ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲೋ: ಮಹಿಳೆ ಯಾವತ್ತೂ ಪರ್ಫೆಕ್ಟ್ ಮ್ಯಾನೇಜರ್

Last Updated 3 ಜೂನ್ 2011, 19:30 IST
ಅಕ್ಷರ ಗಾತ್ರ

ಮ ಹಿಳೆ ಎಂದಾಕ್ಷಣ ಗಂಡ, ಮಕ್ಕಳು ಮನೆ ಇಷ್ಟೇ ಪ್ರಪಂಚ ಎಂದು ಭಾವಿಸುವ ಕಾಲವೊಂದಿತ್ತು. ಆದರೆ, ಕಾಲ ಬದಲಾದಂತೆ ಇಂದು ಆಕೆ ಸ್ಥಾನಮಾನಗಳಲ್ಲೂ ಬದಲಾವಣೆ ಆಗಿದೆ. ಆಕೆ ವಿದ್ಯಾವಂತೆಯಾಗಿರಲಿ ಅಥವಾ ಅವಿದ್ಯಾವಂತೆಯಾಗಿರಲಿ, ಜಾಣ್ಮೆ, ಸಾಧಿಸುವ ಛಲ ಇದ್ದಲ್ಲಿ ಅದ್ಭುತ ಸಾಧನೆಯನ್ನೇ ಮಾಡಬಲ್ಲಳು ಎಂಬುದಕ್ಕೆ ಅನೇಕ ಉದಾಹರಣೆಗಳಿವೆ. ಹಾಗೆಂದಾಕ್ಷಣ ಸಾಧನೆಯ ಹಾದಿಯಲ್ಲಿ ಮಹಿಳೆಗೆ ಸದಾ ಹೂವಿನ ಹಾಸಿಗೆಯೇ ದೊರೆಯುತ್ತದೆ ಎಂದಲ್ಲ. ಅದರಲ್ಲೂ ಆಕೆಯಲ್ಲಿ ತುಸು ಸೌಂದರ್ಯವಿದ್ದರೆ ಆಕೆಯ ಹೆಸರೊಂದಿಗೆ ನಾನಾ ಹೆಸರುಗಳನ್ನು ಜಂಟಿ ಹಾಕಿ, ಆಕೆಯ ಸಾಧನೆಯನ್ನು ನಿರ್ಲಕ್ಷಿಸುವುದು ಪುರುಷ ಪ್ರಧಾನ ಸಮಾಜದ ಅಸಮಾನತೆಯ ಧೋರಣೆಗೆ ಸಾಕ್ಷಿ.

ಇಂಥ ಸವಾಲುಗಳ ನಡುವೆಯೇ ಬದುಕನ್ನು ಹಸನುಗೊಳಿಸಿ, ಶಿಕ್ಷಣ ಮತ್ತು ಪೌಲ್ಟ್ರಿ ಉದ್ಯಮದಲ್ಲಿ ತಮ್ಮದೊಂದು ಛಾಪು ಮೂಡಿಸಿರುವವರು ದಾವಣಗೆರೆಯ ವಿಜಯಲಕ್ಷ್ಮೀ ವೀರಮಾಚನೇನಿ.

ಮೂಲತಃ ಆಂಧ್ರಪ್ರದೇಶದವರಾದ ಅವರು, ಕರ್ನಾಟಕದಲ್ಲೇ ನೆಲೆಸಿ, ಕನ್ನಡಿಗರೇ ಆಗಿದ್ದಾರೆ. ತಾವು ಕಟ್ಟಿರುವ ವಿದ್ಯಾಸಂಸ್ಥೆಯಲ್ಲಿ 100ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ವಸತಿ, ಶಿಕ್ಷಣ ನೀಡುತ್ತಿರುವ ಅವರು, ಮಹಿಳೆಯರ ವ್ಯಕ್ತಿತ್ವ ವಿಕಸನದ ಮಾರ್ಗದರ್ಶಕಿಯೂ ಹೌದು. ಇಂದು ಮಹಿಳಾ ಉದ್ಯಮಿಯಾಗಿ ಸಾಧನೆ ಶಿಖರ ತಲುಪಿರುವ ವಿಜಯಲಕ್ಷ್ಮೀ ತಮ್ಮ ಸುತ್ತಲಿನ ಅನೇಕ ಮಹಿಳೆಯರಿಗೆ ಮಾದರಿಯಾಗಿ, ಚೈತನ್ಯ ತುಂಬುವ ಕೆಲಸದಲ್ಲಿ ತೊಡಗಿದ್ದಾರೆ.  `ಚೇತನಾ ಎಜುಕೇಷನ್ ಟ್ರಸ್ಟ್~ ವಿದ್ಯಾಸಂಸ್ಥೆ ಮತ್ತು ಮೂರು ಪೌಲ್ಟ್ರಿ ಫಾರಂನ ಒಡತಿಯೂ ಆಗಿರುವ ಅವರನ್ನು ಮಾತನಾಡಿಸಿದಾಗ...

ಶಿಕ್ಷಣ ಕ್ಷೇತ್ರದಲ್ಲೇ ಸಾಧನೆ ಮಾಡಬೇಕು ಅನ್ನಿಸಿದ್ದು ಏಕೆ?
- ನನ್ನ ಮಗಳಿಗೆ ಕಾನ್ವೆಂಟ್ ಶಾಲೆಗೆ ಸೇರಿಸಲು ಹೋದಾಗ, ಅಲ್ಲಿ ನನ್ನ ಭಾಷೆ ಮತ್ತು ವಿದ್ಯಾರ್ಹತೆ ಕುರಿತು ಅವಮಾನಿಸಿ, ಮಗಳಿಗೆ ಸೀಟು ನೀಡಲಿಲ್ಲ. ಕೇವಲ 7ನೇ ತರಗತಿಯವರೆಗೆ ಮಾತ್ರ ಓದಿದ್ದ ನನಗೆ ಆ ಅವಮಾನವೇ ವಿದ್ಯಾಸಂಸ್ಥೆಯೊಂದನ್ನು ಸ್ಥಾಪಿಸಲು ಪ್ರೇರೇಪಣೆಯಾಯಿತು. ಮುಂದೆ ಎಸ್ಸೆಸ್ಸೆಲ್ಸಿ ಪಾಸು ಮಾಡಿಕೊಂಡು ಎಂಎ ಸ್ನಾತಕೋತ್ತರ ಪದವಿಯನ್ನೂ ಪೂರೈಸಿದೆ. ಬುದ್ಧಿವಂತ ಮಕ್ಕಳಿಗೆ ಎಲ್ಲಾ ಶಾಲೆಗಳಲ್ಲೂ ಸ್ವಾಗತ. ಆದರೆ, ಕಡಿಮೆ ಬುದ್ಧಿವಂತ ಮಕ್ಕಳಿಗೆ ಎಲ್ಲೆಡೆಯೂ ಅವಮಾನ. ಇದನ್ನು ಮನಗಂಡೇ ಅಂತಹ ಮಕ್ಕಳನ್ನು ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ಮಾಡಬೇಕೆಂದು ಪಣ ತೊಟ್ಟು ವಿದ್ಯಾಸಂಸ್ಥೆ ಆರಂಭಿಸಿದೆ.

ನಿಮ್ಮ ವಿದ್ಯಾಸಂಸ್ಥೆ ಹೇಗೆ ಭಿನ್ನ?
-ನಮ್ಮ ಶಾಲೆಯಲ್ಲಿ ಪರಿಕಲ್ಪನೆ ಆಧಾರಿತ ಶಿಕ್ಷಣ ನೀಡಲಾಗುತ್ತದೆ. ಮಕ್ಕಳ ಮನಸ್ಸನ್ನು ಅರಳಿಸುವಂತಹ ಶಿಕ್ಷಣವೇ ನಮ್ಮ ಗುರಿ. ಮಗುವಿನದು ಅದ್ಭುತ ಸೃಜನಶೀಲ ಮನಸ್ಸು. ಅದಕ್ಕೆ ವೇದಿಕೆ ಒದಗಿಸಿ ಪರಿಪೂರ್ಣ ವ್ಯಕ್ತಿತ್ವ ರೂಪಿಸುವುದೇ ವಿದ್ಯಾಸಂಸ್ಥೆಯ ಉದ್ದೇಶ. ಕಡಿಮೆ ಬುದ್ಧಿಮಟ್ಟದ ವಿದ್ಯಾರ್ಥಿ, ಹೆಚ್ಚು ಬುದ್ಧಿಮಟ್ಟದ ವಿದ್ಯಾರ್ಥಿ ಇಬ್ಬರಲ್ಲೂ ಯಾವುದೇ ಭೇದ-ಭಾವ ತೋರದೇ ಇಬ್ಬರಿಗೂ ಅರ್ಥವಾಗುವಂತಹ ವಿಶೇಷ ಶಿಕ್ಷಣ ನಮ್ಮ ಸಂಸ್ಥೆಯ ವಿಶೇಷ. ಮುಖ್ಯವಾಗಿ ಶಿಕ್ಷಕರು ನಮ್ಮಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡುವುದಿಲ್ಲ. ಬದಲಿಗೆ ತಪ್ಪಾದಾಗ ಪ್ರೀತಿಯಿಂದ ತಿದ್ದಿ ಹೇಳುತ್ತಾರೆ. ಇದರಿಂದ ಮಕ್ಕಳಿಗೆ ಶಿಕ್ಷಣ ಯಾವತ್ತೂ ಹೊರೆ ಅನ್ನಿಸದು.

ಮಹಿಳಾ ಉದ್ಯಮಿಯಾಗಿ ಯಶಸ್ಸು ಗಳಿಸಿದ್ದರ ಬಗ್ಗೆ ಹೇಳಿ?
ಯಾವುದೇ ಕೆಲಸವನ್ನು ಮಹಿಳೆ ಪುರುಷನಷ್ಟೇ ಸಮರ್ಥವಾಗಿ ನಿಭಾಯಿಸಬಲ್ಲಳು. ನಿಜ ಹೇಳಬೇಕೆಂದರೆ, ಪುರುಷ ಏಕಕಾಲಕ್ಕೆ ಒಂದೇ ಕೆಲಸ ಮಾಡಿದರೆ, ಮಹಿಳೆ ಏಕಕಾಲಕ್ಕೆ ಹಲವು ಕೆಲಸಗಳನ್ನು ನಿಭಾಯಿಸುವ ಜಾಣ್ಮೆ ಹೊಂದಿದ್ದಾಳೆ. ಇದು ಆಕೆಗೆ ವರದಾನ. ಶಿಕ್ಷಣ ಸಂಸ್ಥೆ, ಪೌಲ್ಟ್ರಿ ಉದ್ಯಮ ಮಾಡುವಾಗ ಆರಂಭದಲ್ಲಿ ನನಗೆ ಆರ್ಥಿಕವಾಗಿ ತುಸು ತೊಂದರೆ ಉಂಟಾಯಿತು. ಆಗ ಪತಿ ವಿ. ರಾಘವೇಂದ್ರ ಪ್ರಸಾದ್ ನೆರವಿಗೆ ಬಂದರು. ಶಿಕ್ಷಣ ಸಂಸ್ಥೆಯನ್ನು ನಿಭಾಯಿಸಲೆಂದೇ ಪೌಲ್ಟ್ರಿ ಉದ್ಯಮ ಆರಂಭಿಸಿದೆ. ಅದೀಗ ನನ್ನ ಕೈಹಿಡಿದಿದೆ.

ಹೆಣ್ಣಿನ ಯಶಸ್ಸನ್ನು ಸಮಾಜ ಸುಲಭವಾಗಿ ಒಪ್ಪುವುದಿಲ್ಲವಲ್ಲ?
ನಿಜ. ನನಗೆ ಇಂಗ್ಲಿಷ್, ಕನ್ನಡ ಬರಲ್ಲ ಅಂದಿದ್ದಾಯ್ತು. ಪೌಲ್ಟ್ರಿ ಫಾರಂ ಆರಂಭಿಸಿದಾಗ, ಈ ಹೆಣ್ಣುಮಗಳ ಕೈಲಿ ಏನಾಗುತ್ತೇ ಬಿಡು ಎಂದು ವ್ಯಂಗ್ಯವಾಗಿ ಆಡಿಕೊಂಡವರೇ ಹೆಚ್ಚು. ಹಾಗಂತ ನಾನು ನಿರಾಶಳಾಗಲಿಲ್ಲ. ಹೇಗೆ ಕಲ್ಲಿಗೆ ಉಳಿ ಪೆಟ್ಟು ನೀಡದಿದ್ದರೆ ಅದು ಸುಂದರ ಮೂರ್ತಿಯಾಗಿ ರೂಪುಗೊಳ್ಳುವುದ್ಲ್ಲಿಲವೋ ನಾವು ಮನುಷ್ಯರೂ ಅಷ್ಟೇ, ಟೀಕೆ, ನಿಂದನೆ, ಅವಮಾನ ಮಾಡಿದಾಗಲೇ ನಮ್ಮ ನಿಜವಾದ ಸಾಮರ್ಥ್ಯ ಅನಾವರಣಗೊಳ್ಳುತ್ತದೆ. ಮೊದಲು ಯಾವುದಾದರೂ ಒಂದು ಸಮಸ್ಯೆ ಉಂಟಾದರೆ ಬೇಸರವಾಗುತ್ತಿತ್ತು. ಆದರೆ, ಈಗ ಒಂದು ದಿನ ಸಮಸ್ಯೆ ಇಲ್ಲ ಅಂದರೆ, ಬೇಸರ ಅನ್ನಿಸುತ್ತೆ! ನನಗೆ ಎಷ್ಟು ಸಮಸ್ಯೆಗಳು  ಬರುತ್ತವೋ ಅದನ್ನು ಎದುರಿಸಿ, ನನ್ನ ಸಾಮರ್ಥ್ಯ ಕಂಡುಕೊಳ್ಳುವ ಆಸೆ. ಎಷ್ಟು ಕಷ್ಟ ಬರುತ್ತೋ ಅಷ್ಟು ನಾವು ಪರಿಣಿತರಾಗುತ್ತೇವೆ. ಆರಂಭದಲ್ಲಿ ಜನರ ಟೀಕೆ, ನಿಂದನೆ, ಕೆಟ್ಟ ವರ್ತನೆಗಳಿಂದ ಬೇಸರ ಆಗುತ್ತಿತ್ತು. ಆದರೆ, ನನಗಿರುವ ಗುರಿ ಮುಂದೆ ಇದೆಲ್ಲಾ ನಗಣ್ಯ ಅನಿಸ್ತು. ಹಾಗಾಗಿ, ಸಮಸ್ಯೆಯಿಂದ ಹೊರಬಂದು ಗುರಿ ಸೇರಿದೆ. ಮಹಿಳೆ ಎಂದು ಸಮಾಜ ತಮಾಷೆಯಾಗಿ ಇಲ್ಲವೇ ಲಘುವಾಗಿ ಮಾತನಾಡುತ್ತದೆ ಆದರೆ, ಈಗ ಅದಕ್ಕೂ ಉತ್ತರ ನೀಡಲು ನಾನೀಗ ರೆಡಿ. ಅಷ್ಟು ದೃಢವಾಗಿದ್ದೀನಿ. ಆತ್ಮವಿಶ್ವಾಸ ಪಡೆದಿದ್ದೀನಿ. ಎಷ್ಟು ಟೀಕೆ ಬರುತ್ತೇವೋ ಅಷ್ಟು ಒಳ್ಳೆಯದು. ಅದರಿಂದ ಕಲಿಯಲು ನಮಗೆ ಅವಕಾಶ ಸಿಗುತ್ತದೆ ಅಲ್ಲವೇ?

ಮಹಿಳೆಯನ್ನು ಅರ್ಥೈಸುವ ಬಗೆ ನಿಮ್ಮ ದೃಷ್ಟಿಯಲ್ಲಿ?
ಮಹಿಳೆ ಯಾವತ್ತೂ ಪಫೆಕ್ಟ್ ಮ್ಯಾನೇಜರ್. ಚಿಕ್ಕಂದಿನಿಂದಲೇ ತಮ್ಮನನ್ನೋ, ತಂಗಿಯನ್ನೋ ಸಂಭಾಳಿಸುತ್ತಾ ಬೆಳೆಯುವ ನಮಗೆ ಮನೆಯಿಂದ ಹಿಡಿದು ಹೊರಗಿನ ಕೆಲಸದ ತನಕ ಹೇಗೆ ನಿಭಾಯಿಸಬೇಕು (ಮ್ಯಾನೇಜ್) ಎಂಬುದು ಬಾಲ್ಯದಲ್ಲೇ ತರಬೇತಿ ಆಗಿರುತ್ತದೆ. ಹಾಗಾಗಿ, ಮಹಿಳೆಗೆ ಯಾವುದೇ ಕೆಲಸ ಕಷ್ಟವಾಗದು. ದೇಹದ ಉಷ್ಣತೆ ಅಳೆಯಲು ಥರ್ಮಾಮೀಟರ್ ಇದೆ. ಆದರೆ, ಮಹಿಳೆಯ ಸಾಮರ್ಥ್ಯ ಅಳೆಯಲು ಯಾವ ಮೀಟರೂ ಇಲ್ಲ. ಹಲವು ಸಂಕಷ್ಟಗಳ ನಡುವೆಯೇ ಮಹಿಳೆ ಸಾಧನೆ ಮಾಡುವ ಶಕ್ತಿ ಹೊಂದಿದ್ದಾಳೆ. ಅದು ಅವಳಿಗೆ ಸಹಜವಾಗಿ ಒಲಿದು ಬಂದ ಕಲೆ. ಆದರೆ, ಪುರುಷನಿಗೆ ಇದು ಸಾಧ್ಯವಾಗದು. ಹಾಗಾಗಿ, ಸಮಾಜ ಮಹಿಳೆಯನ್ನು ತುಳಿಯಲು ನೋಡುತ್ತದೆ ಅಷ್ಟೇ. ಅದಕ್ಕೆ ಮಹಿಳೆ ತನ್ನೊಳಗಿನ ಶಕ್ತಿ, ಸಾಮರ್ಥ್ಯ ಅರಿತು ಸಾಧನೆ ಮಾಡಬೇಕು. `ತೊಟ್ಟಿಲು ತೂಗುವ ಕೈ, ದೇಶವನ್ನೇ ಆಳಬಲ್ಲದು~ ಎಂಬುದು ನೆನಪಿರಬೇಕಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT