ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಗನ್ನಡ ಸಾಹಿತ್ಯಬುತ್ತಿ ಬಿಚ್ಚಲು ಹಂಪನಾ ಕರೆ

Last Updated 16 ಅಕ್ಟೋಬರ್ 2011, 8:50 IST
ಅಕ್ಷರ ಗಾತ್ರ

ದಾವಣಗೆರೆ: ಹಳೆಗನ್ನಡವು ಕನ್ನಡ ಸಾಹಿತ್ಯದ ಅಡಿಪಾಯವಾಗಿದ್ದು, ಹಿರಿಯರು ಮಾಡಿಟ್ಟಿರುವ ಆ ಬುತ್ತಿಯನ್ನು ಬಿಚ್ಚುವ ಮೂಲಕ ವಿದ್ಯಾರ್ಥಿಗಳು ಜ್ಞಾನ ಸಂಪಾದಿಸಬೇಕು ಎಂದು ಹಿರಿಯ ವಿದ್ವಾಂಸ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಹಂಪ ನಾಗರಾಜಯ್ಯ ಕರೆ ನೀಡಿದರು.

ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ಕನ್ನಡ ಅಧ್ಯಯನ ವಿಭಾಗದಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ, `ಪ್ರಾಚೀನ ಕನ್ನಡ ಕಾವ್ಯ: ಓದು-ವ್ಯಾಖ್ಯಾನ~ ಕುರಿತ ಯುಜಿಸಿ ಪ್ರಾಯೋಜಿತ ರಾಜ್ಯಮಟ್ಟದ ಒಂದು ದಿನದ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು.

ಮನೆಗೆ ತಳಪಾಯವಿದ್ದಂತೆ ಕನ್ನಡ ಸಾಹಿತ್ಯಕ್ಕೆ ಹಳೆಗನ್ನಡವೂ ಅಷ್ಟೇ ಮುಖ್ಯವಾಗಿದ್ದು, ಅದರ ಅಧ್ಯಯನ ಮಾಡಬೇಕು. ಜ್ಞಾನ ಸಂಪಾದನೆಗೆ ಯಾವುದೇ ಒಳ ದಾರಿಗಳಿರುವುದಿಲ್ಲ. ವಿದ್ವತ್ತು ಮಾರುಕಟ್ಟೆ ವಸ್ತುವಲ್ಲ. ಆ ಕ್ಷೇತ್ರದಲ್ಲಿ ಕೃಷಿ ಮತ್ತು ಅರ್ಪಣಾ ಮನೋಭಾವದ ಮೂಲಕ ಜ್ಞಾನ ಸಂಪಾದಿಸಬೇಕಾಗುತ್ತದೆ ಎಂದು ಕಿವಿಮಾತು ಹೇಳಿದರು.

ಪ್ರಸ್ತುತ ಗಂಭೀರ ಅಧ್ಯಯನದಿಂದ ವಿಮುಖತೆ ಕಂಡುಬರುತ್ತಿದೆ. ಹಳೆಗನ್ನಡಕ್ಕೆ ಕೆಟ್ಟ ಸ್ಥಿತಿ ಬಂದಿದೆ. ಅದಕ್ಕೆ ಮತ್ತೆ ಒಳ್ಳೆಯ ಕಾಲ ಬರುವಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಇಂದಿನ ಪೀಳಿಗೆ ಹಳೆಗನ್ನಡವನ್ನು ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.

ಕನ್ನಡ ಸಾಹಿತ್ಯಕ್ಕೆ ಮುಪ್ಪು ಇಲ್ಲ, ಅದಕ್ಕೊಂದು ನಿರಂತರತೆಯಿದೆ. ಈ ಸಾಹಿತ್ಯಕ್ಕೆ ಬಡತನವಿಲ್ಲ, ಆ ಪರಂಪರೆಯಿರುವ ಕನ್ನಡಿಗರು ಅನಾಥರಲ್ಲ. ಆದರೆ, ಹಿರಿಯರ ಭಂಡಾರವನ್ನು ಒಡೆಯುವ ಮೂಲಕ ಜ್ಞಾನ ಸಂಪಾದಿಸುವ ಕೀಲಿಕೈ ನಾವಾಗಬೇಕು ಎಂದು ತಿಳಿಸಿದರು.

ಜೈನ ಕವಿಗಳು ಕನ್ನಡ ಸಾಹಿತ್ಯಕ್ಕೆ ನಿಜವಾದ ಅರ್ಥದಲ್ಲಿ ಆಮ್ಲಜನಕ ನೀಡಿದರು. ಕನ್ನಡಕ್ಕೆ ಹೊಸಗಾಳಿ ಬೀಸುವಂತೆ ಮಾಡಿದರು. 8ನೇ ಶತಮಾನದವರೆಗೆ ಇಡೀ ಏಷ್ಯಾ ಖಂಡದಲ್ಲೇ ಸಂಸ್ಕೃತವೇ ರಾಜಭಾಷೆಯಾಗಿತ್ತು. ಅಂಥ ಸನ್ನಿವೇಶದಲ್ಲಿ ದೇಸಿ ಭಾಷೆಗೆ ಜೀವ ತುಂಬುವ ಕೆಲಸ ಕನ್ನಡದಲ್ಲಿ ನಡೆಯಿತು. ಹಳೆಗನ್ನಡ ಕವಿಗಳು ತಮ್ಮ ಕೃತಿಗಳ ಮೂಲಕ ನಮ್ಮಲ್ಲಿ ಸ್ವಾಭಿಮಾನ ಮೂಡಿಸುವ ಕೆಲಸ ಮಾಡಿದರು ಎಂದು ವಿವರಿಸಿದರು.

ಭಾಷಣದುದ್ದಕ್ಕೂ ಆದಿಕವಿ ಪಂಪನ ಪದ್ಯಗಳನ್ನು ಉದಾಹರಿಸಿದ ಹಂಪನಾ, ಪಂಪ ಎಲ್ಲ ಕಾಲಕ್ಕೂ ಸಲ್ಲುವ ಕವಿ. ಆತ ಕನ್ನಡವನ್ನು ಬಹಳ ಎತ್ತರಕ್ಕೆ ತೆಗೆದುಕೊಂಡು ಹೋದ. ಹೊಸ ಶೈಲಿಯ ಮೂಲಕ ತನ್ನ ಸಾಹಿತ್ಯದಲ್ಲಿ ರಸತಾಣಗಳನ್ನು ನಿರ್ಮಿಸಿದ, ಹೊಸ ಕಲ್ಪನೆಗಳನ್ನು ಹುಟ್ಟುಹಾಕಿದ ಎಂದು ಬಣ್ಣಿಸಿದರು.

ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಆಶಯ ಭಾಷಣ ಮಾಡಿ, ಪ್ರಾಚೀನ ಕಾವ್ಯಗಳ ಓದು ಸರಳವಲ್ಲ. ಅದಕ್ಕೆ ವಿಶೇಷ ಅಧ್ಯಯನ, ತರಬೇತಿಯ ಅಗತ್ಯವಿದೆ. ಕೇವಲ ಅಕ್ಷರದ ಓದು ಮುಖ್ಯವಲ್ಲ, ಅದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಕನ್ನಡ ವಿದ್ವಾಂಸರಾದ ಡಾ.ಎನ್.ಎಸ್. ತಾರಾನಾಥ್, ಡಾ.ಕೃಷ್ಣಮೂರ್ತಿ ಹನೂರು, ಕಾಲೇಜು ಪ್ರಾಂಶುಪಾಲ ಪ್ರೊ.ಡಿ. ಬಸವರಾಜ್, ಐಕ್ಯೂಎಸಿ ಸಂಚಾಲಕ ಪ್ರೊ.ಆರ್. ತಿಪ್ಪಾರೆಡ್ಡಿ ಹಾಜರಿದ್ದರು. ಸಹ ಪ್ರಾಧ್ಯಾಪಕ ಪ್ರೊ.ಟಿ.ಕೆ. ಶಂಕರಯ್ಯ ಸ್ವಾಗತಿಸಿದರು. ಅತಿಥಿ ಉಪನ್ಯಾಸಕ ಜಿ.ಎಸ್. ರಾಮಚಂದ್ರ ವಂದಿಸಿದರು. ಸಹಾಯಕ ಪ್ರಾಧ್ಯಾಪಕ ಪ್ರೊ.ಎಂ.ಒ. ತಿಪ್ಪಯ್ಯ ಕಾರ್ಯಕ್ರಮ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT