ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ: ಬತ್ತ ಖರೀದಿ ಕೇಂದ್ರ ಬಂದ್

Last Updated 19 ಜೂನ್ 2011, 10:50 IST
ಅಕ್ಷರ ಗಾತ್ರ

ಹರಿಹರ: ಸರ್ಕಾರ ರೈತರಿಗೆ ನೀಡಿದ ಆಶ್ವಾಸನೆಯಂತೆ ಬತ್ತಕ್ಕೆ ಸಹಾಯಧನ ನೀಡುವ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿ ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಶನಿವಾರ ನಗರದ ಬತ್ತ ಖರೀದಿ ಕೇಂದ್ರವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಚಾಲಕ ಎಚ್. ಓಂಕಾರಪ್ಪ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ವಿಂಟಲ್ ಬತ್ತಕ್ಕೆ ತಲಾ ರೂ. 80 ಹಾಗೂ ರೂ.100 ಸಹಾಯಧನ ನೀಡುವುದಾಗಿ ಘೋಷಣೆ ಮಾಡಿವೆ. ದುರದೃಷ್ಟವೆಂದರೆ, ಜೂನ್ 13ರಿಂದ ಪ್ರಾರಂಭಗೊಂಡಿರುವ ಬತ್ತ ಖರೀದಿ ಕೇಂದ್ರದಲ್ಲಿ ಕೇಂದ್ರ ಹಾಗೂ ರಾಜ್ಯದ ಸಹಾಯಧನ ಬಗ್ಗೆ ಯಾವುದೇ ಮಾಹಿತಿಗಳಿಲ್ಲ. ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕರನ್ನು ಈ ಕುರಿತು ವಿಚಾರಿಸಿದಾಗ, ನಮಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸಹಾಯಧನದ ಬಗ್ಗೆ ಸರ್ಕಾರ ಯಾವುದೇ ಅಧಿಕೃತ ಆದೇಶವನ್ನು ಹೊರಡಿಸಿಲ್ಲ ಎಂದು ಹೇಳುತ್ತಾರೆ.
 
ಬತ್ತ ಖರೀದಿ ಕೇಂದ್ರಗಳು ರೈತರ ಕಣ್ಣೊರೆಸುವ ತಂತ್ರಗಳೇ ಹೊರತು ವಾಸ್ತವವಾಗಿ ರೈತರಿಗೆ ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ಪ್ರಾರಂಭವಾಗಿಲ್ಲ. ಕಳೆದ ಆರು ದಿನಗಳಿಂದ ಬತ್ತ ಖರೀದಿ ಕೇಂದ್ರದಲ್ಲಿ 1 ಕೆ.ಜಿ. ಬತ್ತವೂ ಖರೀದಿಯಾಗದೇ ಇರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ಆವರಗೆರೆ ರುದ್ರಮುನಿ ಮಾತನಾಡಿ, ರಾಜ್ಯ ಸರ್ಕಾರ ಕೃಷಿ ಬಜೆಟ್ ಮಂಡಿಸಿ ಅದರಲ್ಲಿ ರೈತರ ಅಭಿವೃದ್ಧಿಗಾಗಿ ರೂ. 1,000 ಕೋಟಿ ಮೀಸಲಿಡಲಾಗಿದೆ ಎಂದು ಘೋಷಣೆ ಮಾಡಿದೆ. ಆದರೆ, ಬತ್ತಕ್ಕೆ ಬೆಂಬಲ ನೀಡುವ ಆದೇಶ ಹೊರಡಿಸದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ. ಬಿಜೆಪಿ ಸರ್ಕಾರ ವಚನಭ್ರಷ್ಟ ಸರ್ಕಾರ ಎಂದು ಲೇವಡಿ ಮಾಡಿದರು.

ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹಾಳೂರು ನಾಗರಾಜ ಮಾತನಾಡಿ, ಖರೀದಿ ಕೇಂದ್ರದಲ್ಲಿ ರೈತರು ಬಂದಾಗ ಅಧಿಕಾರಿಗಳು ಇರುವುದಿಲ್ಲ. ಖರೀದಿ ಕೇಂದ್ರ ಪ್ರಾರಂಭ ಮಾಡಿರುವ ಬಗ್ಗೆ ರೈತರಿಗೆ ಮಾಹಿತಿ ಇಲ್ಲ. ಖರೀದಿ ಕೇಂದ್ರದಲ್ಲಿ ರೈತರು ಬತ್ತ ತಂದಾಗ ಅದರ ತೇವಾಂಶ ಆರಿಸಿಕೊಳ್ಳಲು ಸೂಕ್ತ ಕಣದ ವ್ಯವಸ್ಥೆ, ತೂಕದ ಯಂತ್ರ ಹಾಗೂ ಗೋದಾಮು ಮೊದಲಾದ ಮೂಲ ಸೌಕರ್ಯಗಳನ್ನು ನೀಡದೇ ನಾಮಕಾವಸ್ಥೆ ಖರೀದಿ ಕೇಂದ್ರಗಳಾಗಿವೆ. ಖರೀದಿ ಕೇಂದ್ರದ ಅಧಿಕಾರಿ ನಾರಾಯಣ ಸ್ವಾಮಿ ಅವರನ್ನು ಕೂಡಲೇ ಅಮಾನತಿಗೆ ಶಿಫಾರಸು ಮಾಡಬೇಕು ಎಂದು ಪಟ್ಟು ಹಿಡಿದರು.

ಸ್ಥಳಕ್ಕೆ ಆಗಮಿಸಿದ ಕೃಷಿ ಸಹಾಯಕ ನಿರ್ದೇಶಕ ವಿಜಯಕುಮಾರ್ ಮಾತನಾಡಿ, ಜಿಲ್ಲಾಧಿಕಾರಿ ಆದೇಶದಂತೆ ಬತ್ತ ಖರೀದಿ ಕೇಂದ್ರ ಪ್ರಾರಂಭಿಸಿದ್ದೇವೆ. ಸಹಾಯಧನ ಬಗ್ಗೆ ಸರ್ಕಾರದಿಂದ ಯಾವುದೇ ಆದೇಶಗಳು ದೊರೆತಿಲ್ಲ. ಸರ್ಕಾರದ ಆದೇಶ ದೊರೆತ ನಂತರ ಅದನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು. ಕಚೇರಿ ಅವಧಿಯಲ್ಲಿ ಸ್ಥಳದಲ್ಲಿ ಇಲ್ಲದ ಅಧಿಕಾರಿ ನಾರಾಯಣಸ್ವಾಮಿ ಅವರ ಮೇಲೆ ಶಿಸ್ತುಕ್ರಮ ಜರುಗಿಸುವಂತೆ ಶಿಫಾರಸು ಮಾಡುತ್ತೇನೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಪ್ರಭುಗೌಡ, ಕೆ.ವಿ. ರುದ್ರಮುನಿ, ಶಂಭುಲಿಂಗಪ್ಪ, ಕೆ.ಜಿ. ಶೇಖರಪ್ಪ, ಹನಗವಾಡಿ ಶೇಖರಪ್ಪ, ಕೆ.ಜಿ. ನಾರಪ್ಪ, ವೀರೇಶ್ ಜೋಗಿಹಳ್ಳಿ ಹಾಗೂ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT