ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಯ ನೆಲದಲ್ಲಿ `ಕಾರ್ನೇಷನ್'

Last Updated 8 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಸೌಂದರ್ಯದಿಂದ ಎಲ್ಲರ ಗಮನ ಸೆಳೆಯುತ್ತಿರುವ ಈ ಸುಂದರ ಪುಷ್ಪದ ಹೆಸರು ಕಾರ್ನೇಷನ್. ಕನ್ನಡದಲ್ಲಿ ಇದಕ್ಕೆ ಸರಿಸಮನಾದ ಪದ ಇಲ್ಲದಿದ್ದರೂ ನಿಘಂಟಿನ ಅರ್ಥ `ನಸುಗಂಪು ಗುಲಾಬಿ'. ಹಾಗಂತ ಇದು ನಸುಗಂಪು ಬಣ್ಣಕ್ಕೇ ಸೀಮಿತಗೊಂಡಿಲ್ಲ. ಬಿಳಿ, ಕೆಂಪು, ಹೀಗೆ ವಿವಿಧ ರಂಗುಗಳಲ್ಲಿ ಸೌಂದರ್ಯ ಸೂಸುತ್ತಾಳೆ ಈ ಸುರಸುಂದರಿ. ಮದುವೆ- ಮುಂಜಿ ಸೇರಿದಂತೆ ಸಮಾರಂಭಗಳಲ್ಲಿ ಇದರದ್ದೇ ಮೇಲುಗೈ. ಸೌಂದರ್ಯದ ಜೊತೆ ಸುಗಂಧ ಸೂಸುವುದು ಈ ಪುಷ್ಪಕ್ಕೆ ಇನ್ನೊಂದು ಪ್ಲಸ್ ಪಾಯಿಂಟ್. ಇದೇ ಕಾರಣಕ್ಕೆ ಇದಕ್ಕೆ ಭಾರೀ ಬೇಡಿಕೆ.

ಇಂಥ ಅಪೂರ್ವ ಕಾರ್ನೇಷನ್ ಅನ್ನು ಚಿಕ್ಕ ಗ್ರಾಮದಲ್ಲಿ ಬೆಳೆದು ಸಾಧನೆ ಮಾಡಿದ್ದಾರೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಕೋಣಂದೂರಿನ ರಾಘವೇಂದ್ರ. ತೀರ್ಥಹಳ್ಳಿ ಸಮೀಪದ ತ್ಯಾರಂದೂರಿನಲ್ಲಿದೆ ಇವರ ಪಾಲಿಹೌಸ್. `ಜೋಪಾರ್' ಸಂಸ್ಥೆಯಿಂದ 24ಸಾವಿರ ಗಿಡ ಖರೀದಿ ಮಾಡಿರುವ ಇವರು ಬೆಳೆದಿರುವ ಪುಷ್ಟಕ್ಕೆ ಈಗ ಎಲ್ಲೆಲ್ಲಿದ ಬೇಡಿಕೆ.
ಪಾಲಿ ಹೌಸ್

ಈ ಪುಷ್ಪ ಕೃಷಿಗೆ `ಪಾಲಿ ಹೌಸ್' ಅಗತ್ಯವಿದೆ. ಬೆಡ್ (ಏರಿ) ಕೂಡಾ ಸಿದ್ಧಪಡಿಸಿಕೊಂಡಿರಬೇಕು ಎನ್ನುತ್ತಾರೆ ರಾಘವೇಂದ್ರ. `ಬೆಡ್ 3 ಅಡಿ ಅಗಲ, 1 ಅಡಿ ದಾರಿ, 145 ಅಡಿ ಉದ್ದವಿದೆ. 10 ಗುಂಟೆ ವಿಸ್ತಾರವಿರಬೇಕು. ಗಿಡ ನೆಡುವಾಗ 15 ಸೆಂ.ಮೀ.ಗೆ ಒಂದರಂತೆ ನೆಡಬೇಕು. ಗಿಡನೆಟ್ಟ1 ತಿಂಗಳವರೆಗೆ ಪ್ರತಿದಿನ 3 ಬಾರಿ ನೀರು ಸಿಂಪಡಿಸುತ್ತಿರಬೇಕು. ನಂತರ ದಿನಕ್ಕೆ 7 ರಿಂದ 10 ನಿಮಿಷ ಹನಿ ನೀರಾವರಿಯಲ್ಲಿ ನೀರನ್ನು ಹರಿಸಬೇಕು. ವಾರಕ್ಕೆ ಮೂರು ಬಾರಿ ಕ್ರಿಮಿನಾಶಕ ಸಿಂಪಡಿಸಬೇಕು. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ' ಎಂಬ ಅನುಭವದ ಮಾತು ಅವರದ್ದು.

ನಾಲ್ಕು ತಿಂಗಳಲ್ಲಿ ಹೂವು
ನೆಟ್ಟ ನಾಲ್ಕು ತಿಂಗಳ ನಂತರ ಹೂ ಬಿಡಲು ಆರಂಭಿಸುತ್ತದೆ. ಅನಂತರ ದಿನಾ ಕೊಯ್ಲು ಮಾಡಲಾಗುವುದು. ಕೊಯ್ದ ತಕ್ಷಣ ಪ್ಯಾಕಿಂಗ್ ಮಾಡಿ ಬೆಂಗಳೂರಿಗೆ ಕಳುಹಿಸಲಾಗುವುದು. 20 ಹೂವಿನ ಒಂದು ಗೊಂಚಲು ಮಾಡಲಾಗುವುದು. ಮೊದಲು ಕೊಯ್ಲು ಮಾಡುವಾಗ 1/4  ಎಕರೆಯಲ್ಲಿ ಸುಮಾರು ಒಂದು ಸಾವಿರದಿಂತೆ ಹೂವು ಎರಡು ತಿಂಗಳು ದೊರೆಯುತ್ತದೆ. ಅನಂತರ ಸರಾಸರಿ 300 ರಿಂದ 400 ಹೂ ಕೊಡುತ್ತಿರುತ್ತದೆ.

ಸರಾಸರಿ 1ಹೂವಿಗೆ 3.50ರೂನಂತೆ ಮಾರುಕಟ್ಟೆ ಇದೆ. ಇದು ನಿರಂತರ ಏರು ಪೇರಿನಿಂದ ಒಳಪಡುತ್ತದೆ. ಯಾವುದೇ ಸಭೆ ಸಮಾರಂಭಗಳು ಇಲ್ಲದ ಸಂದರ್ಭದಲ್ಲಿ ಇದರ ಬೆಲೆ ಒಂದು ರೂಪಾಯಿಗೂ ಕುಸಿಯುತ್ತದೆ. ಹಾಗಂತ ನಿರಾಶರಾಗಬೇಕಿಲ್ಲ. ಈ ಹೂವಿಗೆ ಗರಿಷ್ಠ ಬೇಡಿಕೆ ಚೆನ್ನೈ ಮತ್ತು ಹೈದರಾಬಾದ್‌ನಲ್ಲಿದೆ. ಅದೇ ರೀತಿ ಹೆಚ್ಚು ಸಭೆ, ಸಮಾರಂಭಗಳು, ಮದುವೆ ಇರುವ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಒಂದು ಹೂವಿಗೆ 10 ರೂಪಾಯಿಗೂ ಏರುತ್ತದೆ' ಎನ್ನುತ್ತಾರೆ ಅವರು.

ಈ ಸುಂದರಿಗೆ ಕಾಡುವ ಅಪಾಯಕಾರಿ ಕಾಯಿಲೆ ಎಂದರೆ `ವೈಟ್ಸ್'. ಇದರ ನಿರ್ಮೂಲನಕ್ಕೆ ಕೆಲವು ಕೀಟನಾಶಕ ಸಿಂಪಡನೆ ಅಗತ್ಯ. ಜೊತೆಗೆ ಮುತುವರ್ಜಿಯಿಂದ ಇದರ ಕಾಳಜಿ ಮಾಡಬೇಕು. ದಿನವೂ ಗೊಬ್ಬರ ಕೊಡಬೇಕಾಗುತ್ತದೆ. ಹೀಗೆ ಜೋಪಾನದಿಂದ ಇದನ್ನು ಬೆಳೆದರೆ ಲಾಭ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT