ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿ ಹೈದನ ದೇಸಿ ಹೆಲಿಕಾಪ್ಟರ್!

Last Updated 27 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಯಲ್ಲಿ ಕಬ್ಬಿನ ಕೃಷಿ ಹೆಚ್ಚಾಗಿರುವ ಕಾರಣ ಈ ಭಾಗದಲ್ಲಿ ಟ್ರ್ಯಾಕ್ಟರ್‌ಗಳು ಅತಿ ಎನಿಸುವಷ್ಟು ಇವೆ. ಪ್ರಾಯಶಃ ಇಲ್ಲಿಯ ರಸ್ತೆಗಳಲ್ಲಿ ನಿಂತು ಎತ್ತ ಕಲ್ಲು ಎಸೆದರೂ ಅದು ಟ್ರ್ಯಾಕ್ಟರ್ ಮೇಲೇ ಬೀಳುತ್ತದೆ. ಕಬ್ಬಿನ ಸಾಗಾಟಕ್ಕೆ ಎಡೆಬಿಡದೆ ಎಡತಾಕುವ ಕಾರಣ ಹಾದಿ-ಬೀದಿಯಲ್ಲಿ ಅವುಗಳದ್ದೇ ಮೆರವಣಿಗೆ. ಈ ಟ್ರ್ಯಾಕ್ಟರ್‌ಗಳ ಸಂತೆಯಲ್ಲಿ ಅದೊಂದು ದಿನ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ ವಾಂಗಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದು ಒಂದು ವಿಚಿತ್ರ ವಾಹನ. ಅದಕ್ಕೆ ಏನೆಂದು ಕರೆಯುವುದು ಎಂಬ ಗಲಿಬಿಲಿ ಗ್ರಾಮಸ್ಥರಿಗೆ.

ಕಬ್ಬಿಣದ ಪಟ್ಟಿಗಳ ಹಂದರವಾಗಿದ್ದ ಆ ವಾಹನಕ್ಕೆ ಮುಂದೊಂದು ಸೀಟು, ಹಿಂದೊಂದು ಉದ್ದನೆ ಬಾಲ, ತಲೆ ಮೇಲೊಂದು ಎರಡು ಅಲಗಿನ ಫ್ಯಾನ್ ಮಾತ್ರ ಇತ್ತು. ಸೀಟಿನ ಮೇಲೆ ಕುಳಿತ ಯುವಕ ಅದೇನು ಮೋಡಿ ಮಾಡುತ್ತಿದ್ದನೋ, ಆ ವಾಹನ ಕುಪ್ಪಳಿಸಿ, ಕುಪ್ಪಳಿಸಿ ಕೂಡುತ್ತಿತ್ತು. ಅಕ್ಕ-ಪಕ್ಕದಲ್ಲಿ ನಿಂತಿರುತ್ತಿದ್ದ ಜನ ಅದು ಕುಪ್ಪಳಿಸುವುದನ್ನು ಕಂಡು ಚಪ್ಪಾಳೆ ತಟ್ಟುತ್ತಿದ್ದರು.

ಟ್ರ್ಯಾಕ್ಟರ್ ಮೆಕ್ಯಾನಿಕ್ ಪ್ರದೀಪ್ ಮೋಹಿತೆ ಎಂಬ ಯುವಕ ತಯಾರಿಸಿದ ವಾಹನ ಅದು. ಅಂದಹಾಗೆ, ಅದು ಅಂತಿಂಥ ವಾಹನ ಅಲ್ಲ; ಆಕಾಶದಲ್ಲಿ ಹಾರುವ ಸಾಧನ. ಹಳ್ಳಿ ಹೈದ ನಿರ್ಮಿಸಿದ ದೇಸಿ ಹೆಲಿಕಾಪ್ಟರ್!

ವಾಂಗಿ ಗ್ರಾಮಕ್ಕೆ ಸರಿಯಾದ ಬಸ್ ಸೌಕರ್ಯವೂ ಇಲ್ಲ. ಸಾಂಗ್ಲಿ ಕಡೆಗೆ ಓಡಾಡುವ ಟ್ರ್ಯಾಕ್ಟರ್ ಇಲ್ಲವೆ ಖಾಸಗಿ ವಾಹನಗಳನ್ನೇ ಗ್ರಾಮಸ್ಥರು ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಇಂತಹ ಊರಿನಲ್ಲಿ ಆಕಾಶದಲ್ಲಿ ಹಾರುವ ಹೆಲಿಕಾಪ್ಟರ್ ಇದೆ. ಅದೂ ಹಳ್ಳಿ ಹುಡುಗನೇ ತಯಾರಿಸಿದ್ದು. ತಮ್ಮೂರಿಗೆ ಇಂತಹ ಹೆಮ್ಮೆ ತಂದ ಪ್ರದೀಪ್ ಅವರನ್ನು ಕಂಡರೆ ಗ್ರಾಮಸ್ಥರಿಗೆ ಎಲ್ಲಿಲ್ಲದ ಹೆಮ್ಮೆ.

ಕಿತ್ತುಹೋದ ಕಲ್ಲಿನ ಗೋಡೆ, ಮಳೆ ಬಂದರೆ ಸೋರುವ ತಾರಸಿ, ಅದು ಪ್ರದೀಪ್ ಮನೆ. ಸುತ್ತಲೆಲ್ಲ ಗಲೀಜು, ಸರಾಗವಾಗಿ ಓಡಾಡಲು ಆಗದ ಇಕ್ಕಟ್ಟಾದ ಗಲ್ಲಿಯೇ ಹೆಲಿಪ್ಯಾಡ್ ಆಗಿದ್ದು, ಹೆಲಿಕಾಪ್ಟರ್ ಬಿಡಾರ ಹೂಡಿದೆ. ಅದರಲ್ಲಿ ಟ್ರಯಲ್ ಪ್ರವಾಸಕ್ಕೆ ಸದ್ಯ ಯಾವ ಅವಕಾಶ ಇಲ್ಲ. ಮನೆ ಮುಂದೆ ನಿಲ್ಲಿಸಿಕೊಂಡು ಇದನ್ನು ಹಾರಿಸುವಂತಿಲ್ಲ. ಹಾರಾಟಕ್ಕೆ ಬೇಕಾದಷ್ಟು ಸ್ಥಳಾವಕಾಶ ಸಹ ಅಲ್ಲಿಲ್ಲ.

ಹೆಲಿಕಾಪ್ಟರ್ ಉಡಾವಣೆ ಮಾಡಬೇಕಾದ ಸಂದರ್ಭದಲ್ಲೆಲ್ಲ ಅದನ್ನು ಟ್ರ್ಯಾಕ್ಟರ್‌ನಲ್ಲಿ ಹಾಕಿಕೊಂಡು ಊರ ಹೊರಗಿನ ಶಾಲಾ ಆವರಣಕ್ಕೆ ತರಬೇಕು. ನಾಲ್ಕಾರು ಜನರ ಸಹಾಯದಿಂದ ಕೆಳಗೆ ಇಳಿಸಬೇಕು.
ಆಮೇಲೆ ಅದರ ರೋಟರ್‌ಗೆ ಫ್ಯಾನಿನ ಅಲಗು ಕೂಡಿಸಿ, ಒಂದು ಸುತ್ತು ತಿರುಗಿಸಬೇಕು. ಬಾಲದ ಮೇಲಿನ ಫ್ಯಾನೂ ತಿರುಗಲು ಆರಂಭಿಸಿದ ಮೇಲೆ ಶುರುವಾಗುವುದು `ಏರ್ ಶೋ'!

ಆಟಿಕೆಯೇ ಪ್ರೇರಣೆ
ಪ್ರದೀಪ್ ಒಂಬತ್ತನೇ ತರಗತಿ ಓದನ್ನು ಅರ್ಧಕ್ಕೆ ನಿಲ್ಲಿಸಿದ ಹುಡುಗ. ವೈಮಾನಿಕ ಸಲಕರಣೆ ಉತ್ಪಾದನೆ ಕುರಿತಂತೆ ಯಾವುದೇ ಮಾಹಿತಿ ಇಲ್ಲವೆ ಜ್ಞಾನ ಅವರಲ್ಲಿ ಇಲ್ಲ. ಸಂಬಂಧಿಯೊಬ್ಬರ ಮಗುವಿನ ಕೈಯಲ್ಲಿದ್ದ ಹೆಲಿಕಾಪ್ಟರ್ ಆಟಿಕೆಯೇ ಅವರ ಸಾಧನೆಗೆ ಪ್ರೇರಣೆಯಾಯಿತು. ಆಕಾಶದಲ್ಲಿ ಹಾರಾಡುವ ವಾಹನದ ನಿರ್ಮಾಣಕ್ಕೆ ಅವತ್ತೇ ಪ್ರದೀಪ್ ಕೈಹಾಕಿದರು.

ಗ್ಯಾರೇಜ್‌ನಲ್ಲಿ ಸದಾ ಟ್ರ್ಯಾಕ್ಟರ್ ರಿಪೇರಿ ಕೆಲಸದಲ್ಲಿ ತಲ್ಲೆನನಾಗಿರುತ್ತಿದ್ದ ಹುಡುಗ, ಒಂದಿಷ್ಟು ಬಿಡುವು ಪಡೆದು, ಅದೇ ತಗಡಿನ ಶೆಡ್‌ನಲ್ಲಿ ಬಿದ್ದ ಕಬ್ಬಿಣದ ಪಟ್ಟಿ ಹಿಡಿದು ಏನೇನೋ ಪ್ರಯೋಗ ಆರಂಭಿಸಿದರು. ಮನೆ ಮಂದಿಗೆ ತಲೆ ಕೆರೆದುಕೊಂಡರೂ ಈ ಹುಡುಗ ಏನು ಮಾಡುತ್ತಿದ್ದಾನೆ ಎಂಬುದು ಅರ್ಥ ಆಗಲಿಲ್ಲ. ಕಬ್ಬಿಣದ ಪಟ್ಟಿ ಬಾಗಿಸುವುದು, ಜೋಡಿಸುವುದು... ಇಂತಹ ಕೆಲಸಗಳು ಹೆಚ್ಚಾದಂತೆ ಅದೇ ಶೆಡ್‌ನಲ್ಲಿ ಅದೆಂತಹದ್ದೊ ರೂಪ ಪಡೆದ ವಸ್ತುವೊಂದು ಸಿದ್ಧವಾಗಿ ನಿಂತಿತು. ಆಗಲೇ ಮನೆ ಮಂದಿಗೆ ಕುತೂಹಲ ಕೂಡ ಹೆಚ್ಚಾಯಿತು.

`ಹೆಲಿಕಾಪ್ಟರ್ ಹಾರಾಟಕ್ಕೆ ಬೇಕಾದ ತಂತ್ರಜ್ಞಾನ ಹೊಳೆದದ್ದು ಹೇಗೆ' ಎಂದು ಪ್ರಶ್ನಿಸಿದರೆ, `ಕಾರಿನ ಎಂಜಿನ್ ಶುರುಮಾಡಿದರೆ ಅದು ಮುಂದೆ ಹೋಗುತ್ತದೆ. ಅದೇ ಶಕ್ತಿಯನ್ನು ಲಂಬಕೋನದ ಕಡೆಗೆ ತಿರುಗಿಸಿದರೆ ಅದು ಮೇಲೆ ಹೋಗಬೇಕು ಎನ್ನುವ ವಿಚಾರ ತಲೆಯಲ್ಲಿ ಇತ್ತು. ಟ್ರ್ಯಾಕ್ಟರ್ ರಿಪೇರಿ ಕೆಲಸದಲ್ಲಿ ಬಹಳ ಸಮಯ ಕಳೆದಿದ್ದರಿಂದ ಎಂಜಿನ್ ಕಾರ್ಯವೈಖರಿ ಗೊತ್ತಿತ್ತು' ಎಂದು ಉತ್ತರಿಸುತ್ತಾರೆ ಪ್ರದೀಪ್.

ಹಾರಿದ ವೇಗದಲ್ಲೇ ಬಿತ್ತು
`ಮೊದಲು ಡೀಸೆಲ್ ಕಾರಿನ ಎಂಜಿನ್ ಬಳಸಿದೆ. ನನ್ನ ಹೆಲಿಕಾಪ್ಟರ್ ನೆಲಬಿಟ್ಟು ಮೇಲಕ್ಕೆ ಏಳಲಿಲ್ಲ. ಆಮೇಲೆ `ಆಪೆ' ಆಟೊ ಎಂಜಿನ್ ಬಳಕೆ ಮಾಡಿದೆ. ಆಗಲೂ ಟರ್ಬೈನ್ ಕೆಲಸ ಮಾಡದೆ ನನ್ನ ಯತ್ನ ವಿಫಲವಾಯಿತು. ನಾನು ಕೈಚೆಲ್ಲಿ ಸುಮ್ಮನೇ ಕೂಡಲಿಲ್ಲ. ಕೊನೆಗೆ ಮಾರುತಿ 800 ಕಾರಿನ ಎಂಜಿನ್, ಆಟೊಮೊಬೈಲ್ ಸಲಕರಣೆ ಮತ್ತು ಟ್ರ್ಯಾಕ್ಟರ್ ಬ್ಯಾಟರಿ ಬಳಸಿದೆ. ಅಂದು 2012ರ ಜುಲೈ 7. ಹೆಲಿಕಾಪ್ಟರ್ ನೆಲಬಿಟ್ಟು ಆರು ಅಡಿ ಮೇಲಕ್ಕೆ ನೆಗೆದಿತ್ತು. ನೆಗೆದ ವೇಗದಲ್ಲಿಯೇ ನೆಲಕ್ಕೂ ಬಿತ್ತು' ಎಂದು ತಮ್ಮ ವಾಹನದ ಮೊದಲ ವಾಯುಯಾನದ ಅನುಭವವನ್ನು ಅವರು ಮೆಲುಕು ಹಾಕುತ್ತಾರೆ.

ಹೆಲಿಕಾಪ್ಟರ್ ಮೇಲೇರಿದಾಗ ಅದರಲ್ಲಿದ್ದ ಪ್ರದೀಪ್‌ಗೆ ಆಕಾಶವೇ ಕೈಗೆಟುಕಿದ ಅನುಭವ. ಸ್ಪೀಡೋಮೀಟರ್ ಬಳಸಿ, ಎಂಜಿನ್ ನಿಯಂತ್ರಣ ಮಾಡುತ್ತಿದ್ದರು ಈ ವೈಮಾನಿಕ ವಿಜ್ಞಾನಿ. ಆದರೆ, ಏರಿದ ಕೆಲವೇ ಕ್ಷಣಗಳಲ್ಲಿ ಬ್ಲೇಡ್ ಕಟ್ಟಾಗಿದ್ದರಿಂದ ಹೆಲಿಕಾಪ್ಟರ್ ನೆಲಕ್ಕೆ ಅಪ್ಪಳಿಸಿತು.

ಸಕ್ಕರೆ ಕಾರ್ಖಾನೆಯಲ್ಲಿದ್ದ ಲೇಥ್ ಮಶಿನ್‌ಗಳ ಸಹಾಯದಿಂದ ಆ್ಯಂಗಲ್ ಮತ್ತು ಬ್ಲೇಡ್‌ಗಳನ್ನು ತಯಾರು ಮಾಡಿಕೊಂಡು ಬಂದ ಪ್ರದೀಪ್‌ಗೆ ಹೆಲಿಕಾಪ್ಟರ್ ಸನ್ನದ್ಧವಾಗಿ ಮತ್ತೆ ಹಾರಬೇಕು ಎನ್ನುವ ತವಕ. ಸದ್ಯ ಅದು ಹೆಚ್ಚೆಂದರೆ ಕುಪ್ಪಳಿಸುತ್ತದೆ. ಮರಾಠಿ ಬಿಟ್ಟು ಬೇರೆ ಯಾವ ಭಾಷೆಯೂ ಗೊತ್ತಿಲ್ಲದ ಈ ಯುವಕ, ತಮ್ಮ ಸಾಹಸದ ಮೂಲಕ ದೇಶದ ಗಮನ ಸೆಳೆದಿದ್ದಾರೆ. ದೇಶದ ನಾನಾ ಭಾಗದ ವಿಜ್ಞಾನಿಗಳು ಈಗ ಅವರ ಭೇಟಿಗೆ ಬರುತ್ತಿದ್ದಾರೆ. ಬರುವಾಗ ಭಾಷಾಂತರ ಮಾಡಲು ಜೊತೆಗೊಬ್ಬ ವ್ಯಕ್ತಿಯನ್ನೂ ಕರೆತರುತ್ತಾರೆ.

`ಹುಚ್ಚಾಟ'ಕ್ಕೆ ಅಪ್ಪನ ಸಿಟ್ಟು
`ಹೊಟ್ಟೆ ತುಂಬಿಸಿಕೊಳ್ಳುವುದೇ ಹೊರೆಯಾಗಿ ಪರಿಣಮಿಸಿದೆ. ಇಂತಹ ಸ್ಥಿತಿಯಲ್ಲಿ ಇದೇನು ನಿನ್ನ ಹುಚ್ಚಾಟ, ಬದುಕಿನ ದಾರಿ ಬಿಟ್ಟು, ಮನೆ ಹಾಳು ಮಾಡುವಂತಹ ಕೆಲಸ ಏಕೆ' ಎಂದು ಪ್ರದೀಪ್ ಅವರ ತಂದೆ ಶಿವಾಜಿ ಸಾಕಷ್ಟು ಸಲ ಮಗನನ್ನು ಗದರಿದ್ದರಂತೆ. ಆದರೆ, ಹೆಲಿಕಾಪ್ಟರ್ ಹುಚ್ಚು ಪ್ರದೀಪ್ ಅವರನ್ನು ಆ ಸಾಹಸದಿಂದ ಹಿಂದೆ ಸರಿಯಲು ಒಂದಿನಿತೂ ಅವಕಾಶ ನೀಡಲಿಲ್ಲ.

ಕೃಷಿ ಕಾರ್ಮಿಕರಾದ ಶಿವಾಜಿ, ಕುಟುಂಬದ ನಿರ್ವಹಣೆಗೆ ಪರಿಪಾಟಲು ಪಡುತ್ತಿದ್ದರು. ಮಗನ ಆದಾಯವೂ ಒಂದಿಷ್ಟು ನೆರವು ನೀಡುತ್ತದೆ ಎನ್ನುವ ಅಪೇಕ್ಷೆಯಲ್ಲಿ ಅವರಿದ್ದರೆ, ಮಗ ದುಡಿದ ದುಡ್ಡನ್ನು ಹೆಲಿಕಾಪ್ಟರ್ ಕನಸು ನನಸು ಮಾಡಲು ಸುರಿಯುತ್ತಿದ್ದರು. ಪ್ರದೀಪ್ ತಾಯಿಗೆ ಆದಷ್ಟು ಬೇಗ ಮಗನ ಮದುವೆ ಮಾಡುವ ಚಿಂತೆ. `ಬೇಗ ಸೊಸೆಯನ್ನು ಕರೆ ತರಬೇಕು' ಎನ್ನುವ ಹವಣಿಕೆಯಲ್ಲಿ ಅವರಿದ್ದರೆ, `ಹೆಲಿಕಾಪ್ಟರ್ ಸ್ವಚ್ಛಂದವಾಗಿ ಹಾರಾಟ ನಡೆಸುವವರೆಗೆ ಮದುವೆ ಆಗಲಾರೆ' ಎಂದು 27ರ ಹರೆಯದ ಈ ವಿಜ್ಞಾನಿ ಹಟ ಹಿಡಿದಿದ್ದಾರೆ.

ಹೆಲಿಕಾಪ್ಟರ್‌ಗಾಗಿ ಇದುವರೆಗೆ ಮೂರು ಲಕ್ಷ ರೂಪಾಯಿಯಷ್ಟು ಖರ್ಚು ಮಾಡಿದ್ದಾರೆ. ನಾಲ್ಕು ವರ್ಷಗಳ (48 ತಿಂಗಳು ಉರ್ಫ್ 1,460 ದಿನ) ಕಾಲವನ್ನೂ ಅದಕ್ಕಾಗಿ ನೀಡಿದ್ದಾರೆ. `ಇನ್ನೂ ಎಷ್ಟು ದುಡ್ಡು ಖರ್ಚಾದರೂ ಪರವಾಗಿಲ್ಲ. ನನ್ನ ಹೆಲಿಕಾಪ್ಟರ್ ಹಾರಾಡಬೇಕು' ಎಂಬ ಅಭಿಲಾಷೆ ವ್ಯಕ್ತಪಡಿಸುತ್ತಾರೆ. `ನನ್ನ ಆಕಾಶ ವಾಹನ ಮುಂದಿನ `ಏರೋ ಇಂಡಿಯಾ' ಪ್ರದರ್ಶನದಲ್ಲಿ ಪಾಲ್ಗೊಂಡು ಹಾರಾಟ ನಡೆಸಬೇಕು. ಅದಕ್ಕಿಂತ ಖುಷಿ ಸಮಾಚಾರ ಬೇರಿಲ್ಲ. ಅಲ್ಲಿವರೆಗೆ ಮದುವೆ ಆಗಬಾರದು ಎನ್ನುವ ನಿರ್ಧಾರ ಮಾಡಿದ್ದೇನೆ. ಸದ್ಯ ಹೆಲಿಕಾಪ್ಟರ್ ನನ್ನ ಹೆಂಡತಿ' ಎನ್ನುತ್ತಾ ಒಂದು ನಗು ಬೀರುತ್ತಾರೆ ಪ್ರದೀಪ್.

ಚಿತ್ರಗಳು: ಹಿಂದೂಸ್ತಾನ್ ಏರೋನಾಟಿಕ್ಸ್  ಲಿಮಿಟೆಡ್, (ಎಚ್‌ಎಎಲ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT