ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆ ಮೊಟ್ಟೆ ಹೊಸ ಖಾದ್ಯ

Last Updated 18 ಜನವರಿ 2012, 19:30 IST
ಅಕ್ಷರ ಗಾತ್ರ

ಪ್ರೊಟೀನ್‌ಯುಕ್ತ ಆಹಾರ ಎಂದೊಡನೆ ಜನರ ಬಾಯಲ್ಲಿ ಕೇಳಿಬರುವುದು `ಮೊಟ್ಟೆ~ ಎಂಬ ಉದ್ಗಾರ. ಬೇಳೆ ಕಾಳು, ಸೊಪ್ಪು, ಹಸಿ ತರಕಾರಿ ಮೊದಲಾದವು ಪ್ರೊಟೀನ್‌ಯುಕ್ತ ಆಹಾರಗಳಲ್ಲಿ ಮೊದಲ ಸಾಲಲ್ಲಿ ನಿಲ್ಲುತ್ತವೆಯಾದರೂ ಮೊಟ್ಟೆ ಹೆಚ್ಚು ಜನಪ್ರಿಯ. ಪ್ರೊಟೀನ್‌ಯುಕ್ತ ಆಹಾರಗಳಲ್ಲೇ ಅತಿ ಹೆಚ್ಚು ಪೋಷಕಾಂಶ ಇರುವುದು ಮೊಟ್ಟೆಯಲ್ಲಿ. `ದಿನಕ್ಕೆ ಒಂದು ಮೊಟ್ಟೆ ತುಂಬುವುದು ಹೊಟ್ಟೆ~ ಎಂಬ ಜಾಹೀರಾತುವಾಕ್ಕು ಕೂಡ ಈಗ ನಾಣ್ಣುಡಿಯಂತಾಗಿದೆ.

ಬೇಯಿಸಿದ ಮೊಟ್ಟೆ, ಎಗ್‌ರೈಸ್, ಎಗ್‌ಬುರ್ಜ್, ಆಮ್ಲೆಟ್, ಎಗ್ ಕಬಾಬ್ ಇವಿಷ್ಟೇ ಮೊಟ್ಟೆಯ ಖಾದ್ಯಗಳಾಗಿದ್ದವು. ಈಗ ಹೊಸ ಬಗೆಯ ಮೊಟ್ಟೆ ಪದಾರ್ಥ ಉದರ ಸೇರಲು ಸಿದ್ಧವಾಗಿವೆ. ಹೋಟೆಲ್, ರೆಸ್ಟೋರೆಂಟ್, ಗೃಹಿಣಿಯರಾದಿಯಾಗಿ ಹೊಸಹೊಸ ರೆಸಿಪಿಯನ್ನು ತಯಾರಿಸುತ್ತಿದ್ದಾರೆ.

ಹೊಸಬಗೆಯ ಮೊಟ್ಟೆ ರೆಸಿಪಿಯಲ್ಲಿ ಕೆಲವೊಂದನ್ನು ಇಲ್ಲಿ ನೋಡಬಹುದು.

ಚಾಕೊಲೇಟ್ ಫ್ರೆಂಚ್ ಟೋಸ್ಟ್
ಬೇಕಾಗುವ ಪದಾರ್ಥಗಳು: 3 ಔನ್ಸ್ ಮೊಟ್ಟೆಯ ಬಿಳಿಲೋಳೆ, 1/2 ಚಮಚ ಚಾಕ್ಲೆಟ್ ಪ್ರೊಟೀನ್ ಪೌಡರ್, 3 ಬ್ರೆಡ್ ಪೀಸ್, 1/8 ಕಪ್ ಶುಗರ್ ಫ್ರೀ ಮೇಪಲ್ ಸಿರಪ್, ದಾಲ್ಚಿನ್ನಿ ಪೌಡರ್, ಸಕ್ಕರೆ, ಶುಗರ್ ಫ್ರೀ ಪ್ಯಾನ್‌ಕೇಕ್, ಬಾಳೆಹಣ್ಣಿನ ಹೋಳುಗಳು, ಕೊಬ್ಬಿನಂಶ ಕಡಿಮೆ ಇರುವ ಬೆಣ್ಣೆ, ಆಲಿವ್ ಎಣ್ಣೆ.

ತಯಾರಿಸುವ ವಿಧಾನ: ಬಾಣಲೆಯನ್ನು ಒಲೆಯಮೇಲಿಟ್ಟು ಕಡಿಮೆ ಶಾಖದಲ್ಲೇ ಬಿಸಿಯಾಗುವಂತೆ ಮಾಡಿ. ನಂತರ ಮೊಟ್ಟೆಯ ಬಿಳಿಲೋಳೆ ಮತ್ತು ಚಾಕೊಲೇಟ್ ಪ್ರೊಟೀನ್ ಪೌಡರ್ ಮಿಶ್ರಣವನ್ನು ಬಾಣಲೆಗೆ ಹಾಕಬೇಕು. ಆನಂತರ ಬ್ರೆಡ್ ಚೂರುಗಳನ್ನು ಹಾಕಿ ಮಿಶ್ರಣಮಾಡಿ, ಅದು ಕಂದು ಬಣ್ಣ ಬರುವ ತನಕ ಎರಡೂ ಬದಿಗಳಲ್ಲಿ ಬೇಯಿಸಬೇಕು. ನಂತರ ಕೊಬ್ಬಿನಂಶ ಕಡಿಮೆ ಇರುವ ಬೆಣ್ಣೆ ಸಿಂಪಡಿಸಿ ಆ ಮಿಶ್ರಣದ ಮೇಲೆ ಬಾಳೆಹಣ್ಣಿನ ಚೂರುಗಳು, ಬ್ಲೂ ಬರ‌್ರೀಸ್, ಶುಗರ್ ಫ್ರೀ ಪ್ಯಾನ್‌ಕೇಕ್ ಫ್ಲೇವರ್ ಸಿರಪ್ ಮತ್ತು ದಾಲ್ಚಿನ್ನಿ ಪೌಡರ್ ಅನ್ನು ಉದುರಿಸಿ. ಈಗ `ಚಾಕೊಲೇಟ್ ಫ್ರೆಂಚ್ ಟೋಸ್ಟ್~ ಸವಿಯಲು ಸಿದ್ಧ.

ಪ್ರೊಟೀನ್‌ಭರಿತ ಪ್ಯಾನ್‌ಕೇಕ್
ಬೇಕಾಗುವ ಪದಾರ್ಥಗಳು: 1/4 ಕಪ್ ಮೊಟ್ಟೆಯ ಬಿಳಿ ಲೋಳೆ, 1/8 ಕಪ್ ಕಡಿಮೆ ಕೊಬ್ಬಿನ ಮೃದು ಗಿಣ್ಣು, 1.5 ಚಮಚ ಚಾಕೊಲೇಟ್, ಪ್ರೊಟೀನ್ ಪುಡಿ, ಒಂದು ಬಾಳೆಹಣ್ಣು, 1 ಚಮಚ ಸಕ್ಕರೆ ಫ್ರೀ ಮೇಪಲ್ ಸಿರಪ್, ಬೆಣ್ಣೆ, ಕೊಬ್ಬುರಹಿತ ಅಡುಗೆ ಎಣ್ಣೆ ಅಥವಾ ಆಲಿವ್ ಎಣ್ಣೆ.

ತಯಾರಿಸುವ ವಿಧಾನ: ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಕಡಿಮೆ ಶಾಖದಲ್ಲಿ ಕಾಯಲು ಬಿಡಿ. ಬೇರೊಂದು ಪಾತ್ರೆಯಲ್ಲಿ ಮೃದುವಾದ ಚೀಸ್, ಮೊಟ್ಟೆಯ ಬಿಳಿ ಲೋಳೆ ಹಾಗೂ ಪ್ರೊಟೀನ್ ಪೌಡರ್ ಅನ್ನು ಚೆನ್ನಾಗಿ ಮಿಶ್ರಣಮಾಡಬೇಕು. ಈ ಮಿಶ್ರಣವನ್ನು ಬಾಣಲೆಗೆ ಹಾಕಿ ಕಂದು ಬಣ್ಣ ಬರುವವರೆಗೂ ಬೇಯಿಸಬೇಕು. ನಂತರ ಅದಕ್ಕೆ ಬಾಳೆಹಣ್ಣಿನ ಪೀಸುಗಳನ್ನು  ಹಾಕಿ ಅಲಂಕರಿಸಿ.

ಕ್ಯಾಲಿಫೋರ್ನಿಯ ವೈಟ್ ಆಮ್ಲೆಟ್
ಬೇಕಾಗುವ ಪದಾರ್ಥಗಳು: 1 1/2 ಚಮಚ ಆಲೀವ್ ಆಯಿಲ್, 1 ಕಪ್ ಮೊಟ್ಟೆಯ ಬಿಳಿ ಲೋಳೆ, 1 ದೊಡ್ಡ ಅಣಬೆ, 1 1/2 ಕಟ್ ಪಾಲಕ್ ಸೊಪ್ಪು.

ತಯಾರಿಸುವ ವಿಧಾನ: ಒಂದು ಚಮಚ ಎಣ್ಣೆಯನ್ನು ಬಾಣಲೆಯಲ್ಲಿ ಹಾಕಿ ಬಿಸಿಮಾಡಿ ಅದರಲ್ಲಿ ಪಾಲಕ್ ಮತ್ತು ಅಣಬೆಯನ್ನು ಹುರಿದುಕೊಳ್ಳಬೇಕು. ಬೇರೊಂದು  ಬಾಣಲೆಯಲ್ಲಿ 1/2 ಚಮಚ ಎಣ್ಣೆಯನ್ನು ಹಾಕಿ ಕಡಿಮೆ ಶಾಖದಲ್ಲಿ ಕಾಯಿಸಿ. ಅದಕ್ಕೆ ಒಂದು ಕಪ್ ಮೊಟ್ಟೆಯ ಬಿಳಿ ಲೋಳೆಯನ್ನು ಸುರಿಯಬೇಕು. ಮೊಟ್ಟೆ ಬೇಯಲು ಆರಂಭವಾದ ಬಳಿಕ ಅದರ ಬದಿಯನ್ನು ಮೆಲ್ಲಗೆ ಮೇಲೆತ್ತಿ ಆಗ ಮೊಟ್ಟೆಯ ಬಿಳಿಭಾಗ ಸರಿಯಾಗಿ ಸೆಟ್ ಆಗುತ್ತದೆ. ಆಮ್ಲೆಟ್ ಇನ್ನೂ ತೇವಭರಿತವಾಗಿರುವಾಗಲೇ ಪಾಲಕ್ ಮತ್ತು ಅಣಬೆಯ ಪೀಸುಗಳನ್ನು ಅದರ ಮೇಲೆ ಉದುರಿಸಿ. ಆನಂತರ ಚೀಸ್ ಅನ್ನು ಹಾಕಿ, ಆಮ್ಲೆಟ್ಟನ್ನು ಮಡಚಿ. ಈಗ `ಕ್ಯಾಲಿಫೋರ್ನಿಯ ವೈಟ್ ಆಮ್ಲೆಟ್~ ಸವಿಯಲು ಸಿದ್ಧ.

ಮಕ್ಕಳಿಂದ ಹಿಡಿದು ಮುದುಕರವರೆಗೂ ಈ ಆಹಾರ ರುಚಿಕರ ಹಾಗೂ ಆರೋಗ್ಯಯುತವಾಗಿರುತ್ತದೆ. ಮನೆಯಲ್ಲಿಯೇ ಇದನ್ನು ಸುಲಭವಾಗಿ ಮಾಡಬಹುದು ಎಂಬುದು ದೀಪಾ ಟಿ. ಅವರ ಮಾತು. ಇವರು ಮೊಟ್ಟೆಯಿಂದ ವಿವಿಧ ಬಗೆಯ ತಿನಿಸು ಮಾಡುವ ಕೌಶಲ್ಯ ಪಡೆದಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT