ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆ ತೆಂಗಿನ ತೋಟಕ್ಕೆ ಕಾಯಕಲ್ಪ

Last Updated 23 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ
ADVERTISEMENT

ಒಮ್ಮೆ ತೆಂಗಿನ ತೋಟ ಬೆಳೆಸಿದರೆ ಮೂರು ತಲೆಮಾರುಗಳ ತನಕ ಕುಳಿತು ತಿನ್ನಬಹುದು ಎಂಬ ಕಾಲ ಹಿಂದಿತ್ತು. ಈಗ ಹಾಗೆ ಭಾವಿಸಲಾಗದು. ತೆಂಗು ಪ್ರಕೃತಿ ಒಡ್ಡುತ್ತಿರುವ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ತೆಂಗಿನ ಮರಗಳು ಒಂದೆರಡು ತಲೆಮಾರುಗಳ ಕಾಲ ಬದುಕಿದ್ದು, ತನ್ನನ್ನು ನಂಬಿಕೊಂಡವರಿಗೆ ನೆರವಾಗುತ್ತವೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.

ತೆಂಗಿನ ಸಸಿಗಳನ್ನು ನೆಟ್ಟು ಬೆಳೆಸಿದ ರೈತನ ಜೀವಿತಾವಧಿಯಲ್ಲೇ ಕೀಟಗಳ ದಾಳಿ, ರೋಗಗಳಿಂದ ಇಡೀ ತೋಟವೇ ಹಾಳಾದ ಹಲವು ಉದಾಹರಣೆಗಳಿವೆ. ಈ ಹಿನ್ನೆಲೆಯಲ್ಲಿ ಹಳೆಯ ತೆಂಗಿನ ಮರಗಳಿರುವ ರೈತರು ನಿರಂತರ ಆದಾಯ ಪಡೆಯುವ ವಿಷಯದಲ್ಲಿ ಹಲವು ಮಾರ್ಗೋಪಾಯಗಳನ್ನು ಹುಡುಕುತ್ತಿದ್ದಾರೆ.

ಈ ನಿಟ್ಟಿನಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತರಬೇನಹಳ್ಳಿಯ (ಜೆ.ಸಿ.ಪುರ ಅಂಚೆ) ರೈತ ಸಿದ್ದರಾಮಯ್ಯ ಎಂಬ ತೆಂಗು ಬೆಳೆಗಾರ ಕಂಡುಕೊಂಡ ಉಪಾಯವನ್ನು ರಾಜ್ಯದ ತೆಂಗು ಬೆಳೆಯುವ ರೈತರ ಗಮನಕ್ಕೆ ತರುವುದು ಈ ಲೇಖನದ ಉದ್ದೇಶ.ಸಿದ್ದರಾಮಯ್ಯ ತೀರಾ ಸಾಮಾನ್ಯ ರೈತ. ಹೆಚ್ಚು ಓದಿದವರಲ್ಲ.

‘ನಮ್ಮ ಅಪ್ಪ ಬೆಳೆಸಿದ್ದ ಕೆಲವು ತೆಂಗಿನ ಮರಗಳೇ ನನ್ನ ಕುಟುಂಬದ ಜೀವನಕ್ಕೆ ಆಧರವಾಗಿದ್ದವು. ವಾರದ ಸಂತೆ ಖರ್ಚು, ಹಬ್ಬ-ಹರಿದಿನಗಳು ಇತ್ಯಾದಿಗಳಿಗೆ ನಾವು ತೆಂಗಿನ ಮರಗಳನ್ನು ನಂಬಿಕೊಂಡಿದ್ದೆವು. ಜತೆಗೆ ಸ್ವಲ್ಪ ರಾಗಿ ಬೆಳೆದುಕೊಳ್ಳುತ್ತಿದ್ದೆ.

ಬೆಳಿಗ್ಗೆ ನಮ್ಮ  ಹೊಲದಲ್ಲಿ ಕೆಲಸ ಮಾಡಿ, ರಾತ್ರಿ ಹೊತ್ತು ಬೇರೆಯವರ ಜಮೀನಿನಲ್ಲಿ ತೆಂಗಿನ ಸಸಿ ನಾಟಿ ಮಾಡಲು ಗುಂಡಿ ತೋಡುವುದು, ಗೊಬ್ಬರ, ಮಣ್ಣು ಹೊಡೆಯುವುದು, ತೆಂಗಿನ ಸಸಿಗಳಿಗೆ ನೀರು ಹೊಯ್ಯುವ ಕೆಲಸ ಮಾಡಿ ಸ್ವಲ್ಪ ಹಣಗಳಿಸಿ ಇತರ ಖರ್ಚುಗಳನ್ನು ನಿಭಾಯಿಸುತ್ತಿದ್ದೆ. ಅಪ್ಪ ಹಾಕಿದ್ದ ತೆಂಗಿನ ಮರಗಳಿಗೆ ಏನಾದರೂ ಆದರೆ ನನ್ನ ಕುಟುಂಬದ ಗತಿ ಏನು ಎಂಬ ಯೋಚನೆ ಬಂದಾಗ ತುಂಬಾ ಅತಂತ್ರ ಸ್ಥಿತಿ ಅನುಭವಿಸುತ್ತಿದೆ’ ಎಂದು ಸಿದ್ದರಾಮಯ್ಯ ಈಗಲೂ ನೆನಪು ಮಾಡಿಕೊಳ್ಳುತ್ತಾರೆ.

ನಮ್ಮ ತೋಟದ ತೆಂಗಿನ ಮರಗಳಿಗೆ ವಯಸ್ಸಾಗಿತ್ತು. ಅವು ಗಾಳಿ, ಮಳೆಗೆ ಬಿದ್ದುಹೋಗುವ ಅಪಾಯವಿತ್ತು. ತೆಂಗಿನ ಮರ ಬಿದ್ದ ಮೇಲೆ ಆ ಜಾಗದಲ್ಲಿ ಇನ್ನೊಂದು ಮರ ಬೆಳೆಸಿ ಅದು ಫಲ ಕೊಡಲು ಎಷ್ಟು ಸಮಯ ಬೇಕಾದೀತು ಎಂಬುದನ್ನು ನೆನಪು ಮಾಡಿಕೊಂಡಾಗ ಭಯವಾಗುತ್ತಿತ್ತು ಎನ್ನುತ್ತಾರೆ ಸಿದ್ದರಾಮಯ್ಯ.

 ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಏನಾದರೂ ಮಾಡಲೇಬೇಕು ಎಂಬ ಪ್ರಯತ್ನದಲ್ಲಿದ್ದಾಗ ನನಗೊಂದು ಉಪಾಯ ಹೊಳೆಯಿತು. ನಮ್ಮ ತೋಟದಲ್ಲಿದ್ದ ಹಳೆಯ ಮರಗಳಿಂದ ನಾಟಿ ಮಾಡಲು ಸೂಕ್ತವಾದ ತೆಂಗಿನ ಕಾಯಿಗಳನ್ನು ಆರಿಸಿಕೊಂಡು ಅವುಗಳಿಂದ ಸಸಿ ಬೆಳೆಸಲು ನಿರ್ಧರಿಸಿದೆ. ಒಂದು ವರ್ಷ ಕಳೆಯುವುದರೊಳಗೆ ಕಾಯಿಗಳು ಮೊಳಕೆಯೊಡೆದು ಸಸಿಗಳಾದವು. ಮಾರಿಗೊಂದರಂತೆ ಸಸಿಗಳನ್ನು ಮತ್ತೆ ಮರು ನಾಟಿ ಮಾಡಿ ವಾರಕ್ಕೊಮ್ಮೆ ನೀರು ಹೊತ್ತು ಹಾಕಿ ಕಾಪಾಡಿದೆ.ನನ್ನ ತೋಟದ ಕಾಯಿಗಳಿಂದ ಬೆಳೆಸಿದ ಸಸಿಗಳು ಸಿದ್ಧವಾದವು.

ಆನಂತರ ಈ ಸಸಿಗಳನ್ನ ಎಲ್ಲಿ ನಾಟಿ ಮಾಡುವುದು ಎಂಬ ಸಮಸ್ಯೆ ಎದುರಾಯಿತು. ಆ ವೇಳೆಗೆ ಕೆಲವು ಹಳೆಯ ಮರಗಳು ಬಿದ್ದು ಹೋಗಿದ್ದವು. ಆ ಜಾಗದಲ್ಲಿ ಸಸಿ ನಾಟಿ ಮಾಡಲು ಸಮಸ್ಯೆ ಇರಲಿಲ್ಲ. ಆದರೆ ಸತ್ತಂತೆ ಕಾಣುತ್ತಿದ್ದ ಆದರೆ ಬದುಕಿದ್ದ ಕೆಲ ತೆಂಗಿನ ಮರಗಳೂ ಇದ್ದವು. ಈ ಮರಗಳಿಂದ ಬರುತ್ತಿದ್ದ ಆದಾಯ ಅಷ್ಟಕ್ಕಷ್ಟೇ.

ಆದರೆ ಅವನ್ನು ಕಡಿಯಲು ನನಗೆ  ಮನಸ್ಸಿರಲಿಲ್ಲ. ಅವು ನನ್ನ ತಂದೆ ನೆಟ್ಟು ಬೆಳೆಸಿದ ಮರಗಳು ಎಂಬ ಭಾವನೆ ಇತ್ತು. ನನ್ನ ಕೆಲವು ರೈತ ಮಿತ್ರರು ಅವಸರ ಮಾಡಬೇಡ ಹಳೆಯ ಮರಗಳು ಬಿದ್ದನಂತರ ಆ ಜಾಗದಲ್ಲಿ ಹೊಸ ಸಸಿ ನಾಟಿ ಮಾಡು ಎಂಬ ಸಲಹೆ ಕೊಟ್ಟರು. ಇನ್ನು ಕೆಲವರು ಹಳೆಯ ಮರಗಳನ್ನು ಕಡಿದು ಹಾಕಿ ಆ ಜಾಗದಲ್ಲಿ ಹೊಸ ಸಸಿ ನಾಟಿ ಮಾಡು ಎಂದರು. ಯಾರ ಮಾತು ಕೇಳಬೇಕು ಎಂಬುದು ತಿಳಿಯದೆ ಗೊಂದಲಕ್ಕೆ ಒಳಗಾಗಿದ್ದೆ.

ಕೊನೆಗೆ ಹಳೆಯ ಮರಗಳನ್ನು ಕಡಿಯದೆ ಹೊಸ ತೆಂಗಿನ ಸಸಿಗಳನ್ನು ನಾಟಿ ಮಾಡಲು ನಿರ್ಧರಿಸಿದೆ! ಹಳೆಯ ಮರಗಳ ಬುಡದಲ್ಲೇ ಹೊಸ ಸಸಿಗಳನ್ನು ನಾಟಿ ಮಾಡಿದೆ. ಹೀಗೆ ಮಾಡಿದ್ದನ್ನು ನೋಡಿ ನನಗೆ ಪುಕ್ಕಟೆಯಾಗಿ ಸಲಹೆ ಕೊಟ್ಟ ನನ್ನ ರೈತ ಗೆಳೆಯರು ನನ್ನ ಬೆನ್ನ ಹಿಂದೆ ನನ್ನದು ಹುಚ್ಚು ಸಾಹಸ ಎಂದು ಹೇಳಿಕೊಂಡು ನಕ್ಕಿದ್ದರು.

ಆರೆಂಟು ವರ್ಷಗಳ ನಂತರ ನನ್ನ ತೋಟದ ಚಿತ್ರವೇ ಬದಲಾಯಿತು. ಹೊಸದಾಗಿ ನಾಟಿ ಮಾಡಿದ ತೆಂಗಿನ ಸಸಿಗಳಿಗೆ ಹಾಕಿದ ನೀರು, ಗೊಬ್ಬರ, ಗೋಡು ಇತ್ಯಾದಿಗಳನ್ನು ಹಂಚಿಕೊಂಡು ಹಳೆಯ ಮರಗಳು ಚೇತರಿಸಿಕೊಂಡವು. ಹೆಚ್ಚು ಫಸಲು ಕೊಡಲು ಆರಂಭಿಸಿದವು. ಹಾಗೇ ಹೊಸ ತೆಂಗಿನ ಸಸಿಗಳೂ ಕೂಡ ದಸಿ (ಮೊದಲ ಗೊನೆ ಒಡೆದವು)ನೂಕಿದವು.

ಒಳ್ಳೆಯ ಫಸಲು ಕೊಡಲಾರಂಬಿಸಿದವು. ಈಗ ನಾನು ಹಳೆಯ ಮತ್ತು ಹೊಸ ಮರಗಳಿಂದ ಫಸಲು ಪಡೆಯುತ್ತಿದ್ದೇನೆ. ಹಳೇ ಮರಗಳು ಈಗ ಇನ್ನಷ್ಟು ಭದ್ರವಾಗಿವೆ. ಅವುಗಳ ತುಂಬಾ ಫಸಲಿದೆ. ಒಂದು ತೆಂಗಿನ ಮರ ಬೆಳೆಯುವ ಜಾಗದಲ್ಲಿ ಎರಡು ಮರಗಳು ಬೆಳೆದುನಿಂತಿವೆ!

ನನಗೆ ವಯಸ್ಸಾಯಿತು. ಶಕ್ತಿ ಕುಂದಿದೆ. ಆದರೆ ಆದಾಯ ಕುಂದಿಲ್ಲ. ಈಗ ನಾನು ಕೂಲಿಗೆ ಹೋಗುವುದಿಲ್ಲ. ನೆಮ್ಮದಿಯಗಿ ಜೀವನ ನಡೆಸುವಷ್ಟು ಆದಾಯ ಪಡೆಯುತ್ತಿದ್ದೇನೆ. ಅಪ್ಪ ಹಾಕಿದ ಮರಗಳು ಮತ್ತು ನಾನು ಬೆಳೆಸಿದ ಹೊಸ ಮರಗಳು ಎರಡೂ ಫಸಲು ಕೊಡುತ್ತಿವೆ. ಇದಕ್ಕಿಂತ ಸಂತೋಷ ಬೇರೇನಿದೆ?

ಹಳೆಯ ಮರಗಳನ್ನು ಕಡಿಯದೆ ಹೊಸ ಸಸಿಗಳನ್ನು ನೆಟ್ಟು ಬೆಳೆಸುವ ವಿಷಯದಲ್ಲಿ ನಾನು ತೆಗೆದುಕೊಂಡ ನಿರ್ಧಾರ ಜಾಣತನದ್ದು ಎಂದು ಈಗ ಅನ್ನಿಸುತ್ತಿದೆ. ನಮ್ಮ ರೈತರೂ ಹೀಗೆ ಮಾಡಲು ಸಾಧ್ಯವಿದೆ. ಹೀಗೆ ಮಾಡಲು ಬಯಸುವ ರೈತರು ಈ ಕೆಳಗಿನ ಅಂಶಗಳನ್ನು ಗಮನಿಸಬೇಕು.

* ಹಳೆಯ ಮರಗಳು ಇನ್ನೂ 8- 10 ವರ್ಷ ಬದುಕುತ್ತವೆ ಎನ್ನುವ ಹಂತಕ್ಕೆ ಬಂದಾಗ ಅದರ ಬುಡದಲ್ಲಿ ಹೊಸ ಸಸಿ ನಾಟಿ ಬಗ್ಗೆ ನಿರ್ಧಾರ ಮಾಡಿ.
* ಹಳೆಯ ಮರ ರೋಗಪೀಡಿತವಾಗಿದ್ದು, ಚೇತರಿಸಿಕೊಳ್ಳುವ ಸಾಧ್ಯತೆ ಇಲ್ಲ ಎನ್ನುವುದು ಖಚಿತವಾದ ನಂತರ  ಆ ಮರದ ಬುಡದಲ್ಲಿ ಹೊಸ ಸಸಿ ಬೆಳೆಸಬಹುದು.

*ಹಳೆಯ ಮರದಲ್ಲಿ ಫಸಲು ತೀರಾ ಕಡಿಮೆ ಆಗಿದ್ದರೆ ಅದರ ಬುಡದಲ್ಲಿ ಹೊಸ ಸಸಿ ಬೆಳೆಸಿ.
* ಮರಕುಟುಕ ಹಕ್ಕಿಗಳು ತೂತು ಕೊರೆದು ಟೊಳ್ಳು ಮಾಡಿದ ಮರಗಳು ಯಾವಾಗ ಬೇಕಾದರೂ ಬೀಳಬಹುದು ಅಂತಹ ಮರಗಳ ಪಕ್ಕ ಹೊಸ ಸಸಿ ನಾಟಿ ಮಾಡಿ.

*ಹಳೆಯ ಮರದ ಪಕ್ಕ ಕನಿಷ್ಟ 4 ವರ್ಷದ ಸಸಿ ನಾಟಿ ಮಾಡಿ. ಏಕೆಂದರೆ ಹಳೆಯ ಮರಗಳಿಂದ ಸೋಗೆ, ಮಟ್ಟೆ ಮತ್ತು ಕಾಯಿ ಇತ್ಯಾದಿಗಳು ಕೆಳಕ್ಕೆ ಬಿದ್ದರೂ ಹೊಸ ಸಸಿ ಅದನ್ನು  ತಡೆದುಕೊಳ್ಳುವಂತಿರಬೇಕು.

*ಹಳೆಯ ಮರಗಳಿಂದ ಕಾಯಿ ಕೀಳುವಾಗ ಹೊಸದಾಗಿ ನಾಟಿ ಮಾಡಿದ ಸಸಿಗಳ ಮೇಲೆ ಬೀಳದಂತೆ ಎಚ್ಚರವಹಿಸಿ.
* ಹಳೆಯ ಮರಗಳನ್ನು ಕತ್ತರಿಸುವಾಗ ಅದರ ಪಕ್ಕದ ಸಣ್ಣ ಮರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT