ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲುಬದಿರು ಹಲುವಾಗಲೇ...

Last Updated 11 ಜೂನ್ 2011, 7:25 IST
ಅಕ್ಷರ ಗಾತ್ರ

ದಾವಣಗೆರೆ: ತುಂಗೆಯ ತಟದ ಅಂಗಳದಲ್ಲಿರುವ ಊರು. ಒಮ್ಮೆ ನೋಡಿದರೆ ಎಲ್ಲರಿಂದ ವಿಮುಖವಾಗಿ ದೂರ ಉಳಿದು ನಿಸರ್ಗದ ಮಧ್ಯೆ ತಪೋನಿರತವಾಗಿರುವಂತೆ ಅನಿಸುವ ಗ್ರಾಮ. ಒಳಗೆ ಹೋದಂತೆ ವಿಸ್ತಾರವಾಗಿ ತೆರೆದುಕೊಂಡು ಹಲವು ಕಥೆ ಹೇಳುವ ಗ್ರಾಮ.

-ಇದು ಹರಪನಹಳ್ಳಿ ತಾಲ್ಲೂಕಿನ ಹಲುವಾಗಲು ಗ್ರಾಮ. ದಾವಣಗೆರೆಯಿಂದ ಸುಮಾರು 40 ಕಿ.ಮೀ. ದೂರವಿದೆ. ಪಾಳೇಗಾರಿಕೆ ಕಾಲದ ಇತಿಹಾಸ ಸಾರುವ ಈ ಗ್ರಾಮ ಮಾಜಿ ಮುಖ್ಯಮಂತ್ರಿ, ದಿವಂಗತ ಎಸ್. ನಿಜಲಿಂಗಪ್ಪ ಅವರ ಹುಟ್ಟೂರು. ಅವರು ಇಲ್ಲಿ ಓಡಾಡಿಕೊಂಡಿದ್ದ ದಿನಗಳನ್ನು ಇಲ್ಲಿನ ಹಿರಿಯ ತಲೆಗಳು ಸದಾ ಸ್ಮರಿಸುತ್ತವೆ. ಇದೀಗ ಆ ಮನೆಯಲ್ಲಿ ಸುಶೀಲಮ್ಮ ಎಂಬುವರ ಕುಟುಂಬ ವಾಸಿಸುತ್ತಿದೆ. ಭೂಸುಧಾರಣೆಯ ಕಾಲದಲ್ಲಿ ಜಮೀನು ಬೇರೆಯವರ ಪಾಲಾಗಿದೆ.

ಕಲ್ಲೇಶ್ವರ, ಊರಮ್ಮದೇವಿ ಸೇರಿದಂತೆ ಹಲವು ದೇವರುಗಳನ್ನು ಇಲ್ಲಿನ ಜನ ಪೂಜಿಸುತ್ತಾರೆ. ತಾಲ್ಲೂಕು ಕೇಂದ್ರದಿಂದ ಸಾರಿಗೆ ಸೌಲಭ್ಯ ಕಡಿಮೆಯಿದೆ. ಆದರೆ, ದಾವಣಗೆರೆ, ಹರಿಹರದಿಂದ ಸಾಕಷ್ಟು ಬಸ್‌ಗಳು ಓಡಾಡುತ್ತಿವೆ. ತಾಲ್ಲೂಕು ಕೇಂದ್ರಕ್ಕೆ ಮಾತ್ರ ಮೆಟಾಡೋರ್, ಟೆಂಪೋ ಟ್ರಾಕ್ಸ್‌ಗಳೇ ಗತಿ.

ಇತಿಹಾಸದ ಪುಟಗಳಲ್ಲಿ: ಹಿಂದೆ ಹೊಯ್ಸಳರು ಮತ್ತು ಪಾಂಡ್ಯರ ಆಳ್ವಿಕೆಗೆ ಒಳಪಟ್ಟಿತ್ತು. 1282ರ ಏಪ್ರಿಲ್ 23ರಂದು ಟರ್ಕರು ಹೊಯ್ಸಳರ ಮೇಲೆ ದಾಳಿ ಮಾಡಿದರು. ಆಗ ರಾಮಚಂದ್ರರಾಯ ಎಂಬಾತ ಶತ್ರುಗಳ ಕೈಯಿಂದ ರಾಜ್ಯ ರಕ್ಷಿಸಿದನಂತೆ.  ಪಾಂಡ್ಯರ ಕಾಲದ ಅಧಿಕಾರಿ ಹರಿದೇವನ ಆದೇಶದಂತೆ, ಹಲುವಾಗಲಿನಲ್ಲಿ ವಾಸುದೇವ ಎಂಬಾತ ಅಧಿಕಾರಿಯಾಗಿದ್ದ. ಒಟ್ಟಾರೆ ಈ ಶಾಸನ ಹಲುವಾಗಲಿನ ಇತಿಹಾಸದ ಬಗ್ಗೆ ಸ್ಪಷ್ಟಪಡಿಸುವುದಿಲ್ಲ. ಹಿರಿಯರನ್ನು ಕೇಳಿದರೆ ಒಬ್ಬೊಬ್ಬರ ಬಾಯಲ್ಲಿ ಒಂದೊಂದು ಕಥೆ ಹೊರಬರುತ್ತದೆ.

ಈ ಗ್ರಾಮದ ಮೂಲ ಹೆಸರು ಪಾಮಸರಿ ಹರಿದೇವನ ಹೆಸರಿನಲ್ಲಿ ಹರಿದೇವನಂಗಿಲೆ ಹಲುವಾಗಿಲೆ, ಹಲುವಾಗಿಲು, ಹಲುವಾಗಲು ಎಂದು ರೂಪಾಂತರಗೊಂಡಿತು. ಪ್ರಾಚೀನ ಕಾಲದಲ್ಲಿ ಈ ಊರು ಸೂತ್ರದ ಗೊಂಬೆಯಾಟಕ್ಕೆ ಪ್ರಸಿದ್ಧವಾಗಿತ್ತು(ಆಧಾರ: ಟಿ. ಗಿರಿಜಾ ಅವರ ದಾವಣಗೆರೆ ಇದು ನಮ್ಮ ಜಿಲ್ಲೆ ಕೃತಿ).
ಆದರೆ, ಈಗ ತುಂಗೆಯ ಏರಿಳಿತವನ್ನು ಅವಲಂಬಿಸಿ ಜನತೆ ನಿಜವಾಗಿಯೂ ಸೂತ್ರದ ಗೊಂಬೆಗಳೇ ಆಗಿದ್ದಾರೆ.

ಸುತ್ತ ಬೆಟ್ಟಗಳಿಂದ ಆವೃತವಾಗಿ ತಪ್ಪಲಲ್ಲಿ ಪುಟ್ಟ ಮಗುವಿನಂತೆ ಪವಡಿಸಿರುವ ಈ ಊರಿಗೆ ತುಂಗೆ ಮುನಿಯುವುದು ಬೇಗ. ಆಕೆ ಮುನಿದರೆ ವಾರಗಟ್ಟಲೆ ಇಲ್ಲಿನ ಜನ ಎತ್ತರದ ಪ್ರದೇಶಗಳಲ್ಲಿ ಇರಬೇಕಾಗುತ್ತದೆ. ಪರಿಸ್ಥಿತಿ ತೀರಾ ಘೋರವಾದದ್ದೇ. ಬೆಟ್ಟಗಳಲ್ಲಿ ಸುತ್ತುವ ದೈತ್ಯ ಗಾತ್ರದ ಗಾಳಿ ಯಂತ್ರಗಳ ಬೂ...ಂವ್ ಸದ್ದು, ಇತ್ತ ತುಂಗೆಯ ಒಡಲು ಬಗೆದು ಮರಳು ತುಂಬುವ ಜೆಸಿಬಿ ಸದ್ದು ಕೇಳುತ್ತಲೇ ಇರುತ್ತದೆ.

ವಾಸ್ತವವಾಗಿ ತುಂಗೆಯ ಮಟ್ಟಕ್ಕಿಂತ ತಗ್ಗು ಪ್ರದೇಶದಲ್ಲಿರುವ ಊರು. ಇಲ್ಲಿ ಸಾಧಾರಣ ಮಳೆಬಂದರೂ ಸಾಕು ರಸ್ತೆ ತುಂಬಾ ಪ್ರವಾಹವೇ ಹರಿದುಬರುತ್ತದೆ. ಕೋಟೆ ಪ್ರದೇಶದ ಗೋಡೆಗಳು, ಹಳೇ ಕಾಲದ ಕೋಣೆಗಳನ್ನೇ ಬಳಸಿಕೊಂಡು ಮನೆಗಳನ್ನಾಗಿಸಿಕೊಂಡು ಜನ ವಾಸಿಸುತ್ತಿದ್ದಾರೆ. ಕೋಟೆ ಪ್ರದೇಶಕ್ಕೆ ಬಂದರೆ ಅವು ಅಪ್ಪಟ ಹಳೇ ಕಾಲದ ಕ್ಲಾಸಿಕ್ ಸಿನಿಮಾಗಳ ಚೌಕಟ್ಟಿನಂತೇ ಅನಿಸುತ್ತದೆ. ಶುದ್ಧ ಪ್ರಾಚೀನ ಸೊಗಡೇ ಅಲ್ಲಿ ಇದೆ. ಅರಸೊತ್ತಿಗೆಯ ಪಳೆಯುಳಿಕೆಗಳ ಜತೆಗೆ.

ಸುಮಾರು 7 ಸಾವಿರ ಜನಸಂಖ್ಯೆಯಿದೆ. ಪದವಿಪೂರ್ವ ಕಾಲೇಜು ಇದೆ. ಕಿರಿದಾದ ಓಣಿಗಳಲ್ಲಿ ಕಾನ್ವೆಂಟ್ ಶಾಲಾ ಮಕ್ಕಳ ಕಲರವ ಕೇಳಿಬರುತ್ತದೆ. ತಕ್ಕಮಟ್ಟಿಗೆ ಅಕ್ಷರಸ್ಥರು ಇದ್ದಾರೆ. ಊರಿನಲ್ಲಿ ಏಕೈಕ ಜೈನರ ಕುಟುಂಬವಿದೆ. ಪುಟ್ಟ ಊರಿಗೊಂದು ಪೊಲೀಸ್ ಠಾಣೆಯಿದೆ. ಮಾರುಕಟ್ಟೆ, ಎಲ್ಲವೂ ಇದ್ದರೂ ವ್ಯವಸ್ಥಿತ ಅಭಿವೃದ್ಧಿ ಆಗಿಲ್ಲ ಎಂಬ ಕೊರಗು ಇಲ್ಲಿನ ಮಂದಿಗೆ ಇದೆ.

ಇಲ್ಲಿನ ತಾವರೆಗೊಂದಿ ರಸ್ತೆಯಲ್ಲಿ `ಆಸರೆ~ ಯೋಜನೆ ಅಡಿ 250 ಮನೆಗಳು ನಿರ್ಮಾಣಗೊಳ್ಳುತ್ತಿವೆ. ಅದು ನಿರ್ಮಾಣವಾದರೂ ಎಲ್ಲರೂ ಹೋಗಲು ಸಿದ್ಧರಿಲ್ಲ. ಮೂಲ ಮನೆ, ರೈತಾಪಿ ಬದುಕು ಬಿಡಲು ತಮ್ಮಿಂದಾಗದು ಎನ್ನುತ್ತಾರೆ ಇಲ್ಲಿನ ಪಲ್ಲಕ್ಕಿ ನಿಂಗಪ್ಪ. ತುಂಗೆ ಉಕ್ಕಿ ಹರಿದರೆ ಒಂದು ಆಳಿಗೂ ಹೆಚ್ಚು ಪ್ರಮಾಣದ ನೀರು ಊರಿಗೆ ನುಗ್ಗುತ್ತದೆ. 250 ಎಕರೆಗೂ ಹೆಚ್ಚು ಕೃಷಿ ಪ್ರದೇಶ ಮುಳುಗಡೆಯಾಗುತ್ತದೆ.

ಆಡಳಿತದ ದೃಷ್ಟಿಯಲ್ಲಿ ಈ ಹಳ್ಳಿ ಮೂಲೆಗುಂಪಾಗಿದೆ. ಅಧಿಕಾರಿಗಳು ಭೇಟಿ ನೀಡಿದರೂ ಜನರನ್ನು ಹಾಗೂ ನೈಜ ವ್ಯವಸ್ಥೆಯ ಚಿತ್ರಣವನ್ನು ಅವರಿಂದ ದೂರವಿಡಲಾಗುತ್ತದೆ. ಅಧಿಕಾರಿಗಳ ಭೇಟಿ ಕೇವಲ ಅಂಕಿ-ಅಂಶಗಳಿಗಷ್ಟೇ ಸೀಮಿತವಾಗುತ್ತದೆ ಎನ್ನುತ್ತಾರೆ ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಸೋಮಲಿಂಗಪ್ಪ.
ಈರುಳ್ಳಿ, ಬತ್ತ, ಮೆಕ್ಕೆಜೋಳ, ಹತ್ತಿ ಇಲ್ಲಿನ ಪ್ರಮುಖ ಬೆಳೆಗಳು. ಪರವಾಗಿಲ್ಲ ಅನ್ನಬಹುದಾದ ಕೃಷಿ ಬದುಕು. ಕೊರತೆ, ಕೊರಗುಗಳ ನಡುವೆಯೂ ಪ್ರೀತಿ ವಿಶ್ವಾಸಕ್ಕೇನೂ ಕೊರತೆಯಿಲ್ಲ.

ಊರು ಇನ್ನೂ ಅಭಿವೃದ್ಧಿ ಆಗಬೇಕು. ಹಿಂದೆ ಸಾಕಷ್ಟು ಸಮಸ್ಯೆಗಳು ಇದ್ದವು. ಹಲುವಾಗಲು ಸುಧಾರಣೆಯ ಹಾದಿಯಲ್ಲಿದೆ. ಇಲ್ಲಿನ ಏಕೈಕ ಜೈನ ಕುಟುಂಬ ತಮ್ಮದು. ಔದ್ಯೋಗಿಕ ಕಾರಣಗಳಿಗಾಗಿ ಕುಟುಂಬದ ಹಲವರು ದೂರದ ನಗರ ಸೇರಿದ್ದಾರೆ. ಪೂಜೆ ಪುನಸ್ಕಾರಕ್ಕಾಗಿ ಹರಪನಹಳ್ಳಿ ಅಥವಾ ದಾವಣಗೆರೆ ಬಸದಿಗೇ ಹೋಗಬೇಕು ಎನ್ನುತ್ತಾರೆ ಸನತ್ ಕುಮಾರ್ ಜೈನ್.

ಹಿಂದೆ ಹೊಳೆಗೆ ಹೋಗಿ ನೀರು ತರಬೇಕಾಗಿತ್ತು. ಈಗ ಮನೆಬಾಗಿಲಿಗೇ ಬರುತ್ತಿದೆ. ಆದರೆ, ಕುಡಿಯಲು ಅದನ್ನು ಶುದ್ಧೀಕರಿಸಿ ವಿತರಿಸುವಂತಾಗಬೇಕು. ಊರಿನ ಶಾಲೆಯ ಶೈಕ್ಷಣಿಕ ಗುಣಮಟ್ಟ ಇನ್ನಷ್ಟು ಸುಧಾರಣೆ ಆಗಬೇಕು ಎನ್ನುತ್ತಾರೆ ಗೃಹಿಣಿ ವಿದ್ಯಾ.

ಶಾಲೆಗೆ ಸ್ಥಳಾವಕಾಶದ ಕೊರತೆಯಿದೆ. ಪೀಠೋಪಕರಣ ಇಲ್ಲ. ಆಟದ ಮೈದಾನಕ್ಕೆ ಸ್ಥಳವೇನೋ ಇದೆ. ಅದನ್ನು ಪರಿವರ್ತಿಸಿ ಶಾಲೆಗೊದಗಿಸಬೇಕು ಎನ್ನುತ್ತಾರೆ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೆ. ಚಂದ್ರಶೇಖರಪ್ಪ.

ಸಂಪನ್ಮೂಲ ಹಾಗೂ ಕೊರತೆ, ಸುಖ-ದುಃಖದ ಕೊರಗು ಹಲುವಾಗಲಿನಲ್ಲಿ ಸಾಕಷ್ಟು ಇದೆ. ತನ್ನ ಮಂದಿ ತುಂಗೆಯ ನೀರಿನಲ್ಲಿ ಪ್ರತಿವರ್ಷವೂ ಮುಳುಗುವ ಸಂಕಟ ನೋಡಲಾಗದೇ ಹಲುವಾಗಲು ಹಲುಬುತ್ತಿದೆ. ಊರಿಗೆ ಭರವಸೆಯ ಬೆಳಕು ತುಂಬಿ ಹೇಳಬೇಕಿದೆ ಹಲುಬದಿರು ಹಲುವಾಗಲೇ...

ಗ್ರಾಮ ವಿಶೇಷ
ತುಂಗಭದ್ರಾ ತಟದ ಗ್ರಾಮ
ಸೂತ್ರದ ಗೊಂಬೆಗೆ ಖ್ಯಾತಿ
ಪ್ರವಾಹಪೀಡಿತ ಗ್ರಾಮ
ಎಸ್. ನಿಜಲಿಂಗಪ್ಪ ಹುಟ್ಟೂರು
ಐತಿಹಾಸಿಕ ಹಿನ್ನೆಲೆ
ಏಕೈಕ ಜೈನ ಕುಟುಂಬ
ಕೋಟೆ ಪ್ರದೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT