ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿ ನೆಲದಲ್ಲಿ ಇಸ್ರೇಲ್ ಟೊಮೆಟೊ!

Last Updated 15 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬರದ ನಾಡೆಂದೇ ಬಿಂಬಿತವಾಗಿರುವ ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಬಿದರಳ್ಳಿ ಗ್ರಾಮದಲ್ಲಿ ಟೊಮೆಟೊ ಬೀಜೋತ್ಪಾದನೆಯಿಂದ ಹಸಿರಿನ ಛಾಯೆ ಮೂಡಿಸಿದ್ದಾರೆ ಯುವ ಕೃಷಿಕ ಹೇಮಗಿರೀಶ ಹಾವಿನಾಳ. ಸತತ 15 ವರ್ಷಗಳಿಂದ ಬೆಂಡೆ, ಕಲ್ಲಂಗಡಿ ಮತ್ತು ಟೊಮೆಟೊ ಬೀಜೋತ್ಪಾದನೆಯಲ್ಲಿ ತೊಡಗಿಕೊಂಡಿರುವ ಇವರು ಇಲ್ಲಿ ಬೆಳೆದ ಬೀಜಗಳನ್ನು ವಿದೇಶಕ್ಕೂ ರಪ್ತು ಮಾಡುತ್ತಿದ್ದಾರೆ!

ನಾಲ್ಕು ವರ್ಷಗಳಿಂದ ಟೊಮೆಟೊ ಕೃಷಿ ಕೈಗೊಳ್ಳುವುದರ ಮುಖಾಂತರ ಆ ಹಣ್ಣುಗಳಿಂದ ಬೀಜ ಬೇರ್ಪಡಿಸಿ ರಪ್ತು ಮಾಡುವುದರಲ್ಲಿ ಇವರು ಎತ್ತಿದ ಕೈ. ಈ ಬೀಜೋತ್ಪಾದನೆಯಲ್ಲಿ ಏಷಿಯಾ ಖಂಡದಲ್ಲಿಯೇ ಪ್ರಮುಖರು ಎಂಬ ಹೆಗ್ಗಳಿಕೆ ಇವರದ್ದು. 75 ಎಕರೆ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿರುವ ಇವರು ಟೊಮೆಟೊ ಬೆಳೆಗೆ ಸಂಪೂರ್ಣ ನಟ್ ಸೌಲಭ್ಯವನ್ನು (ನೆರಳಿನ ಜಾಳಿಗೆ) ಅಳವಡಿಸಿಕೊಂಡು ಕೀಟ ಬಾಧೆಯಿಂದಲೂ ರಕ್ಷಣಿ ಒದಗಿಸುತ್ತಿದ್ದಾರೆ.

ಇಸ್ರೇಲ್ ಮಾದರಿಯ ನೂತನ ತಂತ್ರಜ್ಞಾನದ ಅಳವಡಿಕೆ ಇದಾಗಿದೆ. ಇದರ ಅಧ್ಯಯನಕ್ಕಾಗಿ ಅನೇಕ ಬಾರಿ ಚೀನಾ ಮತ್ತು ಇಸ್ರೇಲ್ ದೇಶಗಳನ್ನು ಸುತ್ತಿದ್ದಾರೆ. ಅಲ್ಲಿನ ಬೀಜೋತ್ಪಾದನೆಯ ಕೃಷಿ ಪದ್ಧತಿಯನ್ನು ಇಲ್ಲಿ ಜಾರಿಗೆ ತಂದಿದ್ದಾರೆ. ಬೆಳೆಯ ಆರೋಗ್ಯದ ದೃಷ್ಟಿಯಿಂದ ಅದಕ್ಕೆ ವೈರಸ್ ತಗುಲದಂತೆ, ಹನಿ ನೀರಾವರಿ ಮೂಲಕ ಟೊಮೆಟೊ ಗಿಡಗಳ ಸಾಲಿಗೆ ನೆಲದಿಂದಲೂ ಸೋಂಕು ತಗುಲದಂತೆ ಪ್ಲಾಸ್ಟಿಕ್ ಹೊದಿಸಿದ್ದಾರೆ.

ತಾಲ್ಲೂಕಿನ ಹಮ್ಮಿಗಿ, ಕಲಕೇರಿ, ಬಿದರಳ್ಳಿ, ಸಿಂಗಟಾಲೂರು, ಜಾಲವಾಡಗಿ, ಕೊರ್ಲಹಳ್ಳಿ ಹೀಗೆ ಅನೇಕ ಗ್ರಾಮೀಣ ಪ್ರದೇಶದಲ್ಲಿ ಬೀಜೋತ್ಪಾದನೆ ಕೃಷಿ ಕೈಕೊಂಡ ಇವರು, ಸುತ್ತಮುತ್ತಲಿನ ರೈತರಿಗೂ ಮಾದರಿಯಾಗಿ ಅವರನ್ನೂ ಪ್ರೇರೇಪಿಸಿ ಈ ಕೃಷಿಯಲ್ಲಿ ತೊಡಗಿಸಿದ್ದಾರೆ. ಹಲವರಿಗೆ ಉದ್ಯೋಗ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ತೋಟದಲ್ಲಿ ಬೀಜೋತ್ಪಾದನೆ ಕೃಷಿ ಚಟುವಟಿಕೆಯೊಂದಿಗೆ ಸುಮಾರು 700ಕ್ಕೂ ಹೆಚ್ಚು ಕಾರ್ಮಿಕರು ಪ್ರತಿ ನಿತ್ಯ ದುಡಿಯುವಂತೆ ಮಾಡಿದ್ದಾರೆ.

ಈ ಎಲ್ಲಾ ಕಾರ್ಮಿಕರಲ್ಲಿ ಮಹಿಳೆಯರೇ ಹೆಚ್ಚು ಎಂಬುದು ಗಮನಾರ್ಹ. ಗಿಡ ನಿಲ್ಲಿಸುವುದು, ಬೀಜಗಳ ಕ್ರಾಸಿಂಗ್ ಮಾಡುವುದು. ಗಿಡಗಳಿಂದ ಹಣ್ಣು ಬಿಡಿಸಿ ಅವುಗಳನ್ನು ಪ್ಯಾಕ್ ಮಾಡುವುದು, ಗಾಡಿಗೆ ಹೊತ್ತು ಹಾಕುವುದು ಸೇರಿದಂತೆ ಸಾಕಷ್ಟು ಕೆಲಸವನ್ನು ಮಹಿಳೆಯರೇ ಮಾಡುತ್ತಿದ್ದಾರೆ. ಇನ್ನೊಂದು ವಿಶೇಷವೆಂದರೆ ಈ ಬೀಜೋತ್ಪಾದನೆಗೆ ಸಂಬಂಧಪಟ್ಟ ತರಬೇತಿಗಳನ್ನೂ ಎಲ್ಲಾ ಕಾರ್ಮಿಕರಿಗೆ ಸ್ವತಃ ಹಾವಿನಾಳ ಅವರೇ ನೀಡುತ್ತಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT