ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿ ಕುಸಿದಿದ್ದೇ ಅಪಘಾತಕ್ಕೆ ಕಾರಣ

Last Updated 2 ಅಕ್ಟೋಬರ್ 2012, 5:25 IST
ಅಕ್ಷರ ಗಾತ್ರ

ಬೆಳಗಾವಿ: ಹುಬ್ಬಳ್ಳಿ- ಮೀರಜ್ ಪ್ಯಾಸೆಂಜರ್ ರೈಲಿನ ಎಂಜಿನ್ ಮತ್ತು ನಾಲ್ಕು ಬೋಗಿಗಳು ಹಳಿ ತಪ್ಪಿದ್ದರಿಂದ 30ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಸುಳೇಭಾವಿ- ಸುಣಧಾಳ ಮಧ್ಯದ ತಾಲ್ಲೂಕಿನ ಕರಿಕಟ್ಟಿ ಸಮೀಪದ ಮಾನವ ರಹಿತ ಲೆವೆಲ್ ಕ್ರಾಸಿಂಗ್ ಹತ್ತಿರ ಸೋಮವಾರ ಸಂಜೆ 5.30ಕ್ಕೆ ಸಂಭವಿಸಿದೆ. ಗಾಯಗೊಂಡವರಲ್ಲಿ ಒಬ್ಬನ ಸ್ಥಿತಿ ಚಿಂತಾಜನಕವಿದೆ.

ಕಳೆದ ಮೂರ‌್ನಾಲ್ಕು ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವುದರಿಂದ ರೈಲು ಹಳಿ ಕೆಳಗಿನ ಚಿಕ್ಕ ಸೇತುವೆಯಲ್ಲಿ ಭಾರಿ ನೀರು ಹರಿದಿದೆ. ನೀರಿನ ಜೊತೆಗೆ ಮಣ್ಣು ಕೊಚ್ಚಿಹೋಗಿದ್ದರಿಂದ ರೈಲು ಹಳಿ ಸಹ ಕುಸಿದಿದ್ದು ಅಪಘಾತಕ್ಕೆ ಕಾರಣ ಎಂದು ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಹಾಗೂ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ಹುಬ್ಬಳ್ಳಿ- ಮಿರಜ್ (ರೈಲು ಸಂಖ್ಯೆ- 51420) ಪ್ಯಾಸೆಂಜರ್ ರೈಲು ಹಳಿ ತಪ್ಪಿದ್ದು, ಎಂಜಿನ್ ಪಲ್ಟಿಯಾಗಿದೆ. ನಾಲ್ಕು ಬೋಗಿಗಳು ಹಳಿಯಿಂದ ಅನತಿ ದೂರದಲ್ಲಿ ತೆರಳಿ ಒಂದೇ ಬದಿಗೆ ವಾಲಿ ನಿಂತಿವೆ. ಉಳಿದ ಮೂರು ಬೋಗಿಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಈ ಬೋಗಿಗಳನ್ನು ಮತ್ತೊಂದು ಎಂಜಿನಿನ ಸಹಾಯದಿಂದ ಬೆಳಗಾವಿಗೆ ತರಲಾಗಿದೆ. ಹಳಿ ಬಿಟ್ಟು ವಾಲಿರುವ ನಾಲ್ಕು ಬೋಗಿಗಳ ಪೈಕಿ ಒಂದು ಲಗೇಜ್ ಬೋಗಿಯಿದ್ದು, ಉಳಿದ ಬೋಗಿಗಳಲ್ಲಿ ಪ್ರಯಾಣಿಕರಿದ್ದರು.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ರೈಲ್ವೆ ಗ್ಯಾಂಗ್‌ಮನ್ ರಾಮಪ್ಪ ಹಾದಿಮನಿ ಅವರನ್ನು ಕೆಎಲ್‌ಇ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈತನ ಎರಡೂ ಕಾಲುಗಳು ಬೋಗಿಯ ಕೆಳಗೆ ಸಿಕ್ಕಿದ್ದವು. ಅಗ್ನಿಶಾಮಕ ದಳದವರು ಕ್ರೇನ್ ಮೂಲಕ ಬೋಗಿ ಮೇಲಕ್ಕೆತ್ತಿ ಈತನನ್ನು ರಕ್ಷಿಸಿದರು.

ಘಟನೆಯಲ್ಲಿ ಮೂವರು ಸಾವನ್ನಪ್ಪಿದಾರೆ ಎಂದು ಹೇಳಲಾಗಿತ್ತು. ಅಧಿಕಾರಿಗಳು ಸಹ ರೈಲ್ವೆ ಬೋಗಿಗಳ ಕೆಳಗೆ ಸಿಕ್ಕಿ ಮೃತಪಟ್ಟಿರಬಹುದು ಎಂದು ಶಂಕಿಸಿದ್ದರು. ಆದರೆ ಬೋಗಿಗಳನ್ನು ಕ್ರೇನ್ ಸಹಾಯದ ಮೂಲಕ ಮೇಲೆತ್ತಿದ ನಂತರ ಯಾವುದೇ ಸಾವು ಸಂಭವಿಸಿಲ್ಲ ಎಂಬುದು ಗೊತ್ತಾಯಿತು.

ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಜಿಲ್ಲಾಧಿಕಾರಿ ಅನ್ಬುಕುಮಾರ್ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 

ಗಾಯಗೊಂಡಿರುವ 30 ಮಂದಿ ಪೈಕಿ 22 ಪ್ರಯಾಣಿಕರನ್ನು ಜಿಲ್ಲಾ ಆಸ್ಪತ್ರೆಗೆ, ಲೇಕ್ ವ್ಯೆವ್ ಆಸ್ಪತ್ರೆ ಇಬ್ಬರು, ಕೆಎಲ್‌ಇ ಹಾಗೂ ವಿಜಯಾ ಆಸ್ಪತ್ರೆಗೆ ಒಬ್ಬ ಪ್ರಯಾಣಿಕರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮೂವರ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದೆ. ಗ್ಯಾಂಗಮನ್ ಹಾದಿಮನಿ ಅವರ ಸ್ಥಿತಿ ಚಿಂತಾಜನಕವಿದೆ.

ಅಗ್ನಿಶಾಮಕ ದಳದವರು, ಪೊಲೀಸರು ಪರಿಹಾರ ಕಾರ್ಯ ನಡೆಸಿದರು. ಸ್ಥಳೀಯ ಗ್ರಾಮಗಳ ಯುವಕರು ಪರಿಹಾರ ಕಾರ್ಯಕ್ಕೆ ಕೈಜೋಡಿಸಿದರು. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ಶಂಕರ, ಪಾಲಿಕೆ ಆಯುಕ್ತೆ ಪ್ರಿಯಾಂಕಾ ಫ್ರಾನ್ಸಿಸ್ ಹಾಗೂ ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಮಿಲಿಟರಿ ಸಹಾಯ: ಪರಿಹಾರ ಕಾರ್ಯಕ್ಕಾಗಿ ಮಿಲಿಟರಿ ಸಹಾಯ ಕೇಳಲಾಗಿದ್ದು, 40 ಮಂದಿ ಯೋಧರ ತಂಡ ಘಟನಾ ಸ್ಥಳಕ್ಕೆ ಬರಲಿದೆ ಎಂದು ಜಿಲ್ಲಾಧಿಕಾರಿ ಅನ್ಬುಕುಮಾರ್ ತಿಳಿಸಿದರು.

ಗಾಯಗೊಂಡವರು
ಮಹಾರಾಷ್ಟ್ರದ ಸಾಂಗ್ಲಿಯ ಕೌಸರ್ ಇಕ್ಬಾಲ್ ಮುಲ್ಲಾ, ರಾಯಬಾಗ್ ತಾಲ್ಲೂಕಿನ ಕುಡಚಿಯ ಸನಾವುಲ್ಲಾ ನಿಸ್ಸಾರ ಪಿಂತೋಡ್, ಗೋಕಾಕ ತಾಲ್ಲೂಕಿನ ಸಂಗನಕೇರಿಯ ನಬಿಸಾಬ್ ಮುಲ್ಲಾ, ಅರಭಾವಿಯ ಗುರಲಿಂಗಪ್ಪ ಸಂಕಣ್ಣವರ, ಕಣಬರ್ಗಿಯ ವಿಜಯ ಜಮಖಂಡಿ, ಬೀರನಗಡ್ಡಿಯ ಸುರೇಶ ಸಿದ್ದಪ್ಪ ಪೆಟ್ನೂರ, ಭಾರತಿ ನಾಯಕ, ಚನ್ನಪ್ಪ ಟಕ್ಕಣ್ಣವರ, ಗೋಕಾಕ ತಾಲ್ಲೂಕಿನ ಮರಡಿಮಠದ ಬಸವರಾಜ ಬಾಳಪ್ಪ ಪಾಟೀಲ, ಬಸವರಾಜ ಪಾಟೀಲ, ಶಿವಪುತ್ರಪ್ಪ ಬೀರನವರ, ರಮೇಶ ಬಾನೆ, ಚನ್ನಪ್ಪ ಗವಳಿ, ಮುತ್ತಪ್ಪ ಲಾಡಿ, ಶಿವಪ್ಪ ದೊಡ್ಡ ಕೆಂಚನ್ನವರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT