ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳತಾಗುವಳೆ ಅರ್ಧಾಂಗಿ?: ನೇತಾರರ ಉವಾಚ: ಮಹಿಳೆ ಘನತೆಗೆ ಕುಂದು

Last Updated 12 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೇಂದ್ರ ಕಲ್ಲಿದ್ದಲು ಸಚಿವ ಶ್ರೀಪ್ರಕಾಶ್ ಜೈಸ್ವಾಲ್  ಅವರು ಕಾನ್ಪುರದ ಮಹಿಳಾ ಕಾಲೇಜಿನಲ್ಲಿ ಇತ್ತೀಚೆಗೆ ಆಡಿದ ಮಾತುಗಳು ಮಹಿಳೆಯನ್ನು ನಮ್ಮ ರಾಜಕೀಯ ನಾಯಕರು ಪರಿಭಾವಿಸುವ ರೀತಿಗೆ ಮತ್ತೊಮ್ಮೆ ಪ್ರತೀಕವಾದವು. 

  ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯವನ್ನು 68 ವರ್ಷ ವಯಸ್ಸಾಗಿರುವ ಈ ಸಚಿವರು ಹೋಲಿಸಿದ್ದು `ವಿವಾಹ~ಕ್ಕೆ. `ಹೊಸ ವಿಜಯ ಹಾಗೂ ಹೊಸ ವಿವಾಹ. ಇವುಗಳಿಗೆ ಅವುಗಳದೇ ವಿಭಿನ್ನ ಮಹತ್ವವಿದೆ.

ಕಾಲ ಕಳೆದಂತೆ ವಿಜಯದ ನೆನಪು ಹಳತಾಗುತ್ತದೆ. ಹಾಗೆಯೇ ಕಾಲ ಕಳೆದಂತೆ ಪತ್ನಿಯೂ ಹಳಬಳಾಗುತ್ತಾ ಹೋಗುತ್ತಾಳೆ. ಆಗ ಮಜಾ ಇರುವುದಿಲ್ಲ~. ವಯಸ್ಸಿನಲ್ಲಿ ಹಿರಿಯರಾದ ಸಚಿವರ ಈ `ನುಡಿಮುತ್ತು~ಗಳನ್ನು ಏನೆಂದು ತಿಳಿಯಬೇಕು?  

ಈ ಮಾತುಗಳಿಗೆ ಪ್ರತಿಕ್ರಿಯೆಯಾಗಿ ಪ್ರಮುಖ ಪ್ರತಿಪಕ್ಷವಾದ ಬಿಜೆಪಿ ಕೈಗೊಂಡ ಕ್ರಮವಾದರೂ ಏನು? ಜೈಸ್ವಾಲ್‌ಗೆ `ಹೊಸ ಹೆಂಡತಿ~ ಹುಡುಕುವುದು. ಜೈಸ್ವಾಲ್ ಹಾಗೂ ರಾಖಿ ಸಾವಂತ್ ವಿವಾಹ ವೇಷಭೂಷಣಗಳಲ್ಲಿ ಒಟ್ಟಿಗಿರುವಂತಹ ದೊಡ್ಡ ಪೋಸ್ಟರ್‌ಗಳು ಕಾನ್ಪುರದಲ್ಲಿ ನಡೆಸಲಾದ ಪ್ರತಿಭಟನಾ ಮೆರವಣಿಗೆಯಲ್ಲಿ ಕಾಣಿಸಿಕೊಂಡವು. ಈ ಫಲಕಗಳಲ್ಲಿದ್ದ ಘೋಷಣಾ ವಾಕ್ಯ: `ನಯಿ  ಶಾದಿ, ನಯಾ ಮಜಾ ` (ಹೊಸ ಮದುವೆ, ಹೊಸ ಮಜಾ)

ಇವು `ತುಂಟಾಟ~ಗಳೆಂದು ನಕ್ಕು ಸುಮ್ಮನಾಗಬೇಕೆ? ಈ ಮಾತುಗಳನ್ನು `ಜೋಕ್~ ಎಂದು `ಎಂಜಾಯ್~ ಮಾಡಲಿಕ್ಕಾಗದಿದ್ದರೆ ನಿರ್ಲಕ್ಷಿಸಬೇಕೆ? ಅಥವಾ ಇಂತಹ `ತುಂಟಾಟ~ಗಳು, `ಹಾಸ್ಯ~ದೊಳಗೆ ಹೆಣ್ಣುಮಕ್ಕಳನ್ನು ವ್ಯಕ್ತಿಗಳಾಗಿ ಕಾಣದೆ `ಭೋಗವಸ್ತು~ಗಳಾಗಿ ಕಾಣುವ ಮನಸ್ಥಿತಿಗಳನ್ನು ಪ್ರಶ್ನಿಸಬೇಕೆ?

ಈ ಬಗೆಯ `ತುಂಟಾಟ~ಗಳು ಸಮಾಜದಲ್ಲಿ ಗಂಡು - ಹೆಣ್ಣಿನ ನಡುವೆ ಘನತೆಯ ಸಂಬಂಧಗಳನ್ನೇ ರಾಡಿಯಾಗಿಸುವಂತಹವು. ಎಲುಬಿಲ್ಲದ ನಾಲಿಗೆಗಳಿಗೆ ರಂಜನೀಯ `ಕವಳ~ವಾಗುವವಳು ಮತ್ತೆ ಮಹಿಳೆಯೇ ಎಂಬುದು ವಿಷಾದಕರ. ಹಾಗೆಂದೇ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರಾಖಿ ಸಾವಂತ್ ಮಾತುಗಳೂ ಸೂಕ್ಷ್ಮತೆಯನ್ನೇನೂ ಮೆರೆಯಲಿಲ್ಲ.
 
`ಬಿಜೆಪಿ ಪಕ್ಷದವರೇ ಆದ ಸ್ಮೃತಿ ಇರಾನಿ ಅಥವಾ ಹೇಮಾಮಾಲಿನಿಯನ್ನು ಬೇಕಿದ್ದರೆ ಜೈಸ್ವಾಲ್ ಜೊತೆ ಮದುವೆ ಮಾಡಿಸಿ. 68 ವರ್ಷದ ವ್ಯಕ್ತಿಯ ಜೊತೆಗಿನ ವಿವಾಹ ನನ್ನನ್ನು ನಕಾರಾತ್ಮಕ ಬೆಳಕಿನಲ್ಲಿ ಚಿತ್ರಿಸುತ್ತದೆ. ಇದರಿಂದ `ಮಿಸ್ಟರ್ ರೈಟ್~ ನನಗೆ ಸಿಗದೇ ಹೋಗಬಹುದು~ ಎಂದ ರಾಖಿ ಸಾವಂತ್  ಕ್ಷಮಾಪಣೆಗೆ ಆಗ್ರಹಿಸಿದರು. ರಾಖಿ ಸಾವಂತ್‌ರಿಂದೇನೂ ತಮಗೆ ನೈತಿಕ ಪಾಠ ಬೇಕಿಲ್ಲವೆಂದಿರುವ ಬಿಜೆಪಿಯ ಯುವ ಘಟಕ ಕ್ಷಮಾಪಣೆಯನ್ನು ಪ್ರಕಟಿಸಿದೆ.      

 ಈ ಮಾತುಗಳ ಸರಪಳಿಗಳು ಮೊದಲಿಗೆ ಮಹಿಳೆಯ ಘನತೆಯನ್ನು ಕುಗ್ಗಿಸಿದವು. ನಂತರ ಈ ಪ್ರಕರಣದಲ್ಲಿ ರಾಜಕೀಯ ಅಂಕಗಳನ್ನು ಗಳಿಸಲು ಹೋದ ಬಿಜೆಪಿ ಮತ್ತೊಬ್ಬಳು ಮಹಿಳೆಯ ಚಾರಿತ್ರ್ಯವನ್ನೇ ಹನನ ಮಾಡಿದವು.

ಪಿತೃ ಪ್ರಾಧಾನ್ಯತೆಯ ಸಾಂಸ್ಕೃತಿಕ ಅಂಶಗಳು ಭಾಷೆಯಲ್ಲಿ ಹೇಗೆ ಧ್ವನಿ ಪಡೆಯುತ್ತವೆ ಎಂಬುದಕ್ಕೆ ಈ ಘಟನಾವಳಿಗಳು ಉದಾಹರಣೆ. ಲಿಂಗ ತಾರತಮ್ಯ ಹಾಗೂ ಮಹಿಳೆ ವಿರುದ್ಧದ ಪೂರ್ವಗ್ರಹಗಳನ್ನು ಬಿಂಬಿಸುವಂತಹದ್ದು `ಸೆಕ್ಸಿಸ್ಟ್~ ಧೋರಣೆ. ಈ  `ಸೆಕ್ಸಿಸ್ಟ್~ ಧೋರಣೆಯನ್ನು ಭಾಷೆಯ್ಲ್ಲಲೂ ವ್ಯಕ್ತಪಡಿಸುವುದು ಸರಿಯಲ್ಲ. ಅದೊಂದು ದೋಷ ಎಂದು ಗುರುತಿಸುವ ಪ್ರಜ್ಞೆ ಈಗಾಗಲೇ ಮೂಡಿದೆ.

ಏಕೆಂದರೆ ಭಾಷೆ ಚಿಂತನೆಯನ್ನು ಪ್ರತಿಬಿಂಬಿಸುವುದಲ್ಲದೆ ಒಂದು ನಡಾವಳಿಯನ್ನೂ ರೂಪಿಸುತ್ತದೆ ಎಂಬುದು ನಮಗೆ ನೆನಪಿರಬೇಕು. ಆದರೆ ರಾಷ್ಟ್ರದ ನೀತಿಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಪಾಲುದಾರರಾಗಿರುವ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಪ್ರತಿನಿಧಿಗಳು ಪದೇಪದೇ ಲಿಂಗತಾರತಮ್ಯ ಧ್ವನಿಸುವ `ಭಾಷೆ~ಯನ್ನೇ ಮಾತನಾಡುತ್ತಿದ್ದಾರೆ. ಇವನ್ನು ಕೇಳಿಸಿಕೊಳ್ಳಬೇಕಿರುವ ನಮ್ಮ ದೌರ್ಭಾಗ್ಯಕ್ಕೆ ಏನೆನ್ನುವುದು?

`ಚೆನ್ನಾಗಿ ಸಂಪಾದನೆ ಮಾಡುತ್ತಾ ಕುಟುಂಬವನ್ನು ಸಲಹುತ್ತಿರುವ ಗಂಡ ಒಂದಿಷ್ಟು ಹೆಂಡತಿಗೆ ಹೊಡೆದರೆ ತಪ್ಪೆ?~ ಎಂಬುದು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರೊಬ್ಬರ ಪ್ರಶ್ನೆ. ಅತ್ಯಾಚಾರ ಪ್ರಕರಣಗಳ್ಲ್ಲಲ್ಲಂತೂ ಹೆಣ್ಣುಮಕ್ಕಳೇ `ಅಪರಾಧಿ~ಗಳು. ಅತ್ಯಾಚಾರಕ್ಕೆ ಹೆಣ್ಣುಮಕ್ಕಳ ವೇಷಭೂಷಣಗಳೇ ಕಾರಣ ಎಂದು ಅತ್ಯಾಚಾರಿಯನ್ನು ದೂಷಿಸುವ ಬದಲು ಹೆಣ್ಣುಮಕ್ಕಳನ್ನೇ ಎಷ್ಟು ಬಾರಿ ನಮ್ಮ ಪೊಲೀಸ್ ಅಧಿಕಾರಿಗಳು ದೂಷಿಸಿಲ್ಲ?

`ದೇಹ ಪ್ರದರ್ಶನ ಮಾಡುವ ಮಹಿಳೆಯರು ಅತ್ಯಾಚಾರವನ್ನು ಆಹ್ವಾನಿಸಿಕೊಳ್ಳುತ್ತಾರೆ~ ಎಂದು ಹೇಳಿದ್ದಂತಹ ಬಿಜೆಪಿಯ ಮಾಜಿ ಸಚಿವ ಸಿ. ಸಿ. ಪಾಟೀಲ್ ಕಡೆಗೆ ಮಾಡಿದ್ದೇನು? ಸದನದಲ್ಲಿ  ಮತ್ತಿಬ್ಬರು ಸಚಿವರೊಂದಿಗೆ ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ವಿಡಿಯೊ ತುಣುಕುಗಳನ್ನು ನೋಡುತ್ತಾ ಸಿಕ್ಕಿಬ್ದ್ದಿದು ಸಚಿವ ಸ್ಥಾನವನ್ನು ಕಳೆದುಕೊಂಡಂತಹ ವಿಪರ್ಯಾಸ.

ಏನೆಲ್ಲಾ ಸಾಮಾಜಿಕ ಬದ್ಧತೆ, ಸಿದ್ಧಾಂತಗಳಿದ್ದರೂ ಮಹಿಳೆಯ ವಿಚಾರದಲ್ಲಿ ಮಾತ್ರ ಪುರುಷ ಪ್ರಾಧಾನ್ಯ ಮನೋಧರ್ಮ ತಲೆ ಎತ್ತಿ ಬಿಡುತ್ತದೆ ಏಕೆ? ಶತಶತಮಾನಗಳಿಂದ ನಮ್ಮ ವಂಶವಾಹಿಗಳಲ್ಲಿ ಹರಿಯುತ್ತಿರುವ ಸಾಂಸ್ಕೃತಿಕ ಸ್ಮೃತಿಗಳೇ ಇದಕ್ಕೆ ಬಹುಶಃ ಕಾರಣವಿರಬೇಕು. ಪ್ರಜ್ಞಾಪೂರ್ವಕವಾಗಿ ಈ ಮನೋಧರ್ಮಗಳನ್ನು ಮೀರಲು ಯತ್ನಿಸದಿದ್ದಲ್ಲಿ  ಸಾರ್ವಜನಿಕವಾಗಿ ಇವು ಅಭಿವ್ಯಕ್ತಿಗೊಳ್ಳುತ್ತಲೇ ಇರುತ್ತವೆ.

ಪಶ್ಚಿಮ ಬಂಗಾಳದ  ಸಿಪಿಎಂ ಮಾಜಿ ಎಂಪಿ ಅನಿಲ್ ಬಸು ಕಳೆದ ವರ್ಷ ಚುನಾವಣಾ ರ‌್ಯಾಲಿಯಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಹೇಳಿದ್ದ ಅವಹೇಳನಕಾರಿ ನುಡಿಗಳನ್ನೇ ಗಮನಿಸಿ. ಚುನಾವಣೆಗಾಗಿ ಮಮತಾ ಬಳಕೆ ಮಾಡುತ್ತಿದ್ದ ಹಣವನ್ನು ಕುರಿತಾಗಿ ಹೇಳಿದ ಮಾತುಗಳಿವು.

`ದೊಡ್ಡ ಗ್ರಾಹಕ~ ಸಿಕ್ಕಾಗ `ಸಣ್ಣ ಗ್ರಾಹಕ~ರನ್ನು ಸೊನಾಗಾಚಿ (ಕೊಲ್ಕೊತ್ತಾದ ಕೆಂಪು ದೀಪದ ಪ್ರದೇಶ)ಯ ವೇಶ್ಯೆಯರು ಕಣ್ಣೆತ್ತೂ ನೋಡುವುದಿಲ್ಲ ಎನ್ನುತ್ತಾ ತೃಣಮೂಲ ಪಕ್ಷಕ್ಕೆ `ದೊಡ್ಡ ಗ್ರಾಹಕ~ ಸಿಕ್ಕಿದ್ದಾನೆ ಎಂದಿದ್ದರು. `ಮಮತಾಗೆ ಅಮೆರಿಕಾ ಹಣ ನೀಡುತ್ತಿದೆ.

ಈಗ ಯಾಕೆ ಅವರು ಚೆನ್ನೈ ಹಾಗೂ ಬೆಂಗಳೂರಿಂದ ಹಣ ಪಡೆಯಬೇಕು? ಶ್ರೀಮಂತ ಗ್ರಾಹಕರು ಸಿಕ್ಕಿದ್ದು ಬಡ ಗ್ರಾಹಕರಿಗೀಗ ಅವಕಾಶವಿಲ್ಲ. ಯಾವ `ಭಾತಾರ್~ನಿಂದ(ಮಹಿಳೆಯ ಅಕ್ರಮ ಪುರುಷ ಸಂಗಾತಿಗೆ ಬಳಸುವ ಬಂಗಾಳಿ ಅಶಿಷ್ಟ ನುಡಿ) ಅವರು  ತೃಣಮೂಲ ಚುನಾವಣಾ ವೆಚ್ಚಕ್ಕಾಗಿ ರೂ24 ಕೋಟಿಗಳನ್ನು ಪಡೆದರು~  ಎಂದು ಪ್ರಶ್ನಿಸಿದ್ದರು ಅನಿಲ್ ಬಸು.
 
ಇದಕ್ಕೆ ಮುಂಚೆ ಸಿಂಗೂರ್ - ನಂದಿಗ್ರಾಮ ಚಳವಳಿ  ತಾರಕಕ್ಕೇರಿದ್ದಾಗ ಮಮತಾ ವಿರುದ್ಧ ಅನಿಲ್ ಬಸು  `ದುಶ್ಯಾಸನ~ನಂತೆಯೇ ಆರ್ಭಟಿಸಿದ್ದರು : `ನನಗೇನಾದರೂ ಮುಕ್ತ ಅವಕಾಶ ಇದ್ದಿದ್ದಲ್ಲಿ ಟಾಟಾ ಕಾರ್ಖಾನೆಯ ಮುಂದೆ ಧರಣಿ ನಡೆಸಲು ಅವಕಾಶ ನೀಡದೆ ಆಕೆಯ ಮುಂದೆಲೆ ಎಳೆದು ತಳ್ಳಿಕೊಂಡುಹೋಗಿ ಆಕೆಯ ಕಾಳಿಘಾಟ್ ಮನೆಯಲ್ಲಿ ಕೆಡವಿರುತ್ತಿದ್ದೆ~. 

ಇದೇ ರೀತಿ ಇದೇ ಸಂದರ್ಭದಲ್ಲೇ  ಸಿಪಿಎಂ ಕೇಂದ್ರೀಯ ಸಮಿತಿ ಸದಸ್ಯ ಬಿನೊಯ್ ಕೊನಾರ್ ಕೂಡ ಶೌರ್ಯದ ಮಾತುಗಳಾಡಿದ್ದರು. ನಂದಿಗ್ರಾಮಕ್ಕೇನಾದರೂ ಮೇಧಾ ಪಾಟ್ಕರ್ ಪಾದ ಇರಿಸಿದಲ್ಲಿ ತಮ್ಮ ಪಕ್ಷದ ಮಹಿಳಾ ಬ್ರಿಗೇಡ್ ಸದಸ್ಯೆಯರು ತಮ್ಮ `ಪೃಷ್ಠ~ ಪ್ರದರ್ಶನ ಮಾಡುವರೆಂದು ಅವರು ಬೆದರಿಸಿದ್ದರು.

 ಸೋನಿಯಾ ಗಾಂಧಿಯವರು ರಾಜಕೀಯಕ್ಕೆ ಹೊಸದಾಗಿ ಪ್ರವೇಶ ಪಡೆದಾಗ, `ರಾಜಕಾರಣ ಏನೇನೂ ಗೊತ್ತಿರದ ಸಾಧಾರಣ ಗೃಹಿಣಿ~ ಎಂದು ಸ್ವತಃ  ಸಿಪಿಎಂ ವರಿಷ್ಠ ಜ್ಯೋತಿ ಬಸು ಅವರು ಬಹಿರಂಗವಾಗಿ ತಳ್ಳಿಹಾಕಿದ್ದರು. ಆದರೆ ಅನೇಕ ವರ್ಷಗಳ ನಂತರ ಸೋನಿಯಾ ನಾಯಕತ್ವದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದಾಗ, ತಮ್ಮದು `ತಪ್ಪು ನಿರ್ಣಯ~ವಾಗಿತ್ತು ಎಂಬುದನ್ನು ಒಪ್ಪಿಕೊಳ್ಳುವ ಧೀಮಂತಿಕೆಯನ್ನೂ ಜ್ಯೋತಿಬಸು ತೋರಿದ್ದರು. 

  ಇಂತಹ ನುಡಿಗಳು, ಮಾತುಗಳು ಭಾರತದ ರಾಜಕಾರಣದೊಳಗೆ ಹಾಸುಹೊಕ್ಕಾಗಿರುವ ಲಿಂಗ ಪೂರ್ವಗ್ರಹಗಳಿಗೆ ಪ್ರತೀಕ. ಮಹಿಳೆಯನ್ನು ರಾಜಕೀಯರಂಗ ಗೌರವಿಸುವುದಿಲ್ಲ ಎಂಬುದಕ್ಕೂ ಇದು ಸಾಕ್ಷಿ.

2008ರಲ್ಲಿ ಮುಂಬೈ ಮೇಲಿನ ಭಯೋತ್ಪಾದಕರ ದಾಳಿ ಹಿನ್ನೆಲೆಯಲ್ಲಿ ರಾಜಕಾರಣಿಗಳ ವಿರುದ್ಧ ನಡೆಸಿದ ಪ್ರತಿಭಟನಾ ಪ್ರದರ್ಶನಕ್ಕೆ ಬಿಜೆಪಿ ನಾಯಕ ಮುಕ್ತರ್ ಅಬ್ಬಾಸ್ ನಕ್ವಿ ಅವರು  ಪ್ರತಿಕ್ರಿಯಿಸಿದ್ದು ಹೀಗೆ: `ಲಿಪ್‌ಸ್ಟಿಕ್, ಪೌಡರ್ ಮೆತ್ತಿಕೊಂಡ ಕೆಲವು ಮಹಿಳೆಯರು ಮುಂಬೈನಲ್ಲಿ ಬೀದಿಗಿಳಿದು ರಾಜಕಾರಣಿಗಳ ವಿರುದ್ಧ ಹರಿಹಾಯುತ್ತಾ ಪ್ರಜಾಸತ್ತೆ ವಿರುದ್ಧ ಅತೃಪ್ತಿ ಹುಟ್ಟಿಸುತ್ತಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರು ಮಾಡುತ್ತಿರುವುದೂ ಇದನ್ನೇ~.

ಮಹಿಳಾ ಮೀಸಲು ಮಸೂದೆಗೆ ವಿರೋಧಿಯಾಗಿರುವ ಜನತಾ ದಳದ ನಾಯಕ ಶರದ್ ಯಾದವ್ ಅವರು `ಈ ಮಸೂದೆ ನಗರಗಳ  ಬಾಬ್ ಕಟ್ ಮಹಿಳೆಯರಿಗಷ್ಟೇ (ಬಾಬ್ ಕಟೀ ಔರತ್) ಅನುಕೂಲ~ ಎಂದು ಕೆಂಡಕಾರಿದ್ದು ಭಾರತೀಯ ರಾಜಕಾರಣ ಇತಿಹಾಸದಲ್ಲಿ ಕುಖ್ಯಾತ ನುಡಿಗಟ್ಟಾಗಿ ದಾಖಲಾಗಿದೆ.
 
`ಕತ್ತರಿಸಿದ ತುಂಡುಗೂದಲಿನ ಮಹಿಳೆಯರಿಗೆ ಗ್ರಾಮೀಣ ಮಹಿಳೆಯರ ನಾಡಿ ಮಿಡಿತ ಗೊತ್ತಿರುವುದು ಸಾಧ್ಯವಿಲ್ಲ~ ಎಂದೂ ಈ ನಾಯಕ ತಿರಸ್ಕಾರದಿಂದ ನುಡಿದಿದ್ದರು. ಮಹಿಳೆ ವಿರುದ್ಧ ವಿಷ ಕಾರುವ ಹಾಗೂ ಕೀಳು ಭಾಷಾ ಪ್ರಯೋಗಗಳು  ರಾಜಕೀಯ ರಂಗದಲ್ಲಿ ಹೊಸದೇನೂ ಅಲ್ಲ ಎಂಬುದನ್ನು ಈ ಎಲ್ಲಾ ಉದಾಹರಣೆಗಳು ಎತ್ತಿ ಹೇಳುತ್ತಿವೆ.

`ರಾಜ್ಯದಲ್ಲಿ  ಅಪೌಷ್ಟಿಕತೆ ಸಮಸ್ಯೆಗೆ  ಸೌಂದರ್ಯ ಪ್ರಜ್ಞೆ ಇರುವ ಮಹಿಳೆಯರು ಅದೂ ಯುವತಿಯರು ಕಾರಣ~ ಎಂದು ಇತ್ತೀಚೆಗಷ್ಟೇ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಲಘು ಧಾಟಿಯಲ್ಲಿ ಅಮೆರಿಕದ `ವಾಲ್ ಸ್ಟ್ರೀಟ್ ಜರ್ನಲ್~ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದ ಮಾತುಗಳನ್ನು ನೆನಪಿಸಿಕೊಳ್ಳಬಹುದು.

  ಒಂದಂತೂ ನಿಜ. ಮಹಿಳೆಯನ್ನು ಪರಿಭಾವಿಸುವ ವಿಚಾರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳೂ ಒಂದೇ. ಲಿಂಗ ಪೂರ್ವಗ್ರಹಗಳು ಭಾರತೀಯ ರಾಜಕಾರಣಲ್ಲಿ ಆಳವಾಗಿ ಬೇರೂರಿವೆ. ಹೆಣ್ಣನ್ನು ಅನುಭೋಗದ ವಸ್ತುವಾಗಿ ಕಾಣುವಂತಹ ಹಿಂಸಾ ಸಂಸ್ಕೃತಿ ಹೆಚ್ಚುತ್ತಿರುವ ದಿನಗಳಿವು.
 
ಹೀಗಾಗಿಯೇ  ಆತ್ಮಹತ್ಯೆಗೆ ಕುಮ್ಮಕ್ಕು, ಕೊಲೆ, ಅತ್ಯಾಚಾರ ಹಾಗೂ ಸಂಬಂಧದಲ್ಲಿ ವಂಚನೆ ಆರೋಪಗಳಲ್ಲಿ ಸಿಲುಕಿರುವ ರಾಜಕಾರಣಿಗಳ ಹಗರಣಗಳು ದಿನನಿತ್ಯದ ವಿದ್ಯಮಾನಗಳಾಗುತ್ತಿವೆ. ಆದರೆ ಭಾರತದ ರಾಜಕೀಯ ಪಕ್ಷಗಳು ಮಹಿಳಾ ಸಶಕ್ತೀಕರಣದ ಪ್ರವರ್ತಕರಾಗಿದ್ದವು ಎಂಬುದು ನಮ್ಮ ಇತಿಹಾಸವನ್ನೊಮ್ಮೆ ಅವಲೋಕಿಸಿದರೆ ತಿಳಿಯುತ್ತದೆ.

ಭಾರತದ ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಗಾಂಧಿಯವರು ನಡೆಸಿದ ಎಲ್ಲಾ ಸತ್ಯಾಗ್ರಹಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕಡಿಮೆ ಏನೂ ಇರಲಿಲ್ಲ. ಸುಭಾಷ್ ಚಂದ್ರ ಬೋಸ್ ಮಹಿಳೆಯರಿಗೆಂದೇ ಝಾನ್ಸಿ ರಾಣಿ ರೆಜಿಮೆಂಟ್ ಸ್ಥಾಪಿಸಿದವರು. ಸ್ವತಂತ್ರ ಭಾರತದಲ್ಲಿ ಸಮಾಜವಾದಿ ರಾಮ ಮನೋಹರ ಲೋಹಿಯಾ, ಮಹಿಳೆಯನ್ನು ಸಮಾನ ನೆಲೆಯಲ್ಲಿ ಕಂಡು ಹೊಸ ಕನಸುಗಳನ್ನು ಬಿತ್ತಿದವರು. ಆದರೆ ಈ ರಾಜಕೀಯ ಸಂಸ್ಕೃತಿಯ ಪರಂಪರೆ ಈಗ ಎಲ್ಲಿದೆ?

 ಸ್ವಾತಂತ್ರ್ಯ ಬಂದಾಗ ಹಾಗೂ ಸಂವಿಧಾನ ರಚನೆ ಸಂದರ್ಭದಲ್ಲಿ `ನಮಗೆ ಮೀಸಲು ಸೌಲಭ್ಯ ಬೇಡ~ ಎಂದಿದ್ದರು ಮಹಿಳೆಯರು. ಆದರೆ ಬಲಿಷ್ಠ ನಾಯಕರ ಅಥವಾ ರಾಜಕೀಯ ಕುಟುಂಬಗಳ ಕೃಪಾಶೀರ್ವಾದವಿಲ್ಲದ ಮಹಿಳೆಯರು ರಾಜಕೀಯದಲ್ಲಿ ಉಳಿದುಕೊಳ್ಳುವುದೇ ಕಷ್ಟ ಎಂಬಂತಹ ಸ್ಥಿತಿ ಇಂದಿನದು.

ಹಣ, ತೋಳ್ಬಲಗಳು ವಿಜೃಂಭಿಸುತ್ತಿರುವ ರಾಜಕಾರಣದಲ್ಲಿ ಹೆಣ್ಣು - ಗಂಡಿನ ಸಮಾನತೆಯ ಸಾಮಾಜಿಕ ಆದರ್ಶದ ಮಾತುಗಳೇ ಅರ್ಥಹೀನ. ಲಿಂಗ ಸಂವೇದನಾಶೀಲತೆಯ ಕುರುಹೂ ಇಲ್ಲಿಲ್ಲ. `ಅತ್ಯಾಚಾರದ ಅಪರಾಧಗಳನ್ನು ತಗ್ಗಿಸಲು 16 ವರ್ಷದೊಳಗೇ ಮದುವೆಗಳನ್ನು ಮಾಡಿಬಿಡಿ~ ಎಂಬಂತಹ ಸಲಹೆಯನ್ನು ಈಗಿನ ರಾಜಕಾರಣಿಗಳು ನೀಡುತ್ತಾರೆ. ರಾಜಕೀಯ ಪಕ್ಷಗಳ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ ಈ ಮಾತುಗಳು.
 
ಈ ಎಲ್ಲಾ ಗೋಜಲುಗಳಲ್ಲಿ  ತನ್ನದೇ ಧ್ವನಿ, ಭಾಷೆಯನ್ನು ರಾಜಕೀಯವಾಗಿ ರೂಢಿಸಬೇಕಾಗಿರುವ ಅತಿ ದೊಡ್ಡ ಸವಾಲನ್ನು ಇಂದಿನ ಮಹಿಳೆ ಎದುರಿಸುತ್ತಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT