ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆ ಬಾಗಿಲು, ಹೊಸ ಮೇಜು

Last Updated 5 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ನೀವು ಎಂದಾದರೂ ನಗರದ ಹೊಸಹಳ್ಳಿಗೆ ಹೋಗುವ ಹಳೆ ರಸ್ತೆಯಲ್ಲಿ ಓಡಾಡಿದ್ದೀರಾ? ಗಲ್ಲಿಯಂತಹ ಈ ರಸ್ತೆ ಗೋರಿಪಾಳ್ಯದಲ್ಲಿ ಇದೆ. ರಸ್ತೆಯ ಎಡ-ಬಲ ಬದಿಗಳಲ್ಲಿ ಇರುವ ಹಳೆಯ ಇಮಾರತುಗಳು ಸೂಜಿಗಲ್ಲಿನಂತೆ ಸೆಳೆಯುತ್ತವೆ.

ಅದಕ್ಕಿಂತ ಹೆಚ್ಚಾಗಿ ಈ ಕಟ್ಟಡಗಳ ಮುಂಭಾಗದಲ್ಲಿ ನಿಲ್ಲಿಸಿರುವ ಹಳೆ ಬಾಗಿಲು, ಕಿಟಕಿ, ಇಮಾರತಿನ ಅವಶೇಷಗಳು; ಹೊಸ ಕಪಾಟು, ಕುರ್ಚಿ, ಮೇಜುಗಳು ನಮ್ಮನ್ನು ಅಲ್ಲಿಯೇ ತಡೆದು ನಿಲ್ಲಿಸುತ್ತವೆ. `ಕಟ್, ಕಟ್, ಪಟ್' ಸದ್ದು ಕಿವಿಯನ್ನು ಆವರಿಸುತ್ತದೆ. ಹೊಸಹಳ್ಳಿ ರಸ್ತೆ ವಿಶೇಷವೇ ಅದು!

ಮರದ ಹಳೆಯ ಸಾಮಗ್ರಿಗಳನ್ನು ಮಾರುವವರು ಮತ್ತು ಕೊಳ್ಳುವವರಿಗೆ ಇದೊಂದು ಸ್ವರ್ಗ (ರಸ್ತೆ ಸ್ಥಿತಿ ಮಾತ್ರ ನರಕಸದೃಶ). ನಗರದ ಇನ್ಯಾವುದೋ ಭಾಗದಲ್ಲಿ ಪುರಾತನ ಬಂಗಲೆಯನ್ನು ಕೆಡವಿ, ಹೊಸ ಸಂಕೀರ್ಣ ಕಟ್ಟುತ್ತಾರೆ ಎಂದರೆ ಗೋರಿಪಾಳ್ಯದಲ್ಲಿ ಸಂಭ್ರಮದ ಅಲೆ ಏಳುತ್ತದೆ. ಏಕೆಂದರೆ, ಬಂಗಲೆ ಅವಶೇಷದಿಂದ ಹೊರಬಂದ ಮರದ ಬಾಗಿಲು, ಕಿಟಕಿ, ತೊಲೆ ಮತ್ತು ಹಳೆಯ ಪೀಠೋಪಕರಣಗಳೆಲ್ಲ ಹೊಸಹಳ್ಳಿ ರಸ್ತೆಯನ್ನು ಹುಡುಕಿಕೊಂಡು ಬರುತ್ತವೆ.

ಫ್ರಾನ್ಸ್‌ನಿಂದ ಬರುವ ತಾಂತ್ರಿಕ ಸರಂಜಾಮು, ಚೀನಾದಿಂದ ಬರುವ ಮುದುಡಿ, ಮಡಚಿ ಚೀಲದಲ್ಲಿ ತುರುಕಬಹುದಾದ ನವೀನ ಪೀಠೋಪಕರಣಗಳು, ಮಲೇಷ್ಯಾದಿಂದ ಬರುವ ಬೇಕೆಂದಾಗಷ್ಟೇ ಗಾಳಿ ಬಿಡುವ ಪ್ಲಾಸ್ಟಿಕ್ ಕಿಟಕಿಗಳ ಸಂತೆಯೇ ಮುಂದೆ ನೆರೆದಿರುವಾಗ ಭಾರವಾದ ಕಟ್ಟಿಗೆ ಸಾಮಗ್ರಿಗಳು ಬೇಕಾಗಿದ್ದಾದರೂ ಯಾರಿಗೆ?

ಕಡಿಮೆ ಬೆಲೆಗೆ ಸಿಗುವ ಈ ವಸ್ತುಗಳನ್ನು ಹೊತ್ತು ತರುವ ಇಲ್ಲಿಯ ಕರಕುಶಲ ಕರ್ಮಿಗಳು ಅವುಗಳಿಗೆ ಹೊಸರೂಪ ನೀಡುತ್ತಾರೆ. ಅವರ ಉಳಿ ಮತ್ತು ಕುಂಚದ ಮಾಂತ್ರಿಕ ಸ್ಪರ್ಶಕ್ಕೆ ಒಳಗಾಗುವ ಕಟ್ಟಿಗೆ ಸಾಮಾನುಗಳು ಹೊಸದರಂತೆ ಫಳಫಳ ಹೊಳೆಯುತ್ತವೆ. ಮುರಿದ ಹ್ಯಾಂಡಲ್ ಬದಲಾವಣೆ ಮಾಡುವುದು, ಕಿತ್ತುಹೋದ `ಸ್ಕ್ರೂ' ಜಾಗದಲ್ಲಿ ಹೊಸ ಮೊಳೆ ಜಡಿಯುವುದು, ಚಿಲಕ ದುರಸ್ತಿ ಮಾಡುವುದು, `ಕಿರ್' ಎನ್ನುವ ಸದ್ದು ದೂರ ಮಾಡುವುದು, ಕಳೆಗುಂದಿದ ಕಟ್ಟಿಗೆಗೆ ಬಣ್ಣ ಬಳಿಯುವುದು... ಇಂತಹ ಅಲ್ಪಸ್ವಲ್ಪ ರಿಪೇರಿ ಕೆಲಸದ ಬಳಿಕ ರಸ್ತೆ ಪಕ್ಕದಲ್ಲೇ ಒಂದು ಅಂದದ ಶೋರೂಮ್ ಸಿದ್ಧವಾಗುತ್ತದೆ. ಮಧ್ಯಮ ವರ್ಗದವರು ಹಾಗೂ ಬಡವರು ತಮ್ಮ ಮನೆಗಳ ಅಗತ್ಯ ಪೂರೈಸಿಕೊಳ್ಳಲು ಇಲ್ಲಿಗೇ ಬರುತ್ತಾರೆ.

ಮನೆಗೆ ಬಾಗಿಲು ನಿಲ್ಲಿಸಲು ಜೋತಿಷಿಗಳ ಬಳಿಗೆ ಮುಹೂರ್ತ ಕೇಳಲು ಹೋಗುವ ಮುಂಚೆ ಎಷ್ಟೋ ಜನರ ಸವಾರಿ ಹೊಸಹಳ್ಳಿ ರಸ್ತೆಗೆ ಧಾವಿಸುತ್ತದೆ. ಇಲ್ಲಿ ಬಾಗಿಲು-ಚೌಕಟ್ಟುಗಳ ಖರೀದಿಯಾದ ನಂತರವಷ್ಟೇ ಮಿಕ್ಕ ವಿಧಿಗಳ ವಿಚಾರ. ತೇಗ, ಹೊನ್ನೆ, ಬೇವು, ಮತ್ತಿ, ನೇರಳೆ, ಹಲಸು, ಬಿಲ್ವ, ನಂದಿ ಮೊದಲಾದ ಹತ್ತಾರು ವಿಧದ ಮರಗಳ ಸಲಕರಣೆಗಳು ಇಲ್ಲಿ ಸಿಗುತ್ತವೆ. ಹಳೆ ಮನೆಗಳಿಂದ ಕೊಂಡುತಂದ ಕಟ್ಟಿಗೆ ತುಂಡುಗಳಿಂದ ಗ್ರಾಹಕರಿಗೆ ಬೇಕಾದ ಹೊಸ ವಸ್ತುಗಳನ್ನೂ ಇಲ್ಲಿ ಸಿದ್ಧಪಡಿಸಿಕೊಡಲಾಗುತ್ತದೆ. ಬೇಕಾದ ವಿನ್ಯಾಸದ ಪೀಠೋಪಕರಣ ತಯಾರು ಮಾಡಲು ಕುಶಲಕರ್ಮಿಗಳು ಸದಾ ಸಿದ್ಧರಾಗಿಯೇ ಇರುತ್ತಾರೆ.

ಬಯಸಿದ ಪೀಠೋಪಕರಣ ಲಭ್ಯ
ಮನೆ ಕಟ್ಟಲು ಬೇಕಾದ ಕಿಟಕಿ, ಬಾಗಿಲು, ಚೌಕಟ್ಟು, ಕಂಬ, ಕಪಾಟು, ಕುರ್ಚಿ, ಮೇಜು, ದಿವಾನ, ಡೈನಿಂಗ್ ಟೇಬಲ್, ಮಂಚ, ಸೋಫಾ ಸೆಟ್, ಟೀಪಾಯಿ, ಡ್ರೆಸ್ಸಿಂಗ್ ಟೇಬಲ್ ಸೇರಿದಂತೆ ಎಲ್ಲ ಬಗೆಯ ಪೀಠೋಪಕರಣ ಸಿದ್ಧಪಡಿಸಲಾಗುತ್ತದೆ. ಅಂದಾಜು 50 ಅಂಗಡಿಗಳು ಇಲ್ಲಿದ್ದು, ಪ್ರತಿಯೊಂದು ಮಳಿಗೆಯಲ್ಲೂ ಆ ಕ್ಷಣದಲ್ಲೇ ಬೇಕಾಗಿದ್ದನ್ನು ತಯಾರಿಸಿ ಕೊಡುವ ಪುಟ್ಟ ಕಾರ್ಯಾಗಾರದಂಥ ವ್ಯವಸ್ಥೆಯೇ ಇದೆ. ಒಂದೊಂದು ಮಳಿಗೆಯೂ ಏಳೆಂಟು ಕುಟುಂಬಗಳಿಗೆ ಅನ್ನ ನೀಡುತ್ತದೆ. ಮುಸ್ಲಿಮರೇ ಈ ಕಾಯಕದಲ್ಲಿ ಹೆಚ್ಚಾಗಿ ತೊಡಗಿಕೊಂಡಿರುವುದು ವಿಶೇಷ.

ಆಟೊ ಟಿಪ್ಪರ್‌ಗಳು, ಗೂಡ್ಸ್ ಲಾರಿಗಳು, ಕೊನೆಗೆ ಟಾಂಗಾಗಳು ನಿತ್ಯ ಒಂದಿಲ್ಲೊಂದು ಭಾಗದಿಂದ ಹಳೆ ಮನೆಗಳ ಅಸ್ಥಿಪಂಜರ ತಂದು ಸುರಿಯುತ್ತಲೇ ಇರುತ್ತವೆ. ಕಳೆದ 25 ವರ್ಷಗಳಿಂದ ಇಲ್ಲಿ `ಹಳೆ ಕಟ್ಟಿಗೆ, ಹೊಸ ಸಾಮಗ್ರಿ'ಗಳ ಈ ವಹಿವಾಟು ನಡೆಯುತ್ತಲೇ ಇದೆ. ಗೋರಿಪಾಳ್ಯ ಮಾತ್ರವಲ್ಲದೆ ಟ್ಯಾನರಿ ರಸ್ತೆ, ಶಿವಾಜಿನಗರ, ಸರಾಯಿ ಪಾಳ್ಯ ಸೇರಿದಂತೆ ಹಲವು ಕಡೆಗಳಲ್ಲಿ ಈ ವ್ಯವಹಾರ ನಡೆಯುತ್ತದೆ. ಸೆಂಟ್ರಲ್‌ನ ಮಂತ್ರಿ ಮಾಲ್ ಹತ್ತಿರವೂ ಮೊದಲು ಈ ಮರದ ವ್ಯಾಪಾರ ನಡೆಯುತ್ತಿತ್ತು. ಆದರೆ, ಮೆಟ್ರೊ ಕಾಮಗಾರಿ ಆರಂಭವಾದ ಮೇಲೆ ಅಲ್ಲಿಂದ ಮಳಿಗೆಗಳು ಎತ್ತಂಗಡಿಯಾಗಿವೆ.

ಗೋರಿಪಾಳ್ಯದ ಮುಖ್ಯರಸ್ತೆಯಲ್ಲಿ ವಿದೇಶದಿಂದ ಆಮದು ಮಾಡಿಕೊಂಡ ತರಹೇವಾರಿ ಪಿಠೋಪಕರಣಗಳೂ ಸಿಗುತ್ತವೆ. ಹೊಸ ಸಾಮಗ್ರಿ ಕೊಂಡವರು, ಸಿಕ್ಕ ಬೆಲೆಗೆ ಹಳೆಯದನ್ನು ಇಲ್ಲಿ ತಂದು ಹಾಕುತ್ತಾರೆ. ಅಲ್ಪ-ಸ್ವಲ್ಪ ರಿಪೇರಿ ಮಾಡಿ, ಅವುಗಳನ್ನು ಮಾರಾಟ ಮಾಡಲಾಗುತ್ತದೆ. ಕಚೇರಿಗೆ ಬೇಕಾದ ಸಾಮಾನುಗಳು, ಹೋಟೆಲ್ ಮತ್ತು ಬೇಕರಿ ಸಲಕರಣೆಗಳು ಖರೀದಿಗೆ ದೊರೆಯುತ್ತವೆ.
ನಾವು ಕೊಂಡುಕೊಳ್ಳುವ ವಸ್ತು ಯಾವ ಕಟ್ಟಿಗೆಯಲ್ಲಿ ತಯಾರಾಗಿದ್ದು, ವಿನ್ಯಾಸ ಹೇಗಿದೆ ಎನ್ನುವುದರ ಮೇಲೆ ಬೆಲೆ ನಿರ್ಧಾರ ಆಗುತ್ತದೆ. 300 ರೂಪಾಯಿಯಿಂದ 10,000 ರೂಪಾಯಿವರೆಗೆ ವಿವಿಧ ಬೆಲೆಗಳಲ್ಲಿ ಸಾಮಗ್ರಿಗಳು ಸಿಗುತ್ತವೆ.

ಶೆಡ್‌ಗಳನ್ನು ಹಾಕಲು ಬೇಕಾದ ಸಾಮಗ್ರಿ ಸಹ ಇಲ್ಲಿಯ ಮಳಿಗೆಗಳಲ್ಲಿ ದೊರೆಯುತ್ತದೆ. ಇಲ್ಲಿಯ ಇಡೀ ಬೀದಿಯಲ್ಲಿ ಎಲ್ಲಿ ನೋಡಿದರೂ ಕಟ್ಟಿಗೆ ಸಾಮಗ್ರಿಗಳು ಹರಡಿಕೊಂಡಿದ್ದನ್ನು ನೋಡುವುದೇ ಒಂದು ಆನಂದ. ಅವುಗಳಲ್ಲಿ ಇರುವ ಕುಸುರಿ ಕಲೆ ಕಣ್ಮನ ಸೆಳೆಯುತ್ತದೆ. ಕಟ್ಟಿಗೆ ತುಂಬಿಕೊಂಡು ಬರುವ ವಾಹನಗಳು ಇಕ್ಕಟ್ಟಾದ ಗಲ್ಲಿಯಲ್ಲಿ ಅವುಗಳನ್ನು ಇಳಿಸಲು ನಡೆಸುವ ಸಾಹಸ ಕಚಗುಳಿ ಇಡುತ್ತದೆ.
ಜಿದ್ದಿಗೆ ಬಿದ್ದು ಪರಸ್ಪರ ಬಿಸಿಬಿಸಿ ಮಾತುಗಳನ್ನು ವಿನಿಮಯ ಮಾಡಿಕೊಂಡ ತುಸು ಸಮಯದಲ್ಲಿಯೇ ಕಟ್ಟಿಗೆ ಇಳಿಸಲು ಕೈಜೋಡಿಸುವ ಅಕ್ಕರೆ ನೋಡುಗರಿಗೆ ಏನೋ ಪಾಠ ಹೇಳುತ್ತದೆ. ಕಿಟಕಿ-ಬಾಗಿಲುಗಳನ್ನು ಹೊತ್ತು ತರುವ ಹಳೆ ಟಾಂಗಾಗಳು ನಾವು ಬೆಂಗಳೂರಿನಿಂದ ಆಚೆಗೆ ಬಂದಿದ್ದೇವೆ ಎನ್ನುವ ಭ್ರಮೆ ಮೂಡಿಸುತ್ತವೆ.

ಆಗಲೇ ಚೆನ್ನಾಗಿತ್ತು
ನಮ್ಮ ಅಂಗಡಿ ಕಳೆದ 25 ವರ್ಷಗಳಿಂದ ಇಲ್ಲಿಯೇ ಇದೆ. ಹಿಂದೆ ಮನೆ ಕೆಡವುತ್ತಿದ್ದವರು ಬಂದು ಅಲ್ಲಿಯ ಹಳೆಯ ಸಾಮಾನು ಒಯ್ಯಲು ಹೇಳುತ್ತಿದ್ದರು. ಅವುಗಳನ್ನು ಉಚಿತವಾಗಿ ಕೊಡುತ್ತಿದ್ದರು. ಈಗ ಕಾಲ ಬದಲಾಗಿದೆ. ಎಲ್ಲವನ್ನೂ ದುಡ್ಡು ಕೊಟ್ಟು ತರಬೇಕು. ಹೊಸ ಕಟ್ಟಿಗೆ ಸಿಗುವುದಿಲ್ಲ. ಹಳೆಯದಕ್ಕೂ ಅಂಡಲೆಯಬೇಕು. ಅದನ್ನು ಪಡೆಯಲೂ ಸ್ಪರ್ಧೆ. ಕಾರ್ಮಿಕರಿಗೆ ಕೊಡುವ ಕೂಲಿ ಮೊತ್ತವೂ ದೊಡ್ಡದಾಗಿದೆ. ವ್ಯಾಪಾರ ಕುದುರಿದರೆ ಉಂಟು, ಇಲ್ಲದಿದ್ದರೆ ಇಲ್ಲ. ಅಂತೂ ಜೀವನ ನಿರ್ವಹಣೆಗೆ ಬೇಕಾದಷ್ಟು ಆದಾಯ ಸಿಗುತ್ತದೆ.
-ಫಾದಾ ಹುಸೇನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT