ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವೆಡೆ ಪ್ರತಿಭಟನೆ; ಮುಷ್ಕರಕ್ಕೆ ಯತ್ನ, ಜಾಥಾ

Last Updated 21 ಜನವರಿ 2011, 9:00 IST
ಅಕ್ಷರ ಗಾತ್ರ

ಹಾಸನ: ‘ಸ್ವಸಹಾಯ ಸಂಘಗಳಿಗೆ ಸೌಲಭ್ಯ ನೀಡುವಲ್ಲಿ ಸರ್ಕಾರ ತಾರತಮ್ಯ ಎಸಗುತ್ತಿದ್ದು, ಅದನ್ನು ನಿಲ್ಲಿಸಬೇಕು. ದಿನಬಳಕೆ ವಸ್ತುಗಳ ಬೆಲೆ ದಿನೇದಿನೇ ಏರಿಕೆಯಾಗುತ್ತಿದ್ದು ಇದನ್ನು ನಿಯಂತ್ರಿಸಬೇಕು ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಗುರುವಾರ ಸುಮಾರು 400ಕ್ಕೂಹೆಚ್ಚು ಮಹಿಳೆಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜೀವನಜ್ಯೋತಿ ಜಿಲ್ಲಾ ಮಹಿಳಾ ಒಕ್ಕೂಟ, ಸಾಧನಾ ತಾಲ್ಲೂಕು ಮಹಿಳಾ ಒಕ್ಕೂಟ, ದಲಿತ ವಿಮೋಚನಾ ಮತ್ತು ಮಾನವ ಹಕ್ಕುಗಳ ವೇದಿಕೆ, ಸೇವಾ ಸಂಗಮ, ಜಿಲ್ಲಾ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟ ಹಾಗೂ ವಿವಿಧ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟದ ಆಶ್ರಯದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಜೀವನಜ್ಯೋತಿ ಜಿಲ್ಲಾ ಒಕ್ಕೂಟ ಜಿಲ್ಲೆಯಲ್ಲಿ 16,973 ಸಂಘಗಳನ್ನು ರಚಿಸಿದೆ. ಆದರೆ ಸರ್ಕಾರ ಸ್ತ್ರೀಶಕ್ತಿ ಸಂಘಟನೆಗಳ ಮೂಲಕ  ಜಾರಿಗೊಳಿಸುವ ವಿವಿಧ ಯೋಜನೆಗಳಿಗಾಗಿ ಈ ಸಂಘಗಳನ್ನು ಪರಿಗಣಿಸದೆ ತಾರತಮ್ಯ ಎಸಗಿದೆ. ಸರ್ಕಾರ ಎಲ್ಲ ಸಂಘಗಳನ್ನು ಸಮಾನವಾಗಿ ಪರಿಗಣಿಸಿ ಎಲ್ಲರಿಗೂ ಸೌಲಭ್ಯ ಸಿಗುವಂತೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಬಡಜನರು ತತ್ತರಿಸಿದ್ದಾರೆ. ಕೂಡಲೇ ಇದನ್ನು ನಿಯಂತ್ರಿಸಬೇಕು, ಜಿಲ್ಲೆಯ ಬಹುತೇಕ ಎಲ್ಲ ರಸ್ತೆಗಳೂ ಕೆಟ್ಟು ಸಂಚರಿಸಲು ಸಾಧ್ಯವಾಗದಂಥ ಸ್ಥಿತಿಗೆ ಬಂದಿವೆ. ಕೂಡಲೇ ಇವುಗಳನ್ನು ದುರಸ್ತಿ ಮಾಡಬೇಕು, ಗ್ರಾಮೀಣ ಪ್ರದೇಶದಲ್ಲಿ ಶಾಲಾ ಕಾಲೇಜಿಗೆ ಹೋಗುವ ಮಕ್ಕಳಿಗೆ ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಏರ್ಪಡಿಸಬೇಕು, ಉದ್ಯೋಗ ಖಾತ್ರಿ ಯೋಜನೆಯಡಿ ನೀಡುವ ಕೆಲಸದ ಅವಧಿಯನ್ನು 100 ದಿನದಿಂದ 300 ದಿನಕ್ಕೆ ಹೆಚ್ಚಿಸಬೇಕು  ಮತ್ತು ಕೂಲಿಯ ಮೊತ್ತವನ್ನು 300 ರೂಪಾಯಿಗೆ ಹೆಚ್ಚಿಸಬೇಕು, ಪಡಿತರ ವ್ಯವಸ್ಥೆಯಲ್ಲಿ ಯೂನಿಟ್ ವ್ಯವಸ್ಥೆಯನ್ನು ಬಿಟ್ಟು ಬಡವರಿಗೆ 28ಕೆ.ಜಿ. ಅಕ್ಕಿ ವಿತರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ನಗರದ ಹೇಮಾವತಿ ಪ್ರತಿಮೆಯ ಮುಂದಿನಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಮಹಿಳೆಯರು ಸ್ವಲ್ಪ ಹೊತ್ತು ಎನ್.ಆರ್. ಸರ್ಕಲ್‌ನಲ್ಲಿ ರಸ್ತೆ ತಡೆ ನಡೆಸಿದರು. ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತ ಜಿಲ್ಲಾಧಿಕಾರಿ ಕಚೇರಿವರೆಗೆ ಬಂದರು. ಅಲ್ಲಿ ಮನವಿ ಸಲ್ಲಿಸಿ ಪ್ರತಿಭಟನೆ ಕೊನೆಗೊಳಿಸಿದರು.

ಮುಖಂಡರಾದ ಕೃಷ್ಣದಾಸ್, ಮರಿ ಜೋಸೆಫ್, ರೇಣುಕಾ, ಶಾಂತಮ್ಮ ಮುಂತಾದವರು ಮುಂದಾಳತ್ವ ವಹಿಸಿದ್ದರು.

ಹಲವೆಡೆ ಪ್ರತಿಭಟನೆ; ಮುಷ್ಕರಕ್ಕೆ ಯತ್ನ, ಜಾಥಾ
ಹೊಳೆನರಸೀಪುರ: ಮಹಿಳೆಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕ ಕಿರುಚಾಡುತ್ತಿದ್ದ ಮಹಿಳೆಯ ನಾಲಿಗೆಯನ್ನು ಎಳೆದು ಗಾಯಗೊಳಿಸಿ ಪರಾರಿಯಾಗಿರುವ ಘಟನೆ ಸೋಮವಾರ ನಡೆದಿದ್ದು ತಡವಾಗಿ ವರದಿಯಾಗಿದೆ. ಇದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಶ್ರವಣೂರು ಗ್ರಾಮದ ವಿವಾಹಿತ ಮಹಿಳೆಯೊಬ್ಬರು ತಮ್ಮ ಎಮ್ಮೆಗೆ ನೀರು ಕುಡಿಸಲು ಹೋದಾಗ ಪಕ್ಕದ ಕದರಿಕೊಪ್ಪಲು ಗ್ರಾಮದ ಯುವಕ ಕುಮಾರ ಎಂಬಾತ ಆಕೆಯನ್ನು ಮಾತನಾಡಿಸುವ ನೆಪದಲ್ಲಿ ಹತ್ತಿರ ಹೋಗಿ ಎಳೆದಾಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಹಿಳೆ ಜೋರಾಗಿ ಕೂಗಾಟ ನಡೆಸಿದಾಗ ಆಕೆಯ ನಾಲಿಗೆಯನ್ನು ಹೊರಕ್ಕೆಳೆದು ಗಾಯಗೊಳಿಸಿದ್ದಾನೆ. ಕಿರುಚಾಟ ಕೇಳಿ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಜನರು ಓಡಿ ಬರುವುದನ್ನು ಕಂಡು ಯುವಕ ಪರಾರಿಯಾಗಿದ್ದಾನೆ.

ಈ ಬಗ್ಗೆ ಅಂದೇ ಗ್ರಾಮಾಂತರ ಠಾಣಾಧಿಕಾರಿ ರವೀಂದ್ರ ಅವರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗುರುವಾರ ಇಲ್ಲಿನ ಗ್ರಾಮಾಂತರ ಠಾಣೆ ಮುಂದೆ ಮುಷ್ಕರ ನಡೆಸಲು ಮುಂದಾದರು. ಸರ್ಕಲ್ ಇನ್ಸ್‌ಪೆಕ್ಟರ್ ಸತ್ಯಣ್ಣರೆಡ್ಡಿ ತಕ್ಷಣ ಆರೋಪಿಯನ್ನು ಬಂಧಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಧರಣಿ ಕೈಬಿಟ್ಟಿದ್ದಾರೆ. ಅತ್ಯಾಚಾರ ಯತ್ನದಂತಹ ಪ್ರಕರಣವನ್ನೂ ಲಘುವಾಗಿ ಪರಿಗಣಿಸಿದ ಸಬ್‌ಇನ್ಸ್‌ಪೆಕ್ಟರ್ ರವೀಂದ್ರ ಅವರ ವರ್ತನೆಯನ್ನು ಗ್ರಾಮಸ್ಥರು ಖಂಡಿಸಿದ್ದಾರೆ.

ಬೆಲೆ ಏರಿಕೆ ಖಂಡಿಸಿ ಸಂಘಟನೆಗಳ ಪ್ರತಿಭಟನೆ
ಬೇಲೂರು: ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಗಟ್ಟಲು ವಿಫಲವಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಇಲ್ಲಿನ ವಿವಿಧ ಸಂಘಟನೆಗಳ ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಾಗೂ ರಸ್ತೆ ತಡೆ ನಡೆಸಿದರು.

ಗಂಗೋತ್ರಿ ತಾಲ್ಲೂಕು ಮಹಿಳಾ ಒಕ್ಕೂಟ, ಕರ್ನಾಟಕ ಕ್ರೈಸ್ತ ಸಂಘಗಳ ಒಕ್ಕೂಟ, ಜಯಕರ್ನಾಟಕ ಸಂಘಟನೆ, ಕರ್ನಾಟಕ ರೈತ ಸಂಘ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ರಾಜ್ಯ ಯುವ ಜನತಾದಳ ಮತ್ತು ಯುಮಾನಿಟರಿಯಸ್ ರಿಲೀಫ್ ಸೊಸೈಟಿ ನೇತೃತ್ವದಲ್ಲಿ ಜೆ.ಪಿ.ನಗರ ಬಳಿಯಿಂದ ಬೃಹತ್ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಗಟ್ಟಲು ವಿಫಲವಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

ಬಳಿಕ ಪಟ್ಟಣದ ಬಸ್ ನಿಲ್ದಾಣದ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಯುವ ಜನತಾದಳ ಪ್ರಧಾನ ಕಾರ್ಯದರ್ಶಿ ಕೆ.ಸುದರ್ಶನ್, ಸಾರ್ವಜನಿಕರು ದಿನನಿತ್ಯ ಉಪಯೋಗಿಸುವ ವಸ್ತುಗಳ ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ. ಬೆಲೆ ಏರಿಕೆಯಿಂದ ಜೀವನ ನಡೆಸುವುದೇ ದುಸ್ತರವಾಗಿದೆ. ಬೆಲೆ ಏರಿಕೆಯನ್ನು ತಡೆಗಟ್ಟಲು ಕೇಂದ್ರ, ರಾಜ್ಯ ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅರೋಪಿಸಿದರು.

ಪಡಿತರ ಚೀಟಿಯಲ್ಲಿ ಆಗುತ್ತಿರುವ ಅನ್ಯಾಯ ಮತ್ತು ತಾರತಮ್ಯವನ್ನು ಸರ್ಕಾರ ಕೂಡಲೇ ಸರಿಪಡಿಸಬೇಕು. ಸ್ತ್ರೀಶಕ್ತಿ ಸಂಘಗಳಿಗೆ ದೊರಕುವ ಸರ್ಕಾರಿ ಸೌಲಭ್ಯಗಳನ್ನು ಸ್ವಸಹಾಯ ಸಂಘಗಳಿಗೂ ನೀಡಬೇಕು. ಸಾರ್ವಜನಿಕ ಶೌಚಾಲಯ ವ್ಯವಸ್ಥೆಯನ್ನು ಕಡ್ಡಾಯಗೊಳಿಸಬೇಕು. ಸರ್ಕಾರಿ ಯೋಜನೆಗಳು ಅರ್ಹರಿಗೆ ಮಾತ್ರ ತಲುಪುವ ವ್ಯವಸ್ಥೆ ಮಾಡ ಬೇಕು ಎಂದು ಆಗ್ರಹಿಸಿದರು. ನಂತರ ತಹಶೀಲ್ದಾರ್ ಕಚೇರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಗಂಗೋತ್ರಿ ಮಹಿಳಾ ಒಕ್ಕೂಟದ ಸಂಯೋಜಕ ಜಾನಿ, ಕೆ.ಪಿ.ಸಿ.ಸಿ. ಸದಸ್ಯ ಪಿ.ಎಫ್.ಸಾಲ್ಡಾನ, ಪ್ರಮುಖರಾದ ಜಾಕಿರ್, ಅರುಣ್ ಕುಮಾರ್, ಸ್ವಾಮಿಗೌಡ ಮತ್ತಿತರರು ಪಾಲ್ಗೊಂಡಿದ್ದರು.

ಸೆಸ್ಕ್ ಕಚೇರಿ ಎದುರು ಗುತ್ತಿಗೆದಾರರ ಪ್ರತಿಭಟನೆ
ಚನ್ನರಾಯಪಟ್ಟಣ: ಸೆಸ್ಕ್ ಅಧಿಕಾರಿಗಳು ವಿದ್ಯುತ್ ಸಾಮಗ್ರಿ ನೀಡಲು ಆದೇಶ ನೀಡುತ್ತಿಲ್ಲ ಎಂದು ಆರೋಪಿಸಿದ ವಿದ್ಯುತ್ ಗುತ್ತಿಗೆದಾರರು ಸೆಸ್ಕ್ ವಿಭಾಗೀಯ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

ಒಂದು ವರ್ಷದ ಹಿಂದೆ ವಿದ್ಯುತ್ ಪರಿವರ್ತಕಗಳು, ಇತ್ಯಾದಿ ಸಾಮಗ್ರಿ ಕೊರತೆ ಇತ್ತು. ಆದರೆ ಈಚೆಗೆ ಸಾಮಗ್ರಿಗಳು ಪೂರೈಕೆಯಾಗಿವೆ. ಜ. 19ರ ನಂತರ ಗುತ್ತಿಗೆದಾರರಿಗೆ ಸಾಮಗ್ರಿ ಪೂರೈಸಲಾಗುತ್ತದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಈಗ ಕೆಲಸ ಮಾಡಲು ಆದೇಶ ನೀಡುತ್ತಿಲ್ಲ. ವಿದ್ಯುತ್ ಪರಿವರ್ತಕ ಅಥವಾ ಕಂಬಗಳನ್ನು ನೀಡದೇ ಇರುವುದರಿಂದ ರೈತರ ಬೆಳೆ ಹಾಳಾಗಿ, ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.

ಮಂಡ್ಯ, ಮೈಸೂರು, ಚಾಮರಾಜನಗರದಲ್ಲಿ ಈ ಸಮಸ್ಯೆ ಇಲ್ಲ. ಆದರೆ ಹಾಸನ ಜಿಲ್ಲೆಯಲ್ಲಿ ಮಾತ್ರ ಗುತ್ತಿಗೆದಾರರಿಗೆ ವರ್ಕ್ ಆರ್ಡರ್ ನೀಡುತ್ತಿಲ್ಲ. ಹಾಸನದಲ್ಲಿರುವ ಸೆಸ್ಕ್ ಮೇಲಧಿಕಾರಿಗಳ ವರ್ತನೆಯೇ ಇದಕ್ಕೆ ಕಾರಣ. ಇಂದು ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಾಗಿದೆ. ಇನ್ನೊಂದು ವಾರದಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಮತ್ತೆ ಚಳವಳಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂಘದ ಅಧ್ಯಕ್ಷ ಜಗದೀಶ್, ಕಾರ್ಯದರ್ಶಿ ಎಂ.ಎಲ್. ಮಂಜೇಗೌಡ, ಉಪಾಧ್ಯಕ್ಷ ಮಹೇಶ್, ಸಹಕಾರ್ಯದರ್ಶಿ ಮಹೇಶ್ ನೇತೃತ್ವ ವಹಿಸಿದ್ದರು.

ತಾಲ್ಲೂಕು ಕಚೇರಿ ಎದುರು ಒಕ್ಕೂಟಗಳ ಪ್ರತಿಭಟನೆ
ಸಕಲೇಶಪುರ: ಸರ್ಕಾರ ಸ್ತ್ರೀ ಶಕ್ತಿ ಸಂಘಗಳಿಗೆ ನೀಡುವ ಎಲ್ಲ ರೀತಿಯ ಸೌಲಭ್ಯಗಳನ್ನು ಸ್ವ-ಸಹಾಯ ಸಂಘಗಗಳಿಗೂ ಸಹ ನೀಡಬೇಕು ಎಂದು ಆಗ್ರಹಿಸಿ ಇಲ್ಲಿಯ ಶುಭ ಜ್ಯೋತಿ ಒಕ್ಕೂಟ (ಸಿಎಂಎಸ್‌ಎಸ್) ಗುರುವಾರ ಇಲ್ಲಿಯ ತಾಲ್ಲೂಕು ಕಚೇರಿ ಮುಂದೆ  ಪ್ರತಿಭಟನೆ ನಡೆಸಿದರು.

ಸ್ತ್ರೀ ಶಕ್ತಿ ಸಂಘ ಪ್ರಾರಂಭಗೊಂಡ ಒಂದು ವರ್ಷದಲ್ಲಿ ಸುತ್ತು ನಿಧಿ ಮತ್ತು ಸಬ್ಸಿಡಿ ದೊರೆಯುತ್ತದೆ. ಸ್ತ್ರೀ ಶಕ್ತಿ ಸಂಘಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲದ ಸೌಲಭ್ಯವಿದೆ. ಸ್ತ್ರೀ ಶಕ್ತಿ ಸಂಘಗಳಿಗೆ ವಿವಿಧ ಇಲಾಖೆಗಳಿಂದ ತರಬೇತಿ ಸೌಲಭ್ಯವಿದೆ. ಅಂಗನವಾಡಿ ಕೇಂದ್ರದಲ್ಲಿ ಮತ್ತು ಬ್ಯಾಂಕ್‌ನಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಮೇಲಿನ ಯಾವುದೇ ಸೌಲಭ್ಯ ಸ್ವ ಸಹಾಯ ಸಂಘಗಳಿಗೆ ನೀಡದೆ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT