ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ ಶಿಲ್ಪಕ್ಕೆ ಹೊಸ ಅಂಗಿ!

ಚಿತ್ರ: ರೇಸ್ 2 (ಹಿಂದಿ)
Last Updated 26 ಜನವರಿ 2013, 19:59 IST
ಅಕ್ಷರ ಗಾತ್ರ

ಹಾಲಿವುಡ್ ಚಿತ್ರಗಳನ್ನು ಅನುಕರಿಸಿ ರೋಚಕ ಕಥನಗಳನ್ನು ಹೊಸೆಯುವುದರಲ್ಲಿ ಅಬ್ಬಾಸ್ ಮತ್ತು ಮಸ್ತಾನ್ ನಿರ್ದೇಶಕ ಜೋಡಿಗೆ ಹೆಚ್ಚು ಆಸಕ್ತಿ. ಅವರ ಬಹುತೇಕ ಚಿತ್ರಗಳಿಗೆ ಹಾಲಿವುಡ್ ಪ್ರೇರಣೆ. `ನಕಾಬ್', `ರೇಸ್', `ಪ್ಲೇಯರ್ಸ್', `36 ಚೈನಾ ಟೌನ್' ಚಿತ್ರಗಳು ಅನುಕರಣೆಗೆ ಉದಾಹರಣೆಗಳು. ಸೇಡು, ಮೋಸ, ದರೋಡೆ, ಪ್ರೀತಿ, ಹೊಡೆದಾಟ ಸಿನಿಮಾ ಸರಕುಗಳು.

ಹಳೇ ಲೋಹವನ್ನು ಕರಗಿಸಿ ಅದೇ ಅಚ್ಚಿನ ಮೇಲೆ ಮತ್ತೆ ಎರಕ ಹೊಯ್ದಂತಿದೆ `ರೇಸ್' ಚಿತ್ರದ ಮುಂದುವರೆದ ಆವೃತ್ತಿ `ರೇಸ್ 2'. ಸಿನಿಮಾವನ್ನು ಕಟ್ಟಿಕೊಡುವ ಬಗೆ, ದೃಶ್ಯಗಳ ವೈಭವೀಕರಣ, ನಿರೂಪಣೆಯಲ್ಲಿಯೂ ಪಥವನ್ನು ಬದಲಿಸಿಲ್ಲ. `ರೇಸ್'ನಲ್ಲಿದ್ದ ಗಟ್ಟಿಯಾದ ಕಥೆ ಇಲ್ಲಿಲ್ಲ. ಅದರ ಮುಗಿದ ಅಧ್ಯಾಯವನ್ನು ಪ್ರತೀಕಾರದ ಎಳೆ ಬೆರೆಸಿ ಮುಂದುವರೆಸಲಾಗಿದೆ. ಲೋಪಗಳೇ ಹೆಚ್ಚಿದ್ದರೂ, ಎರಡನೇ ಭಾಗ ತೀರಾ ನಿರಾಸೆಯನ್ನಂತೂ ಮೂಡಿಸುವುದಿಲ್ಲ.

ಮೊದಲ ಆವೃತ್ತಿಯಲ್ಲಿದ್ದ ಸೈಫ್ ಅಲಿಖಾನ್ ಮತ್ತು ಅನಿಲ್ ಕಪೂರ್ ಪಾತ್ರಗಳನ್ನು ಇಲ್ಲಿಯೂ ಉಳಿಸಿಕೊಳ್ಳಲಾಗಿದೆ. ಸೈಫ್ ಪಾತ್ರಕ್ಕೆ ಹಾವುಏಣಿ ಆಟದ ರೂಪಕ. ಅನಿಲ್ ಕಪೂರ್ ವೇಷ ಕೂಡ ಬದಲಾಗಿದೆ. ಹಗೆಯ ಹಿನ್ನೆಲೆಯಲ್ಲಿ ಹೊತ್ತಿಕೊಳ್ಳುವ ಕಿಡಿ ಸಾವು-ಬದುಕಿನ ನಡುವಿನ ಹೊಯ್ದಾಟದ ರೇಸ್ ಇದು. ಜಾನ್ ಅಬ್ರಹಾಂ ಸೇರಿದಂತೆ ಮೂವರು ನಾಯಕಿಯರ ಪಾತ್ರಗಳು ಹೊಸದಾಗಿ ಕಡೆದಂಥವು.

ಪತ್ನಿಯನ್ನು ಕಳೆದುಕೊಳ್ಳುವ ನಾಯಕ ಅದಕ್ಕೆ ಕಾರಣರಾದವರ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗುವುದು ಎರಡನೇ ಭಾಗದ ತಿರುಳು. ಜಾನ್ ಅಬ್ರಹಾಂ ಹುರಿಗಟ್ಟಿದ ದೇಹ, ಸೈಫ್ `ಹೀರೋಯಿಸಂ' ನಡುವೆ ಅನಿಲ್ ಕಪೂರ್ ಪ್ರಭೆ ಕೊಂಚವೂ ಮಸುಕಾಗಿಲ್ಲ. ಕೆಲವೊಮ್ಮೆ ಅತಿಯೆನಿಸಿದರೂ ನಟಿ ಅಮೀಷಾ ಪಟೇಲ್ ಜೊತೆಗಿನ ಅವರ ತುಂಟತನದ ಮಾತುಗಳು ಕಚಗುಳಿ ನೀಡುತ್ತವೆ.

ವಿಮಾನದಿಂದ ಪ್ಯಾರಾಚೂಟ್‌ನಲ್ಲಿ ಕಾರು ಇಳಿಸುವಂಥ ಹಾಸ್ಯಾಸ್ಪದ ಸನ್ನಿವೇಶಗಳಿಗೂ ಕೊರತೆಯಿಲ್ಲ! ಎರಡನೇ ಆವೃತ್ತಿಗೆ ಕೊಂಡಿಯಾಗುವ ಪಾತ್ರಕ್ಕಾಗಿ ಬಿಪಾಶಾ ಬಂದು ಹೋಗಿದ್ದಾರೆ. ಮೂವರು ನಾಯಕಿಯರಿಗೂ ಅಭಿನಯದ ಬಗ್ಗೆ ಚಿಂತೆಯಿಲ್ಲ. ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ನಾಯಕಿಯರ ನಡುವಿನ `ರೇಸ್'ನಲ್ಲಿ ದೀಪಿಕಾ ಪಡುಕೋಣೆ ಮುಂದು.

ರವಿ ಯಾದವ್ ಛಾಯಾಗ್ರಹಣ ಮತ್ತು ಸಲೀಮ್-ಸುಲೈಮಾನ್ ಹಿನ್ನೆಲೆ ಸಂಗೀತ ನಿರ್ದೇಶಕದ್ವಯರ ವೈಫಲ್ಯಗಳನ್ನು ಮರೆಮಾಚಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT