ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳತರ ಹೊಸ ಮೆರವಣಿಗೆ

Last Updated 16 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮುಂಜಾನೆಯ ಚುಮು ಚುಮು ಚಳಿಯಲ್ಲೂ ಅಂದು ಫೋರಂ ಮಾಲ್‌ನಲ್ಲಿ ಜನ ಜಮಾಯಿಸಿದ್ದರು. ಎಲ್ಲರ ಆಕರ್ಷಣೆಯ ಬಿಂದುವಾಗಿದ್ದು ಹಳೆ ಮಾದರಿಯ ಕಾರುಗಳು ಮತ್ತು ಸ್ಕೂಟರ್‌ಗಳು. ಕರ್ನಾಟಕ ವಿಂಟೇಜ್‌ ಕ್ಲಾಸಿಕ್‌ ಕಾರ್‌ ಕ್ಲಬ್‌ ಹಾಗೂ ಬೆಂಗಳೂರು ಕ್ಲಾಸಿಕ್‌ ಸ್ಕೂಟರ್‌ ಕ್ಲಬ್‌ಗಳ ಸಹಯೋಗದೊಂದಿಗೆ ಕೋರಮಂಗದಲ್ಲಿರುವ ಫೋರಂ ಮಾಲ್‌ನಲ್ಲಿ ‘ಜಾಯ್‌ರೈಡ್‌’ ರ್‍ಯಾಲಿ ಆಯೋಜಿಸಲಾಗಿತ್ತು.

ಈ ರ್‍ಯಾಲಿಯಲ್ಲಿ ಶ್ರೀನಿಧಿ ಚಾರಿಟಬಲ್‌ ಹಾಗೂ ಎಜುಕೇಷನ್‌ ಟ್ರಸ್ಟ್‌ನ ಮಕ್ಕಳ ಖುಷಿಗಾಗಿ ಮಾಲ್‌ನಿಂದ ಇಂದಿರಾನಗರದ 100 ಅಡಿ ರಸ್ತೆವರೆಗೆ ರ್‍ಯಾಲಿ ನಡೆದಿತ್ತು. ಉದ್ದ ಮೂತಿಯ ಕಾರು, ಚಪ್ಪಟೆಯಂತಿರುವ ಮತ್ತೊಂದು ಕಾರು, ದಡೂತಿಯಂತಿರುವ ಕಾರುಗಳು ಅಲ್ಲಿ ರೂಪದರ್ಶಿಗಳಂತೆ ಸಾಲಾಗಿ ನಿಂತಿದ್ದವು.

ಅವುಗಳ ಕುತ್ತಿಗೆಯ ಪಟ್ಟಿಯಲ್ಲಿ ಒಂದು, ಎರಡು ಎಂಬ ಸಂಖ್ಯೆಯ ಪಟ್ಟಿಗಳೂ ನೇತಾಡುತ್ತಿದ್ದವು. ಕಾರಿನ ಮುಂಭಾಗದ ತುದಿಗೆ ಕಟ್ಟಿರುವ ಬಲೂನ್‌ಗಳು ಗಾಳಿ ಬಂದಾಗಲೊಮ್ಮೆ ಆಚೆ ಈಚೆ ಖುಷಿಯಿಂದ ಕುಣಿಯುತ್ತಿದ್ದವು. ಗಾತ್ರ ಚಿಕ್ಕದಾದರೂ ತಾವೇನೂ ಕಡಿಮೆ ಇಲ್ಲ; ತಮಗೂ ಒಂದಿಷ್ಟು ವರ್ಷಗಳ ಇತಿಹಾಸವಿದೆ ಎಂಬಂತೆ ಅಲ್ಲಿ ಬೀಗುತ್ತಿದ್ದವು.

ಮಾಲ್‌ಗೆ ಬಂದ ಜನರು ಒಳಗೆ ಹೋಗುವುದನ್ನು ಮರೆತು ಈ ಕಾರು, ಸ್ಕೂಟರ್‌ಗಳ ಸೌಂದರ್ಯ ಸವಿಯುವುದರಲ್ಲಿ ತಲ್ಲೀನರಾಗಿದ್ದರು. ಮೊಬೈಲ್‌ನಲ್ಲಿ ಅವರಿಷ್ಟದ ಕಾರುಗಳ ಫೋಟೊ ಕ್ಲಿಕ್ಕಿಸುವುದರ ಜತೆಗೆ ಅವುಗಳ ಮುಂದೆ ನಿಂತು ತಾವೇ ಆ ಗಾಡಿಯ ಮಾಲೀಕರಂತೆ ಪೋಸು ನೀಡುತ್ತಿದ್ದರು. ‘ಇಲ್ಲಿ ರ್‍ಯಾಲಿ ಇದೆ ಎಂದು ನನಗೆ ತಿಳಿದಿರಲಿಲ್ಲ.

ಬ್ರೇಕ್‌ಫಾಸ್ಟ್‌ಗೆಂದು ಮ್ಯಾಕ್‌ಡೊನಾಲ್ಡ್‌ಗೆ ಬಂದಿದ್ದೆ. ಸಾಲಾಗಿ ನಿಂತ ಕಾರುಗಳನ್ನು ನೋಡಿ ಆಶ್ಚರ್ಯವಾಗಿತ್ತು. ನಗರದ ಜನರ ಈ ಹವ್ಯಾಸ ನನಗೆ ತುಂಬಾ ಹಿಡಿಸಿದೆ. ಇಷ್ಟೊಂದು ಹಳೆಯ ಕಾರುಗಳನ್ನು ಒಂದೇ ಕಡೆ ನೋಡಿದ್ದರಿಂದ ಖುಷಿಯಾಗುತ್ತಿದೆ. ಇವನ್ನು ನೋಡಿದರೆ ರಾಯಲ್‌ ಕುಟುಂಬದವರ ಕಾರುಗಳು ಎನಿಸುತ್ತವೆ. ಬಣ್ಣದ ಸ್ಕೂಟರ್‌ ನನಗೆ ತುಂಬಾ ಇಷ್ಟವಾಗಿದೆ. ಅವಕಾಶ ಸಿಕ್ಕರೆ ನಾನೂ ಈ ಕಾರಿನಲ್ಲಿ ಕುಳಿತು ರ್‍ಯಾಲಿ ಹೋಗಬೇಕು’ ಎನ್ನುತ್ತಾರೆ ಜರ್ಮನಿಯಿಂದ ಬಂದಿರುವ ಚಾರ್ಲ್ಸ್.

ಮಾಲೀಕರ ಮಾತು
ಮಗುವಿನಂತೆ ಕಾಪಾಡಿಕೊಂಡು ಬಂದ ತಮ್ಮ ಕಾರಿಗೆ ಏನೂ ಹಾನಿ ಆಗದಿರಲಿ ಎಂಬ ಕಾಳಜಿಯಿಂದ ಕಾರಿನ ಮಾಲೀಕರು ತಂತಮ್ಮ ಕಾರುಗಳ ಪಕ್ಕದಲ್ಲಿಯೇ ನಿಂತು ಕಾಯುತ್ತಿದ್ದರು. ಮಾತಿಗೆ ಸಿಕ್ಕ ಎನ್‌.ಕೆ.ಎಸ್‌. ನರೇಂದ್ರ ಕುಮಾರ್‌ ತಮ್ಮ ಕಾರಿನ ಕುರಿತು ಒಂದಿಷ್ಟು ಮಾಹಿತಿ ನೀಡಿದರು: ‘ಒಂದು ಒಳ್ಳೆಯ ಕಾರಣಕ್ಕಾಗಿ ಈ ರ್‍ಯಾಲಿಯಲ್ಲಿ ಭಾಗವಹಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಆ ಮಕ್ಕಳು ಇದರಲ್ಲಿ ಕುಳಿತುಕೊಂಡು ಖುಷಿ ಪಡುತ್ತಾರೆ ಎಂಬ ನಂಬಿಕೆ ನನಗಿದೆ’ ಎನ್ನುತ್ತಾರೆ ನರೇಂದ್ರ ಕುಮಾರ್.

ಅಂದಹಾಗೆ, ನರೇಂದ್ರ ಕುಮಾರ್‌ ಅವರ ತಾತ ಎನ್‌.ಕೆ. ಸುಬ್ಬಯ್ಯ ಸೆಟ್ಟಿ 1947ರಲ್ಲಿ ಮೈಸೂರು ಮಹಾರಾಜರಿಂದ (ಜಯಚಾಮರಾಜೇಂದ್ರ ಒಡೆಯರ್‌) ಈ ಕಾರನ್ನು ಕೊಂಡರಂತೆ. ಹೆಸರು ಷವರ್ಲೆ ಮಾಸ್ಟರ್ ಡಿಲೆಕ್ಸ್‌. ಆಗ ಇದರ ಬೆಲೆ ಸುಮಾರು ಎರಡು ಸಾವಿರ ರೂಪಾಯಿ; ಈಗಿನ ಇಪ್ಪತ್ತು ಲಕ್ಷ ರೂಪಾಯಿಗೆ ಸಮ.

ಭಾರತದಲ್ಲಿ ಈ ಮಾದರಿಯ ಎರಡೇ ಎರಡು ಕಾರುಗಳಿವೆ. ಒಂದು ನರೇಂದ್ರ ಅವರ ಬಳಿ ಇದ್ದರೆ, ಇನ್ನೊಂದು ದೆಹಲಿಯಲ್ಲಿದೆಯಂತೆ. ಈ ಕಾರಿನಲ್ಲಿ ಏಳು ಆಸನಗಳಿವೆ. ಇದು ಆಗಿನ ಲಿಮೊಸಿನ್‌ ಕಾರು. ಒಂದು ಲೀಟರ್‌ ಪೆಟ್ರೋಲ್‌ ಹಾಕಿದರೆ ಎರಡರಿಂದ ಮೂರು ಕಿ.ಮೀ. ಓಡುತ್ತದೆ. ಇದರಲ್ಲಿ ಕುಳಿತುಕೊಂಡು ಹೋಗುವಾಗ ಪ್ರತಿಸಲವೂ ಹೊಸ ಅನುಭವ ನೀಡುತ್ತದೆಂಬುದು ವಿಶೇಷ.

‘ತಾತ ಉಪಯೋಗಿಸಿ ನನ್ನ ತಂದೆಗೆ ಕೊಟ್ಟರು. ತಂದೆಯಿಂದ ನನಗೆ ಸಿಕ್ಕಿತು. ನನ್ನ ನಂತರ ನನ್ನ ಮಗನಿಗೆ. ನನ್ನ ತಂದೆ ಅಷ್ಟು ಸುಲಭವಾಗಿ ನನಗೆ ಈ ಕಾರನ್ನು ಕೊಡಲಿಲ್ಲ. ಅವರೆಲ್ಲರೂ ಪ್ರೀತಿಯಿಂದ ಕಾಪಾಡಿಕೊಂಡು ಬಂದ ಆಸ್ತಿ ಇದು. ಸ್ವಲ್ಪ ಗೀರಾದರೂ ನನಗೆ ನೋವಾಗುತ್ತದೆ. ಯಾವುದೋ ಕಾರಣಕ್ಕೆ ಆರು ತಿಂಗಳು ಕಾರನ್ನು ಹೊರಗೆ ತೆಗೆದಿರಲಿಲ್ಲ.

ರ್‍ಯಾಲಿಗಾಗಿ ಮೂರು ತಿಂಗಳ ಹಿಂದೆ ಹೊರತೆಗೆದಿದ್ದೆ. ಯಾವುದೇ ತೊಂದರೆ ಇಲ್ಲದೇ ಸ್ಟಾರ್ಟ್‌ ಆಯಿತು’ ಎಂದು ಖುಷಿ ಹಂಚಿಕೊಂಡರು ನರೇಂದ್ರ ಕುಮಾರ್. ದಶಕಗಳಿಂದ ಕಾಪಾಡಿಕೊಂಡು ಬಂದ ಕಾರುಗಳ ಕುರಿತು ಅಲ್ಲಿದ್ದವರ ಕಾಳಜಿಯೇ ಬೆರಗು ಮೂಡಿಸುವಂತಿತ್ತು.
–ಪವಿತ್ರಾ ಶೆಟ್ಟಿ, ಚಿತ್ರಗಳು: ದಿನೇಶ್ ಎಸ್.ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT