ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಗೆ ಬಂದ `ಅಲೀಬಾಬಾ ಮತ್ತು 40 ಕಳ್ಳರು'

Last Updated 10 ಜುಲೈ 2013, 8:49 IST
ಅಕ್ಷರ ಗಾತ್ರ

ಕೆ.ಆರ್.ನಗರ: ಇಲ್ಲಿಗೆ ಸಮೀಪದ ಮುಳ್ಳೂರು ಶಾಲೆಯಲ್ಲಿ ಮಕ್ಕಳಿಗೆಲ್ಲ ಕುತೂಹಲ. ಏಕೆಂದರೆ ಅಲ್ಲಿ ಅಲೀಬಾಬಾ ಮತ್ತು 40 ಕಳ್ಳರು ಹಾಜರಾಗಿದ್ದರು!

ಮಕ್ಕಳ ಕಥೆಗಳಲ್ಲಿ ಜನಪ್ರಿಯತೆ ಪಡೆದಿರುವ `ಅಲೀಬಾಬಾ ಮತ್ತು 40 ಕಳ್ಳರು' ರಂಗರೂಪದಲ್ಲಿ ಈಗಾಗಲೇ ದೇಶದಾದ್ಯಂತ ಜನಪ್ರಿಯವಾಗಿದೆ. ಆದರೆ, ಗ್ರಾಮೀಣ ಶಾಲೆಯೊಂದರ ಮಕ್ಕಳಿಗೂ ಇಂಥ ನಾಟಕ ಕಲಿಯುವ ಹಾಗೂ ಕಲಿತು ಪ್ರದರ್ಶಿಸುವ ಅವಕಾಶ ಇತ್ತೀಚೆಗೆ ಲಭಿಸಿತ್ತು. ರಾಷ್ಟ್ರಮಟ್ಟದ ರಂಗ ಕಲಾವಿದರಾಗಿ ಹೆಸರು ಮಾಡಿರುವ ಭಾಗೀರಥಿಬಾಯಿ ಕದಂ ಅವರು ಜುಲೈ 1ರಿಂದ 9ರವರೆಗೆ ಮುಳ್ಳೂರು ಸರ್ಕಾರಿ ಪ್ರಾಥಮಿಕ ಶಾಲೆಯ 5ರಿಂದ 8ನೇ ತರಗತಿಯ 45 ಮಕ್ಕಳಿಗೆ ಈ ನಾಟಕವನ್ನು ಕಲಿಸಿದರು.   

ಬೆಳಿಗ್ಗೆ 9ರಿಂದ 10ರವರೆಗೆ ಹಾಗೂ ಮಧ್ಯಾಹ್ನ 2ರಿಂದ 5ರವರೆಗೆ ವಿದ್ಯಾರ್ಥಿಗಳು ನಾಟಕ ಕಲಿತಿದ್ದಾರೆ. ಶಾಲೆಯಲ್ಲಿ ಪ್ರದರ್ಶನವನ್ನೂ ನೀಡಿದ್ದಾರೆ. ಕೆ.ಆರ್. ನಗರದಿಂದ 5 ಕಿ.ಮೀ. ದೂರದಲ್ಲಿರುವ ಹುಣಸೂರು ತಾಲ್ಲೂಕಿನ ಗಾವಡಗೆರೆಯವರಾದ ಭಾಗೀರಥಿಬಾಯಿ ಪತಿ ಬಹರೂಲ್ ಇಸ್ಲಾಂ ಅವರೊಂದಿಗೆ ಕಳೆದ 20 ವರ್ಷಗಳಿಂದ ಅಸ್ಸಾಂನ ಗುವಾಹಟಿಯಲ್ಲಿ ವಾಸವಾಗಿದ್ದಾರೆ. ಅಲ್ಲಿ ಅವರು `ಸೀಗಲ್ ಥಿಯ್‌ಟರ್' ಸ್ಥಾಪಿಸಿದ್ದು ಪ್ರಾಂಶುಪಾಲರಾಗಿ ರಂಗ ತರಬೇತಿ ನೀಡುತ್ತಿದ್ದಾರೆ. ಇದಕ್ಕೂ ಮೊದಲು ಅವರು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ)ಯಲ್ಲಿ ಕಲಿತರು.

`ಮುಳ್ಳೂರು ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳಿಗೆ `ಅಲಿಬಾಬಾ ಮತ್ತು 40 ಜನ ಕಳ್ಳರು' ಎಂಬ ನಾಟಕ ತರಬೇತಿ ನೀಡಿದ್ದೇನೆ. ಗ್ರಾಮಾಂತರ ಪ್ರದೇಶದ ಮಕ್ಕಳಲ್ಲಿ ಪ್ರತಿಭೆ ಹೊರ ತರಲು ಪ್ರಯತ್ನಿಸಿದ್ದೇನೆ. ಇಲ್ಲಿಯ ಶಿಬಿರ ನನಗೆ ಖುಷಿ ಕೊಟ್ಟಿದೆ. ಸಮಯ ಸಿಕ್ಕಾಗಲೆಲ್ಲ ಇಲ್ಲಿಗೆ ಬಂದು ಮಕ್ಕಳಿಗೆ ತರಬೇತಿ ನೀಡುತ್ತೇನೆ' ಎನ್ನುತ್ತಾರೆ ಭಾಗೀರಥಿಬಾಯಿ ಕದಂ.


ಮತ್ತೆ ಬರಲಿ
ರಂಗ ತರಬೇತಿಯಲ್ಲಿ ಅಭಿನಯ ಕುರಿತು ಸಾಕಷ್ಟು ಕಲಿತು ಕೊಂಡಿದ್ದೇನೆ. ತರಬೇತಿಯಲ್ಲಿ ಕಲಿತಿದ್ದನ್ನು ಶಾಲಾ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸುತ್ತೇನೆ. ಮೇಡಂ ಮತ್ತೊಮ್ಮೆ ನಮ್ಮ ಶಾಲೆಗೆ ಬಂದು ತರಬೇತಿ ನೀಡಲಿ.
-ಚೈತ್ರಾ, ವಿದ್ಯಾರ್ಥಿನಿ

ತುಂಬಾ ಖುಷಿಯಾಗಿದೆ
7ನೇ ತರಗತಿಯಲ್ಲಿ ಓದುತ್ತಿರುವ ನನಗೆ ಅಭಿನಯಿಸಲು ಅವಕಾಶ ಸಿಕ್ಕಿರಲಿಲ್ಲ. ರಾಷ್ಟ್ರ ಮಟ್ಟದ ಕಲಾವಿದೆ ನಮ್ಮ ಶಾಲೆಗೆ ಬಂದು ನಾಟಕ ಕಲಿಸಿದ್ದು ತುಂಬಾ ಖುಷಿ ನೀಡಿದೆ.
-ನಿಸರ್ಗ, ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT