ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಗೂ ಕಾಲಿಟ್ಟ ಕೊಳ್ಳುಬಾಕ ಸಂಸ್ಕೃತಿ

Last Updated 20 ಅಕ್ಟೋಬರ್ 2011, 7:30 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಹಿಂದೆ ಹಳ್ಳಿಗೆ ಮಿಠಾಯಿ ಮಾರುವನು ಬಂದರೆ ಮಕ್ಕಳಿಗೆ ಸಂತೋಷವಾಗುತ್ತಿತ್ತು. ಹಿರಿಯರನ್ನು ಕಾಡಿ ಬೇಡಿ ಮಿಠಾಯಿ ಖರೀದಿಸಿ ತಿಂದು ಆನಂದಿಸುತ್ತಿದ್ದರು.

ಅಂದಿನ ಮಕ್ಕಳಿಗೆ ಮಿಠಾಯಿ ಒಂದು ವಿಶೇಷವಾದ ತಿನಿಸಾಗಿತ್ತು. ಹಳ್ಳಿಯಲ್ಲಿ ತಾವೇ ಬೆಳೆದ ನೆಲಗಡಲೆ, ಕಬ್ಬು, ಕಳ್ಳೆ, ಅವರೆ, ಹುರುಳಿ ಇತ್ಯಾದಿ ಸಾಮಾನ್ಯವಾಗಿದ್ದವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಬೇಕರಿ ತಿಂಡಿಗಳು ಹಳ್ಳಿ ಪ್ರವೇಶಿಸಿವೆ. ಹೆಚ್ಚಿನ ಸಂಖ್ಯೆಯ ರೈತರು ನೆಲಗಡಲೆ ಬೆಳೆಯುತ್ತಿಲ್ಲ.

ಮಳೆ ಕೊರತೆ ಮತ್ತು ಟೊಮೆಟೊ ಮೇಲಿನ ಮೋಹದಿಂದ ಕಳ್ಳೇಕಾಯಿಬೆಳೆಯುತ್ತಿಲ್ಲ. ಆದರೆ ತಿನ್ನುವುದು ಮಾತ್ರ ಕಡಿಮೆಯಾಗಿಲ್ಲ. ಆದ್ದರಿಂದಲೇ ಕಳ್ಳೇಕಾಯಿ ಸುಗ್ಗಿ ಸಂದರ್ಭದಲ್ಲಿ ಸಮೀಪದ ಪೇಟೆಗಳಿಂದ ವ್ಯಾಪಾರಿಗಳು ಬಂದು ಮಾರುತ್ತಾರೆ. ಬೆಲೆ ಎಷ್ಟಾದರೂ ಸರಿ ಕೊಂಡು ತಿನ್ನುವುದು ಮಾತ್ರ ಮುಂದುವರಿದಿದೆ.

ಹಳ್ಳಿಯಿಂದ ತರಕಾರಿ ಪೇಟೆಗೆ ಹೋಗುವುದು ಸಹಜ. ಆದರೆ ಈಗ ಅದಕ್ಕೆ ವಿರುದ್ಧವಾದ ವಿದ್ಯಮಾನ ಉಂಟಾಗಿದೆ. ಗ್ರಾಮೀಣ ಪ್ರದೇಶದ ಜನರೂ ಸಹ ಪೇಟೆಯಿಂದ ತರಕಾರಿ ಖರೀದಿಸಿ ಕೊಂಡೊಯ್ಯುತ್ತಿದ್ದಾರೆ. ಹೀಗೆ ತರಕಾರಿ ಖರೀದಿಸುವರಲ್ಲಿ ಹೆಚ್ಚಿನವರು ರೈತರೇ ಅಗಿರುವುದು ಇನ್ನೊಂದು ವಿಶೇಷ.

ಹೆಚ್ಚಿನ ರೈತರು ಏಕಬೆಳೆ ಪದ್ಧತಿ ರೂಢಿಸಿಕೊಂಡಿದ್ದಾರೆ. ಎಂದರೆ ಟೊಮೆಟೊ, ಆಲೂಗಡ್ಡೆ, ಬೀನ್ಸ್, ಕೋಸು, ದೊಣ್ಣೆ ಮೆಣಸಿನ ಕಾಯಿ ಹೀಗೆ ಯಾವುದಾದರೂ ಒಂದು ಬೆಳೆಯನ್ನು ಹೆಚ್ಚಿನ ವಿಸ್ತೀರ್ಣದಲ್ಲಿ ಬೆಳೆಯುತ್ತಾರೆ. ಇದರಿಂದ ಮನೆಗೆ ಬೇಕಾದ ತರಕಾರಿಯನ್ನು ಮಾರುಕಟ್ಟೆಯಿಂದ ಕೊಂಡು ತರಬೇಕಾದ ಅನಿವಾರ್ಯತೆ ಉಂಟಾಗಿದೆ.

ಹಿಂದೆ ಹೀಗಿರಲಿಲ್ಲ. ರೈತರು ಮನೆಗೆ ಬೇಕಾದ ತರಕಾರಿ ಬೆಳೆಯಲು ಆದ್ಯತೆ ನೀಡುತ್ತಿದ್ದರು. ತೋಟದಲ್ಲಿ ಅರಿವೆ ಸೊಪ್ಪಿನ ಮಡಿ ಯಾವಾಗಲೂ ಇರುತ್ತಿದ್ದವು. ತೋಟದ ಬದುಗಳ ಪಕ್ಕದಲ್ಲಿ ಸೋರೆ, ಹೀರೆ, ಆಗಲ, ಚಪ್ಪರದವರೆ, ಬೆಂಡೆ, ಬದನೆ ಇತ್ಯಾದಿ ಹಲವು ಬಗೆಯ ತರಕಾರಿ ಬೆಳೆಯುತ್ತಿದ್ದರು. ತಾವು ಬಳಸುವ ಜತೆ ನೆರೆಹೊರೆಯವರಿಗೂ ಕೊಡುತ್ತಿದ್ದರು.

ಇನ್ನೂ ಹೆಚ್ಚಾಗಿ ಉಳಿದರೆ ಸಮೀಪದ ಸಂತೆ ಅಥವಾ ಮಾರುಟ್ಟೆಗೆ ಕೊಂಡೊಯ್ದು ಮಾರುತ್ತಿದ್ದರು.
ಆದರೆ  ಈಗ ಎಲ್ಲವೂ ಮಾಯವಾಗಿದೆ. ಕೊಳ್ಳುಬಾಕ ಸಂಸ್ಕೃತಿ ಹಳ್ಳಿಗರನ್ನೂ ಆವರಿಸಿದೆ. ತೇವ ಕಂಡಲ್ಲಿ ಬೀಜ ನೆಡುವ ಸಂಸ್ಕೃತಿಗೆ ಹಿಂದಿರುಗಬೇಕು. ಆಗ ಮಾತ್ರ ವಿನಾಃಕಾರಣ ಕೊಳ್ಳುವುದು ತಪ್ಪುತ್ತದೆ ಎಂದು ಹಿರಿಯ ಕೃಷಿಕರು ಅಭಿಪ್ರಾಯಪಡುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT