ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ್ಮಿಡಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಕ್ರಮ

Last Updated 6 ಅಕ್ಟೋಬರ್ 2012, 9:35 IST
ಅಕ್ಷರ ಗಾತ್ರ

ಬೇಲೂರು: `ಕನ್ನಡದ ಪ್ರಥಮ ಶಿಲಾ ಶಾಸನ ದೊರೆತ ಹಲ್ಮಿಡಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಮತ್ತು ಪ್ರವಾಸಿ ತಾಣವನ್ನಾಗಿ ಮಾರ್ಪಡಿಸುವ ಬಗ್ಗೆ ಜಿಲ್ಲಾಡಳಿತ ಶೀಘ್ರವೇ ಅಗತ್ಯ ಕ್ರಮಕೈಗೊಳ್ಳಲಿದೆ~ ಎಂದು ಜಿಲ್ಲಾಧಿಕಾರಿಕೆ.ಪಿ.ಮೋಹನ್‌ರಾಜ್ ತಿಳಿಸಿದರು.

ಜಿಲ್ಲಾಧಿಕಾರಿಗಳಾದ ನಂತರ ಹಲ್ಮಿಡಿ ಗ್ರಾಮಕ್ಕೆ ಪ್ರಥಮ ಬಾರಿಗೆ ಭೇಟಿ ನೀಡಿ ಶಿಲಾ ಶಾಸನದ ಪ್ರತಿಕೃತಿ ಮಂಟಪ ವೀಕ್ಷಿಸಿದ ಬಳಿಕ ಮಾತನಾಡಿದರು.

ಕನ್ನಡಿಗರು ಸದಾ ನೆನಪಿನಲ್ಲಿಡಬೇಕಾದ ಹಲ್ಮಿಡಿ ಗ್ರಾಮಕ್ಕೆ ತನ್ನದೇ ಆದ ಮಹತ್ವವಿದೆ. ಈ ಗ್ರಾಮದ ಜನರಿಗೆ ಮೂಲ ಸೌಕರ್ಯ ಕಲ್ಪಿಸುವುದು ಜಿಲ್ಲಾಡಳಿತದ ಕರ್ತವ್ಯ. ರೂ.25 ಲಕ್ಷ ವೆಚ್ಚದಲ್ಲಿ ಕನ್ನಡ ಭವನ ನಿರ್ಮಿಸಲಾಗುತ್ತಿದೆ. ಸುವರ್ಣ ಗ್ರಾಮ ಯೋಜನೆಯಡಿ ಸಮುದಾಯ ಭವನ ನಿರ್ಮಾಣಕ್ಕೆ ನೀಡುವ ರೂ.12 ಲಕ್ಷವನ್ನು ಕನ್ನಡ ಭವನ ನಿರ್ಮಾಣಕ್ಕೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.

ಹಲ್ಮಿಡಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಮನಗಂಡು ತಕ್ಷಣ ಗ್ರಾಮಕ್ಕೆ ಕೊಳವೆ ಬಾವಿ ಕೊರೆಸಲು ಸೂಚಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸುವ ಸಂಬಂಧ ಆರೋಗ್ಯ ಸಚಿವರು ಮತ್ತು ಡಿಎಚ್‌ಒ ಅವರೊಂದಿಗೆ ಚರ್ಚಿಸಲಾಗುವುದು. ಪ್ರವಾಸೋದ್ಯಮ ಇಲಾಖೆ ಮೂಲಕ ಸುಲಭ್ ಶೌಚಾಲಯ ತೆರೆಯಲು ಕ್ರಮ ಕೈಗೊಳ್ಳಲಾಗುವುದು. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಆಯುಕ್ತರೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ವೈ.ಎನ್.ರುದ್ರೇಶ್‌ಗೌಡ ಮಾತನಾಡಿ ಹಲ್ಮಿಡಿಯ ಅಭಿವೃದ್ಧಿಗೆ 1.05 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಸುವರ್ಣ ಗ್ರಾಮ ಯೋಜನೆಯಲ್ಲಿ ರೂ. 40 ಲಕ್ಷ, ಪ್ರತಿಕೃತಿ ಮಂಟಪದ ಮೇಲ್ಛಾವಣಿ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆ ಮೂಲಕ ರೂ.40 ಲಕ್ಷ ಮತ್ತು ಕನ್ನಡ ಭವನ ನಿರ್ಮಾಣಕ್ಕೆ ರೂ.25 ಲಕ್ಷ ಬಿಡುಗಡೆಯಾಗಿದೆ. ಹಲ್ಮಿಡಿಯ ಗ್ರಾಮದ ಅಭಿವೃದ್ಧಿ ಮಾಡುವಂತೆ ವಿಧಾನಸಭೆಯಲ್ಲಿ ಹಲವು ಬಾರಿ ಪ್ರಸ್ತಾಪ ಮಾಡಿದ್ದರೂ, ಸರ್ಕಾರ ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲ ಎಂದರು.


ಶಾಸನದ ಪ್ರತಿಕೃತಿ ಮಂಟಪ ನಿರ್ಮಾಣಕ್ಕೆ ಕಾರಣರಾದ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಚ್.ಬಿ.ಮದನ್‌ಗೌಡ ಮಾತನಾಡಿ, ಹಲ್ಮಿಡಿ ಗ್ರಾಮವನ್ನು ಪ್ರವಾಸಿ ತಾಣವನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರ ವಿಶೇಷ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

ಸಕಲೇಶಪುರ ಉಪ ವಿಭಾಗಾಧಿಕಾರಿ ಶ್ರೀವಿದ್ಯಾ, ತಹಶೀಲ್ದಾರ್ ಎನ್.ಎಸ್.ಚಿದಾನಂದ್, ಸಾಹಿತಿ ಸಂಶೋಧಕ ಡಾ.ಶ್ರೀವತ್ಸ ಎಸ್. ವಟಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಚ್.ಎಲ್.ಜನಾರ್ದನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮೂರ್ತಪ್ಪ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗುರುಸಿದ್ದೇಗೌಡ, ಕಾಂಗ್ರೆಸ್ ಮುಖಂಡ ಬೆಣ್ಣೂರು ಶಂಕರ್ ಇದ್ದರು.

ಪ್ರಥಮ ಬಾರಿಗೆ ಹಲ್ಮಿಡಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮೋಹನ್‌ರಾಜ್ ಅವರನ್ನು ಗ್ರಾಮಸ್ಥರು ಕರಡೆ ವಾದ್ಯದ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು. ಇಡೀ ಗ್ರಾಮವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT