ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ್ಲಿನ ಸೆಟ್ ಬಳಕೆ ಹೇಗೆ?

Last Updated 18 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಊಟ ಮಾಡಲು, ಅದರಲ್ಲೂ ಅಗೆದು ತಿನ್ನಲು ಪ್ರತಿಯೊಬ್ಬರಿಗೂ ಹಲ್ಲು ಬೇಕೇ ಬೇಕು. ಸಣ್ಣ ಮಕ್ಕಳಿಂದ ಹಿಡಿದು ಮುದುಕರ ತನಕವೂ ಬೇಕು. ಅವು ಪ್ರಕೃತಿದತ್ತವಾದುದಾಗಿರಬಹುದು ಅಥವಾ ಕೃತಕವಾಗಿರಬಹುದು. ಯಾವುದೇ ವಯಸ್ಸಿನಲ್ಲಿ ಹಲ್ಲಿಲ್ಲದಿದ್ದರೆ ಅವರು ಪಡಬೇಕಾದ ಕಷ್ಟ ಅಷ್ಟಿಷ್ಟಲ್ಲ. ಕೇವಲ ಆಹಾರ ನೋಡಿ ಜೊಲ್ಲು ಸುರಿಸಬಹುದೇ ಹೊರತು ತಿನ್ನಲಾಗುವುದಿಲ್ಲ.

ಹಲ್ಲು ಉದುರಲು ಹಲವಾರು ಕಾರಣಗಳಿದ್ದರೂ, ಮುಖ್ಯವಾಗಿ ಹುಳುಕಿನಿಂದ, ಅಪಘಾತದಿಂದ, ವಸಡು ರೋಗದಿಂದ ಶೇ 90 ಹಲ್ಲು ಉದುರುತ್ತದೆ. ಇದು ಸಣ್ಣ ವಯಸ್ಸಿನವರಿಗೂ ಅನ್ವಯಿಸುತ್ತದೆ. ಹಲ್ಲಿಲ್ಲದವರಿಗೆ ಹಲ್ಲು ಸೆಟ್ ಇರಲೇಬೇಕು. ಸಾಮಾನ್ಯವಾಗಿ ಬಹಳಷ್ಟು ಜನರು ತಮ್ಮ ಹಲ್ಲು ಅಲ್ಲಾಡುತ್ತಿದ್ದರೂ ಕೀಳಿಸಲು ಬಯಸುವುದಿಲ್ಲ ಮತ್ತು ಹಲ್ಲುಗಳು ತಾವಾಗಿಯೇ ಉದುರಲಿ ಎಂದು ಕಾಯುತ್ತಾರೆ. ದವಡೆಯ ಮೂಳೆ ಸವೆದರೆ ಹಲ್ಲು ಸೆಟ್ ಮಾಡಲಾಗುವುದಿಲ್ಲ. ಆದ್ದರಿಂದ ಈ ರೀತಿ ಎಂದಿಗೂ ಮಾಡಬಾರದು.

ಹಲ್ಲು ಸೆಟ್ ಮಾಡಿಸುವ ಮುನ್ನ

*ನಿಮ್ಮ ತಯಾರಿ ಸದಾ ಮಾಡಿಸುವ ಆಲೋಚನೆಯಲ್ಲಿರಲಿ. ಅಂದರೆ ಕೀಳಿಸಿ ಕೆಲ ವರ್ಷಗಳ ನಂತರವಾಗಲಿ ಮಾಡಿಸಬೇಕೆಂದಿದ್ದರೆ 2 ವರ್ಷಕ್ಕಿಂತ ಹೆಚ್ಚಾಗಿ ಕಾಯದಿರಿ.

*ಕನಿಷ್ಠ 12 ಹಲ್ಲಿಗಿಂತ (ಮೇಲು ಮತ್ತು ಕೆಳದವಡೆ ಸೇರಿ) ಕಡಿಮೆ ಇದ್ದರೆ ಹಲ್ಲು  ಸೆಟ್ ಮಾಡಿಸಲು ಸೂಕ್ತ ಸಮಯವಾಗಿರುತ್ತದೆ. ಅವನ್ನು ಉಳಿಸಿ (ಗಟ್ಟಿ ಇದ್ದಾಗ) ಅದರೊಡನೆ ಕೃತಕ ಪ್ಲೇಟ್ ಮಾಡಿಸಿ.  ಅವು ಅಲ್ಲಾಡುತ್ತಿದ್ದರೆ ಕೀಳಿಸಿ ಸೆಟ್ ಮಾಡಿಸಬೇಕು.

* ಅವೇ ಉದುರಿದಾಗ ಅಕ್ಕ- ಪಕ್ಕದ ಮೂಳೆ ಚೂಪಾಗಿ ಚರ್ಮ: ನಾಲಿಗೆಗೆ ಅದು ಪದೇ - ಪದೇ ತಗಲುತ್ತಿರುತ್ತದೆ. ಅಂತಹವನ್ನು ಸರಿಪಡಿಸಿಕೊಳ್ಳಬೇಕು.

*ನೀವು ಮಧುಮೇಹಿಗಳಾಗಿದ್ದು ಹಲ್ಲಿಲ್ಲದಿದ್ದಾಗ ತಡೆ ಮಾಡದೇ ಸೆಟ್ ಮಾಡಿಸಿ, ಏಕೆಂದರೆ ಇತರರಿಗಿಂತ ಇವರಲ್ಲಿ ಮೂಳೆ ಸವಕಳಿ ಶೇ 40 - 50 ರಷ್ಟು ಹೆಚ್ಚಾಗಿರುತ್ತದೆ.

*ಹಲ್ಲು ಸೆಟ್ ಮಾಡಲು ಅನುಕೂಲವಾಗುವಂತೆ ಪ್ರತಿ ದಿವಸವು ನಿಮ್ಮ ದವಡೆಯ ವಸಡನ್ನು ಮೃದುವಾಗಿ ತೋರು ಬೆರಳಿನಿಂದ 2-5 ನಿಮಿಷ ಮಸಾಜ್ ಮಾಡಬೇಕು. ಇದರಿಂದ ಮೂಳೆಗೆ ಚೆನ್ನಾಗಿ ರಕ್ತ ಸಂಚಾರವಾಗಿ ದೃಢತೆ ಕಳೆದುಕೊಳ್ಳುವುದಿಲ್ಲ.

* ಗಟ್ಟಿಯಾದ ವಸಡು, ದವಡೆ ಮೂಳೆಯ ಅಡಿಪಾಯವೇ ಹಲ್ಲು ಸೆಟ್‌ಗೆ ಬುನಾದಿ ಎಂಬುದನ್ನು ಮರೆಯದಿರಿ.

*ನೀವಾಗಿಯೇ ಎಂದಿಗೂ ಅಲ್ಲಾಡುವ ಹಲ್ಲುಗಳನ್ನು ಕಿತ್ತುಕೊಳ್ಳಬಾರದು. ಇದರಿಂದ ಅಕಾಲ  ಮೂಳೆ ಸವಕಳಿ ಮತ್ತು ಸೋಂಕಿನ ಸಾಧ್ಯತೆ ಇರುತ್ತದೆ.

ಪಾಲಿಸಲೇಬೇಕಾದ ನಿಯಮಗಳು
*ಹಲ್ಲು ಸೆಟ್ ಮಾಡಿಸಿ ಬಳಕೆ ಮಾಡುವಾಗ ಹೊಸದಾಗಿ ಕೆಲದಿನ ವಾರಗಳವರೆಗೆ ನೋವು ಇರುತ್ತದೆ. ಹಾಗೆಂದು ಬಳಸದೇ ಬಿಡಬಾರದು.

*ಹಲ್ಲು ಸೆಟ್ ಮತ್ತು ಬಾಯಿ ಹೊಂದಿಕೊಳ್ಳಲು ಕೆಲ ದಿನಗಳು ಬೇಕಾಗಿರುತ್ತದೆ. ಆದ್ದರಿಂದ ಹೊಸದಾಗಿ ಬಳಸುವಾಗ ಪದೇ - ಪದೇ ಉದುರುವ, ಸಡಿಲವಾಗುವ ಅನುಭವ ಇರುತ್ತದೆ.  ಹಾಗೆಂದು ತಾಳ್ಮೆ ಕಳೆದುಕೊಳ್ಳಬಾರದು.

*ಕೆಲವರಿಗೆ ಹಲ್ಲು ಸೆಟ್‌ಗೆ ಹೊಂದಿಕೊಳ್ಳಲು 1-2 ತಿಂಗಳು ಹಿಡಿಯಬಹುದು. ಅದರಿಂದ ಬೇಜಾರಾಗದೇ ಬಳಸಿ.

ಸಣ್ಣ ಪುಟ್ಟ ಬದಲಾವಣೆ ದಂತ ವೈದ್ಯರಿಂದ ಮಾಡಿಸಿರಿ.

* ಬಳಸುವಾಗ, ತಿನ್ನುವಾಗ, ಕೆಮ್ಮು, ಸೀನುವಾಗ ಆಗಾಗ ಉದುರುವ ಸಾಧ್ಯತೆ ಇರುತ್ತದೆ. ಇದು ಬಳಕೆಯ ಬಗ್ಗೆ ಅನುಭವ ಕೊರತೆಯಿಂದಾಗಿರುತ್ತದೆ, ಬರುಬರುತ್ತಾ ರೂಢಿಯಾಗುತ್ತದೆ.

*ದಿನಾಲೂ ಸ್ವಚ್ಛವಾದ ತಣ್ಣೀರಿನಿಂದ (ತಣ್ಣಗಿನ ನೀರಿನಲ್ಲಿ) ಸೋಪು, ಬ್ರಷ್‌ನಿಂದ ತೊಳೆಯಬೇಕು, ತೊಳೆಯಲು ಬಿಸಿನೀರು ಬಳಸಬಾರದು. ಸೆಟ್ ಕುದಿಸಬಾರದು.

*ಹಲ್ಲು ಸೆಟ್ ಮಕ್ಕಳ ಕೈಗೆ ಕೊಡಬಾರದು.

*ದೋಷಪೂರಿತ ಮುರಿದ ಹಲ್ಲು ಸೆಟ್ ಬಳಸದಿರಿ.

*ರಾತ್ರಿಯ ವೇಳೆ ಧರಿಸಿ ಮಲಗಬಾರದು. ಬಳಸದಿರುವಾಗ ಹಲ್ಲು ಸೆಟ್‌ಅನ್ನು ನೀರಿನ ಡಬ್ಬಿಯಲ್ಲಿ ಹಾಕಿಡಬೇಕು. ರಾತ್ರಿಯ ವೇಳೆ ಹಾಕಿಕೊಂಡು ಮಲಗಿದರೆ ಮೂಳೆ ಬಹು ಬೇಗನೆ ಸವೆಯುತ್ತದೆ. ಸೆಟ್ ಸಡಿಲವಾಗುತ್ತದೆ.

* ಅಡಿಕೆ ಚೂರು ಮತ್ತು ಬಹಳ ಗಟ್ಟಿ ಪದಾರ್ಥ ಬಾಯಿ ಹೊರಗೆ ಚೂರಾಗಿ ಮಾಡಿಕೊಂಡು ಬಾಯಿಯೊಳಗೆ ಜಗಿಯಬೇಕೆ ಹೊರತು ಒಮ್ಮೆಗೆ ಗಟ್ಟಿ ಪದಾರ್ಥ ಜಗಿಯಬಾರದು. (ರೊಟ್ಟಿ, ಬಿಕ್ಕೆಹಣ್ಣು, ಮೆಕ್ಕೆಜೋಳ ಇವಕ್ಕೆಲ್ಲಾ ತೊಂದರೆ ಇಲ್ಲ.) ಹಲ್ಲು ಸೆಟ್‌ಅನ್ನು ಪ್ರತಿ 5-6 ವರ್ಷಕ್ಕೊಮ್ಮೆ ಬದಲಾಯಿಸಿಕೊಳ್ಳಿ ಏಕೆಂದರೆ ದವಡೆ ಮೂಳೆಯ  ಆಕಾರದಲ್ಲಿ ವ್ಯತ್ಯಾಸವಾಗಿರುತ್ತದೆ. ನಿಮ್ಮ ಸೆಟ್‌ನ ಹಲ್ಲುಗಳು ಕರಗಿರುತ್ತದೆ, ಜೊತೆಗೆ ಸಡಿಲವಾಗಿರುತ್ತದೆ. ಪುನಃ ಹೊಸ ಆಕಾರಕ್ಕೆ ತಕ್ಕಂತೆ ಸೆಟ್ ಹೊಸದಾಗಿ ಮಾಡಿಸಿದರೊಳಿತು. ಹಳೆಯ ಮತ್ತು ಕರಗಿದ ಹಲ್ಲುಗಳೊಂದಿಗಿರುವ ಸೆಟ್ ಬಳಕೆ ಮಾಡದಿರಿ. ಇದರಿಂದ ವ್ಯತ್ಯಾಸದ ಜಗಿತವಾಗುತ್ತದೆ. ಆದ್ದರಿಂದ ಹಲ್ಲು ಸೆಟ್‌ನ ಬಳಕೆ ನಿಮ್ಮ ಮುಖ್ಯ ಹೊಣೆಯಾಗಿದ್ದರೆ ಸಾಲದು, ಅದನ್ನು ಸುರಕ್ಷಿತವಾಗಿ, ಸ್ವಚ್ಛವಾಗಿ, ಜಾಗ್ರತೆಯಾಗಿ ಬಳಸಿದಾಗ ಮಾತ್ರ ಅದರ ಆಯಸ್ಸು ದೀರ್ಘಾವಧಿಯಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT