ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರೇಶ್ವರ ಭಾವಲೋಕದ ಎಂಜಿನಿಯರ್

Last Updated 23 ಜುಲೈ 2012, 5:35 IST
ಅಕ್ಷರ ಗಾತ್ರ

ಮೈಸೂರು: ಅಮೆರಿಕಾದಲ್ಲಿ ಎಂಜಿನಿಯರ್ ಆಗಿದ್ದ ಶಿಕಾರಿಪುರ ಹರಿಹರೇಶ್ವರರು ಮಣ್ಣು- ಕಲ್ಲು, ಮರಳು- ಸಿಮೆಂಟ್‌ನೊಂದಿಗೆ ಮಾತ್ರ ಕೆಲಸ ಮಾಡಲಿಲ್ಲ. ಸಾಹಿತ್ಯದ ಮೂಲಕ ಭಾವಲೋಕದ ಎಂಜಿನಿಯರ್ ಕೂಡ ಆಗಿದ್ದರು ಎಂದು ಕನ್ನಡ ಅಧ್ಯಯನ ಕೇಂದ್ರದ ಪ್ರೊ.ಎನ್.ಎಸ್. ತಾರಾನಾಥ್ ಅಭಿಪ್ರಾಯಪಟ್ಟರು.

ನಗರದ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ನಾಗಲಕ್ಷ್ಮಿ ಹರಿ ಹರೇಶ್ವರ ಅವರು ಸಂಪಾದಿಸಿರುವ `ಹರಿಯ ಕಾಣಿಕೆ~ಯ ಎರಡು ಸಂಪುಟಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಪ್ರವೃತ್ತಿ ಯಲ್ಲಿ ಸಾಹಿತಿಯಾಗಿದ್ದ ಅವರು ಸಾಹಿತ್ಯ ಲೋಕಕ್ಕೆ ನೀಡಿದ ಕಾಣಿಕೆ ಮಹತ್ತರವಾದದ್ದು. ಸರ್ವ ಕುತೂಹಲಿ ಗಳಾಗಿದ್ದ ಹರಿಹರೇಶ್ವರ ಮನೆ ಎದುರು ಬರುತ್ತಿದ್ದ ಹಕ್ಕಿಗಳ ಕುರಿತು ಸಂಶೋಧನೆ ಮಾಡಿದರು. 70 ಪುಟಗಳ ಪುಸ್ತಕವನ್ನೂ ಹೊರ ತಂದರು. ಅವರಲ್ಲಿ ಭಾವನೆಗಳು ಇಲ್ಲದಿದ್ದರೆ ಇಂತಹದೊಂದು ಕೃತಿ ರಚಿಸುತ್ತಿರಲಿಲ್ಲ ಎಂದು ಪ್ರತಿಪಾದಿಸಿದರು.

ಎರಡು ಸಂಪುಟಗಳಲ್ಲಿ ಅವರ 121 ಲೇಖನಗಳಿವೆ. ಭಾಷಾ ವಿಜ್ಞಾನ, ಇತಿಹಾಸ, ಸಂಸ್ಕೃತ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದಂತೆ ಅವರಲ್ಲಿ ಅಪಾರವಾದ ವಿದ್ವತ್ತು ಇತ್ತು. ಕಣ್ಣು, ನೀರು, ಸಂವತ್ಸರ ಸೇರಿದಂತೆ ಸೂಕ್ಷ್ಮ ವಿಷಯಗಳ ಕುರಿತು ಲೇಖನ ಬರೆ ದಿದ್ದಾರೆ. ಕಾಂತರಾಜ ಅರಸು, ರಾಂಟಿಜನ್‌ನ `ಎಕ್ಸ್‌ರೇ~ ಕಿರಣಕ್ಕೆ ಸಂಬಂಧಿಸಿದಂತೆ ಅಧ್ಯಯನ ಮಾಡಿದ್ದಾರೆ. ಕಾಶ್ಮಿರದ ಉಗಮ, ಅಲ್ಲಿನ ಶಿವಶರಣರು, ಕರ್ನಾಟಕ ದೊಂದಿಗಿನ ಸಂಬಂಧ... ಹತ್ತು ಹಲವು ಪ್ರಬಂಧ ಮಂಡಿಸಿದ್ದಾರೆ. ಅವರಲ್ಲಿದ್ದ ಹವ್ಯಾಸಿ ಸಂಶೋಧಕನ ವ್ಯಕ್ತಿತ್ವ ಕೃತಿಯಲ್ಲಿ ಅನಾವರಣಗೊಂಡಿದೆ ಎಂದರು.

ನವನೀತ ಹೃದಯಿಯಾಗಿದ್ದ ಹರಿಹರೇಶ್ವರ ಅಮೆರಿಕಾದಲ್ಲಿ ಮಾಡಿದ ಕೆಲಸ ಅವಸ್ಮರಣೀಯ. ಅಮೆರಿಕ ಕನ್ನಡಿಗರಿಗೆ ಮಾತೃಭಾಷೆ ಮಾತನಾಡುವ ವಾತಾವರಣ ನಿರ್ಮಿಸಿರುವುದು ಅಚ್ಚಳಿಯದೇ ಉಳಿದಿದೆ. ಅಲ್ಲಿಗೆ ಭೇಟಿ ನೀಡಿದ ಕನ್ನಡ ಎಲ್ಲ ಸಾಹಿತಿಗಳಿಗೂ ಅವರು ಅತಿಥ್ಯ ನೀಡಿದ್ದರು. ಅವರಂತಹ ಸಾತ್ವಿಕ, ಸಜ್ಜನ ಮತ್ತು ಮಾನವ ತಾವಾದಿ ವ್ಯಕ್ತಿತ್ವ ಕಾಣಸಿಗುವುದು ಅಪರೂಪ ಎಂದರು.

ಕೃತಿಯ ಕುರಿತು ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ. ಅನಂತರಾಮು, ಸಂಶೋಧನೆಯನ್ನು ಲಲಿತ ಪ್ರಬಂಧಗಳ ರೀತಿಯಲ್ಲಿ ಮಂಡಿಸಬಹುದು ಎಂಬುದಕ್ಕೆ ಈ ಕೃತಿಗಳು ಸಾಕ್ಷಿಯಾಗಿವೆ. ಹೀಗಾಗಿ ಇವು ಕಬ್ಬಿಣದ ಕಡಲೆಯಲ್ಲ, ಸಾಮಾನ್ಯರಿಗೂ ಅರ್ಥವಾಗುತ್ತವೆ. ಕೆಲವು ಪುಸ್ತಕಗಳನ್ನು ಮುಟ್ಟಿದ ಮೇಲೆ ಕೈ ತೊಳೆದುಕೊಳ್ಳಬೇಕು. ಆದರೆ ಹರಿಹರೇಶ್ವರರದು ಕೈ ತೊಳೆದು ಮುಟ್ಟುವ ಕೃತಿ ಎಂದು ಬಣ್ಣಿಸಿದರು.

ವೇದಗಳ ಕಾಲದಿಂದ ಈವರೆಗೆ ಚರ್ಚೆಗೆ ಬಾರದ ಅನೇಕ ವಿಚಾರಗ ಳನ್ನು ಅವರು ದಾಖಲಿಸಿದ್ದಾರೆ. ಮಾನವತೆಗೆ ಒತ್ತು ಕೊಟ್ಟ ಸೂಫಿ ಸಂತರ ಪ್ರಪಂಚ ಪ್ರವೇಶ ಮಾಡಿದ್ದಾರೆ. ಸಂಖ್ಯಾದರ್ಶನ, ಪಕ್ಷ ಲೋಕದ ಕುರಿತ ಅವರ ಬರವಣಿಗೆ ಬುದ್ಧಿ- ಭಾವಗಳ ವಿದ್ಯಾಲಿಂಗನ ಎನಿಸುತ್ತದೆ. ಬಡ್ತಿ, ಸೌಕ ರ್ಯಕ್ಕಾಗಿ `ಸಂತೆಗೆ ಮೂರು ಮಳ ನೆಯ್ದಂತೆ~ ಹರಿಹರೇಶ್ವ ರರು ಕೃತಿ ರಚಿಸಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಾಗಲಕ್ಷ್ಮಿ ಹರಿಹರೇಶ್ವರ, ಉಪ ಆಯುಕ್ತೆ ದುರ್ಗಾಪರಮೇಶ್ವರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT