ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಗನ್ನಡ ಸಾಹಿತ್ಯ ತಾಯಿ ಬೇರು ಇದ್ದಂತೆ

Last Updated 12 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಹಳಗನ್ನಡ ಸಾಹಿತ್ಯ ತಾಯಿ ಬೇರು ಇದ್ದಂತೆ. ಆ ತಾಯಿ ಬೇರು ಒಣಗದೇ ಇದ್ದರೆ ಮಾತ್ರ ಕನ್ನಡ ಸಾಹಿತ್ಯ ಜೀವಂತವಾಗಿರುತ್ತದೆ’ ಎಂದು ಹಿರಿಯ ಸಾಹಿತಿ ನಾಡೋಜ ಹಂಪ ನಾಗರಾಜಯ್ಯ ನುಡಿದರು. ‘ಧರ್ಮ ಮತ್ತು ಕಾವ್ಯ ಧರ್ಮ’ ಕುರಿತು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ ಹಾಗೂ ಶ್ರುತ ಸಂವರ್ಧನ ಸಂಸ್ಥಾನ ಜಂಟಿಯಾಗಿ ಏರ್ಪಡಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಮಕ್ಕಳ ಗಾಯನ ಕಾರ್ಯಕ್ರಮಗಳಲ್ಲಿ ಚಿತ್ರಗೀತೆ, ಭಾವಗೀತೆಗಳ ಜತೆ ಹಳಗನ್ನಡದ ಪದ್ಯಗಳನ್ನು ಕಡ್ಡಾಯವಾಗಿ ಹಾಡಿಸಬೇಕು. ಆ ಮೂಲಕ ಹಳಗನ್ನಡದ ಸತ್ವ ಮತ್ತು ಸೌಂದರ್ಯ ವನ್ನು ಜನರು ಆಸ್ವಾದಿಸುವಂತೆ ಮಾಡಬೇಕು’ ಎಂದು  ಸಲಹೆ ನೀಡಿದರು.‘ಕನ್ನಡ ಸಾಹಿತ್ಯಕ್ಕೆ ಭಾರತೀಯ ಸಾಹಿತ್ಯದಲ್ಲೇ ವಿಶಿಷ್ಟ ಸ್ಥಾನವಿದೆ. ಪ್ರಾಚೀನ ಕವಿಗಳು ಬಿಟ್ಟು ಹೋಗಿರುವ ಕಾವ್ಯ ಸಂಪತ್ತನ್ನು ದಕ್ಕಿಸಿಕೊಂಡು ಹೊಸ ಕಾಲಕ್ಕೆ ದಾಟಿಸುವ ಕಾರ್ಯವನ್ನು ನಾವು ಮಾಡಬೇಕಿದೆ’ ಎಂದು ಅವರು ನುಡಿದರು.

ಸಮಾರೋಪ ಭಾಷಣ ಮಾಡಿದ ಕವಿ ಡಾ.ಎಸ್.ಜಿ.ಸಿದ್ಧರಾಮಯ್ಯ, ‘ಆತ್ಮ ನಿರೀಕ್ಷೆ ಎಂಬುದು ಕವಿಯಾದವನ ಮುಖ್ಯ ಗುಣ. ಸ್ವವಿಮರ್ಶೆ, ಸ್ವ  ಜಾತಿ ಮತ್ತು ಧರ್ಮದ ವಿಮರ್ಶೆ ಮಾಡಿಕೊಳ್ಳದ ಸಾಹಿತಿಯಿಂದ ಶ್ರೇಷ್ಠ ಸಾಹಿತ್ಯ ರಚನೆಯಾಗುವುದಿಲ್ಲ’ ಎಂದರು. ‘ಕನ್ನಡ ಪರಂಪರೆಯೊಳಗೆ ಪಂಪ, ಜನ್ನ ಮೊದಲಾದವರು ಸ್ವ ವಿಮರ್ಶೆಯ ಮಾರ್ಗವನ್ನು ಹಾಕಿಕೊಟ್ಟಿದ್ದಾರೆ. ಕುವೆಂಪು, ಲಂಕೇಶರು ತಮ್ಮ ಕೃತಿಗಳಲ್ಲಿ ಸ್ವಜಾತಿಯವರ ವರ್ತನೆ, ಧೋರಣೆಗಳನ್ನು ವಿಮರ್ಶಾತ್ಮಕವಾಗಿ ಚಿತ್ರಿಸುವ ಮೂಲಕ ಆ ಪರಂಪರೆಯನ್ನು ಮುಂದುವರೆಸಿದ್ದಾರೆ’ ಎಂದು ಅವರು ವಿಶ್ಲೇಷಿಸಿದರು.

ಕಥೆಗಾರ ಬೋಳುವಾರು ಮಹಮ್ಮದ್ ಕುಞಿ ಅವರ ‘ಒಂದು ತುಂಡು ಗೋಡೆ’ ಕಥೆಯನ್ನು ಉಲ್ಲೇಖಿಸಿದ ಅವರು, ‘ಈ ಸಣ್ಣ ಕಥೆಯಲ್ಲಿ ಮಾನವೀಯ ತುಡಿತದೊಂದಿಗೆ ಸ್ವ ಧರ್ಮದ ವಿಮರ್ಶೆ ಇದೆ. ಅದೇ ಕಾದಂಬರಿಕಾರ ಎಸ್.ಎಲ್.ಭೈರಪ್ಪ ನವರ ಕಾದಂಬರಿ ‘ಅನಾವರಣ’ದಲ್ಲಿ ಸ್ವ ಧರ್ಮ ಪ್ರಶಂಸೆ, ಅನ್ಯಧರ್ಮ ನಿಂದನೆ ಇದೆ’ ಎಂದರು. ಡಾ.ಎಚ್.ಶಶಿಕಲಾ, ಕೇಂದ್ರದ ನಿರ್ದೇಶಕ ಡಾ. ಬಿ.ಗಂಗಾಧರ ಉಪಸ್ಥಿತದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT