ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆ ಉಡುಗೆಗೆ ಹೊಸ ಸ್ಪರ್ಶ

Last Updated 11 ಜನವರಿ 2012, 19:30 IST
ಅಕ್ಷರ ಗಾತ್ರ

ಹೆಣ್ಣಿಗೆ ಸೌಂದರ್ಯವೇ ಸಂಪತ್ತು. ಸುಂದರವಾಗಿ ಕಾಣಿಸಬೇಕೆಂದರೆ ಆಕೆ ಏನು ಮಾಡಲೂ ಸಿದ್ಧ. ಅವಳ ಈ ಅಂದದ ಅಭಿಲಾಷೆಗೆಂದೇ ದಿನೇದಿನೇ ಹೊಸ ವಿನ್ಯಾಸದ ಒಡವೆ ವಸ್ತ್ರಗಳು ಫ್ಯಾಷನ್ ಪ್ರಪಂಚಕ್ಕೆ ಕಾಲಿಡುತ್ತಿರುತ್ತವೆ. ಇಷ್ಟಿದ್ದರೂ ಆಕೆಯಲ್ಲಿ ಸಣ್ಣದೊಂದು ಅತೃಪ್ತಿಯ ಭಾವ ಸುಳಿದಾಡುತ್ತಿರುತ್ತದೆ. ಇನ್ಯಾವುದಾದರೂ ಹೊಸ ಡಿಸೈನ್ ಬಂದಿದೆಯಾ ಎಂಬ ಕುತೂಹಲದ ಕಣ್ಣನ್ನು ಸದಾ ತೆರೆದಿರುತ್ತಾಳೆ.

ಆದರೆ ಜಯನಗರದಲ್ಲಿರುವ ಡಿಸೈನ್ ಸ್ಟುಡಿಯೋಗೆ ಭೇಟಿ ಕೊಟ್ಟರೆ ಸಾಕು, ನಿಮ್ಮ ಹುಡುಕಾಟ ನಿಲ್ಲುತ್ತದೆ ಎನ್ನುತ್ತಾರೆ ಫ್ಯಾಷನ್ ಡಿಸೈನರ್ ಶಿಲ್ಪಾ ರೆಡ್ಡಿ.

ಮಹಿಳೆಯರಿಗೆಂದೇ ವಿಶೇಷವಾದ ವಸ್ತ್ರಗಳನ್ನು ಈ ಡಿಸೈನ್ ಸ್ಟುಡಿಯೋ ಸುಮಾರು 11 ವರ್ಷದಿಂದ ಹೊರತರುತ್ತಾ ಬಂದಿದೆ. ದಿನೇದಿನೇ ಬೆಳೆಯುತ್ತಿರುವ ಫ್ಯಾಷನ್‌ಗೆ ತಕ್ಕಂತೆ ಡಿಸೈನ್ ಸ್ಟುಡಿಯೋ ವಿಶೇಷ ಉಡುಪುಗಳನ್ನು ತಯಾರಿಸುತ್ತಾ ಬಂದಿದೆ.

ಈ ಡಿಸೈನ್ ಸ್ಟುಡಿಯೋ ಪ್ರಾರಂಭವಾಗಿದ್ದು ಶಿಲ್ಪಾ ರೆಡ್ಡಿ ಅವರಿಂದ. ಮೂಲತಃ ವಕೀಲೆಯಾಗಿರುವ ಶಿಲ್ಪಾ ರೆಡ್ಡಿಯವರಿಗೆ ಫ್ಯಾಷನ್ ಜಗತ್ತಿನತ್ತ ಸೆಳೆತ ಹೆಚ್ಚು. ಕಾನೂನು ಪದವಿಯ ನಂತರ ಫ್ಯಾಷನ್ ಡಿಸೈನಿಂಗ್‌ನಲ್ಲಿ ಡಿಪ್ಲೊಮಾ ಮುಗಿಸಿ ನಂತರ ವೃತ್ತಿಗೆಂದು ಫ್ಯಾಷನ್ ಡಿಸೈನಿಂಗನ್ನೇ ಆಯ್ಕೆ ಮಾಡಿಕೊಂಡರು. ಎಲ್ಲಾ ವರ್ಗದ ಮಹಿಳೆಯರಿಗೂ ಸೂಕ್ತವಾಗುವ ಉಡುಪುಗಳ ಬೊಟಿಕ್ ಆರಂಭ ಮಾಡಿದರು.

ಶಿಲ್ಪಾ ಅವರಿಗೆ ಆಧುನಿಕ ವಸ್ತ್ರಗಳಿಗಿಂತ ಸಾಂಪ್ರದಾಯಿಕ ಉಡುಪುಗಳತ್ತ ಒಲವು ಹೆಚ್ಚು. ಸಾಂಪ್ರದಾಯಿಕತೆಗೆ ಆಧುನಿಕತೆಯ ಸ್ಪರ್ಶ ನೀಡುವ ಕುಸುರಿ ಕೆಲಸವೆಂದರೆ ಇವರಿಗೆ ಅಚ್ಚುಮೆಚ್ಚು. ಭಾರತೀಯ ಮಹಿಳೆಯರ ಸಾಂಪ್ರದಾಯಿಕ ಉಡುಗೆಗಳಾದ ಸೀರೆ, ಗಾಗ್ರ ಚೋಲಿ, ಕುರ್ತಾ ಇವುಗಳಿಗೆ ಆಧುನಿಕ ಶೈಲಿ ಸೇರಿಸಿ ವಿನ್ಯಾಸಗೊಳಿಸುವುದು ಇವರಲ್ಲಿರುವ ವಿಶೇಷ ಕಲೆ. ಸಾಂಪ್ರದಾಯಿಕ ಉಡುಗೆಯಲ್ಲಿ ಮಹಿಳೆಯರು ಹೆಚ್ಚು ಸುಂದರವಾಗಿ ಕಾಣುತ್ತಾರೆ. ಈ ವಸ್ತ್ರಗಳಿಗೆ ಸ್ವಲ್ಪ ಕುಸುರಿ ಕಲೆ ಸೇರಿಸಿದರೆ ಅಂದ ಇನ್ನೂ ದ್ವಿಗುಣಗೊಳ್ಳುತ್ತದೆ. ಬದಲಾಗುತ್ತಿರುವ ಫ್ಯಾಷನ್‌ಗೆ ತಕ್ಕಂತೆ ವಿನ್ಯಾಸದಲ್ಲೂ ಬದಲಾವಣೆ ಮಾಡಿದರೆ ನಮ್ಮದೇ ಹೊಸ ಶೈಲಿ ಸೃಷ್ಟಿಸಬಹುದು ಎನ್ನುತ್ತಾರೆ ಶಿಲ್ಪಾ.

ಕಾಂಜೀವರಂ, ಬನಾರಸ್, ರೇಷ್ಮೆ, ಜಾರ್ಜೆಟ್, ಕ್ರೇಪ್, ಶಿಫಾನ್ ಸೀರೆಗಳೂ ಇಲ್ಲಿ ಲಭ್ಯ. ಕೇವಲ ಸೀರೆಗಳು ಮಾತ್ರವಲ್ಲ, ಗಾಗ್ರ, ಕುರ್ತಾಗಳೂ ಇಲ್ಲಿವೆ. ಅಷ್ಟೇ ಅಲ್ಲ, ಈ ಉಡುಪುಗಳಿಗೆ ಎಂಬ್ರಾಯ್ಡರಿ, ಝರಿ, ಹರಳು, ಝರ್ದಾರಿ, ಮಣಿ ಮತ್ತು ಮುತ್ತಿನ ಮಣಿಗಳಿಂದ ನವಿರಾಗಿ ಅಲಂಕಾರಗೊಳಿಸಲಾಗಿರುತ್ತೆ. ಇದನ್ನು ನೋಡುತ್ತಿದ್ದಂತೆ ಕೊಂಡುಕೊಳ್ಳದೆ ಇರಲು ಮನಸ್ಸೇ ಆಗುವುದಿಲ್ಲ. ಅಷ್ಟೇ ಅಲ್ಲ, ವಿಶೇಷವಾದ ಕಲಂಕಾರಿ ಕಲೆಯೂ ಸೀರೆ ಮೇಲೆ ಚಿತ್ತಾರ ಮೂಡಿಸಿರುತ್ತೆ. ಸೀರೆಗೆ ಕುಸುರಿ ಕಲೆ ನೀಡಲೆಂದೇ ಡಿಸೈನ್ ಸ್ಟುಡಿಯೋದಲ್ಲಿ ಶಿಲ್ಪಾ ಅವರೊಂದಿಗೆ 10 ಮಂದಿ ಇದ್ದಾರೆ.

ಪ್ರಕೃತಿ, ಪರಿಸರ ಪ್ರೇಮಿಯಾಗಿರುವ ಶಿಲ್ಪಾ ಅವರು ಸೀರೆಗಳಿಗೂ ಹಸಿರು ಕಳೆಯನ್ನು ಸುಂದರವಾಗಿ ಮೂಡಿಸುತ್ತಾರೆ. ಹೂವು, ಎಲೆ ಹೀಗೆ ಅನೇಕ ಚಿತ್ತಾರಗಳನ್ನು ಮೂಡಿಸುವಲ್ಲಿ ಶಿಲ್ಪಾ ಅವರದ್ದು ಎತ್ತಿದ ಕೈ. ಸೀರೆಗಳನ್ನು ಕೊಂಡು ಅದಕ್ಕೆ ಡೈಯಿಂಗ್ ಮಾಡಿ ಅಗತ್ಯ ಬಣ್ಣ ಮತ್ತು ವಿನ್ಯಾಸ ನೀಡುವುದು ಇವರ ಕೈಚಳಕ. ಅಷ್ಟೇ ಅಲ್ಲ, ಮದುವೆ ಸಂದರ್ಭದಲ್ಲಿ ಮದುಮಗಳ ಉಡುಪುಗಳನ್ನು ಕೊಂಡುಕೊಳ್ಳಲು ಇಲ್ಲಿಗೆ ಬಂದರೆ ಸಾಕು, ಮೆಚ್ಚಿನ ಬಣ್ಣದ, ನಿಮ್ಮ ಮನಮೆಚ್ಚಿಸುವ ವಿನ್ಯಾಸದ ಸೀರೆ, ಗಾಗ್ರಾಗಳು ತಯಾರಾಗಿರುತ್ತೆ. ಗ್ರಾಹಕರ ಅಭಿರುಚಿಗೆ, ಆಸಕ್ತಿಗೆ ತಕ್ಕಂತೆ ಆಕರ್ಷಕ ವಿನ್ಯಾಸದ ಉಡುಪುಗಳನ್ನು ತಯಾರು ಮಾಡುವುದೇ ನಮ್ಮ ಡಿಸೈನ್ ಸ್ಟುಡಿಯೋದ ಉದ್ದೇಶ ಎನ್ನುತ್ತಾರೆ ಶಿಲ್ಪಾ.

ನೀವೂ ನಿಮ್ಮ ಮೆಚ್ಚುಗೆಯ ಬಟ್ಟೆಗಳನ್ನು ಕೊಂಡುಕೊಳ್ಳಬೇಕೆಂದಿದ್ದರೆ ಡಿಸೈನ್ ಸ್ಟುಡಿಯೋಗೆ ಭೇಟಿ ನೀಡಬಹುದು. ನಂ. 38/ 43, 5ನೇ ಅಡ್ಡರಸ್ತೆ, 10ನೇ `ಎ~ ಮುಖ್ಯ ರಸ್ತೆ, 1ನೇ ಬ್ಲಾಕ್, ಅಶೋಕ ಪಿಲ್ಲರ್ ಹತ್ತಿರ. ಜಯನಗರ. ಸಂಪರ್ಕಿಸಿ:  ಶಿಲ್ಪಾ ರೆಡ್ಡಿ, 98453 54642.
 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT