ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿ ಮಕ್ಕಳಿಗೆ ತಾಕತ್ತು ಬರಲಿ

Last Updated 3 ಅಕ್ಟೋಬರ್ 2012, 3:30 IST
ಅಕ್ಷರ ಗಾತ್ರ

ದಾವಣಗೆರೆ: ಕೃಷಿಗೆ ಮೌಲ್ಯ ದಕ್ಕುವ ಮೂಲಕ ಇಂದು ಹಳ್ಳಿ ಮಕ್ಕಳಿಗೆ ತಾಕತ್ತು ಬರಬೇಕಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಉಪಾಧ್ಯಕ್ಷ ಕೆ.ಟಿ. ಗಂಗಾಧರ ಅಭಿಪ್ರಾಯಪಟ್ಟರು.

ನಗರದ ಶಿವಯೋಗಿ ಮಂದಿರದ ಆವರಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ರಾಜ್ಯ ರೈತ ವಿದ್ಯಾರ್ಥಿ ಒಕ್ಕೂಟ ಆಯೋಜಿಸಿದ್ದ ರೈತ ಯುವಕರ ಹಾಗೂ ವಿದ್ಯಾರ್ಥಿಗಳ ರಾಜ್ಯಮಟ್ಟದ ಬೃಹತ್ ಸಮಾವೇಶದಲ್ಲಿ  ಮಾತನಾಡಿದರು.

32ವರ್ಷದ ಇತಿಹಾಸ ಇರುವ ರಾಜ್ಯ ರೈತ ಚಳವಳಿಗೆ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಮೆದುಳಾಗಿದ್ದರು, ಸುಂದರೇಶ್ ಹೃದಯವಾಗಿದ್ದರು, ಯಜಮಾನ್ ರುದ್ರಪ್ಪ ಮೌಲ್ಯ ತಂದುಕೊಟ್ಟಿದ್ದರು. ಆದರೆ, ಇಂದು ಶಕ್ತಿಯನ್ನು ವಿದ್ಯಾರ್ಥಿಗಳು ಮತ್ತು ಯುವ ರೈತರು ಪಡೆಯುವ ಮೂಲಕ ಕೃಷಿ ಕ್ಷೇತ್ರಕ್ಕೆ ಮೌಲ್ಯ ತಂದುಕೊಡಬೇಕಾಗಿದೆ.

ಡಾಕ್ಟರ್, ಎಂಜಿನಿಯರ್, ವಕೀಲರು ಎಂದರೆ ಸಮಾಜದಲ್ಲಿ ಹೇಗೆ ಮೌಲ್ಯ ಸ್ಥಾಪಿತವಾಗಿದೆಯೋ ಅಂತೆಯೇ, ರೈತ ಹಾಗೂ ರೈತನ ಮಕ್ಕಳ ಬಗ್ಗೆ ಸಮಾಜದಲ್ಲಿ ಮೌಲ್ಯ ದಕ್ಕಬೇಕಾಗಿದೆ. ರೈತನನ್ನು ಈಗ 5ನೇ ದರ್ಜೆ ಪ್ರಜೆಯಂತೆ ನಡೆಸಿಕೊಳ್ಳಲಾಗುತ್ತಿದೆ. ಇದಕ್ಕೆಲ್ಲಾ ಇತಿಶ್ರೀ ಹಾಡಿ, ಯುವಕರಿಂದ ರೈತ ಚಳವಳಿ ಮತ್ತೆ ಪ್ರಖರತೆ ಕಂಡುಕೊಳ್ಳಬೇಕಿದೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 17ಸಾವಿರ ಕೋಟಿ ಕೃಷಿ ಬಜೆಟ್ ನೀಡಿದ್ದೇನೆ ಎನ್ನುತ್ತಾರೆ. ಅದು ನಿಜವಾಗಿಯೂ ರೈತರಿಗೆ ತಲುಪಿದ್ದರೆ ಇಂದು ಹಳ್ಳಿ ಮಕ್ಕಳು ಯಾಕೆ ನಗರಕ್ಕೆ ವಲಸೆ ಹೋಗುತ್ತಿದ್ದರು? ಇದು ಬಿಎಸ್‌ವೈಗೆ ಮಾತ್ರವಲ್ಲ, ಇತರ ನಾಯಕರಿಗೂ ನನ್ನ ಪ್ರಶ್ನೆ. ರೈತರಿಗೆ ಆರ್ಥಿಕ ನೀತಿ ರೂಪಿಸಿ ಸಹಾಯ ಮಾಡುತ್ತೇವೆ ಎನ್ನುವುದು ಕೇವಲ ರಾಜಕೀಯ ಸ್ಟಂಟ್. ಆಹಾರ ಭದ್ರತಾ ಕಾಯ್ದೆ ರೂಪಿಸುವ ಕೇಂದ್ರ ಸರ್ಕಾರ, ಆಹಾರ ಬೆಳೆಯುವವನಿಗೆ ಭದ್ರತೆ ಒದಗಿಸುದಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 ಸಾಲ ವಾಪಸ್ ಕೇಳಿದ್ರೆ ಬಾಗಿಲಿಗೆ ನೇತು ಹಾಕಿ!: ಯಾವುದಾದರೂ ಬ್ಯಾಂಕಿನ ಅಧಿಕಾರಿಗಳು ರೈತರಿಂದ ಸಾಲ ವಾಪಸ್ ಪಡೆಯಲು ಬಂದರೆ, ಅಂಥ ಅಧಿಕಾರಿಗಳನ್ನು ಊರಿನ ಅಗಸೇ ಬಾಗಿಲಿಗೆ ನೇತುಹಾಕಿ!. ಸಾಲ ಕೊಡಿಸುವವರೂ ನಾವೇ, ಸಾಲಮನ್ನಾ ಮಾಡಿಸುವವರೇ ನಾವೇ! ಹಾಗಾಗಿ ರೈತರೇ ನೀವು ಭಯಪಡಬೇಡಿ ಎಂದು ಗಂಗಾಧರ್ ನುಡಿದರು.

ರೈತರ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ನೀಡದ ಸರ್ಕಾರ, ಅವರಿಂದ ಸಾಲ ವಾಪಸ್ ಪಡೆಯಲು ಅಸಾಧ್ಯ. ಬರಪೀಡಿತ ಪ್ರದೇಶಗಳಲ್ಲಿ ರೈತರಿಂದ ಸಾಲ ವಸೂಲಿ ಮಾಡಬಾರದು ಅಂತ ಕಾನೂನಿನಲ್ಲಿದೆ.

ಆದರೆ, ಅಧಿಕಾರಿಗಳು, ಬ್ಯಾಂಕಿನವರು ರೈತನನ್ನು ಜೈಲಿಗೆ ತಳ್ಳುತ್ತಿದೆ. ಹಾಗಾಗಿ, ಪ್ರತಿ ಗ್ರಾಮದಲ್ಲೂ ರೈತ ಸಂಘಟನೆಗಳು ಬಲವಾಗಬೇಕಿದೆ. ಪ್ರತಿ ರೈತನ ಮನೆ ಕಾಯುವ `ಕಾವಲು ನಾಯಿ~ಯಂತೆ ರೈತ ಸಂಘ ರೂಪುಗೊಳ್ಳಬೇಕಿದೆ.
 
ಜನಸಾಮಾನ್ಯರಿಗೆ ಹೋರಾಟವೊಂದೇ ದಿಕ್ಕು. ಹೋರಾಟ ಮೂಲಕವೇ ರೈತರು ತಮ್ಮ ಹಕ್ಕು ಪ್ರತಿಪಾದಿಸಬೇಕು. 3ಕಾಸಿನ ರಾಜಕಾರಣಿಗಳಿಗೆ ಹೆದರಬಾರದು. ಆತ್ಮಹತ್ಯೆ ಮಾಡಿಕೊಳ್ಳಬಾರದು. ಸಮಯ ಬಂದರೆ ಸರ್ಕಾರವನ್ನೇ ಹೆದರಿಸಬೇಕು ಎಂದರು.

ಹಿರಿಯ ರೈತ ಮುಖಂಡ ಸುರೇಶ್‌ಬಾಬು ಪಾಟೀಲ್ ಸಮಾವೇಶ ಉದ್ಘಾಟಿಸಿದರು. ರೈತ ಸಂಘದ ಮುಖಂಡರಾದ ಚಾಮರಸ ಮಾಲೀ ಪಾಟೀಲ್, ಚುಕ್ಕಿ ನಂಜುಂಡಸ್ವಾಮಿ, ಪ್ರೊ.ಕೆ.ಸಿ. ಬಸವರಾಜ್, ಪಚ್ಚೆ ನಂಜುಂಡಸ್ವಾಮಿ, ಆಶ್ಲೇಷಾ, ರವಿಕುಮಾರ್ ಬಲ್ಲೂರು, ಬಡಗಲಪುರ ನಾಗೇಂದ್ರ, ಡಾ.ನಿರಂಜನಾರಾಧ್ಯ, ಸೋಮಗುದ್ದು ರಂಗಸ್ವಾಮಿ, ಹೂವಳ್ಳಿ ನಾಗರಾಜ್, ಸುರೇಶ್ ತರೀಕೆರೆ ಮತ್ತು ಇತರ ಪದಾಧಿಕಾರಿಗಳು ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT