ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಮಂದಿಗೂ ಶುದ್ಧ ನೀರು

Last Updated 11 ಜೂನ್ 2012, 19:30 IST
ಅಕ್ಷರ ಗಾತ್ರ

`ದೇಶದ ಪ್ರಧಾನಮಂತ್ರಿ ಕುಡಿಯುವಷ್ಟೇ ಶುದ್ಧ ನೀರನ್ನು ನೀವೂ ಕುಡಿಯಬೇಕು. ಊರಿನಲ್ಲೊಂದು ಕೊಠಡಿ ಕೊಡಿ, ತಿಂಗಳೊಳಗೆ ಶುದ್ಧ ಕುಡಿಯುವ ನೀರಿನ ಘಟಕ ಹಾಕಿಸಿ ಕೊಡ್ತೀನಿ~. ಹೀಗೆಂದು ಆ ವ್ಯಕ್ತಿ ಹೇಳುತ್ತಿದ್ದಂತೆ ಎದುರು ಕುಳಿತ ಗ್ರಾಮಸ್ಥರಿಂದ ಚಪ್ಪಾಳೆ, `ಹೋ~ ಎಂಬ ಹರ್ಷೋದ್ಗಾರ.

ಉತ್ತರ ಕರ್ನಾಟಕದ ಒಂದಲ್ಲ, ಎರಡಲ್ಲ; ಹತ್ತಾರು ಹಳ್ಳಿಗಳಲ್ಲಿ ಈ ಮಾತು, ಜನರ ಚಪ್ಪಾಳೆ ಮಾರ್ದನಿಸಿದೆ. ಅದು ಕೇವಲ ಭರವಸೆಯಾಗಿ ಉಳಿಯದೇ ಅಲ್ಲೆಲ್ಲ ಶುದ್ಧ ನೀರು ಪೂರೈಕೆಯಾಗುತ್ತಿದೆ.

ಒಂದು ಕೊಡ ಕುಡಿಯುವ ನೀರಿಗಾಗಿ ಬಿಸಿಲು, ಚಳಿ, ಹಗಲು, ರಾತ್ರಿ ಎಂಬ ಪರಿವೆಯಿಲ್ಲದೆ ಕಾಲು ಸೋಲುವವರೆಗೂ ನಡೆಯಬೇಕಾದ ಅನಿವಾರ್ಯತೆ ಇರುವ ಜನರ ಬವಣೆ ನೀಗಿಸಲು ಮುಂದಾದ ಆ ವ್ಯಕ್ತಿ ಬೇರಾರೂ ಅಲ್ಲ, ಮಾಜಿ ಸಚಿವ ಎಚ್.ಕೆ. ಪಾಟೀಲ. ಆಶ್ವಾಸನೆ ನೀಡಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ, ಆ ಮೇಲೆ ಆಡಿದ ಮಾತನ್ನೇ ಮರೆಯುವ ರಾಜಕಾರಣಿ ತಾವಲ್ಲ ಎಂಬುದನ್ನು ಅವರು ಮಾಡಿ ತೋರಿಸಿದ್ದಾರೆ. 

ತಮ್ಮೂರು ಗದಗ ಜಿಲ್ಲೆ ಹುಲಕೋಟಿಯಲ್ಲಿ ತಂದೆಯ ಹೆಸರಿನಲ್ಲಿ ದಶಕದಿಂದ ಕಾರ್ಯ ನಿರ್ವಹಿಸುತ್ತಿರುವ ಕೆ.ಎಚ್.ಪಾಟೀಲ ಪ್ರತಿಷ್ಠಾನ ಹಾಗೂ ಗ್ರಾಮೀಣ ವೈದ್ಯಕೀಯ ಸೇವಾ ಸಂಸ್ಥೆಯ ಮೂಲಕ ಶುದ್ಧ ಕುಡಿಯುವ ವಿವಿಧೆಡೆ ನೀರಿನ ಘಟಕ ಅಳವಡಿಸಿದ್ದಾರೆ. ಗ್ರಾಮಸ್ಥರಿಗೆ ಫ್ಲೋರೈಡ್ ಮುಕ್ತ ನೀರು ಸಿಗುವಂತೆ ಮಾಡುತ್ತಿದ್ದಾರೆ. ಗದಗ ನಗರ, ಮುಂಡರಗಿ, ನರಗುಂದ, ರೋಣ, ಶಿರಹಟ್ಟಿ ತಾಲ್ಲೂಕಿನ ಹಳ್ಳಿಗಾಡಿನ ಜನ ಇದರ ಪ್ರಯೋಜನ ಪಡೆಯುತ್ತಿದ್ದಾರೆ.

ತವರು ಜಿಲ್ಲೆಯಲ್ಲಿ ಸಿಕ್ಕ ಯಶಸ್ಸಿನಿಂದ ಪ್ರೇರಿತರಾಗಿರುವ ಅವರು ಕುಡಿಯಲು ಕೆರೆ ನೀರು ಅವಲಂಬಿಸಿರುವ ರಾಜ್ಯದ ಎಲ್ಲಾ ಗ್ರಾಮಗಳಿಗೆ ಈ ಯೋಜನೆ ವಿಸ್ತರಿಸಲು ಮುಂದಾಗಿದ್ದಾರೆ. ಮೊದಲ ಹಂತವಾಗಿ ಈ ವರ್ಷಾಂತ್ಯದ ಹೊತ್ತಿಗೆ ಉತ್ತರ ಕರ್ನಾಟಕದ ಸುಮಾರು 150 ಹಳ್ಳಿಗಳಲ್ಲಿ ಶುದ್ಧ ನೀರಿನ ಘಟಕ ಆರಂಭಿಸುವ ಗುರಿ ಇಟ್ಟುಕೊಂಡಿದ್ದಾರೆ.

ತಂದೆಯ ಹೆಸರಿನಲ್ಲಿ ಗ್ರಾಮೀಣರಿಗೆ ಶುದ್ಧ ನೀರು ಕೊಡುವ ಕನಸಿಗೆ ಮೂರ್ತ ರೂಪ ನೀಡಲು  ಧಾರವಾಡ ಜಿಲ್ಲೆಯ ನವಲಗುಂದ, ಕುಂದಗೋಳ ಹಾಗೂ ಹುಬ್ಬಳ್ಳಿ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಅಭಿಯಾನ ನಡೆಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಮಾನದಂಡದ ಶುದ್ಧ ನೀರು: ಕೆರೆಯ ಕಲುಷಿತ ನೀರನ್ನು ಕುದಿಸಿ ಬಳಸುವ ಅಥವಾ ಕೊಳವೆ ಬಾವಿಯ ಫ್ಲೊರೈಡ್‌ಯುಕ್ತ ನೀರನ್ನು ಅನಿವಾರ್ಯವಾಗಿ ಕುಡಿಯಬೇಕಾದ ಪರಿಸ್ಥಿತಿಯಲ್ಲಿರುವ ಗ್ರಾಮಗಳನ್ನು ಮೊದಲು ಗುರುತಿಸುವ ಪ್ರತಿಷ್ಠಾನ ಅಲ್ಲಿ ನೀರು ಶುದ್ಧೀಕರಣ ಘಟಕ ಆರಂಭಿಸಲು ಮುಂದಾಗುತ್ತದೆ.

ಇದರಲ್ಲಿ ಗ್ರಾಮಸ್ಥರ ಸಹಭಾಗಿತ್ವ ಇರಲೇಬೇಕು. ಈ ಘಟಕಗಳು ಕೆರೆಯ ನೀರನ್ನು ಶುದ್ಧೀಕರಿಸಿ ಕುಡಿಯಲು ಯೋಗ್ಯವಾಗುವಂತೆ ಮಾಡುತ್ತವೆ. ಅಲ್ಲದೆ ಸವಳು ನೀರನ್ನು ಸಿಹಿಯಾಗಿಸಿ ಜನ ಬಳಸಲು ಸೂಕ್ತವಾಗುವಂತೆ ಪರಿವರ್ತಿಸುತ್ತವೆ. ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ನೀರಿನ ಶುದ್ಧತೆ ಕಾಪಾಡುವುದು ಯೋಜನೆಯ ವೈಶಿಷ್ಟ್ಯವಾಗಿದೆ.

ಗ್ರಾಮಸ್ಥರು ಊರಿನಲ್ಲಿರುವ ಹಳೆಯ ಕೊಠಡಿ ಒದಗಿಸಬಹುದು ಅಥವಾ ಹೊಸ ಕಟ್ಟಡ ಕಟ್ಟಿಸಿ ಕೊಡಬಹುದು. ಕೇವಲ ನೀರು ಶುದ್ಧೀಕರಿಸುವ ಸಾಧನಕ್ಕಾದರೆ 8 ಲಕ್ಷ ರೂಪಾಯಿ, ಫ್ಲೊರೈಡ್ ನೀರನ್ನು ಸಿಹಿಯಾಗಿ ಮಾಡುವ ಘಟಕಕ್ಕೆ 10 ಲಕ್ಷ ರೂಪಾಯಿ ಖರ್ಚಾಗುತ್ತದೆ. ಈ ಮೊತ್ತವನ್ನು ಪ್ರತಿಷ್ಠಾನವೇ ಭರಿಸುತ್ತದೆ.
 
ಆದರೆ ಕೆಲವು ಗ್ರಾಮಗಳಲ್ಲಿ ಸ್ಥಿತಿವಂತರು ಹಾಗೂ ಗ್ರಾಮಸ್ಥರು ದೇಣಿಗೆ ಸಂಗ್ರಹಿಸಿ ಘಟಕದ ವೆಚ್ಚವನ್ನೂ ನೀಡುತ್ತಿರುವುದು ಅಭಿಯಾನದ ಉತ್ಸಾಹ ಇಮ್ಮಡಿಗೊಳಿಸಿದೆ.

ಲೀಟರ್‌ಗೆ 10 ಪೈಸೆ
ಮೊದಲು ಗ್ರಾಮಸ್ಥರೊಂದಿಗೆ ಒಡಂಬಡಿಕೆ, ನಂತರ ತಜ್ಞರಿಂದ ಸ್ಥಳ ಪರಿಶೀಲನೆ ನಡೆಯುತ್ತದೆ. ಮುಂದೆ ಒಂದೇ ತಿಂಗಳಲ್ಲಿ ಸುಸಜ್ಜಿತ ಘಟಕ ಅಳವಡಿಸಿಕೊಡಲಾಗುತ್ತದೆ. ಇದರಿಂದ ನೀರು ಪಡೆಯಲು ಗ್ರಾಮಸ್ಥರು ಪ್ರತೀ ಲೀಟರ್‌ಗೆ 10 ಪೈಸೆ ಕೊಡಬೇಕು. ಇದನ್ನು ಘಟಕದ ನಿರ್ವಹಣೆಗೆ ವೆಚ್ಚ ಮಾಡಲಾಗುತ್ತದೆ.

ಬಾಟಲಿ ನೀರು ಲೀಟರ್‌ಗೆ 10 ರಿಂದ 15 ರೂಪಾಯಿ ವರೆಗೆ ಬಿಕರಿ ಆಗುವಾಗ, 10 ಪೈಸೆ ದೊಡ್ಡ ವಿಷಯವೇನಲ್ಲ. ಎಟಿಎಂ ಯಂತ್ರದ ಮಾದರಿಯ ನೀರಿನ ಘಟಕದಲ್ಲಿ ಎರಡು ರೂಪಾಯಿ ಹಾಕಿದರೆ ಸಾಕು, 20 ಲೀಟರ್ ಶುದ್ಧ ನೀರು ಬಿಂದಿಗೆ ತುಂಬುತ್ತದೆ. ಇಷ್ಟು ಕಡಿಮೆ ದರದಲ್ಲಿ ಕುಡಿಯಲು ಯೋಗ್ಯವಾದ ನೀರು ಸಿಗುತ್ತಿರುವುದು ಜನರಿಗೆ ಸಹಜವಾಗಿಯೇ ಖುಷಿ ತಂದಿದೆ. ಅಲ್ಲದೆ ಅಶುದ್ಧ ನೀರಿನಿಂದ ಬರುತ್ತಿದ್ದ ಕಾಯಿಲೆ ಕಡಿಮೆಯಾಗಿ ಸಂತಸ ಮನೆ ಮಾಡಿದೆ.

ನೀರಿನ ಘಟಕ ಹಾಕಿಕೊಟ್ಟ ನಂತರ ಸ್ಥಳೀಯ ಗ್ರಾಮ ಪಂಚಾಯ್ತಿ, ಸಹಕಾರ ಸಂಘ ಅಥವಾ ಗ್ರಾಮ ನೀರು ನಿರ್ವಹಣಾ ಸಮಿತಿಗೆ ಅದರ ಮೇಲುಸ್ತುವಾರಿಯನ್ನು ಪ್ರತಿಷ್ಠಾನ ವಹಿಸಿಕೊಡುತ್ತದೆ. ಆದರೂ ಮುಂದಿನ 10 ವರ್ಷ ಘಟಕದ ನಿರ್ವಹಣೆಗೆ ತಾನೇ ಉಚಿತ ತಾಂತ್ರಿಕ ನೆರವು ನೀಡಲಿದೆ.

`ಸ್ವಾತಂತ್ರ್ಯ ಬಂದು 6 ದಶಕ ಕಳೆದರೂ ಉತ್ತರ ಕರ್ನಾಟಕ ಭಾಗದ ಬಹುತೇಕ ಗ್ರಾಮಗಳ ಜನತೆ ಈಗಲೂ ಕುಡಿಯಲು ಕೆರೆ-ಕುಂಟೆ, ಹಳ್ಳ, ಬಾವಿಯ ನೀರನ್ನು ಅವಲಂಬಿಸಿದ್ದಾರೆ. ಪ್ರತಿ ವರ್ಷ ಅಶುದ್ಧ ನೀರಿನಿಂದ ಸಾವಿರಾರು ಮಂದಿ ರೋಗಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ.

ಅದನ್ನು ತಪ್ಪಿಸಲು ಗ್ರಾಮೀಣರಲ್ಲಿ ಶುದ್ಧ ನೀರಿನ ಕುರಿತು ಜಾಗೃತಿ ಮೂಡಿಸಿ ಸೌಲಭ್ಯ ಕಲ್ಪಿಸುವುದೇ ಪ್ರತಿಷ್ಠಾನದ ಉದ್ದೇಶ. ಈ ಅಭಿಯಾನದ ಹಿಂದೆ ಯಾವುದೇ ರಾಜಕೀಯ ಹಿತಾಸಕ್ತಿ ಅಡಗಿಲ್ಲ~ ಎಂದು ಸ್ಪಷ್ಟವಾಗಿ ಹೇಳುತ್ತಾರೆ ಪಾಟೀಲರು.

ಶುದ್ಧ ನೀರಿನ ಜಾಗೃತಿ ಮೂಡಿಸಲು ಹಳ್ಳಿಗಳಿಗೆ ತೆರಳಿದಾಗ ಪಕ್ಷಾತೀತವಾಗಿ ಬೆಂಬಲ ನೀಡುವ ಗ್ರಾಮಗಳ ಮುಖಂಡರು, ಜನಪ್ರತಿನಿಧಿಗಳು ಕಟ್ಟಡ ನಿರ್ಮಾಣಕ್ಕೆ ಧನಸಹಾಯ ಮಾಡುತ್ತಿರುವುದು ಅವರ ಉತ್ಸಾಹ ಹೆಚ್ಚಿಸಿದೆ.

ಗ್ರಾಮೀಣ ಪ್ರದೇಶಗಳೊಂದಿಗೆ ಅರೆ ನಗರ, ಪಟ್ಟಣಗಳಿಗೂ ಯೋಜನೆಯನ್ನುವಿಸ್ತರಿಸುವ ಉದ್ದೇಶ ಪ್ರತಿಷ್ಠಾನ ಹೊಂದಿದೆ. ನೀರಿನ ಘಟಕ ಸ್ಥಾಪನೆಗೆ ಬೇಕಾದ ಹಣಕ್ಕೆ ಗದಗ ಜಿಲ್ಲೆಯ ವಿವಿಧ ಉದ್ಯಮಗಳು, ಕೆ.ಎಚ್. ಪಾಟೀಲರು ಸ್ಥಾಪಿಸಿದ್ದ ಸಂಸ್ಥೆಗಳು ಹಾಗೂ ಎಚ್‌ಕೆ ಯವರ ಕುಟುಂಬದಿಂದ ದೇಣಿಗೆ ಸಂಗ್ರಹವಾಗುತ್ತಿದೆ.

ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಸಂಖ್ಯೆಯಲ್ಲಿ ತಲೆ ಎತ್ತಿದ್ದ ಖನಿಜಯುಕ್ತ ನೀರಿನ ಘಟಕಗಳ (ಮಿನರಲ್ ವಾಟರ್) ವಹಿವಾಟಿಗೆ ಈ ಅಭಿಯಾನದಿಂದ ಧಕ್ಕೆಯಾಗಿರುವುದಂತೂ ನಿಜ.


ಅವುಗಳ ಅಸಮಾಧಾನವನ್ನು ಧಿಕ್ಕರಿಸಿ ಪ್ರತಿಷ್ಠಾನ ಧಾರವಾಡ ಜಿಲ್ಲೆಯ ನಂತರ ಪಕ್ಕದ ಬೆಳಗಾವಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿಯೂ ತನ್ನ ಚಟುವಟಿಕೆ ಆರಂಭಿಸಿದೆ.ರಾಜ್ಯದ ಯಾವುದೇ ಭಾಗದ ಜನ ತಮ್ಮೂರಲ್ಲಿ ಶುದ್ಧ ನೀರಿನ ಘಟಕ ಆರಂಭಕ್ಕೆ ಆಸಕ್ತರಾಗಿದ್ದಲ್ಲಿ ಎಚ್. ಕೆ. ಪಾಟೀಲರ ಮೊಬೈಲ್ (97409 83448) ಸಂಪರ್ಕಿಸಬಹುದು.        


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT