ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆತಾಲೂಕು: ನೀಗಿತೇ ನೀರಿನ ಸಮಸ್ಯೆ?

Last Updated 11 ಜನವರಿ 2012, 8:55 IST
ಅಕ್ಷರ ಗಾತ್ರ

ನಾಪೋಕ್ಲು: ಪಟ್ಟಣದಿಂದ ಕೇವಲ 2ಕಿ.ಮೀ. ದೂರದಲ್ಲಿರುವ ಹಳೆತಾಲೂಕಿನಲ್ಲಿ ನೀರಿಗೆ ತತ್ವಾರ. ಅಲ್ಲಿನ ನಿವಾಸಿಗಳು ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಬಂದಿದೆ. ನೀರು ಸರಬರಾಜು ಮಾಡುವಂತೆ ಗ್ರಾಮಸ್ಥರು ಕಳೆದ ಎರಡೂವರೆ ತಿಂಗಳಿನಿಂದ ಒತ್ತಾಯಿಸುತ್ತಿದ್ದರೂ ಏನು ಪ್ರಯೋಜನವಾಗಿಲ್ಲ.

ಅಕ್ಟೋಬರ್ 24ರಿಂದ ಗ್ರಾಮಕ್ಕೆ ನೀರು ಸರಬರಾಜು ಸ್ಥಗಿತಗೊಂಡಿತ್ತು. ಆದರೆ ಕಳೆದವಾರ ಗ್ರಾಮಕ್ಕೆ ನೀರು ಪೂರೈಕೆ ಮಾಡುತ್ತಿದ್ದು, ಹಳೆತಾಲೂಕಿನ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಸಮೀಪದ ಸರ್ಕಾರಿ ಶಾಲೆಯ ಬಳಿಯ ಕೊಳವೆಬಾವಿಯಿಂದ ಗ್ರಾಮಕ್ಕೆ ನೀರು ಪೂರೈಕೆಯಾಗುತ್ತಿತ್ತು. 

 ಅಂತರ್ಜಲದ ಕೊರತೆ, ಕೊಳವೆಬಾವಿ ದುರಸ್ತಿ, ನೀರು ಸರಬರಾಜಾಗುವ ಪೈಪ್‌ಗಳ ಬಂದ್ ಮುಂತಾದ ನೆಪಗಳಿಂದ ನೀರು ಸರಬರಾಜನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಗ್ರಾಮಸ್ಥರು ಕುಡಿಯುವ ನೀರಿಗೆ ಕೊಳವೆ ಬಾವಿಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಬಂದಿದೆ. ಹೊಸ ಪೈಪ್ ಲೈನ್ ಅಳವಡಿಸುವುದರ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

 ಇಲ್ಲಿನ ಕುಟುಂಬಗಳಿಗೆ ನೀರು ಪೂರೈಕೆಗಾಗಿ ಹೊಸದಾಗಿ ಕೊಳವೆಬಾವಿ ತೆಗೆಯಲಾಗಿದೆ. ಹಳೆತಾಲೂಕಿನಲ್ಲಿ ಸುಮಾರು 200ಕ್ಕೂ ಅಧಿಕ ಕುಟುಂಬಗಳು ವಾಸವಾಗಿವೆ. ಹೆಚ್ಚಿನ ಮಂದಿ ನೀರಿಗಾಗಿ ಪಂಚಾಯತಿಯ ಕುಡಿಯುವ ನೀರಿನ ವ್ಯವಸ್ಥೆಯನ್ನು ಅವಲಂಬಿಸಿದ್ದಾರೆ. ನೀರು ಸರಬರಾಜಿಲ್ಲದೆ ಕಳೆದೆರಡು ತಿಂಗಳು ಈ ಮಂದಿ ಪಟ್ಟ ಶ್ರಮ ಅಷ್ಟಿಷ್ಟಲ್ಲ. ನಾಪೋಕ್ಲು ಪಟ್ಟಣದ  ಸುತ್ತಲೂ ಕಾವೇರಿ ನದಿ ಹರಿಯುತ್ತಿದ್ದರೂ ಇಲ್ಲಿ ನೀರಿಲ್ಲದ ಸ್ಥಿತಿ.ನೀರಿಗಾಗಿ ಮಂದಿ ಹೊಳೆನೀರನ್ನು ಅವಲಂಬಿಸುವ ಪರಿಸ್ಥಿತಿ ಬಂದೊದಗಿತ್ತು. ಈ ನಡುವೆ ಹಳೆತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 2009-10ರಲ್ಲಿ ನೀರು ಸಂಗ್ರಹಿಸುವ ಟ್ಯಾಂಕ್ ಮತ್ತು ಕೈಪಂಪ್‌ನ್ನು ನಿರ್ಮಿಸಲಾಗಿದ್ದರೂ ಇದರಿಂದ ಒಂದು ದಿನವೂ ನೀರು ಪೂರೈಕೆಯಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ. ಈ ನೀರಿನ ಟ್ಯಾಂಕಿಗೂ ನೀರು ಪೂರೈಕೆ ಮಾಡಿ ಕೈ ಪಂಪ್ ದುರಸ್ತಿಪಡಿಸಿ  ನೀರಿನ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಅವರ ಆಗ್ರಹ. ಇಲ್ಲದಿದ್ದರೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಟ್ಯಾಂಕ್ ಮಕ್ಕಳ ಆಟಿಕೆಯ ವಸ್ತುವನ್ನಾಗಿ ಇಲ್ಲವೇ ಪ್ರದರ್ಶನದ ವಸ್ತುವನ್ನಾಗಿ ಬಳಸಬೇಕಷ್ಟೆ.
   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT