ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಗಳಲ್ಲಿ 6 ಗಂಟೆ, ನಗರದಲ್ಲಿ 2 ಗಂಟೆ ಲೋಡ್ ಶೆಡ್ಡಿಂಗ್?

Last Updated 9 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ತೀವ್ರಗೊಂಡಿರುವ ವಿದ್ಯುತ್ ಕ್ಷಾಮದ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಲ್ಲಿ ಎರಡು ಅಥವಾ ಮೂರು ಗಂಟೆ ಲೋಡ್ ಶೆಡ್ಡಿಂಗ್ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆರು ಗಂಟೆ ಲೋಡ್ ಶೆಡ್ಡಿಂಗ್ ಮಾಡುವ ಸಂಭವ ಇದೆ ಎಂದು ಇಂಧನ ಇಲಾಖೆಯ ಮೂಲಗಳು ತಿಳಿಸಿವೆ.

ಬೆಂಗಳೂರು ನಗರದಲ್ಲಿ ಎರಡು ಗಂಟೆ ಮಾತ್ರ ಲೋಡ್ ಶೆಡ್ಡಿಂಗ್ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ರಾಜ್ಯಕ್ಕೆ ಪ್ರತಿದಿನ ಸರಾಸರಿ 160 ದಶಲಕ್ಷ ಯೂನಿಟ್ ವಿದ್ಯುತ್ ಅಗತ್ಯವಿದೆ. ಆದರೆ ಶನಿವಾರದ ವೇಳೆಗೆ ರಾಜ್ಯದ ವಿದ್ಯುತ್ ಪೂರೈಕೆ ದಿನವೊಂದಕ್ಕೆ 136 ದಶಲಕ್ಷ ಯೂನಿಟ್ ಆಗಿತ್ತು.

`ಲೋಡ್‌ಶೆಡ್ಡಿಂಗ್ ಅನಿವಾರ್ಯ~: ತೀವ್ರವಾಗಿರುವ ವಿದ್ಯುತ್ ಕ್ಷಾಮದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಅನಿವಾರ್ಯವಾಗಿದೆ. ಯಾವ ಪ್ರದೇಶದಲ್ಲಿ ಎಷ್ಟು ವಿದ್ಯುತ್ ಕಡಿತ ಮಾಡಲಾಗುವುದು ಎಂಬ ವಿಷಯವನ್ನು ಸೋಮವಾರ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ತಿಳಿಸಿದರು.

`ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಆಗ್ರಹಿಸಿ ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ತೆಲಂಗಾಣ ಹೋರಾಟದಿಂದ ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯುತ್ ಉತ್ಪಾದನೆ ಕುಸಿದಿದೆ.

ಲೋಡ್ ಶೆಡ್ಡಿಂಗ್ ಅನಿವಾರ್ಯ. ಯಾರೋ ಮಾಡಿದ ಪಾಪದ ಕೂಪದಲ್ಲಿ ನಾವು ಬಿದ್ದಿದ್ದೇವೆ, ಅದರಿಂದ ಹೊರಬರುವ ಯತ್ನ ಮಾಡುತ್ತಿದ್ದೇವೆ~ ಎಂದು ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೌಡರು ಹೇಳಿದರು.

ಕೇಂದ್ರ ಕಲ್ಲಿದ್ದಲು ಸಚಿವ ಶ್ರೀಪ್ರಕಾಶ್ ಜೈಸ್ವಾಲ್ ಅವರನ್ನು ರಾಜ್ಯದ ನಿಯೋಗ ಇದೇ 14ರಂದು ನವದೆಹಲಿಯಲ್ಲಿ ಭೇಟಿ ಮಾಡಲಿದೆ. ರಾಜ್ಯಕ್ಕೆ ಪ್ರತಿನಿತ್ಯ ಹೆಚ್ಚುವರಿಯಾಗಿ 10 ಸಾವಿರ ಟನ್ ಕಲ್ಲಿದ್ದಲು ಪೂರೈಸುವಂತೆ ಅವರನ್ನು ಕೋರಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕಲ್ಲಿದ್ದಲು ಪೂರೈಕೆಯಲ್ಲಿ ಆಗಿರುವ ವ್ಯತ್ಯಯದ ಕಾರಣ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್) ಎಂಟು ಘಟಕಗಳ ಪೈಕಿ ಕೇವಲ ಐದು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಕೆಲವೊಮ್ಮೆ ಕೇವಲ ನಾಲ್ಕು ಘಟಕಗಳಲ್ಲಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ  ಎಂದು ಅವರು ತಿಳಿಸಿದರು.

ಈಶ್ವರಪ್ಪ ಒತ್ತಾಯ: ಕೇಂದ್ರದಲ್ಲಿ ಸಚಿವರಾಗಿರುವ ಎಸ್.ಎಂ. ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ ಮತ್ತಿತರರು ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ಮತ್ತು ಕೇಂದ್ರ ವಿದ್ಯುತ್ ಗ್ರಿಡ್‌ನಿಂದ ವಿದ್ಯುತ್ ನೀಡುವಂತೆ ಒತ್ತಡ ಹೇರಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT