಖ್ಯ ಸಂಪರ್ಕ ಒದಗಿಸುತ್ತದೆ. ವ್ಯಾಪಾರ- ವಹಿವಾಟು, ಗೂಡ್ಸ್ ರೈಲುಗಳ ಸಂಚಾರಕ್ಕೂ ಅನುಕೂಲವಾಗಲಿದೆ. ಆದರೆ, ರೈತರ ಅಸಹಕಾರದಿಂದಾಗಿ ಕಾಮಗಾರಿ ವಿಳಂಬವಾಗುತ್ತಿದೆ~ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.

`ಈಗಾಗಲೇ ರೈಲ್ವೆ ಮಾರ್ಗ ಪೂರ್ಣಗೊಂಡಿದೆ. ಎಂಜಿನ್ ಟ್ರಯಲ್ ಕೂಡಾ ಮಾಡಲಾಗಿದೆ. ಪ್ರಯಾಣಿಕರ ಸುರಕ್ಷತಾ ಕ್ರಮಗಳ ಕುರಿತು  ಕಮೀಷನ್ ಆಫ್ ರೈಲ್ವೆ ಸೇಫ್ಟಿ ವಿಭಾಗ ಪರಿಶೀಲಿಸಿ, ಅನುಮತಿ ನೀಡಿದಲ್ಲಿ ಇದೇ ಆಗಸ್ಟ್‌ನಲ್ಲಿ ರೈಲು ಸಂಚರಿಸಬಹುದು. ಯೋಜನೆಗೆ ರೈತರು ಸಹಕರಿಸಿದಲ್ಲಿ, ಹರಿಹರ- ಕೊಟ್ಟೂರು ಮಾರ್ಗದಲ್ಲಿ ರೈಲಿನ ಸಿಳ್ಳೆಯ ಸದ್ದು ಕೇಳಿಸೀತು~ ಎನ್ನುತ್ತಾರೆ ನೈರುತ್ಯ ರೈಲ್ವೆ ವಲಯದ ಪ್ರಯಾಣಿಕರ ಕುಂದು-ಕೊರತೆ ನಿವಾರಣೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಎಸ್.ಕೆ. ಶಾಸ್ತ್ರಿ.
ಮುಖ್ಯಾಂಶಗಳು
 
ರೂ 380 ಕೋಟಿ ವೆಚ್ಚದ ಯೋಜನೆ 
ಪ್ರಯಾಣ, ವ್ಯಾಪಾರವಹಿವಾಟಿಗೆ ಪೂರಕ
 
68 ಕಿ.ಮೀ. ವ್ಯಾಪ್ತಿ ಬ್ರಾಡ್‌ಗೇಜ್ ಮಾರ್ಗ

ಹೊಸಪೇಟೆ, ಹೈದರಾಬಾದ್, ಉತ್ತರ ಭಾರತಕ್ಕೆ ಮುಖ್ಯ ಸಂಪರ್ಕ ಮಾರ್ಗ

ಗೂಡ್ಸ್ ರೈಲ್ವೆಗಳಿಗೆ ಈ ಮಾರ್ಗ ವರದಾನ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT