ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲಸಿನ ಹಣ್ಣಿನ ಸುಗ್ಗಿ ಆರಂಭ

Last Updated 2 ಏಪ್ರಿಲ್ 2013, 8:18 IST
ಅಕ್ಷರ ಗಾತ್ರ

ಚನ್ನಗಿರಿ: ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ `ಹಣ್ಣುಗಳ ರಾಜ' ಮಾವಿನ ಹಣ್ಣಿನ ಸುಗ್ಗಿ ಆರಂಭವಾಗಬೇಕಾಗಿತ್ತು. ನಂತರ ಹಲಸಿನ ಹಣ್ಣಿನ ಸುಗ್ಗಿ ಆರಂಭವಾಗುತ್ತಿತ್ತು. ಆದರೆ ಹವಾಮಾನ ವೈಪರೀತ್ಯದ ಪರಿಣಾಮವಾಗಿ ಈಗ ಹಲಸಿನ ಹಣ್ಣಿನ ಸುಗ್ಗಿ ಮೊದಲು ಆರಂಭಗೊಂಡು ಭರದಿಂದ ಮಾರಾಟ ಆರಂಭವಾಗಿದೆ.

ಹಲಸಿನ ಹಣ್ಣು ತಿನ್ನಲು ತುಂಬಾ ರುಚಿಕರ. ಹಲಸಿನ ಹಣ್ಣನ್ನು ತಿನ್ನಲು ಉಪಯೋಗಿಸಿದರೆ, ಬೀಜವನ್ನು ಸಾರು ಮತ್ತು ಪಲ್ಯ ಮಾಡಲು ಉಪಯೋಗಿಸುತ್ತಾರೆ. ಇನ್ನು ಕೆಲವರು ಬೀಜವನ್ನು ಸುಟ್ಟುಕೊಂಡು ತಿನ್ನುತ್ತಾರೆ. ಸಾಮಾನ್ಯವಾಗಿ ಪ್ರತಿವರ್ಷ ಏಪ್ರಿಲ್ ತಿಂಗಳಲ್ಲಿ ಮಾರಾಟಕ್ಕೆ ಹಲಸಿನ ಹಣ್ಣು ಬರುತ್ತಿತ್ತು. ಆದರೆ ಈ ಬಾರಿ ಒಂದು ತಿಂಗಳು ಮೊದಲು ಹಲಸಿನ ಹಣ್ಣಿನ ಸುಗ್ಗಿ ಆರಂಭವಾಗಿದೆ. ಒಂದು ಸಾಧಾರಣ ಗಾತ್ರದ ಹಲಸಿನ ಹಣ್ಣು ರೂ 100ರಿಂದ 125ಕ್ಕೆ ಮಾರಾಟವಾಗುತ್ತಿದೆ. ಹಲಸಿನ ಹಣ್ಣನ್ನು ಪ್ರತ್ಯೇಕವಾಗಿ ಜಮೀನುಗಳಲ್ಲಿ ಬೆಳೆಯುವುದಿಲ್ಲ. ಅಡಿಕೆ ಹಾಗೂ ತೆಂಗಿನ ತೋಟಗಳಲ್ಲಿ ಒಂದು ಅಥವಾ ಎರಡು ಸಸಿಗಳನ್ನು ಹಾಕಿ ಬೆಳೆಸಿರುತ್ತಾರೆ. ಹಲಸಿನ ಹಣ್ಣಿನ ಮರಕ್ಕೆ ಪ್ರತ್ಯೇಕವಾಗಿ ಗೊಬ್ಬರ ಏನೂ ಹಾಕುವುದಿಲ್ಲ.

ಸಾಧಾರಣವಾದ ಮಳೆ ಬಂದರೂ ಸಾಕು ಉತ್ತಮವಾಗಿ ಬೆಳವಣಿಗೆಯಾಗುತ್ತದೆ. ಒಂದು ಮರದಲ್ಲಿ ಕನಿಷ್ಟ ಎಂದರೂ 50ರಿಂದ 100 ಕಾಯಿಗಳು ಬಿಡುತ್ತವೆ.

ಅನೇಕ ತೋಟಗಳಿಂದ ಹಲಸಿನ ಕಾಯಿಗಳನ್ನು ಖರೀದಿಸಿ ಹಣ್ಣಿನ ವರ್ತಕರು ನೆರೆಯ ಜಿಲ್ಲಾ ಕೇಂದ್ರಗಳಿಗೆ ಒಯ್ದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಸುಮಾರು ಮೂರು ತಿಂಗಳಿಗಿಂತ ಹೆಚ್ಚು ಕಾಲ ಹಲಸಿನ ಹಣ್ಣಿಗೆ ಬೇಡಿಕೆ ಇರುತ್ತದೆ.

ಕಡ್ಡಾಯ ಮತದಾನ ಮಾಡಿ
ಚನ್ನಗಿರಿ: ಉತ್ತಮ ನಾಯಕರ ಆಯ್ಕೆಗೆ ಸುವರ್ಣಾವಕಾಶ. ಹಾಗಾಗಿ ಸಾರ್ವಜನಿಕರು ಕಡ್ಡಾಯ ಮತದಾನ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಿ.ಕೆ. ಶಿವಕುಮಾರ್ ಹೇಳಿದರು.

ಪಟ್ಟಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಕ್ಷರ ದಾಸೋಹದಿಂದ ಸೋಮವಾರ ನಡೆದ ಬಿಸಿಯೂಟ ತಯಾರಕರ ಮತದಾನ ಜಾಗೃತಿ ಆಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮತಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಮಾರ್ಚ್ 7ರ ಒಳಗೆ ಭೇಟಿ ಮಾಡಿ ಹೆಸರನ್ನು ನೋಂದಾಯಿಸಿ ಕೊಳ್ಳಬಹುದು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಆರ್. ತಿಪ್ಪೇಶಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ. ಸೋಮಶೇಖರ್, ಸಂಪನ್ಮೂಲ ಶಿಕ್ಷಕರಾದ ಡಾ.ಚಿದಾನಂದ್, ಹಾಲಸಿದ್ದಪ್ಪ ಉಪಸ್ಥಿತರಿದ್ದರು. ಎಂ.ಬಿ. ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT