ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ್ಲು ಮಾರಿದ್ರೆ ಎಷ್ಟು ದುಡ್ಡು ಸಿಗುತ್ತೆ ಸಾರ್?

Last Updated 20 ಜುಲೈ 2012, 19:30 IST
ಅಕ್ಷರ ಗಾತ್ರ

ವೃತ್ತಿ ಪ್ರಾರಂಭಿಸಿದ ಮೊದಲ ವರ್ಷ. ಒಂದು ಬೆಳಿಗ್ಗೆ ಕ್ಲಿನಿಕ್‌ಗೆ ಬಂದೆ. ಹಲ್ಲಿನ ಸಮಸ್ಯೆ ಇದ್ದ 6 ವರ್ಷದ ಮಗುವೊಂದನ್ನು ಅವನ ಅಜ್ಜಿ ಕರೆತಂದಿದ್ದರು. ಅಜ್ಜಿ ಹಲ್ಲಿನ ಸಮಸ್ಯೆ ವಿವರಿಸುತ್ತಿದ್ದ ರೀತಿಯಿಂದಲೇ `ಈ ಡಾಕ್ಟರು ನನಗೇನು ಮಾಡಿಬಿಡುವರೋ~ ಎಂದು ಹೆದರಿಹೋದ ಮಗು `ಏನಪ್ಪಾ ಪುಟ್ಟ ನಿನ್ನ ಹೆಸರು~ ಎಂದು ನಾನು ಕೇಳುತ್ತಿದ್ದಂತೆಯೇ ಜೋರಾಗಿ ಅಳಲು ಶುರು ಮಾಡಿತು. ನಾನು ಸಮಾಧಾನ ಪಡಿಸಿದರೂ ಸುಮ್ಮನಾಗದೆ ಒಳಗೆ ಬರಲು ಕೂಡ ಹೆದರಿ ಹೊರಗೋಡಲು ಪ್ರಯತ್ನಿಸಿತು. ಪಾಪ ಅಜ್ಜಿ ಕಷ್ಟಪಟ್ಟು ಹಿಡಿದರೂ ತಪ್ಪಿಸಿಕೊಂಡು ಕ್ಲಿನಿಕ್ಕಿನಿಂದ ಕೆಳಗಿಳಿದು ಓಡತೊಡಗಿತು.

ಮುಖ್ಯ ರಸ್ತೆಯಲ್ಲೇ ಇರುವ ನಮ್ಮ ಕ್ಲಿನಿಕ್ಕಿನ ಹೊರಭಾಗದಲ್ಲಿ ಆಟೊ ನಿಲ್ದಾಣ, ಬಸ್ ನಿಲ್ದಾಣ ಇದ್ದು ಜನಜಂಗುಳಿಯಿಂದ ಕೂಡಿರುತ್ತದೆ. ಅದರ ನಡುವೆಯೇ ಈ ಮಗು ಪಿ.ಟಿ.ಉಷಾ ರೀತಿಯಲ್ಲಿ ಕೆಲವೇ ನಿಮಿಷಗಳಲ್ಲಿ ಬಹುದೂರ ಓಡಿತು. ಯಾವುದಾದರೂ ವಾಹನ ಮಗುವಿಗೆ ಡಿಕ್ಕಿ ಹೊಡೆದುಬಿಟ್ಟರೆ ಎಂದು ಗಾಬರಿಗೊಂಡ ಅಜ್ಜಿಯೂ ಅದರ ಹಿಂದೆಯೇ `ಅಯ್ಯೋ ನಮ್ಮ ಮಗೂನ ಯಾರಾದ್ರೂ ಹಿಡ್ಕೊಳ್ಳಿ~ ಎಂದು ಕೂಗುತ್ತಾ ಓಡತೊಡಗಿತು. ಏನಾಯಿತೋ ಏನೋ ಎಂದು ಗಾಬರಿಗೊಂಡ ನಾಲ್ಕಾರು ಮಂದಿ ಆ ಮಗುವಿನ ಹಿಂದೆಯೇ ಓಡತೊಡಗಿದರು. ನಾನು ಕ್ಲಿನಿಕ್ಕಿನ ಹೊರಭಾಗದಲ್ಲಿ ನಿಂತು ಇದೆಲ್ಲವನ್ನೂ ನೋಡುತ್ತಾ ಇದ್ದೆ.

ಕೊನೆಗೆ ಆಟೊ ಡ್ರೈವರ್‌ಗಳು, ಹಮಾಲಿಗಳು, ತಳ್ಳುಗಾಡಿಯವರು ಎಲ್ಲರೂ ಮೊದಲು ಓಡುತ್ತಿದ್ದವರೊಟ್ಟಿಗೆ ಸೇರಿಕೊಂಡು ಅಲ್ಲಿ ಒಂದು ಗುಂಪೇ ಸೃಷ್ಟಿಯಾಗಿಹೋಯಿತು. 300-350 ಮೀಟರ್ ಓಡಿದ್ದ ಬಾಲಕನನ್ನು ಎಲ್ಲರೂ ಸೇರಿ ಹಿಡಿದು, ಮೆರವಣಿಗೆಯ ರೀತಿಯಲ್ಲಿ ಹೊತ್ತುಕೊಂಡು ಬಂದು, ಗಾಬರಿಯಿಂದ ನಿಂತಿದ್ದ ಅಜ್ಜಿಗೆ ಒಪ್ಪಿಸಿದರು. ಅಂತೂ ಇಂತೂ ಬಾಲಕನನ್ನು ಒಳಗೆ ಕರೆತಂದು ಹಲ್ಲು ಕಿತ್ತದ್ದಾಯಿತು.

ಆದರೆ ಅಚ್ಚರಿಯ ಸಂಗತಿಯೆಂದರೆ, ಅಷ್ಟೆಲ್ಲಾ ರಂಪ ಮಾಡಿದ್ದ ಆ ಹುಡುಗ ನಂತರ ಮಾತ್ರ ಸ್ವಲ್ಪವೂ ಅಳಲೇ ಇಲ್ಲ. ಅವನನ್ನು ಹಿಡಿದುತಂದ ಆ ಜನ, ಹಲ್ಲು ಕೀಳುವವರೆಗೂ ಕ್ಲಿನಿಕ್ಕಿನ ಹೊರಗೆ ನಿಂತೇ ಇದ್ದರು. ನಂತರ ಮಗುವಿಗೆ ಬೈಯ್ದು, ಅಜ್ಜಿಯನ್ನು ಸಮಾಧಾನಪಡಿಸಿ ಹಿಂದಿರುಗಿದರು. ಆ ಘಟನೆ ನಡೆದು ಎರಡು ಮೂರು ದಿನಗಳಾದರೂ ದಾರಿಯಲ್ಲಿ ಜನ ನನ್ನನ್ನು ಆ ಬಗ್ಗೆ ವಿಚಾರಿಸುವುದು ಮಾತ್ರ ತಪ್ಪಲಿಲ್ಲ.

* * *
45 ವರ್ಷದ ವ್ಯಕ್ತಿಯೊಬ್ಬ ತನ್ನ ಸಡಿಲಗೊಂಡ ಹಲ್ಲನ್ನು ಸರಿಪಡಿಸಿಕೊಡುವಂತೆ ಕೇಳಲು ಬಂದಿದ್ದ. ನಾನು ಚಿಕಿತ್ಸೆ ಬಗ್ಗೆ ವಿವರಿಸಿ `ಆ ಹಲ್ಲನ್ನು ತೆಗೆಯದೇ ವಿಧಿಯಿಲ್ಲ~ ಎಂದೆ. `ಸರಿ ಸಾರ್ ನಾನು ಎರಡು- ಮೂರು ದಿನ ಬಿಟ್ಟು ಬರ‌್ತೀನಿ~ ಎಂದು ಹೇಳಿ ಹೊರಟುಹೋದ. ಮೂರ‌್ನಾಲ್ಕು ದಿನಗಳ ನಂತರ ಬಂದವನು `ಸಾರ್, ಬೆಳಿಗ್ಗೆ ಹಲ್ಲುಜ್ಜುವಾಗ ಆ ಹಲ್ಲು ಉದುರಿಹೋಯ್ತು.

ಮುಂದೆ ಹೇಗೆ ಸಾರ್~ ಎಂದ. ನಾನು `ಸರಿ ಈಗ ಹಲ್ಲು ಕಟ್ಟಿಸಿಕೊಳ್ಳಿ~ ಎಂದು ಹೇಳಿ ಕೃತಕ ಹಲ್ಲುಗಳ ಬಗ್ಗೆ ವಿವರಿಸಿದೆ. ಅದಕ್ಕೆ ಆತ `ಉದುರಿಹೋದ ನನ್ನ ಹಲ್ಲನ್ನೇ ಮತ್ತೆ ಫಿಕ್ಸ್ ಮಾಡಲು ಬರುವುದಿಲ್ಲವೇ?~ ಎಂದು ಕೇಳಿದ. `ಇಲ್ಲ, ಒಮ್ಮೆ ಉದುರಿದ ಹಲ್ಲನ್ನ ಬಿಸಾಡಬೇಕಷ್ಟೆ~ ಎಂದೆ. `ಸಾರ್ ಈ ಹಲ್ಲು ಕೂಡಿಸಿದ್ರೆ ಮಾತ್ರ ನಿಮ್ಮ ಬುದ್ಧಿವಂತಿಕೇನ ಮೆಚ್‌ತೀನಿ ನೋಡಿ~ ಎಂದ.

ನಾನು `ಹಾಗೆಲ್ಲಾ ಮಾಡಲಾಗದು~ ಎಂದೆ. ವಾಪಸ್ ಹೋದ ಅವನು ನಾಲ್ಕೈದು ದಂತ ವೈದ್ಯರನ್ನು ಕಂಡು, ವಾರದ ನಂತರ ಮತ್ತೆ ಬಂದ. `ಸಾರ್ ನೀವು ಹೇಳಿದ್ದು ಸರಿ. ಈ ಹಲ್ಲು ಬಿಸಾಡ್‌ಬೇಕಂತೆ, ನನ್‌ಗಂತೂ ತುಂಬಾ ಬೇಜಾರಾಗ್ತಿದೆ. ಇಷ್ಟು ವರ್ಷ ನನ್ ಜೊತೆಗೇ ಇದ್ದ ಈ ಹಲ್ಲನ್ನ ಬಿಸಾಡಕ್ಕೆ ಮನಸ್ಸೇ ಆಗ್ತಿಲ್ಲ~ ಎಂದ. ಬರೀ ಹೇಳಿದ್ದಷ್ಟೇ ಅಲ್ಲ, ಇಂದಿಗೂ ಅವನು ಆ ಹಲ್ಲನ್ನ ಜೋಪಾನವಾಗಿ ಮನೆಯಲ್ಲೇ ಇಟ್ಟುಕೊಂಡಿದ್ದಾನಂತೆ!

* * *
ಬೆಳಿಗ್ಗೆ 10ರ ಸಮಯ. 50 ವರ್ಷದ ವ್ಯಕ್ತಿಯೊಬ್ಬರು ಬಂದು `ಸಾರ್ ಒಂದು ವಾರದಿಂದ ಹಲ್ಲು ಅಲ್ಲಾಡ್ತಾ ಇತ್ತು. ಬೆಳಿಗ್ಗೆ ಉದುರಿಹೋಯ್ತು, ತಂದಿದ್ದೀನಿ ತಗೊಳ್ರಿ~ ಎಂದು ಕೊಡಲು ಮುಂದಾದರು. `ನಾನು ಅದನ್ನ ತಗೊಂಡು ಏನ್ಮಾಡ್ಲಿ, ಬಿಸಾಕ್ರಿ~ ಎಂದೆ. ಅದಕ್ಕೆ ಅವರು `ಏನ್ ಸಾರ್ ಹೀಗ್ ಹೇಳ್ತೀರಾ, ಇಂಥ ಅಮೂಲ್ಯವಾದ ಹಲ್ಲನ್ನ ಬಿಸಾಡೋದೇ? ಯಾರಾದ್ರೂ ಪೇಷೆಂಟ್ಸ್‌ಗೆ ಹಾಕ್ರಿ ಸಾರ್, ದುಡ್ಡು ನೀವೇ ಇಟ್ಕೊಳ್ರಿ ನಂಗೇನೂ ಬೇಡ~ ಎಂದು ಧಾರಾಳತನ ತೋರಿದರು!

* * *
35 ವರ್ಷದವನೊಬ್ಬನ ಹಲ್ಲು ಪೂರ್ತಿ ಹುಳುಕಾಗಿ ಕೊಳೆತು ಹೋಗಿತ್ತು. ರೂಟ್‌ಕೆನಾಲ್ ಮಾಡಲಾಗದು, ಹಲ್ಲು ತೆಗೆಸಲೇಬೇಕು ಎಂದೆ. ಅದಕ್ಕೆ ಆತ `ಸಾರ್ ಹಲ್ಲು ತೆಗೆಸಿದ್ರೆ ಹೊಸ ಹಲ್ಲು ಹುಟ್ಟುತ್ತಾ?~ ಎಂದ. `ಪ್ರೌಢ ವಯಸ್ಕರ ಹಲ್ಲು ತೆಗೆದರೆ ಹುಟ್ಟಲ್ಲ~ ಎಂದೆ. ಅವನು `ಸಾರ್ ತೆಗೆಯೋದ್ ಗೊತ್ತಿರೋರಿಗೆ ಹುಟ್ಟಿಸೋದೂ ಗೊತ್ತಿರ್‌ಬೇಕು. ಸರಿ ಹಾಗಾದ್ರೆ ಹಲ್ಲು ಹುಟ್ಟಕ್ಕೆ ಏನಾದ್ರೂ ಇಂಜೆಕ್ಷನ್, ಮಾತ್ರೆ ಕೊಡಿ ಸಾರ್, ಇಲ್ಲ ನೀವೇ ಏನಾದ್ರೂ ಕಂಡುಹಿಡೀರಿ, ನಮ್ಮಂತವ್ರಿಗೆ ಬಾಳ ಅನುಕೂಲ ಆಗುತ್ತೆ~ ಅಂದ.

* * *
ಒಮ್ಮೆ ಒಬ್ಬ ವ್ಯಕ್ತಿ `ಸಾರ್ ನಮ್ ಹಲ್ಲು ತೆಗೆಸ್‌ಕೊಂಡು ನಿಮ್ಗೆ ನಾವೇ ದುಡ್ಡು ಕೊಡ್‌ಬೇಕಾ? ಅದ್ರ ಬದ್ಲು ನೀವೇ ನಮ್ಗೆ ಏನಾದ್ರೂ ಕೊಡ್‌ಬೇಕು. ಪ್ರತಿ ದಿನ ಎಷ್ಟೊಂದು ಜನರ ಹಲ್ಲು ತೆಗೀತೀರಾ, ಎಲ್ಲಾ ಸೇರಿಸಿ ಮಾರಿದ್ರೆ ಎಷ್ಟೊಂದು ದುಡ್ಡು ಸಾರ್ ನಿಮ್ಗೆ~ ಎನ್ನಬೇಕೇ.
 


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT