ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇ ಬಾಟಲಿಯ ದೆವ್ವ (ಚಿತ್ರ: ಆಸ್ಕರ್)

Last Updated 18 ಜೂನ್ 2011, 19:30 IST
ಅಕ್ಷರ ಗಾತ್ರ

ದೆವ್ವ, ಭೂತಗಳ ಕಥೆಯುಳ್ಳ ಸಿನಿಮಾಗಳು ಅನಾದಿಯಿಂದ ಭಾರತೀಯ ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತ ಬಂದಿವೆ. ದೆವ್ವಗಳ (ಹಾಗೆಯೇ ದೇವರ) ಸಿನಿಮಾಗಳನ್ನು ನೋಡುವ ಪ್ರೇಕ್ಷಕರು ಇರುವವರೆಗೆ ಅವು ಬರುತ್ತಲೇ ಇರುತ್ತವೆ. ಇತ್ತೀಚೆಗೆ ಈ ಬಗೆಯ ಸಿನಿಮಾಗಳು ಕಡಿಮೆಯಾಗಿದ್ದವು. ಈಗ `ಆಸ್ಕರ್~ ಎಂಬ ಅಂಥದ್ದೊಂದು ಸಿನಿಮಾ ಕಾಣಿಸಿಕೊಂಡಿದೆ.

ಅಂದಹಾಗೆ, ಸಿನಿಮಾದ ಹೆಸರಿಗೂ ಜಾಗತಿಕ ಸಿನಿಮಾ ರಂಗದಲ್ಲಿ ಅತ್ಯುನ್ನತ ಪ್ರಶಸ್ತಿಯಾದ `ಆಸ್ಕರ್~ಗೂ ಸಂಬಂಧವೇನಿಲ್ಲ. `ಆಸ್ಕರ್~ ಎಂಬ ಹೆಸರಿನ ಪುಸ್ತಕ ಬರೆಯುತ್ತಿರುವ ಖ್ಯಾತ ಲೇಖಕನೊಬ್ಬ ಚಿತ್ರದಲ್ಲಿದ್ದಾನೆ. ಅವನನ್ನು ಅತಿಯಾಗಿ ಪ್ರೀತಿಸಿದ ಹುಡುಗಿಯೊಬ್ಬಳು ಸತ್ತು, ಲೇಖಕ ಹಾಗೂ ಅವನ ಪತ್ನಿಯನ್ನು ದೆವ್ವವಾಗಿ ಕಾಡುವ ಕಥೆಯನ್ನು ಸಿನಿಮಾ ಒಳಗೊಂಡಿದೆ. ಈ ದೆವ್ವದ ಉಪಟಳದಿಂದ ಲೇಖಕನ ಕುಟುಂಬ ಪಾರಾಗುತ್ತಯೇ ಎಂಬುದು ಸಿನಿಮಾದ ಕುತೂಹಲ ಹುಟ್ಟಿಸುವ ಸಾಮಾನ್ಯ ಅಂಶ.

ಅನೇಕ ದೆವ್ವದ ಸಿನಿಮಾಗಳಲ್ಲಿ ವರ್ತಿಸುವಂತೆಯೇ ಈ ಸಿನಿಮಾದ ಮಹಿಳಾ ದೆವ್ವವೂ ನಡೆದುಕೊಳ್ಳುತ್ತದೆ. ಸುಮ್ಮನೆ ಕಾಣಿಸಿಕೊಳ್ಳುವುದು, ಪರಕಾಯ ಪ್ರವೇಶ ಮಾಡುವುದನ್ನು ಈ ದೆವ್ವವೂ ಮಾಡುತ್ತದೆ. ಇವೆಲ್ಲವನ್ನೂ ಅದು ನಾಯಕನ ಮೇಲಿನ ಅತಿಯಾದ ಪ್ರೀತಿಯಿಂದ ಮಾಡುತ್ತದೆ ಎನ್ನುವುದು ಇದರ ವಿಶೇಷ!

ಹಾಗಾಗಿ ಇದು ಪ್ರೀತಿಯನ್ನಾಗಲಿ, ಭಯವನ್ನಾಗಲಿ ಹುಟ್ಟಿಸುವುದಿಲ್ಲ. ಇದರೊಂದಿಗೆ ದೆವ್ವದ ಕಿರುಕುಳದ ನಡುವೆಯೇ ತನ್ನ ಪುಸ್ತಕವನ್ನು ಬರೆದು ಮುಗಿಸುವ ಲೇಖಕ ಅದನ್ನು `ಬೂಕರ್ ಪ್ರಶಸ್ತಿ~ಗೆ ಕಂಪ್ಯೂಟರ್ ಮೂಲಕ ನಾಮನಿರ್ದೇಶನ ಮಾಡುತ್ತಾನೆ. ಮುದ್ರಿತ ಪುಸ್ತಕ ಒಂದನ್ನು ಅತ್ಯುನ್ನತ ಪ್ರಶಸ್ತಿಯೊಂದಕ್ಕೆ ನಾಮನಿರ್ದೇಶನ ಮಾಡುವ ನಿರ್ದೇಶಕ ಕೃಷ್ಣರ ಕಲ್ಪನೆಯೇ ಸಿನಿಮಾದಲ್ಲಿ ಕೊಂಚವಾದರೂ ಮಜಾ ಕೊಡುವ ಹಾಸ್ಯಾಸ್ಪದ ಅಂಶ! ಅವರ ಕಥೆ, ಚಿತ್ರಕಥೆಯಲ್ಲಿ ಯಾವುದೇ ಹೊಸ ಅಂಶಗಳಿಲ್ಲ ಎಂಬುದನ್ನೂ ಇಲ್ಲಿ ಹೇಳಬೇಕು.

ಅಶೋಕ್‌ಕುಮಾರ್, ಪ್ರಿಯಾಂಕಾ ಬುಲ್ಗನವರ ಇದರ ನಾಯಕ ನಾಯಕಿಯರು. ಮುಖದಲ್ಲಿ ಭಾವನೆಗಳು ಕಾಣಿಸಿಕೊಂಡರೆ ಪ್ರೇಕ್ಷಕರು ಎಲ್ಲಿ ಬೇಸರಗೊಳ್ಳುವರೊ ಎಂಬಂತೆ ಅವರು ನಟಿಸಿದ್ದಾರೆ. ಪ್ರೇಕ್ಷಕರನ್ನು ಬೆಚ್ಚಿಬೀಳಿಸಬೇಕು ಎಂದು ನಿರ್ದೇಶಕರು ನಿರ್ಧರಿಸಿದ್ದರಿಂದಲೋ ಏನೋ ಅನೇಕ ನಟರು ಭಾವನೆಗಳಲ್ಲಿ ಮಿತವ್ಯಯ ಸಾಧಿಸಿದ್ದಾರೆ. ಇದ್ದುದರಲ್ಲಿ ಸಂಗೀತಾ ಶೆಟ್ಟಿ ಅಭಿನಯದಲ್ಲಿ ಕೊಂಚ ಮಿಂಚುತ್ತಾರೆ.

ದೆವ್ವ, ಭೂತ ಪ್ರೇತಗಳ ಪುರಾತನ ಕಥೆಯನ್ನು ಆಧರಿಸಿ ಸಿದ್ಧವಾದ ಸಿನಿಮಾ ಏನನ್ನು ಹೇಳುತ್ತದೆ ಎಂಬುದು ಕೊನೆಗೂ ಸ್ಪಷ್ಟವಾಗುವುದಿಲ್ಲ. ಈಗ ದೆವ್ವವೆಂದರೆ `ಎಲ್ಲಿ?~ ಎಂದು ಕೇಳುವ ಮಕ್ಕಳೂ ಅದಕ್ಕೆ ಬೆದರುವುದಿಲ್ಲ. ಶತಮಾನಗಳ ಹಿಂದಕ್ಕೆ ಪ್ರೇಕ್ಷಕರನ್ನು ಕರೆದೊಯ್ಯುವ ಈ ಸಿನಿಮಾ ಯಾರನ್ನು ರಂಜಿಸುತ್ತದೆ ಎಂಬುದೇ ಈಗಿನ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT