ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ಮನಗಳಿಗೆ ಒಂದೇ ಮಾತು

ಮಾತ್‌ಮಾತಲ್ಲಿ
Last Updated 5 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಫ್ಯಾಷನ್ ಸಪ್ತಾಹದಲ್ಲಿ ವೇದಿಕೆಯನ್ನು ಕತ್ತಲೆ ಆವರಿಸಿತ್ತು. ಬೆಳಕಿನ ನಿರೀಕ್ಷೆಯಲ್ಲಿ ಎಲ್ಲರೂ ಇದ್ದರು. ಮಿಂಚಿನ ನಂತರ ಗುಡುಗು ಕೇಳಿಸುವುದು ಸಾಮಾನ್ಯ. ಆದರೆ ಅಲ್ಲಿ ಆ ಮಧುರ ಕಂಠದಿಂದ ಹೊರಹೊಮ್ಮಿದ ಮಾತುಗಳ ನಂತರ ವೇದಿಕೆಯ ದೀಪಗಳು ಬೆಳಕಿನ ಮಳೆಗರೆದವು. ಆ ಧ್ವನಿಯ ಕೋರಿಕೆಗೆ ಸಭಿಕರ ಮೊಬೈಲ್‌ಗಳು ಬಂದ್ ಆದವು. ಅದೇ ಧ್ವನಿಯ ತಾಳಕ್ಕೆ ತಕ್ಕಂತೆ ರೂಪದರ್ಶಿಯರ ಹೆಜ್ಜೆಗಳು ನಲಿದಾಡಿದವು. ಫ್ಯಾಷನ್, ಐಸಿಸಿ ಹಾಗೂ ಐಪಿಎಲ್ ಕ್ರಿಕೆಟ್ ಟೂರ್ನಿ, ಜಾಹೀರಾತು, ಸಂಗೀತದ ಸಂಜೆ ಹೀಗೆ ಎಲ್ಲೆಡೆ ತಮ್ಮ ರೂಪದ ಜತೆ ಮಾಂತ್ರಿಕ ಧ್ವನಿಯಿಂದಲೇ ಅಂತರರಾಷ್ಟ್ರಿಯ ಮಟ್ಟದಲ್ಲಿ 850 ಕಾರ್ಯಕ್ರಮಗಳನ್ನು ನೀಡಿ ಚಿರಪರಿಚಿತರಾಗಿದ್ದಾರೆ ಬೆಂಗಳೂರು ಹುಡುಗ ರಿಯಾಜ್ ಬಾಷಾ.

ಮಾತನ್ನೇ ವೃತ್ತಿಯಾಗಿಸಿಕೊಳ್ಳುವವರಿಗೆ ಭಾಷೆ ಮೇಲಿನ ಹಿಡಿತ ಹಾಗೂ ಬಹು ಭಾಷೆಗಳ ಕಲಿಕೆ ಬಹಳ ಮುಖ್ಯ. ಕನ್ನಡ, ತಮಿಳು, ತೆಲುಗು, ಹಿಂದಿ, ಇಂಗ್ಲಿಷ್ ಹಾಗೂ ಉರ್ದು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲೆ. ಯಾವುದೇ ಕಾರ್ಯಕ್ರಮವಿರಲಿ ನನ್ನ ಧ್ವನಿಯ ಮೂಲಕವೇ ಉಪಸ್ಥಿತಿಯನ್ನು ದಾಖಲಿಸುವುದು ನನ್ನ ಶೈಲಿ. ಅದರಂತೆಯೇ ಕಾರ್ಯಕ್ರಮದಿಂದ ಕಾರ್ಯಕ್ರಮಕ್ಕೆ ಮಾತಿನ ಶೈಲಿಗಳು ಬೇರೆಯಾಗುತ್ತಿರುತ್ತವೆ. ಹೀಗಾಗಿ ಅವುಗಳಿಗೆ ತಕ್ಕಂತೆ ಮಾತು ಹಾಗೂ ಧ್ವನಿಗಳ ಏರಿಳಿತ ಮಾಡುವುದು ಅಷ್ಟೇ ಮುಖ್ಯ.

ಫ್ಯಾಷನ್ ಶೋಗಳಿಗೆ ಬರುವವರು ಒಂದು ನಿರ್ದಿಷ್ಟ ವರ್ಗದವರು. ಅಲ್ಲಿ ಬರುವ ಬಹುತೇಕರಿಗೆ ವೇದಿಕೆಯ ಹಿಂಬದಿಯಿಂದ ಧ್ವನಿ ಹೊರಹೊಮ್ಮುತ್ತಿದ್ದಂತೆ ನನ್ನ ನೆನಪಾಗುತ್ತದೆ. ಆದರೆ ಕ್ರಿಕೆಟ್ ಕ್ರೀಡಾಂಗಣ ಹಾಗಲ್ಲ. ಬರುವ ಸಾವಿರಾರು ಅಭಿಮಾನಿಗಳಲ್ಲಿ ರೂ300ರಿಂದ ರೂ 33,000 ಹಣ ಕೊಟ್ಟು ಬಂದ ಎಲ್ಲಾ ವರ್ಗಗಳ ಜನರು ಇರುತ್ತಾರೆ. ಅವರೆಲ್ಲರ ಮನಸ್ಥಿತಿ ಬೇರೆ ಬೇರೆ ಆಗಿರುತ್ತದೆ. ಕಡಿಮೆ ಹಣ ಕೊಟ್ಟವರು ಹೆಚ್ಚು ಉತ್ಸಾಹಿಗಳಾಗಿಯೂ, ಅಧಿಕ ಹಣ ನೀಡಿದವರು ಗಾಂಭೀರ್ಯದಿಂದಲೂ ಕುಳಿತಿರುತ್ತಾರೆ. ಆದರೆ ಅವರೆಲ್ಲರನ್ನೂ ಮೆಕ್ಸಿಕನ್ ವೇವ್ ಅಥವಾ ಚಿಲ್ ಮಾಡಿಸಬೇಕೆನ್ನುವುದು ಸವಾಲಿನ ಕೆಲಸ. ಅಲ್ಲಿ ಸೇರಿರುವ ಅವರೆಲ್ಲರ ಉದ್ದೇಶ ಒಂದೇ ಆಗಿರುತ್ತದೆ. ಅದು ಕ್ರಿಕೆಟ್ ಆಸ್ವಾದಿಸುವುದು. ಹೀಗಾಗಿ ಅದನ್ನೇ ಪ್ರಧಾನವಾಗಿಟ್ಟುಕೊಂಡು ಪ್ರತಿಯೊಬ್ಬರನ್ನು ಅಭಿಮಾನದ ಹುಚ್ಚುಹೊಳೆಯಲ್ಲಿ ತೇಲಿಸುವುದು ಸವಾಲು.

ನನಗೆ ಹೆಚ್ಚು ಇಷ್ಟವಾಗಿದ್ದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಎ.ಆರ್.ರೆಹಮಾನ್ ರಸಸಂಜೆ ಕಾರ್ಯಕ್ರಮ. ಸಂಜೆ 6.30ಕ್ಕೆ ಬರಬೇಕಿದ್ದ ರೆಹಮಾನ್ ಬಂದಿದ್ದು ರಾತ್ರಿ 9.30ಕ್ಕೆ. ಜೋರು ಮಳೆ. ರೆಹಮಾನ್ ಅವರನ್ನು ಕಾಣಲು ಬಂದ ಅಭಿಮಾನಿ ಸಾಗರದ ಪ್ರವಾಹವನ್ನು ಹಿಡಿದಿಟ್ಟುಕೊಳ್ಳುವುದು ಪ್ರಯಾಸವೆನಿಸಿದರೂ ಮಳೆಯಲ್ಲಿ ನೆನೆಯುತ್ತಲೇ ಮಾತು, ಹಾಸ್ಯ, ಒಂದಿಷ್ಟು ಕಚಗುಳಿ, ರಸಪ್ರಶ್ನೆ ಹೀಗೆಯೇ ಸಾವಿರಾರು ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡ ಅನುಭವ ಇನ್ನೂ ಮನಸ್ಸಿನಲ್ಲಿ ಹಸಿರಾಗಿದೆ.

ಏರ್‌ಟೆಲ್ ಸೇರಿದಂತೆ ಹಲವು ಜಾಹೀರಾತುಗಳಲ್ಲಿ ನಟಿಸಿರುವ ಬಾಲಿವುಡ್ ನಟರ ಬಾಯಿಯಿಂದ ಕನ್ನಡ, ತಮಿಳು ಭಾಷೆ ಕೇಳಿದರೆ ನನ್ನನ್ನು ನೆನಪಿಸಿಕೊಳ್ಳಿ. ಅವರ ತುಟಿ ಚಲನೆಗೆ ಮಾತು ಸೇರಿಸಿದ್ದು ನಾನೇ. ಭಾಷೆಗಳ ಕಲಿಕೆ ನನ್ನ ತಂದೆ ಮೆಹಬೂಬ್ ಬಾಷಾ ಅವರಿಂದ ಬಳುವಳಿಯಾಗಿ ಬಂದಿದ್ದು. ಐಟಿಐನಲ್ಲಿ ಉದ್ಯೋಗಿಯಾಗಿದ್ದ ನಮ್ಮ ತಂದೆ ಒಂಬತ್ತು ಭಾಷೆಗಳನ್ನು ಬಲ್ಲವರು. ಜತೆಗೆ ಕನ್ನಡದಲ್ಲಿ ಜನಪದ ಗೀತೆಗಳನ್ನು ಹಾಡುವುದರಲ್ಲಿ ಎತ್ತಿದ ಕೈ. ಅವರ ಈ ಹವ್ಯಾಸಗಳು ನನ್ನನ್ನು ಪ್ರೇರೇಪಿಸಿವೆ.

ಮಾತನ್ನು ವೃತ್ತಿಯನ್ನಾಗಿಸಿದ್ದರಿಂದ ಪ್ರಪಂಚ ಸುತ್ತುವ ಅವಕಾಶ ದೊರೆಯಿತು. ಅದಕ್ಕಿಂತ ಹೆಚ್ಚಾಗಿ ಜನರ ಪ್ರೀತಿ ಸಂಪಾದಿಸಲು ಸಾಧ್ಯವಾಯಿತು. ಇಷ್ಟು ಮಾತ್ರವಲ್ಲ ಭಾಷೆ ಮೇಲಿನ ಹಿಡಿತ ಹೆಚ್ಚಿಸಿಕೊಳ್ಳಲು ನಿತ್ಯ ದಿನಪತ್ರಿಕೆಗಳನ್ನು ಓದುವುದರಿಂದ ಜ್ಞಾನ ಸಂಪಾದನೆಯೂ ವೃದ್ಧಿಸಿದ್ದು ನನಗಾದ ಲಾಭ. ಆದರೆ ಮಾತಿನಿಂದ ಒಬ್ಬರನ್ನು ಕಳೆದುಕೊಳ್ಳಲೂಬಹುದು. ಅಪಾರ ಅಭಿಮಾನಿಗಳನ್ನು ಸಂಪಾದಿಸಲೂಬಹುದು. ಒಂದೆರಡು ಘಟನೆಗಳಲ್ಲಿ ಯಾರೋ ಮಾಡಿದ ತಪ್ಪಿನಿಂದಾಗಿ ನನ್ನ ಬಾಯಿಂದ ತಪ್ಪು ಮಾತು ಹೊಮ್ಮಿದೆ. ಆಗ ನಾನು ತೀವ್ರವಾಗಿ ನೊಂದಿದ್ದೇನೆ. ಆದ ತಪ್ಪು ಮರುಕಳಿಸದಂತೆ ಎಚ್ಚರವನ್ನೂ ವಹಿಸಿದ್ದೇನೆ.

`ಕಾಯಕವೇ ಕೈಲಾಸ' ಎಂಬ ಮಾತಿನಲ್ಲಿ ನಂಬಿಕೆ ಇಟ್ಟಿರುವ ನಾನು ಶಾಲಾ ದಿನಗಳಿಂದಲೂ ಪರೋಪಕಾರಿ. ನನ್ನ ಹೋಂವರ್ಕ್‌ನ ಜತೆಗೆ ಸಹಪಾಠಿಗಳದ್ದೂ ಮಾಡಿಕೊಡುತ್ತಿದ್ದೆ. ತಮ್ಮ ವೃತ್ತಿಯಲ್ಲಿ ಒಂದು ಹಂತ ತಲುಪಿದ ನಂತರ ಅವಕಾಶ ವಂಚಿತರ ಹಾಗೂ ಬಡವರ ಸೇವೆಗೆ ತೊಡಗಿಸಿಕೊಳ್ಳಲು ನಾನು ನಿರ್ಧರಿಸಿದ್ದೇನೆ.

ಚಿತ್ರ: ಎಸ್.ಕೆ. ದಿನೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT