ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲೋ, ನನಗಿನ್ನೂ 25

Last Updated 3 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ದೀಪಿಕಾ ಪಡುಕೋಣೆ ಕನ್ನಡ ಚಿತ್ರದಲ್ಲಿ ನಟಿಸಿಯೂ ಎಲ್ಲೂ ಅದರ ಪ್ರಸ್ತಾಪ ಮಾಡದೆಯೇ ಬೆಳೆದವರು. ಅವರೀಗ ಥೇಟ್ ಮುಂಬೈನ ನಟಿಯಂತೆಯೇ ಮಾತನಾಡುತ್ತಿದ್ದಾರೆ. ಕೆಲವು ಸಣ್ಣ ಸಣ್ಣ ಪ್ರಶ್ನೆಗಳಿಗೆ ಅವರು ಕೊಟ್ಟಿರುವ ಉತ್ತರಗಳು ಮಜವಾಗಿವೆ. ಈ ಪ್ರಶ್ನೆಗಳು ಯಾರದ್ದೇ ಆಗಬಹುದು. ಉತ್ತರಗಳು ಮಾತ್ರ ಅವರವೇ:

ಹುಡುಗಿಯರಿಗೆ ಮದುವೆ ಎಷ್ಟು ಮುಖ್ಯ?
ಹಲೋ, ನನಗಿನ್ನೂ 25 ವರ್ಷ.

ಹುಡುಗಿಯರು ವಯಸ್ಸನ್ನು ಕಡಿಮೆ ಮಾಡಿ ಹೇಳುತ್ತಾರಲ್ಲವೇ?
ಅಳುಕಿದ್ದವರಷ್ಟೇ ಹಾಗೆ ಹೇಳೋದು.

ಯಾರಿಗಾದರೂ ಸಿದ್ಧಾರ್ಥ ಮಲ್ಯ ಅವರನ್ನು ಪರಿಚಯಿಸಬೇಕಾದರೆ, ಏನೆಂದು ಪರಿಚಯ ಮಾಡಿ ಕೊಡುತ್ತೀರಿ?
ಅವನು ಎಲ್ಲರಿಗೂ ಗೊತ್ತು. ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಅವನು ಜಾಣ, ಬುದ್ಧಿವಂತ.

ದಿನದಲ್ಲಿ ಹೆಚ್ಚು ಗಂಟೆಗಳಿದ್ದರೆ ಒಳ್ಳೆಯದು ಅಂತ ಅನ್ನಿಸಿದೆಯೇ?
ಇಲ್ಲ. ವಾರದಲ್ಲಿ ಹೆಚ್ಚು ದಿನಗಳಿದ್ದರೆ ಒಳ್ಳೆಯದು ಅಂತ ಅನ್ನಿಸಿದೆ.

ಮಕ್ಕಳಾಗಲು ಮದುವೆ ಅನಿವಾರ್ಯವೇ?
ಹಲೋ, ನನಗಿನ್ನೂ 25 ವರ್ಷ.

ನಿಮ್ಮ ಪ್ರಕಾರ ರೊಮ್ಯಾನ್ಸ್ ಅಂದರೇನು?
ನನಗೆ ತೆರೆಮೇಲೆ ತೋರಿಸಲು ನಾಚಿಕೆ ಏನೂ ಇಲ್ಲ.

ಒಳ್ಳೆ ಗಂಡ, ಒಳ್ಳೆ ಸಿನಿಮಾ- ಇದರಲ್ಲಿ ಯಾವುದು ಮುಖ್ಯ?
ನನಗೆ ಸದ್ಯಕ್ಕೆ ಒಳ್ಳೆಯ ಸಿನಿಮಾ ಮುಖ್ಯ. ಗಂಡ ಆಮೇಲೆ ಸಿಕ್ಕೇ ಸಿಗುತ್ತಾನೆ.

ಡೇಟಿಂಗ್‌ಗೆ ಸಿನಿಮೇತರ ವ್ಯಕ್ತಿ ಸೂಕ್ತವೋ, ಸಿನಿಮಾ ನಟರೇ ಸೂಕ್ತವೋ?
ಸಾರಿ, ನನಗೆ ಇದರಲ್ಲಿ ಅಂಥ ಅನುಭವವೇನೂ ಇಲ್ಲ.

ತುಟಿಗೆ ಯಾರಾದರೂ ಮುತ್ತು ಕೊಟ್ಟರೆ ಏನಾಗುತ್ತದೆ?
ನಿಮಗೆಲ್ಲಾ ಏನಾಗುತ್ತದೋ ಅದೇ ಆಗುತ್ತದೆ ಎಂದುಕೊಂಡಿದ್ದೇನೆ. ಬೇರೇನಾದರೂ ಆದರೆ ಖಂಡಿತ ತಿಳಿಸುತ್ತೇನೆ.

ಬಿಡುವಿದ್ದು ಅಂಗಡಿಗೆ ಹೋದರೆ ಏನು ಕೊಳ್ಳುವಿರಿ?
ಚಪ್ಪಲಿ, ಸ್ಯಾಂಡಲ್ಸ್, ಶೂ.

ಅಪ್ಪ-ಅಮ್ಮ ನಿಮ್ಮ ಪ್ರೇಮದ ಸುದ್ದಿಗೆ ಏನಂತಾರೆ?
ನಾನು ಸ್ವತಂತ್ರ ಭಾರತದ ಸ್ವತಂತ್ರ ಹುಡುಗಿ. ಅವರೂ ಸ್ವತಂತ್ರ ಭಾರತದ ಸ್ವತಂತ್ರ ಅಪ್ಪ-ಅಮ್ಮ. ಏನೂ ಅನ್ನುವುದಿಲ್ಲ. ನಾನು ಒಳ್ಳೆಯವಳು ಎಂಬುದು ಅವರಿಗೂ ಗೊತ್ತು.

ಸಿದ್ಧಾರ್ಥ್‌ಗೆ ಯಾವ ಅಡುಗೆ ಮಾಡಿ ಬಡಿಸಿದ್ದೀರಿ?
ನಾನು ಮಾಡಿದ ತಿನಿಸನ್ನು ಬೇರೆಯವರಿಗೆ ಕೊಡುವವಳು ನಾನಲ್ಲ.

ಯಾವ ನಟನ ಜೊತೆ ಅಭಿನಯಿಸುವ ಬಯಕೆ ಇನ್ನೂ ಈಡೇರಿಲ್ಲ?
ಸಲ್ಮಾನ್ ಖಾನ್. ಮೊದಲಿನಿಂದಲೂ ಆ ಅವಕಾಶ ಎಂದಿಗೆ ಬರುವುದೋ ಎಂದು ಕಾತುರದಿಂದ ಇದ್ದೇನೆ.

ನಿಮಗಿರುವ ಕೆಟ್ಟ ಗುಣ ಯಾವುದು?
ಅದನ್ನು ಬೇರೆಯವರು ಹೇಳಬೇಕು. ನಾನು ಹೇಗೆ ಹೇಳಲಿ?

ದಿನಕ್ಕೆ ಎಷ್ಟು ಗಂಟೆ ಮಲಗುತ್ತೀರಿ?
ಸರಾಸರಿ ಐದರಿಂದ ಆರು ಗಂಟೆ. ಅದರ ಬಗ್ಗೆ ನನಗೆ ಬೇಸರವೇನೂ ಇಲ್ಲ.

ಯಾವ ಬ್ರಾಂಡ್ ನಿಮಗೆ ಮೆಚ್ಚು?
ಇದು ನಮ್ಮ ಜಾಹೀರಾತು ಮಾರುಕಟ್ಟೆಗೆ ಏಟು ಕೊಡುವ ಪ್ರಶ್ನೆ. ಹೇಳುವುದಿಲ್ಲ. ನಾನು ಯಾವ ಜಾಹೀರಾತುಗಳಲ್ಲಿದ್ದೇನೋ ಎಲ್ಲವೂ ಮೆಚ್ಚು.

ಮಧುಬಾಲ, ಮೀನಾಕುಮಾರಿ ಈಗ ನಾಯಕಿಯರಾಗಿದ್ದರೆ ನಿಮ್ಮ ರೀತಿ ಅವರೂ
ಬ್ರಾಂಡುಗಳನ್ನು ಮಾರುತ್ತಿದ್ದರೇ?

ಖಂಡಿತ. ಕಾಲಾಯ ತಸ್ಮೈ ನಮಃ. ಸಾಮಾನು ಕೊಳ್ಳಲು ಎಲ್ಲರೂ ಸಂತೆಗೆ ಹೋಗಲೇಬೇಕು.

ನಿಮ್ಮಿಷ್ಟದ ಗಂಡು ಹೇಗಿರಬೇಕು?
ಸೂಪರ‌್ರಾಗಿರಬೇಕು

ಸಿದ್ಧಾರ್ಥ್‌ಗೆ ಎಷ್ಟು ಮಾರ್ಕ್ಸ್ ಕೊಡುವಿರಿ?
ನೆಕ್ಸ್ಟ್ ಕ್ವೆಸ್ಚನ್ ಪ್ಲೀಸ್

ನಿಮ್ಮಲ್ಲಿ ಮಡಿವಂತಿಕೆ ಎನ್ನುವುದೇನಾದರೂ ಇದೆಯೇ?
ಹಾಗಂದರೆ ಏನು?

ಸಾಲುಸಾಲು ಚಿತ್ರಗಳು ಸೋಲುತ್ತಿರುವುದರಿಂದ ಬೇಸರವಾಗುವುದಿಲ್ಲವಾ? ಈ ಸಿನಿಮಾ ಸಹವಾಸ ಇನ್ನೆಷ್ಟು ವರ್ಷ?
ಸೋಲು ನನ್ನದಲ್ಲ. ನಾನು ಚೆನ್ನಾಗಿಯೇ ಅಭಿನಯಿಸುತ್ತಿದ್ದೇನೆ. ಸೋಲನ್ನು ನಾನು ಬೇರೆ ರೀತಿ ಅಳೆಯುತ್ತೇನೆ. ಸಿನಿಮಾ ಚೆನ್ನಾಗಿದ್ದು, ಹಣ ನಿರೀಕ್ಷೆಗೆ ತಕ್ಕಂತೆ ಬರದಿದ್ದರೆ ಅದು ಸೋಲಲ್ಲ. ಸಿನಿಮಾ ಚೆನ್ನಾಗಿಲ್ಲದಿದ್ದರೂ ಹಣ ಬಂದರೆ ಅದು ಗೆಲುವಲ್ಲ. ನಾನು ಗೆಲ್ಲುತ್ತಿದ್ದೇನೆ. ಇಲ್ಲದಿದ್ದರೆ ಇಷ್ಟೊಂದು ಅವಕಾಶ ಸಿಗುತ್ತಲೇ ಇರಲಿಲ್ಲ.

ಅಂದಹಾಗೆ, ನಿಮ್ಮ ಮದುವೆ ಯಾವಾಗ?
ಹಲೋ, ನನಗಿನ್ನೂ 25

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT