ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿತಪ್ಪಿದ ಟ್ರೈನಿನ ಪ್ರಯೋಗ

Last Updated 14 ಜೂನ್ 2012, 19:30 IST
ಅಕ್ಷರ ಗಾತ್ರ

ದಿ.ಕರಿಬಸವಯ್ಯನವರ ಸ್ಮರಣಾರ್ಥ ದಿನಾಂಕ 11 ಮತ್ತು 12ರಂದು ಕೆ.ಬಿ ರಂಗವರ್ಷ ಹೆಸರಿನಲ್ಲಿ ರಂಗನಿರಂತರ ತಂಡವು ಎರಡು ನಾಟಕಗಳನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಿತು. ಅದರಲ್ಲಿ ಎರಡನೆಯ ದಿನ ಪ್ರದರ್ಶನ ಕಂಡ ನಾಟಕವೇ ಟ್ರೈನ್ ಟು ಪಾಕಿಸ್ತಾನ್.

ದೇಶ ಕಂಡ ಅತಿ ಹಿರಿಯ ಜಾತ್ಯಾತೀತ ಲೇಖಕ, ಕಾದಂಬರಿಕಾರ, ಪರ್ತಕರ್ತರಾದ ಖುಷ್ವಂತ್ ಸಿಂಗ್ ಅವರ ಕಾದಂಬರಿಯ ರಂಗರೂಪವೇ ಪ್ರಸ್ತುತ ಪ್ರಯೋಗ. ಇದನ್ನು ಕನ್ನಡಕ್ಕೆ ಅನುವಾದಿಸಿದವರು ಡಾ.ಎಂ.ಬಿ ರಾಮಮೂರ್ತಿ. ಇದರ ರಂಗರೂಪ ಚಿದಾನಂದ ಸಾಲಿಯವರದು. ಮತ್ತಿದನ್ನು ರಂಗಕ್ಕೆ ತರುವ ಸಾಹಸ ಮಾಡಿದವರು ಕೆಎಸ್‌ಡಿಎಲ್ ಚಂದ್ರು ಅವರು.

ಪಂಜಾಬ್‌ನ ಮನೋಮಜ್ರಾ ಎಂಬ ಹಳ್ಳಿಯಲ್ಲಿ ನಡೆಯುವ ಕಥೆ ಬರೀ ಅದೊಂದೇ ಹಳ್ಳಿಯದಾಗಿ ಉಳಿಯದೆ ಸ್ವಾತಂತ್ರ್ಯಾನಂತರದ ಭಾರತ ಕಂಡ ಹಿಂದೂ ಮುಸ್ಲಿಮರ ವಿದ್ವಂಸಕ ದಾಳಿಗಳು, ಕೊಲೆ, ರಕ್ತಪಾತ, ಅತ್ಯಾಚಾರಗಳ ನಡುವೆ ಪ್ರೀತಿಸುವ ಪ್ರೇಮಿಗಳು, ಸಾಮಾಜಿಕ ವ್ಯವಸ್ಥೆ, ಭ್ರಷ್ಟ ರಾಜಕೀಯ, ಅಭಿವೃದ್ಧಿಯ ಕೊರತೆಗಳು ಇದೆಲ್ಲದರ ಕಡೆಗೂ ಬೊಟ್ಟುತೋರುವಂತೆ ಮಾಡಿ ಕಾದಂಬರಿಯು ಆ ಕಾಲದ ಒಟ್ಟೂ ಸ್ಥಿತಿಯನ್ನು ಕಣ್ಣ ಮುಂದೆ ಮೂಡುವಂತೆ ಮಾಡುತ್ತದೆ.

ಟ್ರೈನ್ ಟು ಪಾಕಿಸ್ತಾನ್ ಬರೀ ಹಿಂಸೆ, ರಕ್ತಪಾತ, ರೋಚಕಗಳೇ ಮಾತ್ರವಲ್ಲದೆ ಅದನ್ನು ಮೀರಿದ ನಮ್ಮಳಗಿನ ಅವ್ಯಕ್ತ ಭಾವಸ್ಮೃತಿಗಳ ಛಾಯೆಗಳು, ಮತ್ತದರ ತೊಳಲಾಟವನ್ನೇ ಜೀವಾಳವನ್ನಾಗಿ ಮಾಡಿಕೊಂಡಿದೆ. ಹಾಗಾಗಿಯೇ ಅದು ಪ್ರಸ್ತುತ ಕೂಡ.

ರೂಪಾಂತರ ತಂಡದ ನಾಟಕ ಎಂಬುದಕ್ಕಿಂತ ಮಿಗಿಲಾಗಿ ಖುಷ್ವಂತ್ ಸಿಂಗ್ ಅವರ ಇಂತಹ ಕೃತಿ ರಂಗದ ಮೇಲೆ ಹೇಗೆ ಮೂಡಿಬರಬಹುದು ಎಂಬ ಕುತೂಹಲಕ್ಕೋ, ಬಿಟ್ಟಿ ಪ್ರದರ್ಶನ ಏರ್ಪಡಿಸಿದ್ದಕ್ಕೋ ಅಥವಾ ಕೆಬಿಯವರ ಅಭಿಮಾನಕ್ಕೋ ಏನೋ ರಂಗಮಂದಿರವಂತೂ ಭರ್ತಿಯಾಗಿತ್ತು.

ಸುದೀರ್ಘ 20 ವರ್ಷಗಳ ಹವ್ಯಾಸೀ ರಂಗಭೂಮಿಯ ಇತಿಹಾಸವಿರುವ ರೂಪಾಂತರ ತಂಡ ಬಹಳ ಶ್ರಮವಹಿಸಿ ಪ್ರಯೋಗವನ್ನು ಕೈಗೆತ್ತಿಕೊಂಡಿತ್ತು ಎಂಬುದಂತೂ ಕಾಣುತ್ತಿತ್ತು. ಆದರೆ ಒಟ್ಟಂದದಲ್ಲಿ ಪ್ರಯೋಗ ಪ್ರೇಕ್ಷಕರನ್ನು ತಟ್ಟುವಲ್ಲಿ ಬಹಳ ಪ್ರಯಾಸಪಟ್ಟಿತೇನೋ. ಪ್ರಯೋಗದ ದ್ವಿತೀಯಾರ್ಧ ತುಂಬ ಬಿರುಸಾಗಿ, ಮೊನಚಾಗಿ ಸಾಗಿದರೂ ಮೊದಲರ್ಧ ಯಾವುದೇ ಸಂಘರ್ಷವಿಲ್ಲದೆ ನೀರಸವಾಗಿದ್ದರಿಂದ ಪ್ರೇಕ್ಷಕರಿಗೆ ಬೋರು ಹೊಡೆಸಿದ್ದು ಸುಳ್ಳಲ್ಲ.

ಪ್ರಯೋಗದ ಪ್ರಾರಂಭದಲ್ಲಿ ಬರುವ ನಿರ್ದೇಶಕರ ನಿರೂಪಣೆ ಹೆಚ್ಚಾಯಿತಲ್ಲದೇ, ಭಾರತದಲ್ಲಿ ಶಾಂತಿಗಾಗಿ ನೊಬೆಲ್ ಪುರಸ್ಕಾರವನ್ನು ಕೊಡುವುದಾದರೆ ಅದು ಖುಷ್ವಂತ್‌ಸಿಂಗ್‌ಅವರಿಗೆ ಮಾತ್ರ  ಎಂಬ ಹೇಳಿಕೆಗಳನ್ನು ಬರಿದೇ ಪಾಸಿಂಗ್ ಸ್ಟೇಟ್‌ಮೆಂಟುಗಳಂತೆ ತೆಗೆದುಕೊಳ್ಳಲು ಬರುವುದಿಲ್ಲ. ರೇಡಿಯೋದಲ್ಲಿ ಬರುವ ಆರ್‌ಜೆಗಳ ಮಾತಿಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ.
 
ಆದರೆ ರಂಗದ ಮೇಲಿನ ಪ್ರತಿಯೊಂದು ಮಾತು, ಕ್ರಿಯೆ, ಸನ್ನೆಯೂ ಪೊಲಿಟಿಕಲ್ ಗೆಶ್ಚರ್ ಆಗಿಬಿಡುತ್ತದೆ. ಹಾಗಾಗಿ ರಂಗಭೂಮಿಯಲ್ಲಿ ಆಡುವ ಮಾತು, ಮಾಡುವ ಕ್ರಿಯೆ ಎಲ್ಲದರಲ್ಲೂ ಸ್ಪಷ್ಟತೆ ಮತ್ತು ಬಲವಾದ ಕನ್ವಿಕ್ಷನ್ ಅತಿಮುಖ್ಯ. ಇನ್ನು ಪ್ರಯೋಗದ ಕಾಲಾವಧಿ ಸರಿಸುಮಾರು ಎರಡೂವರೆ ತಾಸುಗಳಷ್ಟು ದೀರ್ಘ! ಇವತ್ತಿನ ಕಮರ್ಷಿಯಲ್ ಸಿನಿಮಾಗಳನ್ನೆ ವೀಕ್ಷಕರು ಅಷ್ಟು ಹೊತ್ತು ಕೂತು ನೋಡಲಾರರು.

ಹಾಗಿರುವಾಗ ಪ್ರಯೋಗದ ಕಡೆಗೆ ಬರುವ ಒಂದು ಸಂದೇಶದ ಸಲುವಾಗಿ ಪ್ರೇಕ್ಷಕ ಎರಡೂವರೆ ತಾಸು ಕೂತು ನಾಟಕ ನೋಡಬೇಕೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹಲವು ದೃಶ್ಯಗಳ ಕಂಪೋಸಿಂಗ್ ಕೂಡ ಸಿನಿಮೀಯವಾಗಿತ್ತು. ಅದಕ್ಕೆ ಪ್ರಯೋಗದಲ್ಲಿ ಬಳಸಿದ ಪ್ರೊಜೆಕ್ಷನ್ ಕೂಡ ಕಾರಣವಿರಬಹುದು. ಪ್ರಯೋಗದ ಮುಕ್ತಾಯದ ಕೆಲವು ಕಡೆ ಅದು ಪರಿಣಾಮಕಾರಿಯಾಗಿತ್ತು ಎಂಬುದನ್ನೂ ಮರೆಯುವಂತಿಲ್ಲ.

ಆಧುನಿಕ-ತಾಂತ್ರಿಕ ಪರಿಕರಗಳನ್ನು ರಂಗಭೂಮಿಯಲ್ಲಿ ಬಳಸಿ ಕೊಳ್ಳಬಾರದು ಎಂತೇನಿಲ್ಲ. ಆದರೆ ಆದ್ಯಂತಿಕವಾಗಿ ಅದು ನಟರ ಮೂಲಕ ಹೊರಹೊಮ್ಮದೇ ಬರೀ ಅಲ್ಲಿಗೇ ನಿಂತುಬಿಟ್ಟರೆ ಮಾತ್ರ ಅದು ನಿಷ್ಪ್ರಯೋಜಕ ಎನಿಸುತ್ತದೆ. ತಾಂತ್ರಿಕತೆಯಲ್ಲಿ ರಂಗಭೂಮಿ ಎಷ್ಟೇ ಸರ್ಕಸ್ಸು ಮಾಡಿದರೂ ಅದು ಸಿನಿಮಾಕ್ಕೆ ಸೆಡ್ಡುಹೊಡೆಯಲು ಸಾಧ್ಯವೇ ಇಲ್ಲ ಎಂಬುದು ಆದ್ಯಂತಿಕ ಸತ್ಯ; ಹಾಗೆಯೇ ಸಾತ್ತ್ವಿಕತೆ ಹಾಗೂ ರಸಾನುಭವದಲ್ಲಿ ಸಿನಿಮಾ ಎಷ್ಟೇ ಸರ್ಕಸ್ಸು ಮಾಡಿದರೂ ಅದು ರಂಗಭೂಮಿಗೆ ಸೆಡ್ಡುಹೊಡೆಯಲು ಬರುವುದಿಲ್ಲ ಎಂಬುದೂ!

ಇಲ್ಲದೇ ಇದ್ದರೆ ಎರಡೂವರೆ ತಾಸಿನ ಈ ನಾಟಕ ನೋಡುವ ಬದಲು  ಪಮೇಲಾ ರೂಕ್ಸ್  ಮಾಡಿದ ಸಿನಿಮಾವನ್ನೇ ನೋಡಬಹುದಲ್ಲ? ಆದ್ದರಿಂದ ಎಷ್ಟೇ ತಾಂತ್ರಿಕತೆ ಬಳಸಿದರೂ ಅದು ರಂಗಭೂಮಿಯ ಆದ್ಯಂತಿಕ ತಾಕತ್ತಾದ ನಟ-ನಾಟ್ಯ-ಸತ್ತ್ವಗಳ ಉದ್ದೇಪನಕ್ಕೆ ನೆರವಾಗಬೇಕೇ ಹೊರತು ಅದನ್ನೇ ಬದಿಗೆ ಸರಿಸಿ ಎಂದೂ ನಿಲ್ಲಬಾರದು. ಇನ್ನು ರಂಗಸಂಗೀತವು ಅಲ್ಲಲ್ಲಿ ಗಮನೀಯವಾಗಿತ್ತು ಎಂಬುದು ಬಿಟ್ಟರೆ ರಂಗಕ್ರಿಯೆಯೊಂದಿಗಿನ ಸಾಂಗತ್ಯವನ್ನು ಸಾಧಿಸದೇ ಹೋಯಿತು.
 
ಇಡೀ ಪ್ರಯೋಗದಲ್ಲಿ ವಸ್ತ್ರವಿನ್ಯಾಸ ಹಾಗೂ ಪ್ರಸಾಧನವೊಂದೇ ಪ್ರೇಕ್ಷಕರ ಗಮನ ಸೆಳೆಯಿತು. ಆದರೆ ಇದಿಷ್ಟರಿಂದಲೇ ಪ್ರಯೋಗವನ್ನು ಯಶಸ್ವಿಗೊಳಿಸಲು ಬರುವುದಿಲ್ಲವಲ್ಲ. ಇನ್ನು ನಟರ ಸಮೂಹದ ಕುರಿತಾದರೆ, ಕೆಲವು ನಟರನ್ನ ಬಿಟ್ಟರೆ ಉಳಿದವರಲ್ಲಿ ಅಷ್ಟೇನೂ ಶಕ್ತಿಯಿರಲಿಲ್ಲ.

ಜಗತ್‌ಸಿಂಗ್‌ನಾಗಿ ಹರೀಶ್ ಗುಂಗೇರ, ಇಮಾಮ್ ಚಾಚಾನಾಗಿ ತೇಜಸ್, ಇಕ್ಬಾಲನಾಗಿ ವಾದಿರಾಜ್, ಇನ್ಸ್‌ಪೆಕ್ಟರ್ ಆಗಿ ನಿಶಾಂತ್‌ಗೌಡ, ಮಲ್ಲಿಯಾಗಿ ಅಜಯ್‌ಕುಮಾರ್, ಹೆಡ್‌ಕಾನ್ಸ್‌ಟೇಬಲ್ ಆಗಿ ರಾಜು, ತಾಯಿಯಾಗಿ ಉಮಾದೇವಿ, ನೂರನ್ ಆಗಿ ರಂಜನಿ ತುಸು ನೋಡಿಸಿಕೊಂಡರು ಎನ್ನಬಹುದು.

ಸುಮಾರು ಇಪ್ಪತ್ತು ವರ್ಷಗಳ ದೀರ್ಘ ಇತಿಹಾಸವಿರುವ ರೂಪಾಂತರದಂತಹ ಹಲವು ಹವ್ಯಾಸೀ ರಂಗತಂಡಗಳಿಂದಲೇ ಕನ್ನಡ ರಂಗಭೂಮಿ ಇಷ್ಟು ಕ್ರಿಯಾಶೀಲವಾಗಿದೆ ಎಂದರೆ ತಪ್ಪಲ್ಲ. ಆದರೆ ನಾಟಕ ನೋಡುವಾಗ ಅದು ಪ್ರೇಕ್ಷಕರಿಗೆ ಎಷ್ಟು ರಂಜನೆ, ತಿಳಿವಳಿಕೆ, ಅನುಭವ ಕೊಡಬಲ್ಲುದು ಎಂಬುದೇ ಮುಖ್ಯವಾಗುತ್ತದೆ. ಹಾಗೆ ನೋಡಿದರೆ ಹಲವು ಗಮನಾರ್ಹ ರಂಗಕೃತಿಗಳು ಹುಟ್ಟಿದ್ದು ಈ ರೀತಿಯ ಹವ್ಯಾಸೀ ರಂಗಭೂಮಿಯಲ್ಲೇ ಹೊರತು ಯಾವ ಅಕಡೆಮಿಕ್ ವಲಯದಲ್ಲಲ್ಲ ಎಂಬುದನ್ನು ನಾವೆಲ್ಲ ನೋಡೇ ಇದ್ದೇವೆ.

ಹಲವು ನಿರೀಕ್ಷೆಗಳನ್ನಿಟ್ಟುಕೊಂಡು ಬಂದು ಹತ್ತಿದ್ದ ಟ್ರೈನು ಹಳಿತಪ್ಪಿದ್ದು ತುಸು ಬೇಸರವನ್ನುಂಟು ಮಾಡುತ್ತದೆ ಎಂಬುದನ್ನು ಬಿಟ್ಟರೆ, ರಂಗನಿರಂತರವು ಇನ್ನೂ ಹೆಚ್ಚಿನ ರಂಗಶಕ್ತಿ ಹಾಗೂ ನಾಟ್ಯಶಕ್ತಿಯನ್ನು ಪಡೆದುಕೊಂಡು ಇನ್ನೂ ಒಳ್ಳೆಯ ಪ್ರಯೋಗಗಳನ್ನು ಕೈಗೊಳ್ಳಲಿ ಎಂದು ನಿರೀಕ್ಷಿಸೋಣ. 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT