ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆ ಪಾತ್ರೆ, ಹಳೆ ಕಬ್ಬಿಣ... ವಿಜ್ಞಾನದ ಪಠಣ

Last Updated 28 ಜನವರಿ 2013, 19:59 IST
ಅಕ್ಷರ ಗಾತ್ರ

ವಿಜ್ಞಾನ... ಹೆಸರು ಕೇಳಿದರೇನೇ ಹಲವು ವಿದ್ಯಾರ್ಥಿಗಳಿಗೆ ನಡುಕ. ಪ್ರಯೋಗದ ಬಗ್ಗೆ ಹೇಳಿದರಂತೂ ಇನ್ನೂ ಹೆಚ್ಚಿನ ಆತಂಕ. ವಿಜ್ಞಾನದ ಮಾದರಿಗಳನ್ನು ಕಂಡೇ ಎಷ್ಟೋ ವಿದ್ಯಾರ್ಥಿಗಳು ಭಯಭೀತರಾಗುವುದೂ ಉಂಟು.

ಆದರೆ, ವಿಜ್ಞಾನ ಕಬ್ಬಿಣದ ಕಡಲೆಯಲ್ಲ. ನಿರುಪಯುಕ್ತ ವಸ್ತುಗಳಾದ ಖಾಲಿ ಡಬ್ಬಿಗಳು, ಮರದ ಹಲಗೆ, ಗಾಜಿನ ಸೀಸೆ, ಹಳೆ ಸೈಕಲ್‌ನ ಭಾಗ, ಪ್ಲಾಸ್ಟಿಕ್ ಚೆಂಡು, ಕೊಳವೆಗಳು, ಹಳೆಯ ವಿದ್ಯುತ್ ಸಲಕರಣೆಗಳು, ಬಲ್ಬು, ಹಳೆ ಟ್ಯೂಬ್‌ಲೈಟ್, ಚೋಕ್, ಆಸ್ಪತ್ರೆಯಲ್ಲಿ ದೊರೆಯವ ಖಾಲಿ ಗ್ಲೂಕೋಸ್ ಸೀಸೆಗಳು, ಡ್ರಿಪ್‌ಸೆಟ್‌ಗಳು (ನಳಿಕೆ), ಸಿರಿಂಜ್... ಇತ್ಯಾದಿಗಳಿಂದಲೂ ವಿಜ್ಞಾನ ಮಾದರಿ ತಯಾರಿಸಬಹುದು, ವಿಜ್ಞಾನವನ್ನೂ ಅಷ್ಟೇ ಸಲೀಸು ಮಾಡಿಕೊಳ್ಳಬಹುದು ಎಂದು ಹೇಳಿಕೊಡುವ ಮೂಲಕ ವಿದ್ಯಾರ್ಥಿಗಳನ್ನು ಹುರುದುಂಬಿಸುತ್ತಿರುವ ಕೀರ್ತಿ ತುಮಕೂರಿನ ಕಾಳಿದಾಸ ಪ್ರೌಢಶಾಲೆಯದ್ದು.

70ರ ದಶಕದಲ್ಲೇ ವಿಭಿನ್ನ ಪ್ರಯೋಗಾಲಯವನ್ನು ಹುಟ್ಟು ಹಾಕುವ ಮೂಲಕ ವಿದ್ಯಾರ್ಥಿಗಳು ವೈಜ್ಞಾನಿಕ ಪ್ರಯೋಗಗಳಲ್ಲಿ ಕ್ರಿಯಾತ್ಮಕವಾಗಿ ಬೆರೆಯುವಂತೆ ಮಾಡಿದಂತಹ ಹೆಗ್ಗಳಿಗೆ ಇದರದ್ದು. ವಿಜ್ಞಾನದ ತತ್ವಗಳನ್ನು ಪ್ರಾಯೋಗಿಕ ಮಾದರಿಯ ಉಪಕರಣಗಳನ್ನು ಬಳಸಿಕೊಂಡು ಪಾಠ ಮಾಡಿದಾಗ ಮಾತ್ರ ವಿದ್ಯಾರ್ಥಿ ಕುತೂಹಲಭರಿತನಾಗಿ ಕಲಿಯಲು ಸಾಧ್ಯವಾಗುತ್ತದೆ ಎಂಬುದನ್ನು ಮನಗಂಡ ವಿಜ್ಞಾನ ಶಿಕ್ಷಕ ಎನ್.ಟಿ.ಶಿವಣ್ಣ ಅವರೇ ಈ ಸುಸಜ್ಜಿತ ಪ್ರಯೋಗಾಲಯಕ್ಕೆ ಕಾರಣಕರ್ತ. ನಿರುಪಯುಕ್ತ ವಸ್ತುಗಳನ್ನು ವಿದ್ಯಾರ್ಥಿಗಳಿಂದ ತರಿಸಿ ವಿಜ್ಞಾನ ತರಗತಿಗಳಲ್ಲಿ ಹಾಗೂ ಬಿಡುವಿನ ವೇಳೆಯಲ್ಲಿ ಸ್ವತಃ ವಿಜ್ಞಾನದ ಮಾದರಿಯನ್ನು ಪ್ರಾತ್ಯಕ್ಷಿಕೆ ಮೂಲಕ ಮಾಡಿ ತೋರಿಸುತ್ತಿದ್ದರು. ಪ್ರಯೋಗದ ವಸ್ತು ವಿಶೇಷತೆ ಅರ್ಥವಾಗುವಂತೆ ತಿಳಿಸುತ್ತಿದ್ದರು.

ಲಕ್ಷಾಂತರ ಹಣ ಉಳಿತಾಯ
ಶಿವಣ್ಣ ಅವರು ಈ ಶಾಲೆಗೆ ಶಿಕ್ಷಕರಾಗಿ ನಿಯೋಜನೆಗೊಂಡದ್ದು 1970ರಲ್ಲಿ. 28 ವರ್ಷಗಳ ಅವಧಿಯಲ್ಲಿ ಇವರು ನಿರುಪಯುಕ್ತ ವಸ್ತುಗಳಿಂದ ಸೌರವ್ಯೆಹ, ಋತುಗಳು ಮತ್ತು ಗ್ರಹಣಗಳು, ಪ್ರತಿಫಲನ ದೂರದರ್ಶಕ, ವಕ್ರೀಭವನ ದೂರದರ್ಶಕ, ಪರಮಾಣುವಿನ ರಚನೆಯ ಮಾದರಿಗಳು, ಬೀಜವಿದಳನ, ಪ್ಲಮಿಂಗನ ನಿಯಮಗಳು, ಡೈನಾಮೋ, ಮೋಟಾರ್, ವಿದ್ಯುತ್ ಪ್ರವಾಹ ಪರಿಣಾಮಗಳು, ಟ್ರಾನ್ಸ್‌ಫಾರ್ಮರ್, ವಿದ್ಯುತ್ ಫ್ಯೂಸ್, ಟೆಲಿಗ್ರಫಿ, ಟೆಲಿಪೋನ್, ರಾಕೆಟ್, ಭೂಸ್ಥಿರ ಉಪಗ್ರಹಗಳು, ಓಜೋನ್ ಪದರ, ದೊಡ್ಡ ಗಾಳಿಯ ಯಂತ್ರ ಮುಂತಾದ 150ಕ್ಕೂ ಹೆಚ್ಚು ಮಾದರಿಗಳನ್ನು ತಯಾರಿಸಿದ್ದಾರೆ. ಇವುಗಳ ಅಂದಾಜು ವೆಚ್ಚ ಸುಮಾರುರೂ1.50ಲಕ್ಷ. ಆದರೆ  ಶಿವಣ್ಣ ಅವರು ತಯಾರಿಸಿರುವ ಮಾದರಿಯ ಮೊತ್ತ ಕೇವಲರೂ10 ಸಾವಿರ. ಇವುಗಳ ತಯಾರಿಕೆಗೆ ತೆಗೆದುಕೊಂಡದ್ದು 5,134 ಗಂಟೆ.

ಖಗೋಳ ಚಂದ್ರಯಾನ, ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಹಲವಾರು ಬಣ್ಣದ ನೈಜ ಚಿತ್ರಗಳನ್ನು ಸಂಗ್ರಹಿಸಿ 3 ಅಡಿ ಮತ್ತು 2 ಅಡಿ ಅಗಲದ 24 ಚಾರ್ಟ್‌ಗಳನ್ನು  ಹಾರ್ಡ್‌ಬೋರ್ಡ್ ಮೂಲಕ ಪ್ರಯೋಗಶಾಲೆಯಲ್ಲಿ ಗೋಡೆಗಳ ಮೇಲೆ ಶಾಶ್ವತವಾಗಿ ಪ್ರದರ್ಶಿಸಲಾಗಿದೆ.  ಸೂರ್ಯ, ಚಂದ್ರ ಗ್ರಹಣಗಳು ಸಂಭವಿಸಿದಾಗ ವೀಕ್ಷಣೆ ಕೂಡ ಉಂಟು. ಜೀವಶಾಸ್ತ್ರಕ್ಕೆ ಸಂಬಂಧಪಟ್ಟ ಸುಮಾರು 50 ಜೀವಿಗಳನ್ನು ಸಂಗ್ರಹಿಸಿಟ್ಟಿದ್ದಾರೆ.

ಪ್ರಶಸ್ತಿಗಳ ಮಹಾಪೂರ
ಶಿವಣ್ಣ ಅವರಿಂದ ಶಾಲೆಗೆ ಜಿಲ್ಲಾ ಮಟ್ಟದಲ್ಲಿ 16 ವರ್ಷ ಪ್ರಥಮ ಬಹುಮಾನ ಬಂದಿದೆ. ರಾಜ್ಯ ಮಟ್ಟದ ವಿಜ್ಞಾನ ಮೇಳದಲ್ಲಿ ನಾಲ್ಕು ಬಾರಿ ಪ್ರಥಮ ಬಹುಮಾನ, ದಕ್ಷಿಣ ಭಾರತದ ಒಂದೊಂದು ರಾಜ್ಯಗಳಲ್ಲಿ ಏರ್ಪಡಿಸುವ ವಿಜ್ಞಾನ ಮೇಳಗಳಲ್ಲಿ ಮೂರು ಬಾರಿ ಪ್ರಥಮ ಬಹುಮಾನ ಸಂದಿವೆ. ರಾಷ್ಟ್ರ ಮಟ್ಟದಲ್ಲಿ ನಡೆಯುವ ವಿಜ್ಞಾನ ಮೇಳದಲ್ಲಿ ಏಳು ಬಾರಿ ಭಾಗವಹಿದ್ದು, 1974ರಲ್ಲಿ ದೆಹಲಿಯಲ್ಲಿ ಏರ್ಪಡಿಸಿದ ವಿಜ್ಞಾನ ಮೇಳವನ್ನು ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ವೈಜ್ಞಾನಿಕ ಮಾದರಿಗಳನ್ನು ವೀಕ್ಷಿಸುತ್ತಾ ಬಂದಾಗ ಎನ್.ಟಿ.ಶಿವಣ್ಣ ಅವರು ತಯಾರಿಸಿದ `ಸೌರವ್ಯೆಹ ಮಾದರಿ'ಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

1977ರಲ್ಲಿ ದೆಹಲಿಯಲ್ಲಿ ಆಯೋಜಿಸಿದ್ದ ವಿಜ್ಞಾನ ಮೇಳದಲ್ಲಿ ಕಾಳಿದಾಸ ಪ್ರೌಢಶಾಲೆಯ ಮಾದರಿಗಳನ್ನು ಕಂಡು ಅಂದಿನ ರಾಷ್ಟ್ರಪತಿ ಎಸ್.ಸಂಜೀವರೆಡ್ಡಿ ಶಿವಣ್ಣ ಅವರಿಗೆ ಹರ್ಷ ವ್ಯಕ್ತಪಡಿಸಿದ್ದರು. 1986ರಲ್ಲಿ ಕೋಲ್ಕತ್ತಾದಲ್ಲಿ ಏರ್ಪಟ್ಟಿದ್ದ ಅಖಿಲ ಭಾರತ ವಿಜ್ಞಾನ ವಸ್ತುಪ್ರದರ್ಶನದಲ್ಲಿ ರಾಜ್ಯದಿಂದ ಆಯ್ಕೆಯಾಗಿದ್ದ ಎರಡು ಶಾಲೆಗಳಲ್ಲಿ ಕಾಳಿದಾಸ ಪ್ರೌಢಶಾಲೆಯೂ ಒಂದು.

ಯುನೆಸ್ಕೋದ ಶಿಕ್ಷಣ ತಂತ್ರಜ್ಞಾನ ಸಲಹೆಗಾರ ಪೀಟರ್ ಡೈ ಅವರು ಶಾಲೆಗೆ ಭೇಟಿ ನೀಡಿ, ಪ್ರಯೋಗಾಲಯದ ಸುಧಾರಿತ ಉಪಕರಣಗಳನ್ನು ವೀಕ್ಷಿಸಿ, ಇದೊಂದು ಮಹತ್ತರ ಸಾಧನೆ ಎಂದು ಪ್ರಶಂಸೆ ವ್ಯಕ್ತಪಡಿಸಿ, ವೈಜ್ಞಾನಿಕ ಉಪಕರಣಗಳ ವಿವರ ಮತ್ತು ಚಿತ್ರವನ್ನು ಮುಂದುವರೆಯುತ್ತಿರುವ ರಾಷ್ಟ್ರದಲ್ಲಿನ ಶಾಲೆಗಳ ಪ್ರಯೋಜನಕ್ಕಾಗಿ ಯುನೆಸ್ಕೋ ಕಳುಹಿಸಿ ಕೊಟ್ಟಿದೆ.    
       
ಜೀವನವೇ ಪ್ರಯೋಗಾಲಯ
ತುಮಕೂರಿನ ಕೊರಟಗೆರೆ ತಾಲ್ಲೂಕಿನ ದುರ್ಗದ ನಾಗೇನಹಳ್ಳಿಯಲ್ಲಿ ಜನಿಸಿದವರು ಶಿವಣ್ಣ. ಒಬ್ಬಂಟಿ ಜೀವನವನ್ನು ಶಿಕ್ಷಕ ವೃತ್ತಿಯಲ್ಲಿ ಕಳೆದರೂ ಶಾಲೆಯ ವಿಜ್ಞಾನಕ್ಕಾಗಿ ತೊಡಗಿಸಿಕೊಂಡಿದ್ದು ಅಪಾರ. ನಿವೃತ್ತಿ ಹೊಂದಿ 14 ವರ್ಷ ಕಳೆದಿದೆ. 72ರ ಹರಯದಲ್ಲೂ ಮನೆಯನ್ನು ಪ್ರಯೋಗಾಲಯ ಮಾಡಿಕೊಂಡು ನಿತ್ಯ ಒಂದಲ್ಲಾ ಒಂದು ಪ್ರಯೋಗದಲ್ಲಿ ನಿರತರಾಗಿದ್ದಾರೆ. ಇಳಿ ವಯಸ್ಸಿನಲ್ಲೂ ರಾಜ್ಯ ರಾಷ್ಟ್ರ ಕುರಿತಾದ ವಿಜ್ಞಾನ ವಿಷಯವನ್ನು ಪಟಪಟನೆ ಹೇಳುತ್ತಾರೆ. 1968ರಲ್ಲಿ ಪ್ರಯೋಗ ನಿರತ ಸಂದರ್ಭದಲ್ಲಿ ತಮ್ಮ ಬಲ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡರೂ ಆತ್ಮವಿಶ್ವಾಸ ಕಳೆದುಕೊಳ್ಳದೆ ಮುಂದುವರೆಯುತ್ತಾ ಸಾಗಿದರು. ಪ್ರಯೋಗಾಲಯವನ್ನು ಸರ್ಕಾರ ಉಳಿಸಿ, ಅಭಿವೃದ್ಧಿಪಡಿಸಿ ಇತರರಿಗೆ ಅನುಕೂಲವಾಗುವಂತೆ ಮಾಡಿಕೊಡಬೇಕು ಎನ್ನುವುದು ಅವರ ಮನದಾಳದ ಮಾತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT