ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಗಳೂ ಅಭಿವೃದ್ಧಿಯಾಗಬೇಕು- ರಾಜ್ಯಪಾಲ

Last Updated 15 ಫೆಬ್ರುವರಿ 2011, 19:25 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರ ಪ್ರದೇಶಗಳಂತೆಯೇ ಹಳ್ಳಿಗಳು ಕೂಡ ಸಮಾನವಾಗಿ ಅಭಿವೃದ್ಧಿಯಾಗಬೇಕಿದೆ’ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ತಿಳಿಸಿದರು.ಕ್ಷೇತ್ರ ಪ್ರಚಾರ ನಿರ್ದೇಶನಾಲಯ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾಮೀಣಾಭಿವೃದ್ಧಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಅಭಿವೃದ್ಧಿ ಹೊಂದಿದ ಭಾರತ ಒಂದೆಡೆಯಾದರೆ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗದ ಭಾರತ ಇನ್ನೊಂದು ಕಡೆ ಇದೆ. ಹಳ್ಳಿ ಹಾಗೂ ನಗರ ಎಂಬ ಭೇದ ಭಾವ ದೂರವಾಗಬೇಕಿದೆ’ ಎಂದು ಅವರು ಹೇಳಿದರು.

‘ಸರ್ವ ಶಿಕ್ಷಾ ಅಭಿಯಾನ, ಸಂಪೂರ್ಣ ಸ್ವಚ್ಛತಾ ಆಂದೋಲನ, ಆರೋಗ್ಯ ಯೋಜನೆಗಳು ಸೇರಿದಂತೆ ಅನೇಕ ಯೋಜನೆಗಳು ನಿರೀಕ್ಷಿತ ಫಲಿತಾಂಶ ನೀಡಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಭಾಗಿತ್ವದಲ್ಲಿ ರೂಪಿಸಿದ ಅನೇಕ ಯೋಜನೆಗಳು ಯಶಸ್ವಿಯಾಗಿಲ್ಲ. ಈ ಕುರಿತು ಪ್ರಧಾನಿಯವರೊಂದಿಗೆ ಚರ್ಚಿಸಿದ್ದು ಪ್ರತ್ಯೇಕವಾಗಿ ಯೋಜನೆಗಳನ್ನು ರೂಪಿಸಲು ಸಲಹೆ ನೀಡಲಾಗಿದೆ’ ಎಂದು ತಿಳಿಸಿದರು.

‘ಯುವಕರು ಹಾಗೂ ಮಹಿಳೆಯರಿಗೆ ಅಭಿವೃದ್ಧಿಯಲ್ಲಿ ಪಾಲು ದೊರೆಯಬೇಕಿದೆ. ಆಗ ಮಾತ್ರ ಯುವಕರು ನಕ್ಸಲರಾಗುವುದು ತಪ್ಪುತ್ತದೆ’ ಎಂದರು. ‘ಗುಣಾತ್ಮಕ ಶಿಕ್ಷಣ, ಮೂಲಸೌಕರ್ಯಗಳ ಅಭಿವೃದ್ಧಿ, ಬಡವರ ಏಳಿಗೆಗೆ ಶ್ರಮಿಸಿದಾಗ ಮಾತ್ರ ಸಂವಿಧಾನದ ಆಶಯವನ್ನು ಈಡೇರಿಸಿದಂತಾಗುತ್ತದೆ. ನಾಯಕರು ಹೆಲಿಕಾಪ್ಟರ್‌ಗಳಲ್ಲಿ ಸಂಚರಿಸದೇ ರಸ್ತೆಯ ಮೇಲೆ ಓಡಾಡುವ ಅಗತ್ಯವಿದೆ. ಸಾರ್ವಜನಿಕ ಸೇವೆಯಲ್ಲಿರುವವರು ಪರಿಶ್ರಮ ಪಟ್ಟರೆ ಜನರು ನೆಮ್ಮದಿಯಿಂದ ಇರುವುದು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ರಾಜ್ಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಮೀರಾ ಸಕ್ಸೇನಾ ಮಾತನಾಡಿ ‘ಉದ್ಯೋಗ ಖಾತ್ರಿ ಯೋಜನೆಯಿಂದ ಭೂಮಾಲೀಕರ ಶೋಷಣೆ ತಪ್ಪಿದೆ. ಹಾಗೆಯೇ ಜನರು ನಿಗದಿಗೊಳಿಸಿದ ಕಾಲಾವಧಿಯಲ್ಲಿ ಸಂಪೂರ್ಣವಾಗಿ ದುಡಿಯುವ ಮನೋಭಾವವನ್ನು ಬೆಳೆಸಿಕೊಳ್ಳುವ ಅಗತ್ಯವಿದೆ’ ಎಂದು ತಿಳಿಸಿದರು.

ಜಾಹೀರಾತು ಮತ್ತು ದೃಶ್ಯ ಪ್ರಚಾರ ನಿರ್ದೇಶನಾಲಯದ ಮಹಾ ನಿರ್ದೇಶಕ ಎ.ಪಿ. ಫ್ರ್ಯಾಂಕ್ ನರೋನ್ಹಾ ಮಾತನಾಡಿ ‘ಮಾಹಿತಿ ಕೊರತೆಯಿಂದಾಗಿ ಅನೇಕ ಅಭಿವೃದ್ಧಿ ಯೋಜನೆಗಳು ಜನರಿಗೆ ತಲುಪುತ್ತಿಲ್ಲ. ಮಾಹಿತಿ ಉಳ್ಳವರು ಮಾಹಿತಿ ಇಲ್ಲದವರ ನಡುವೆ ಕಂದರ ಏರ್ಪಟ್ಟಿದೆ. ಈ ಅಂತರವನ್ನು ಕಡಿಮೆಗೊಳಿಸಲು ನಿರ್ದೇಶನಾಲಯ ಯತ್ನಿಸುತ್ತಿದೆ’ ಎಂದು ಹೇಳಿದರು. ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ನಿರ್ದೇಶಕ ಎಂ.ನಾಗೇಂದ್ರ ಸ್ವಾಮಿ, ಮೈಸೂರು ವಿಭಾಗದ ಕ್ಷೇತ್ರ ಪ್ರಚಾರಾಧಿಕಾರಿ ಎನ್.ಡಿ.ಪ್ರಸಾದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT