ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿ ರಾಜಕೀಯಕ್ಕೆ ಬೆದರಿದ ಪಿಡಿಒಗಳು!

Last Updated 15 ಫೆಬ್ರುವರಿ 2011, 17:15 IST
ಅಕ್ಷರ ಗಾತ್ರ

ಮೈಸೂರು: ಸಾಫ್ಟ್‌ವೇರ್ ಎಂಜಿನಿಯರ್, ಎಂಬಿಎ, ಎಂಬಿಬಿಎಸ್ ಮುಂತಾದ ಪದವಿಗಳನ್ನು ಪಡೆದಿದ್ದರೂ ಗ್ರಾಮೀಣ ಸೇವೆಯ ಕನಸು ಹೊತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾಗಿ (ಪಿಡಿಒ) ನೇಮಕ ಗೊಂಡಿದ್ದ ಹಲವಾರು ಮಂದಿ ಈಗ ಹಳ್ಳಿ ರಾಜಕೀಯಕ್ಕೆ ಬೆದರಿ ತಮ್ಮ ಹಳೆಯ ಕೆಲಸದತ್ತ ವಾಪಸಾಗುತ್ತಿದ್ದಾರೆ.

ಶಿಕ್ಷಕ, ಎಂಜಿನಿಯರ್, ಲೆಕ್ಕಪರಿಶೋಧಕರಾಗಿ ಕೆಲಸ ಮಾಡುತ್ತಿದ್ದವರು ಹಳ್ಳಿ ಸೇವೆ ಮಾಡಲು ಅವಕಾಶ  ಇರುವ ಪಿಡಿಒ ಆಗಿ ನೇಮಕಗೊಂಡಿದ್ದರು. ಆದರೆ ಈಗ ಈ ಕೆಲಸಕ್ಕೆ ರಾಜೀನಾಮೆ ನೀಡುತ್ತಿರುವುದು ಮೈಸೂರು ಜಿಲ್ಲೆಯಲ್ಲಿ ಕಂಡುಬಂದಿದೆ. ಇದಕ್ಕೆ ಹಳ್ಳಿ ರಾಜಕೀಯವೇ ನೇರ ಪಾತ್ರ ವಹಿಸಿದ್ದು ಗುಟ್ಟಾಗಿ ಉಳಿದಿಲ್ಲ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಎರಡು ವರ್ಷದ ಹಿಂದೆ ಅಸ್ತಿತ್ವಕ್ಕೆ ತಂದ ಪಿಡಿಒ ಹುದ್ದೆಗೆ ಮೈಸೂರಿನಲ್ಲಿ ಇದುವರೆಗೆ ಐದು ಮಂದಿ ರಾಜೀನಾಮೆ ಸಲ್ಲಿಸಿದ್ದಾರೆ. 11 ಮಂದಿ ಕೆಲಸ ತ್ಯಜಿಸುವ ನಿರ್ಧಾರ ಕೈಗೊಂಡಿದ್ದಾರೆ. ಆ ಪೈಕಿ ಇಬ್ಬರ ರಾಜೀನಾಮೆ ಪತ್ರಗಳು ಜಿ.ಪಂ. ಕಚೇರಿಯಲ್ಲಿ ಅಂಗೀಕಾರಕ್ಕೆ ಕಾಯುತ್ತಿವೆ.

ಗೋಪಾಲಪುರ ಗ್ರಾಮ ಪಂಚಾಯಿತಿಯ ಎಂ.ವೈ.ರಾಜೇಶ್ವರಿ, ಮಾರ್ಬಳ್ಳಿ ಗ್ರಾ.ಪಂ. ಬಿ.ಜಿ.ಶ್ರುತಿ, ದೂರ  ಗ್ರಾ.ಪಂ. ಆನಂದ, ಕೊಡಗಳ್ಳಿ ಗ್ರಾ.ಪಂ. ಎನ್.ಪ್ರತಾಪ, ಮಾಕುರ ಗ್ರಾ.ಪಂ. ಸಂಪತ್‌ಕುಮಾರ್ ರಾಜೀನಾಮೆ ಸಲ್ಲಿಸಿದವರು. ಅವರಲ್ಲಿ ಬಿ.ಜಿ.ಶ್ರುತಿ ಎಂಜಿನಿಯಂಗ್ ಕಾಲೇಜೊಂದರ ಉಪನ್ಯಾಸಕಿಯಾಗಿ ಕೆಲಸಕ್ಕೆ ಸೇರಿದ್ದಾರೆ.

ಟಿ.ಚಂದ್ರಶೇಖರ್, ಎಚ್.ಎಸ್. ಮಹದೇವಪ್ರಸಾದ್, ಎಸ್.ಮಲ್ಲಿಕಾರ್ಜುನ ಸ್ವಾಮಿ, ಪಿ.ಟಿ.ಸುಮಲತಾ, ಜಿ.ಕೆ.ಸಂತೋಷ, ಎಚ್.ಆರ್.ಸಾವಿತ್ರಿ ಹಿಂದಿನ ಸಹಶಿಕ್ಷಕ ವೃತ್ತಿಗೆ, ಧೀರಜ್‌ಕುಮಾರ್ ಲೆಕ್ಕ ಪರಿಶೋಧಕ ಹುದ್ದೆಗೆ, ಬಸವರಾಜ ಕಾಲೇಜಿನ ಅಧೀಕ್ಷಕ ಕೆಲಸಕ್ಕೆ ಹಿಂತಿರುಗಲು ಅನುಮತಿ ಕೋರಿದ್ದಾರೆ.

ಸ್ಥಳೀಯ ಸಂಸ್ಥೆ ಅಭಿವೃದ್ಧಿಪಡಿಸುವ ಉದ್ದೇಶದಿಂದ 2009ರಲ್ಲಿ ಸರ್ಕಾರ ಪಿಡಿಒ ಹುದ್ದೆ ಸೃಷ್ಟಿಸಿತ್ತು. ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕ ಮಾಡಿಕೊಂಡಿತ್ತು. ಅದರಂತೆ ಮೈಸೂರು ಜಿಲ್ಲೆಯ 235 ಗ್ರಾಮ ಪಂಚಾಯಿತಿಗಳಿಗೆ ಪಿಡಿಒ ನೇಮಕ ಮಾಡಬೇಕಿತ್ತು. ಆದರೆ, ಸರ್ಕಾರ 3:2 ಅನುಪಾತದಲ್ಲಿ ಹುದ್ದೆಗಳನ್ನು ಭರ್ತಿ ಮಾಡುವ ಕ್ರಮ ಕೈಗೊಂಡಿದ್ದರಿಂದ 157 ಗ್ರಾ.ಪಂ.ಗಳಿಗೆ ಮಾತ್ರ ಪಿಡಿಒಗಳು ನೇಮಕಗೊಂಡಿದ್ದರು. 78 ಹುದ್ದೆಗಳು ಇನ್ನೂ ಖಾಲಿ ಇವೆ.

ಹಳ್ಳಿ ರಾಜಕೀಯ: ಸೇವೆಯ ಕನಸು ಹೊತ್ತು ಹಳ್ಳಿಗೆ ಹೋದವರ ಎದುರು ವ್ಯವಸ್ಥೆಯ ನೈಜ ರೂಪ ಅನಾವರಣವಾಗಿದೆ. ಗ್ರಾಮ ಪಂಚಾಯಿತಿಯ ಪ್ರತಿ ಕೆಲಸದಲ್ಲೂ ರಾಜಕೀಯ ಇದೆ. ತಮ್ಮ ಹಿತಾಸಕ್ತಿಗೆ  ಅನುಗುಣವಾಗಿ ಕೆಲಸ ಮಾಡುವಂತೆ ಪಂಚಾಯಿತಿ ಸದಸ್ಯರು ಪಿಡಿಒಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದ ರಿಂದ ಬೇಸತ್ತು ರಾಜೀನಾಮೆ ನೀಡಿದ್ದೇವೆ ಎಂಬ ಸತ್ಯವನ್ನು ಈಗ ಮಾಜಿ ಪಿಡಿಒಗಳೇ ಹೇಳುತ್ತಿದ್ದಾರೆ.

‘ಹಲವರು ತಮ್ಮ ವೈಯಕ್ತಿಕ ಕಾರಣದಿಂದಾಗಿ ರಾಜೀನಾಮೆ ನೀಡಿದ್ದಾರೆಯೇ ಹೊರತು ಇಲಾಖೆಯ ಕಾರಣಕ್ಕಾಗಿ ಅಲ್ಲ. ಹಳ್ಳಿ ರಾಜಕೀಯದಿಂದ ಬೇಸತ್ತು ರಾಜೀನಾಮೆ ನೀಡಿರುವುದು ಸುಳ್ಳು’ ಎನ್ನುವುದು ಜಿಲ್ಲಾ ಪಂಚಾಯ್ತಿ ಸಿಇಓ ಜಿ.ಸತ್ಯವತಿ ಅವರ ವಾದ. ಆದರೆ ರಾಜೀನಾಮೆ ನೀಡಿದ ಪಿಡಿಒಗಳು ಇದನ್ನು ಒಪ್ಪುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT