ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಗಳಿಗೆ ಐದು ಗಂಟೆ ವಿದ್ಯುತ್ ಪೂರೈಸಲು ಸೂಚನೆ

Last Updated 22 ಸೆಪ್ಟೆಂಬರ್ 2011, 7:10 IST
ಅಕ್ಷರ ಗಾತ್ರ

ಕೋಲಾರ: ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ದಿನ ಸಮರ್ಪಕವಾಗಿ ಐದು ಗಂಟೆ ಕಾಲ ವಿದ್ಯುತ್ ಸರಬರಾಜು ಮಾಡಬೇಕು. ಯಾವುದೇ ಕಾರಣಕ್ಕೂ ಸರಬರಾಜಿನಲ್ಲಿ ವ್ಯತ್ಯಯವಾಗಬಾರದು ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಿ.ಮಣಿವಣ್ಣನ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆ ಮತ್ತು ಬೆಸ್ಕಾಂ ಕಾರ್ಯ ನಿರ್ವಹಣೆ ಕುರಿತು ಪರಿಶೀಲಿಸುವ ಸಲುವಾಗಿ ನಗರಕ್ಕೆ ಮಂಗಳವಾರ ಭೇಟಿ ನೀಡಿದ್ದ ಅವರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಡನೆ ಚರ್ಚಿಸಿದರು.
ಬೆಸ್ಕಾಂ ಮತ್ತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಜಿಲ್ಲಾ ಪಂಚಾಯಿತಿಯಲ್ಲಿ ಜನ ಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ ಸಭೆ ನಡೆಸಿದರು.

ಸಾರ್ವಜನಿಕ ಕುಡಿಯುವ ನೀರು ಯೋಜನೆಗಾಗಿ ಕೊರೆಸಿರುವ ಕೊಳವೆಬಾವಿಗಳಲ್ಲಿ ನೀರು ಲಭ್ಯವಾಗಿದೆ ಎಂಬ ಮಾಹಿತಿ ಬಂದ ತಕ್ಷಣವೇ ವಿದ್ಯುತ್ ಸಂಪರ್ಕ ನೀಡಬೇಕು. ನಂತರ ಅದಕ್ಕೆ ಸಂಬಂಧಿಸಿದ ನಿಯಮಾವಳಿ ಪ್ರಕ್ರಿಯೆ ಪಾಲಿಸಬೇಕು ಎಂದು ಸೂಚಿಸಿದರು.

ಶ್ರೀನಿವಾಸಪುರ ತಾಲ್ಲೂಕಿನ ಗೌನಪಲ್ಲಿ, ಕೋಲಾರ ತಾಲ್ಲೂಕಿನ ಹುತ್ತೂರು ಹಾಗೂ ದೋಣಿ ಮಡಗು ಗ್ರಾಮದಲ್ಲಿನ ಕೇಂದ್ರಗಳ 22 ಕೆವಿ ವಿದ್ಯುತ್ ಸಾಮರ್ಥ್ಯವನ್ನು 46ಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು. ಬೆಸ್ಕಾಂನಲ್ಲಿ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲೇ 1 ಸಾವಿರ ಲೈನ್‌ಮ್ಯೋನ್‌ಗಳ ನೇಮಕವಾಗಲಿದೆ ಎಂದರು.

ಹುತ್ತೂರು ಹೋಬಳಿ ಕೇಂದ್ರದಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪಿಸಬೇಕು ಎಂದು ಇದೇ ಸಂದರ್ಭದಲ್ಲಿ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಮನವಿ ಮಾಡಿದರು. ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಮ್ಮ ಕ್ಷೇತ್ರದಲ್ಲಿರುವ ವಿದ್ಯುತ್ ಸಮಸ್ಯೆ ಕುರಿತು ವಿವರಿಸಿದರು.

ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಶಾಂತಪ್ಪ ಮತ್ತು ಉಪಾಧ್ಯಕ್ಷ ಜಿ.ಸೋಮಶೇಖರ್, ಬೆಸ್ಕಾಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉದಯ್‌ಕುಮಾರ್ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT