ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆ ತಾಳಿ ಹೊಸ ಹಳಿ

Last Updated 30 ಡಿಸೆಂಬರ್ 2010, 10:40 IST
ಅಕ್ಷರ ಗಾತ್ರ

‘ನಮ್ಮ ಆಫೀಸಿನ ಬಾಗಿಲು ತೆರೆದಿದೆ. ಯಾರು ಬೇಕಾದರೂ ಬಂದು ಕಥೆ ಹೇಳಬಹುದು. ಇಷ್ಟವಾದರೆ ಸಿನಿಮಾ ಮಾಡಲು ನಾವು ಸಿದ್ಧ’- ಹೀಗೆ ಮುಕ್ತವಾಗಿ ಆಹ್ವಾನ ಕೊಟ್ಟವರು ರಿಸ್ಟೋ ಮೀಡಿಯಾ ಎಂಟರ್‌ಟೇನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀನಿವಾಸ್.
ಅವರದ್ದೇ ಸಂಸ್ಥೆ ನಿರ್ಮಿಸಿರುವ ‘ಚಿನ್ನದ ತಾಳಿ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ತುಂಬಾ ಉತ್ಸಾಹದಿಂದ ಮಾತನಾಡುತ್ತಾ, ಹೊಸಬರ ಪ್ರತಿಭೆಗೆ ನೀರೆರೆಯಲು ತಾವು ಕಂಕಣಬದ್ಧ ಎಂದು ಅವರು ಹೇಳಿಕೊಂಡರು. ರಿಸ್ಟೋ ಮೀಡಿಯಾ ಸಂಸ್ಥೆಯು ಹೊಸ ಹಿಂದಿ ಚಿತ್ರದ ಚಿತ್ರೀಕರಣ ಪ್ರಾರಂಭಿಸಿರುವುದೇ ಇದಕ್ಕೆ ಉದಾಹರಣೆ. ಮುಂಬೈನಿಂದ ಯುವಕರ ತಂಡವೊಂದು ಬಂದು ಕಥೆ ಹೇಳಿದ್ದೇ, ಅದು ಶ್ರೀನಿವಾಸ್ ಹಾಗೂ ಇತರರಿಗೆ ಇಷ್ಟವಾಯಿತಂತೆ. ‘4 ಪಿಎಂ ಆನ್ ದಿ ಕೋರ್ಟ್’ ಎಂಬುದು ಚಿತ್ರದ ಹೆಸರು. ಬ್ಯಾಸ್ಕೆಟ್‌ಬಾಲ್ ಆಟದ ಸುತ್ತ ಹೆಣೆದುಕೊಂಡ ಈ ಸಿನಿಮಾ ಮೂಲಕ ಕನ್ನಡದ ತಿಲಕ್ ಹಿಂದಿಗೆ ಎಂಟ್ರಿ ನೀಡುತ್ತಿದ್ದಾರೆ.

‘ಗಂಡ ಹೆಂಡತಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ತಿಲಕ್ ‘ಚಿನ್ನದ ತಾಳಿ’ಯ ನಾಯಕ. ‘ಗಂಡ ಹೆಂಡತಿ’ಯಲ್ಲಿ ನಾನು ಬರೀ ಬಾಯ್‌ಫ್ರೆಂಡ್ ಆಗಿದ್ದೆ. ತಾಳಿಗೂ, ನನಗೂ ಅಲ್ಲಿ ಆಗಿ ಬಂದಿರಲಿಲ್ಲ. ಈ ಚಿತ್ರದಲ್ಲಿ ತಾಳಿಗೂ ನನಗೂ ಬೇರೆ ರೀತಿಯ ಸಂಬಂಧವಿದೆ. ಪ್ರೇಕ್ಷಕರೂ ನನ್ನಂತೆಯೇ ರಿಲೇಟ್ ಮಾಡಿಕೊಂಡು ಈ ಚಿತ್ರವನ್ನು ನೋಡಬಹುದು’ ಎಂದು ತಿಲಕ್ ಚುಟುಕಾಗಿ ಮಾತಾಡಿದರು. ‘ಚಿನ್ನದ ತಾಳಿ’ ಅವರ ನಟನೆಯ ಒಂಬತ್ತನೇ ಚಿತ್ರ.  ‘ರಾಜಿ’ ಚಿತ್ರದ ಕೆಲವು ಸ್ಟಿಲ್‌ಗಳಲ್ಲಿ ಬಿಸಿಬಿಸಿಯಾಗಿ ಕಾಣಿಸಿಕೊಂಡಿದ್ದ ಸ್ವಾತಿ, ಅದು ಪ್ರಜ್ಞಾಪೂರ್ವಕವಾಗಿ ಆದುದಲ್ಲ ಎಂದು ನುಣುಚಿಕೊಳ್ಳಲು ಯತ್ನಿಸಿದರು. ಇನ್ನೊಬ್ಬ ನಾಯಕಿ ತುಂಗಾಶ್ರೀಗೆ ಇದು ನಾಲ್ಕನೇ ಚಿತ್ರ. ಹಿರಿಯರು ನಿಶ್ಚಯಿಸಿದ ಮದುವೆಗೇ ಉಳಿಗಾಲ ಎಂಬುದೇ ಚಿತ್ರದ ವಸ್ತು ಎಂದು ಅವರು ನಾಲ್ಕೇ ಮಾತಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT