ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ಲಾಬಿಗಳನ್ನು ಮಣಿಸಿದ ನಜೀರ್

Last Updated 16 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

‘ಕರ್ನಾಟಕದಲ್ಲಿ ಮಾದರಿ ಎನ್ನುವಂಥ ಪಂಚಾಯತ್‌ ರಾಜ್‌ ವ್ಯವಸ್ಥೆ ರೂಪುಗೊಂಡಿದ್ದರ ಹಿಂದೆ ಅಬ್ದುಲ್‌ ನಜೀರ್‌ ಸಾಬ್‌ ಅವರ  ಬದ್ಧತೆ ಮಹತ್ವದ ಪಾತ್ರ ವಹಿಸಿದೆ. ಅಧಿಕಾರ ವಿಕೇಂದ್ರೀಕರಣ ಪರವಾಗಿ ಕೆಲಸ ಮಾಡುವ ಜನರಿಗೆಲ್ಲ ನಜೀರ್‌ ಸಾಬ್‌ ಪ್ರಾತಃಸ್ಮರಣೀಯರು.
ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ಜಾರಿಗೆ ತರುವ ಸಂದರ್ಭದಲ್ಲಿ ನಜೀರ್‌ ಸಾಬ್‌ ಎದುರಿಸಿದ ಸವಾಲುಗಳು, ಪಟ್ಟ ಶ್ರಮ ಅಂತಿಂಥದ್ದಲ್ಲ.

ರಾಜ್ಯದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರ 1983ರಲ್ಲಿ ರಚನೆಯಾಯಿತು. ಮುಖ್ಯಮಂತ್ರಿ ಗಾದಿಗೆ ರಾಮಕೃಷ್ಣ ಹೆಗಡೆ ಅವರ ಹೆಸರು ಕೇಳಿಬಂದಿರಲೇ ಇಲ್ಲ. ಆಗ ಕ್ರಾಂತಿರಂಗದ ಅಧ್ಯಕ್ಷರಾಗಿದ್ದ ನಜೀರ್‌ ಸಾಬ್‌ ಅವರು ಹೆಗಡೆ ಮುಖ್ಯಮಂತ್ರಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಹೆಗಡೆ  ಮುಖ್ಯಮಂತ್ರಿಯಾದ ನಂತರ, ಸಂಪುಟ ರಚಿಸುವಾಗ ನಜೀರ್‌  ಅವರಲ್ಲಿ ‘ನಿಮಗೆ ಯಾವ ಖಾತೆ ಬೇಕು?’ ಎಂದು ಕೇಳಿದ್ದರು. ‘ನನಗೆ ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ಕೊಡಿ’ ಎಂದು ಬಯಸಿ ಪಡೆದರು ನಜೀರ್‌ ಸಾಬ್‌.

ಸಚಿವರಾದ ಎರಡನೆಯ ದಿನದಿಂದಲೇ ನಜೀರ್‌ ಅವರು ವಿಕೇಂದ್ರೀಕರಣದ ಜಪ ಆರಂಭಿಸಿದರು. ನಾವು ನಾಲ್ಕೈದು ಮಂದಿ ಅವರಿಗೆ ಆತ್ಮೀಯವಾಗಿದ್ದೆವು. ‘ಇದು ಜಾರಿಯಾಗಬೇಕು. ಏನಾದರೂ ಮಾಡಲೇಬೇಕು’ ಎಂದು ನಮ್ಮ ಬಳಿ ದಿನವೂ ಹೇಳುತ್ತಿದ್ದರು.
ಅವರಲ್ಲಿ ಈ ಕುರಿತು ಯಾವ ತರಹದ ತಹತಹ ಇತ್ತೆಂದರೆ, ನಾಳೆ ತಾನು ಇರುತ್ತೇನೋ ಇಲ್ಲವೋ, ಈ ವ್ಯವಸ್ಥೆ ಕೂಡಲೇ ಜಾರಿಗೆ ಬರಬೇಕು ಎಂಬ ಹಂಬಲ ಅವರದ್ದಾಗಿತ್ತು.

ಪಶ್ಚಿಮ ಬಂಗಾಳದ ಹಣಕಾಸು ಸಚಿವರಾಗಿದ್ದ ಅಶೋಕ ಮಿತ್ರ ಅವರನ್ನು  ತಕ್ಷಣ ಸಂಪರ್ಕಿಸಿದರು. ತಾವೇ ಖುದ್ದಾಗಿ ಅಲ್ಲಿಗೆ ಹೋಗಿ ಬಂದರು. ನಂತರ ಒಂದು ತಂಡವನ್ನು ಕಳಿಸಿದರು.  ಇತರೆ ಒಂದೆರಡು ರಾಜ್ಯಗಳಿಂದ ಮಾಹಿತಿ ತರಿಸಿಕೊಂಡರೂ ಅವರ ಕಣ್ಣೆಲ್ಲ ಬಂಗಾಳದ ಕಡೆಗೇ ಇತ್ತು. ಕಷ್ಟಪಟ್ಟು ಕರಡು ಸಿದ್ಧಪಡಿಸಿದರು.

ಪಂಚಾಯತ್‌ ರಾಜ್‌ ಕರಡು ಬಗ್ಗೆ ಪತ್ರಿಕೆಗಳಲ್ಲಿ ಬಿಡಿ ವರದಿಗಳು ಬರಲು ಆರಂಭವಾಯಿತು. ಇದರ ಜೊತೆಗೇ ನಜೀರ್‌ ಚಾರಿತ್ರ್ಯಹರಣವೂ ಶುರುವಾಯಿತು.  ‘ಇವರು ತ್ರಿಬಲ್‌ ಫೈವ್‌ ಸಿಗರೇಟ್‌ ಸೇದ್ತಾರೆ. ಅದಕ್ಕೆ ಹಣ ಎಲ್ಲಿಂದ ಬರ್ತದೆ? ಇವರ ಮನೆಯಲ್ಲಿ ದಿನವೂ ನಾನ್‌ವೆಜ್ ಅಡುಗೆ ಇರುತ್ತೆ. ಅದಕ್ಕೆಲ್ಲಿಂದ ಹಣ ಹೊಂದಿಸುತ್ತಾರೆ? ಇವರು ನೇರ ಚುನಾವಣೆಯಲ್ಲಿ ಯಾವಾಗ ಗೆದ್ದಿದ್ದಾರೆ? ನಾಗರತ್ನಮ್ಮ ಅವರ ಬಾಲ ಹಿಡಿದು ಬಂದವರು. ಕಾಂಗ್ರೆಸ್‌ ಏಜೆಂಟು...’ ಎಂದೆಲ್ಲ ನಾಲಿಗೆ ಹರಿಬಿಟ್ಟರು.

‘ಓಹೋಹೋ... ವಿಕೇಂದ್ರೀಕರಣ ಮಾಡಿಬಿಡ್ತಾರಂತೆ... ಕ್ರಾಂತಿ ಆಗೋಗುತ್ತಂತೆ...’ ಎಂದೆಲ್ಲ ಮಾತಿನ ಮೊನೆಯಿಂದ ಚುಚ್ಚಿದರು. ಆದರೆ ನಜೀರ್‌ ಸಾಬ್‌ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ.

ಮಸೂದೆ ಮಂಡಿಸಬೇಕು ಎನ್ನುವ ಹಂತದಲ್ಲಿ  ಪಕ್ಷಗಳ ಸೀಮಾರೇಖೆ ಸಡಿಲವಾಯಿತು. ಮಸೂದೆಯನ್ನು ಬೀಳಿಸಲು, ಆ ಪಕ್ಷ ಈ ಪಕ್ಷ ಎನ್ನದೇ  ಬಹಳ ಮಂದಿ  ಶಾಸಕರು ಒಟ್ಟಾದರು. ನಾವೆಲ್ಲ ಬಹಳ ಆತಂಕಕ್ಕೆ ಒಳಗಾದೆವು. ಮಸೂದೆ ಪರವಾಗಿ ಚುನಾವಣಾ ಪ್ರಚಾರ ಮಾಡಿದಂತೆ ಮಾಡಿದೆವು. ‘ನಾನು ಹೊರಟುಬಿಡ್ತೀನಯ್ಯ ಗುಂಡ್ಲುಪೇಟೆಗೆ...   ಮುಗೀತು ನನ್ನ ಕತೆ...’ ಎಂದು ನಜೀರ್‌ ಸಾಬ್ ಒಂದು ಹಂತದಲ್ಲಿ ಬೇಸರ ತೋಡಿಕೊಂಡರು.

‘ಹಾಗೆ ಮಾತನಾಡಬೇಡಿ. ನಿರುತ್ಸಾಹಿ ಆಗಬೇಡಿ’ ಎಂದಿದ್ದಕ್ಕೆ, ನಮ್ಮನ್ನು ಹೊಡೆಯಲು ಬಂದುಬಿಟ್ಟರು. ‘ನಿಮಗೆ ಇನ್ನೂ ಬುದ್ಧಿ ಬೆಳೆಯಲಿಲ್ಲ. ಮಸೂದೆ ಬಿದ್ದುಹೋದರೆ ನಾನು ಇಲ್ಲಿ ಇರೋಕೆ ಆಗ್ತದೇನಯ್ಯ...?’ ಎಂದು ಪ್ರಶ್ನಿಸಿದ್ದರು. ಅವರ ಬದ್ಧತೆ ಆ ಪ್ರಮಾಣದ್ದು.
ಮಸೂದೆ  ಅಂಗೀಕಾರ ಪಡೆದುಕೊಂಡಿತು. ಆದರೆ ನ್ಯಾಯ ಪಂಚಾಯ್ತಿ ವ್ಯವಸ್ಥೆಯು ದೊಡ್ಡ ಜಗಳಕ್ಕೆ ಕಾರಣವಾಯಿತು. ಕೊನೆಯಲ್ಲಿ, ಅದನ್ನು ತಡೆಹಿಡಿಯಬೇಕಾಯಿತು.

ಪಂಚಾಯ್ತಿ ಚುನಾವಣೆ ಮುಗಿಯಿತು. ಮಂಡಲ ಪಂಚಾಯ್ತಿಗಳಲ್ಲಿ ಪ್ರಧಾನರು ಮತ್ತು ಉಪ ಪ್ರಧಾನರನ್ನು ಆಯ್ಕೆ ಮಾಡಬೇಕು. ಆದರೆ ಆಡಳಿತಾರೂಢ ಶಾಸಕರು ಪ್ರತಿನಿಧಿಸುವ ಹಲವಾರು ಕ್ಷೇತ್ರಗಳ ವ್ಯಾಪ್ತಿಯ ಮಂಡಲಗಳಲ್ಲಿ ಆಡಳಿತ ಪಕ್ಷಕ್ಕೆ ಬಹುಮತ ಸಿಕ್ಕಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಶಾಸಕರು ಹೆಗಡೆ ವಿರುದ್ಧ ಕತ್ತಿ ಮಸೆಯಲಾರಂಭಿಸಿದರು. ಕಾಯ್ದೆ ಅನುಷ್ಠಾನಕ್ಕೆ ಬರಬಾರದು, ಹೆಗಡೆ ಅವರನ್ನೂ ಓಡಿಸಬೇಕು. ಒಂದೇ ಏಟಿಗೆ ಎರಡು ಹಕ್ಕಿ  ಎಂದು ಲೆಕ್ಕಾಚಾರ ಹಾಕಿದರು.

ಭಿನ್ನಮತೀಯ ಸಭೆಗಳು ಪ್ರಾರಂಭವಾದವು. ನಜೀರ್ ಸಾಬ್‌ ನೇರ ಚುನಾವಣೆಯಲ್ಲಿ ಗೆದ್ದಿಲ್ಲ. ಜಿಲ್ಲಾ ಪರಿಷತ್, ಮಂಡಲ ಪಂಚಾಯ್ತಿಗೆ ಇಷ್ಟೆಲ್ಲ ಅಧಿಕಾರ ಕೊಟ್ಟರೆ ನಾವು ಏತಕ್ಕೆ ಇರುವುದು? ಹೆಗಡೆ ಅವರ ಬೆಂಬಲವೇ ಇದಕ್ಕೆಲ್ಲ  ಕಾರಣ ಎಂದು ವಾಗ್ದಾಳಿ ಆರಂಭಿಸಿದರು.
ಅಷ್ಟೊತ್ತಿಗೆ 1985ರ ವಿಧಾನಸಭಾ ಚುನಾವಣೆ ಮುಗಿದಿತ್ತು. ಹೆಗಡೆಯವರನ್ನೇ ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಗೆದ್ದು ಬಂದಿದ್ದೆವು. ಅಷ್ಟರಲ್ಲೇ ಅವರು ಬೇಡವಾಗಿದ್ದರು.   ಕಾಯ್ದೆ ರೂಪಿಸಿದ್ದೇ ತಾವು ಎಂಬುದನ್ನು ಮರೆತು ಕಾಯ್ದೆ ವಿರುದ್ಧ ಕೆಲವರು ಸಹಿ ಸಂಗ್ರಹಕ್ಕೆ ಮುಂದಾದರು.

ಕಾಯ್ದೆ ಅಂಗೀಕಾರ ಆಗಿದೆ. ಚುನಾವಣೆ ನಡೆದಿದೆ. ಪ್ರಧಾನರ ಆಯ್ಕೆ ಆಗದಿದ್ದರೆ ಯಾವ ಮುಖ ಹೊತ್ತುಕೊಂಡು ಸಮಾಜ ಎದುರಿಸುವುದು ಎಂಬ ಚಿಂತೆ ಹೆಗಡೆಯವರಿಗೆ ಇತ್ತು.

ಈ ಸಂಬಂಧ ಅಧಿಸೂಚನೆ ಹೊರಡಿಸಕೂಡದು ಎಂದು ಕೆಲವು ಶಾಸಕರು ಹಠ ಹಿಡಿದರು. ಪಕ್ಷ ಈ ವಿಚಾರದಲ್ಲಿ ಒಡೆದುಹೋಗಿತ್ತು. ಆಗ ಜೆ.ಎಚ್. ಪಟೇಲರು ಮತ್ತು ರಾಚಯ್ಯ ಮಧ್ಯಪ್ರವೇಶ ಮಾಡಿ, ಹೊರಬರುವ ದಾರಿ ಹುಡುಕಲಾರಂಭಿಸಿದರು.

ನಜೀರ್‌ ಸಾಬ್‌ ಬಗೆಗಿನ ಜನರ ಪ್ರೀತಿ ಕಂಡು ಕೆಲವರು ಹೊಟ್ಟೆಕಿಚ್ಚುಪಟ್ಟರು. ನಾವು ಇದನ್ನೆಲ್ಲ ಗ್ರಹಿಸಿದೆವು. ಒಂದು ಸೂತ್ರ ರೂಪಿಸಿದೆವು. ಮಂಡಲ ಪಂಚಾಯ್ತಿಗೆ ಮೂವರು ಸದಸ್ಯರನ್ನು ನಾಮಕರಣ ಮಾಡುವ ಯೋಚನೆ ಹೊಳೆಯಿತು. ಅವರಿಗೆ ಮತದಾನದ ಹಕ್ಕು ನೀಡಿದರೆ ಬಿಕ್ಕಟ್ಟಿನಿಂದ ಪಾರಾಗಬಹುದು ಎಂದು ಯೋಚಿಸಿದೆವು. ಇದಕ್ಕೆ ನಜೀರ್ ಒಪ್ಪಲಿಲ್ಲ. ಚುನಾವಣೆಯಲ್ಲಿ ಗೆದ್ದು ಬರಲು ಆಗದ, ಹಿಂದುಳಿದ ವರ್ಗಗಳಲ್ಲಿನ ತೀರಾ  ಅಲ್ಪ ಸಂಖ್ಯೆಯ ಸಮುದಾಯಗಳಿಗೆ ಈ ಮೂಲಕ ಅವಕಾಶ ಕಲ್ಪಿಸಬಹುದು ಎಂದು ಅವರ ಮನವೊಲಿಸಿದೆವು. ಆಯಾ ಜಿಲ್ಲೆಯನ್ನು ಘಟಕವಾಗಿ ಇಟ್ಟು­ಕೊಂಡು, ಆ ಜಿಲ್ಲೆಯ ಜನಸಂಖ್ಯೆಯ ಶೇಕಡ ಒಂದಕ್ಕಿಂತ ಕಡಿಮೆ ಜನರಿರುವ ಸಮುದಾಯದ ಒಬ್ಬರನ್ನು ನಾಮಕರಣ ಮಾಡಲು ಅವಕಾಶ ಕಲ್ಪಿಸಲು  ತಿದ್ದುಪಡಿ ತರಲಾಯಿತು.  ಕುಂಬಾರರು, ಮಡಿವಾಳರು, ಕ್ಷೌರಿಕರು, ಉಪ್ಪಾರರು ಮುಂತಾದ  ಸಣ್ಣ ಸಣ್ಣ ಜಾತಿ, ಸಮುದಾಯಗಳಿಗೆ ಇದರಿಂದ ಒಂದು ಅವಕಾಶ ಸಿಕ್ಕಿತು. ಇದು ಒಂದು ರೀತಿ ಸೋಲು, ಮತ್ತೊಂದು ರೀತಿಯಲ್ಲಿ ಗೆಲುವು.

ಈ ನಾಮಕರಣದಿಂದ ಎಷ್ಟು ಪಂಚಾಯ್ತಿಗಳಲ್ಲಿ ಆಡಳಿತ ಪಕ್ಷಕ್ಕೆ ಬಹುಮತ ದೊರೆಯುತ್ತದೆ ಎಂದು ನಮ್ಮಲ್ಲಿ ಕೆಲವು ಬುದ್ಧಿವಂತರು ಲೆಕ್ಕ ಹಾಕಿದರು. ಭಿನ್ನಮತೀಯರು ಕಟ್ಟಿದ್ದ ಗುಂಪನ್ನು ಈ ಮೂಲಕ ಚದುರಿಸಿದ್ದಾಯಿತು.

ಆ ಬಳಿಕ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆಯಲ್ಲಿ ಗಲಾಟೆ. ಆ ಇಲಾಖೆ ಕೊಡುವುದಕ್ಕೆ ಆಗುವುದಿಲ್ಲ. ಈ ಇಲಾಖೆ ಕೊಡುವುದಕ್ಕೆ ಆಗುವುದಿಲ್ಲ ಎಂದು ಕ್ಯಾತೆ ತೆಗೆದರಂತೆ. ನಜೀರ್‌ ವಿಚಲಿತರಾಗಲಿಲ್ಲ. ಜಿಲ್ಲಾ ಆಡಳಿತ ಅಂದರೆ ಒಂದು ಮಿನಿ ರಾಜ್ಯ ಸರ್ಕಾರ ಎಂಬುದು ಅವರ ನಿಲುವಾಗಿತ್ತು.

ತೊಡಕುಗಳೆಲ್ಲ ನಿವಾರಣೆಯಾಯಿತು  ಎನ್ನುವಷ್ಟರಲ್ಲಿ ಐಎಎಸ್‌ ಲಾಬಿ ಎದ್ದುನಿಂತಿತು. ಜಿಲ್ಲಾ ಪರಿಷತ್‌ ಮುಖ್ಯ ಕಾರ್ಯದರ್ಶಿಯು  ಜಿಲ್ಲಾಧಿಕಾರಿಗಿಂತ ಹಿರಿಯ ಶ್ರೇಣಿಯ ಅಧಿಕಾರಿ ಆಗಿರಬೇಕು. ಅವರ ಸೇವಾ ವರದಿಯನ್ನು ಅಧ್ಯಕ್ಷ ಬರೆಯಬೇಕು ಎಂಬುದು ನಜೀರ್‌ ವಾದ. ಇದು ಗೊತ್ತಾದ ಕೂಡಲೇ ಐಎಎಸ್‌ ಅಧಿಕಾರಿಗಳು ತಿರುಗಿಬಿದ್ದರು. ಹೊಂದಾಣಿಕೆ ಮಾಡಿ ಅದನ್ನೂ ಸರಿಪಡಿಸಬೇಕಾಯಿತು’.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT