ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳದ ನೀರು ಹರಿಸಲು ಬಿಜೆಪಿ ಒತ್ತಾಯ:ಕೆರೆ ತುಂಬಿಸಲು ಪಾದಯಾತ್ರೆ

Last Updated 21 ಮೇ 2012, 3:30 IST
ಅಕ್ಷರ ಗಾತ್ರ

ಚನ್ನಗಿರಿ: ತಾಲ್ಲೂಕು ಹರೋನಹಳ್ಳಿ, ಎರೇಹಳ್ಳಿ ಗ್ರಾಮಗಳ ಮಧ್ಯದ ಉತ್ತರ ಭಾಗದಲ್ಲಿರುವ ಕೊಡದಕೆರೆಗೆ ಅಮ್ಮನಗುಡ್ಡದ ಕಾಡಿನಿಂದ ಹರಿದು ಬರುವ ಹಳ್ಳದ ನೀರನ್ನು ಕೆರೆಗಳಿಗೆ ತುಂಬಿಸಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಸಲುವಾಗಿ ಭಾನುವಾರ ತಾಲ್ಲೂಕು ಬಿಜೆಪಿ ಕಾರ್ಯಕರ್ತರು ಪಾದಯಾತ್ರೆ ನಡೆಸಿದರು.

ಅಮ್ಮನಗುಡ್ಡದ ಕಾಡಿನಿಂದ ಹರಿದು ಬರುವ ಹಳ್ಳದ ನೀರನ್ನು ಗೋಪನಾಳ್, ಸುಣ್ಣಿಗೆರೆ, ಅಜ್ಜಿಹಳ್ಳಿ, ಹನುಮಂತಾಪುರ, ಚಿಕ್ಕೂಲಿಕೆರೆ, ಮುದಿಗೆರೆ ಗ್ರಾಮದ ಕೆರೆಗಳಿಗೆ ತುಂಬಿಸುವ ಮೂಲಕ ಅಂತರ್ಜಲಮಟ್ಟ ಹೆಚ್ಚಳ, ಜಾನುವಾರುಗಳಿಗೆ ಕುಡಿಯುವ ನೀರು, ರೈತರ ಜಮೀನುಗಳಿಗೆ ನೀರು ಕೊಡಲು ಸಹಕಾರಿಯಾಗುತ್ತದೆ.

ಅಮ್ಮನಗುಡ್ಡ ಬಳಿ ಇರುವ ಹಳ್ಳ ಮಳೆಗಾಲದಲ್ಲಿ ತುಂಬಿ ಹರಿದು ಸೂಳೆಕೆರೆಯನ್ನು ತಲುಪುತ್ತದೆ. ಬೇಸಗೆಯಲ್ಲಿ ಈ ಭಾಗದ ಹಳ್ಳಿಗಳಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಈ ಭಾಗದ ಜನರ ಒತ್ತಾಸೆಯ ಮೇರೆಗೆ ಈ ಕೆರೆಗಳಿಗೆ ಹಳ್ಳದ ನೀರನ್ನು ತುಂಬಿಸುವ  ಸಲುವಾಗಿ ಯೋಜನೆಯನ್ನು ರೂಪಿಸಲು ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.

ಇದು ಹೋರಾಟವಲ್ಲ. ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ನಮ್ಮದಾಗಿದೆ. ಒಬ್ಬ ರಾಜಕಾರಣಿ ಮಳೆಗಾಳಿ, ಬಿಸಿಲು ಲೆಕ್ಕಿಸದೇ ಜನರ ಬಳಿಗೆ ತೆರಳಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದರೆ ಅವನು ನಿಜವಾದ ರಾಜಕಾರಣಿಯಾಗುತ್ತಾನೆ ಎಂದು ಬಿಜೆಪಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ತಿಳಿಸಿದರು.

ಗೋಪನಹಾಳ್ ಗ್ರಾಮದ ಬಯಲುದಿಬ್ಬದಿಂದ ಪ್ರಾರಂಭವಾದ ಪಾದಯಾತ್ರೆ ಹಳ್ಳದ ಮೂಲಕ ಸಾಗಿ ಅಮ್ಮನಗುಡ್ಡ ಗ್ರಾಮದಲ್ಲಿ ಮುಕ್ತಾಯಗೊಂಡಿತು. ಬಿಜೆಪಿ ಮುಖಂಡರಾದ ಮುದಿಗೆರೆ ಲೋಕೇಶಪ್ಪ, ಅಜ್ಜಿಹಳ್ಳಿ ಮಂಜುನಾಥ್, ಗ್ರಾಮ ಪಂಚಾಯ್ತಿ ಅಧ್ಯಕ್ಷ ಫಾಲಾಕ್ಷಪ್ಪ ಸೇರಿದಂತೆ ನೂರಾರು ರೈತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಇಂದಿನಿಂದ `ಬೇಸಗೆ ಸಂಭ್ರಮ~ ಶಿಬಿರ

ಬಾಲಭವನ ಸೊಸೈಟಿ (ಬೆಂಗಳೂರು) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚನ್ನಗಿರಿ ತಾಲ್ಲೂಕು ಬಾಲಭವನ ಸಮಿತಿ, ಬಿಜೆವಿಎಸ್ ತಾಲ್ಲೂಕು ಸಮಿತಿ ಸಂಯುಕ್ತ ಆಶ್ರಯದಲ್ಲಿ ಮೇ 21ರಿಂದ 10 ದಿನಗಳ ಕಾಲ 8ರಿಂದ 15 ವರ್ಷದ ಒಳಗಿನ ಮಕ್ಕಳಿಗೆ `ಬೇಸಗೆ ಸಂಭ್ರಮ-2012~ ಉಚಿತ ಬೇಸಗೆ ಶಿಬಿರ ಏರ್ಪಡಿಸಲಾಗಿದೆ.

ಚನ್ನಗಿರಿಯ ಬಿಇಒ ಕಚೇರಿ ಹಿಂಭಾಗದಲ್ಲಿರುವ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಪ್ರತಿನಿತ್ಯ ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ನಡೆಯುವ ಶಿಬಿರದಲ್ಲಿ ಕರಕುಶಲ ಕಲೆ, ಚಿತ್ರಕಲೆ, ಸಮೂಹ ಗೀತೆಗಳು, ರಂಗ ತರಬೇತಿ ಮೊದಲಾದ ಚಟುವಟಿಕೆಗಳು ನಡೆಯಲಿದ್ದು, ಆಸಕ್ತರು ಮೊಬೈಲ್: 78999 35633 ಸಂಪರ್ಕಿಸಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT