ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಯ ಬದುಕು ಭಾವನಾತ್ಮಕ

Last Updated 20 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಮುಂಬೈ ಎಂಬ ಮಹಾನಗರಿಯ ಬದುಕು ತೀರಾ ಯಾಂತ್ರಿಕ. ಆದರೆ ಗ್ರಾಮೀಣ ಪ್ರದೇಶದಲ್ಲಿ ಕೃಷಿಯನ್ನು ವೃತ್ತಿಯಾಗಿಸಿಕೊಂಡವರ ಬದುಕು ಭಾವನಾತ್ಮಕ. ಅಲ್ಲಿ (ಮುಂಬೈ) ಸುಖವಿರಬಹುದು, ಹಳ್ಳಿಯಲ್ಲಿ ನೆಮ್ಮದಿ ಇದೆ~-

ಹೀಗೆಂದವರು ಸಂಯುಕ್ತ ಮಹೇಶ್. ರಾಷ್ಟ್ರೀಯ ಕೃಷಿ ಮೇಳದ ಕೊನೆಯ ದಿನವಾದ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರಿಂದ ಜಿಲ್ಲಾ ಮಟ್ಟದ ಶ್ರೇಷ್ಠ ರೈತ ಮಹಿಳೆ ಪ್ರಶಸ್ತಿ ಸ್ವೀಕರಿಸಿದ ಸಂಯುಕ್ತ ಮಹೇಶ್ ದಶಕಗಳ ಕಾಲ ಮುಂಬೈ ಮಹಾನಗರಿಯಲ್ಲಿ ನೆಲೆಸಿದ್ದವರು. ಇವರ ಪತಿ ಕ್ಯಾಪ್ಟನ್ ವಿ.ವಿ. ಮಹೇಶ್ ಅವರು ಏರ್ ಇಂಡಿಯಾ ಸಂಸ್ಥೆಯಲ್ಲಿ ಪೈಲಟ್ ಆಗಿ ಕೆಲಸ ಮಾಡುತ್ತಿದ್ದವರು. ಇಂಥ ಹಿನ್ನೆಲೆಯ ಸಂಯುಕ್ತ ಅವರು ಕೃಷಿಯೆಡೆಗೆ ಆಸಕ್ತಿ ತಾಳಿದ್ದೊಂದು ಅಚ್ಚರಿಯ ಕತೆ.

ಮುಂಬೈನ ಬೆಡಗಿನ ಜೀವನ ಬಿಟ್ಟು ಬೆಂಗಳೂರಿನ ಸಮೀಪದ ರಾಮೋಹಳ್ಳಿಯಲ್ಲಿರುವ ಕೃಷಿ ಭೂಮಿಯೆಡೆಗೆ ಹೆಜ್ಜೆ ಹಾಕಿದ್ದು ಏಕೆ ಎಂದು ಪ್ರಶ್ನಿಸಿದ `ಪ್ರಜಾವಾಣಿ~ಗೆ ಅವರು ನೀಡಿದ ಸಂದರ್ಶನ ಇಲ್ಲಿದೆ:

* ಏರ್ ಇಂಡಿಯಾ ಪೈಲಟ್ ಪತ್ನಿಯಾದ ನೀವು ಕೃಷಿಯೆಡೆಗೆ ಆಸಕ್ತಿ ತಾಳಿದ್ದು ಹೇಗೆ?

ನನ್ನ ತಂದೆಯ ಊರು ಹೈದರಾಬಾದ್. ಅಲ್ಲಿ ನಮ್ಮ ತಂದೆಗೆ ಸುಮಾರು 500 ಎಕರೆಯಷ್ಟು ವಿಸ್ತೀರ್ಣದ ಕೃಷಿ ಭೂಮಿ ಇತ್ತು. ನಾನು ಮದುವೆಯಾಗಿದ್ದು ಏರ್ ಇಂಡಿಯಾದಲ್ಲಿ ಪೈಲಟ್ ಆಗಿ ಕೆಲಸ ಮಾಡುತ್ತಿದ್ದ ವಿ.ವಿ. ಮಹೇಶ್ ಅವರನ್ನು.
 
ಮುಂಬೈನಲ್ಲಿ ದಶಕಗಳ ಕಾಲ ನಾವಿದ್ದೆವು. ಅವರು ವೃತ್ತಿಯಿಂದ ನಿವೃತ್ತರಾದ ನಂತರ ಮನಸ್ಸಿಗೆ ಖುಷಿ ನೀಡುವಂಥದ್ದೇನಾದರೂ ಮಾಡಬೇಕು ಅನ್ನಿಸಿತು. ಯಾವ ವೃತ್ತಿ ಖುಷಿ ನೀಡಬಹುದು ಎಂಬ ಯೋಚನೆಯಲ್ಲಿದ್ದಾಗ ಕೃಷಿಯತ್ತ ಮನಸ್ಸು ಸೆಳೆಯಿತು. ಅವರಿಗೆ (ಮಹೇಶ್) ಬೆಂಗಳೂರು ಸಮೀಪ ನಾಲ್ಕು ಎಕರೆ ಭೂಮಿಯ ಒಡೆತನ ಇತ್ತು. ಕಳೆದ 15 ವರ್ಷಗಳಿಂದ ಇಲ್ಲಿ ಕೃಷಿ ಚಟುವಟಿಕೆ ಮಾಡಿಕೊಂಡಿದ್ದೇವೆ.

* ಮುಂಬೈ ಜೀವನ ನೀಡುತ್ತಿದ್ದ ಖುಷಿಯನ್ನು ಹಳ್ಳಿಯ ಕೃಷಿ ಬದುಕು ನೀಡುತ್ತಿದೆಯಾ?
ಮುಂಬೈ ದೊಡ್ಡ ಮಹಾನಗರಿಯೇ ಆಗಿರಬಹುದು. ಆದರೂ ಅಲ್ಲಿನ ಬದುಕು ತೀರಾ ಯಾಂತ್ರಿಕ ಅನಿಸುತ್ತಿತ್ತು. ಕಳೆದ 15 ವರ್ಷಗಳಿಂದ ಇಲ್ಲಿ ಕೃಷಿ ಮಾಡಿಕೊಂಡಿರುವ ನಮಗೆ ಒಂದು ವಿಚಾರ ಸ್ಪಷ್ಟವಾಗಿದೆ. ಕೃಷಿ ಬದುಕು ಮಣ್ಣಿನೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸುತ್ತದೆ.

ಕೃಷಿ ಆರಂಭಿಸಿದಾಗಿನಿಂದ ನಾವು ಭೂಮಿಗೆ ರಾಸಾಯನಿಕ ಗೊಬ್ಬರ ಉಣಿಸಿಲ್ಲ, ಬೆಳೆಗಳಿಗೆ ರಾಸಾಯನಿಕ ಕೀಟನಾಶಕವನ್ನೂ ಸಿಂಪಡಿಸಿಲ್ಲ. ನಮ್ಮದು ಸಂಪೂರ್ಣ ಸಾವಯವ ಗೊಬ್ಬರ. ಸಾವಯವ ಕೃಷಿ ಪದ್ಧತಿಯ ಅನುಕರಣೆ ನಮ್ಮ ಖುಷಿಯನ್ನು ಇಮ್ಮಡಿಗೊಳಿಸುತ್ತದೆ.

* ನೀವು ಬೆಳೆಯುವ ಪ್ರಮುಖ ಬೆಳೆ ಯಾವುದು? ಕೃಷಿ ಲಾಭದಾಯಕ ಆಗಿದೆಯಾ?
ನಮ್ಮ ಕೃಷಿ ಭೂಮಿಯಲ್ಲಿ ವಿವಿಧ ಹಣ್ಣುಗಳನ್ನು ಪ್ರಮುಖವಾಗಿ ಬೆಳೆಯುತ್ತೇವೆ. ಇದಲ್ಲದೆ ತೆಂಗು, ಅಡಿಕೆ, ಅಲಂಕಾರಿಕ ಹೂವುಗಳನ್ನು ಬೆಳೆಯುತ್ತೇವೆ. ವಾರ್ಷಿಕ ಮೂರು ಲಕ್ಷ ರೂಪಾಯಿ ಗಳಿಸುತ್ತೇವೆ. ಸಂಪೂರ್ಣ ಸಾವಯವ ಪದ್ಧತಿಯನ್ನು ಅನುಸರಿಸುವ ಕಾರಣ ಉತ್ಪಾದನಾ ವೆಚ್ಚ ಕಡಿಮೆಯಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಕೂಲಿಯಾಳುಗಳ ಸಮಸ್ಯೆ ಹೆಚ್ಚಾಗುತ್ತಿರುವುದು ನಾಡಿನ ಎಲ್ಲ ಕೃಷಿಕರ ಕಳವಳಕ್ಕೆ ಕಾರಣ.
 
ಇದಕ್ಕೆ ತಕ್ಕ ಮಟ್ಟಿಗೆ ಪರಿಹಾರ ಕಂಡುಕೊಳ್ಳಲು ಯಾಂತ್ರೀಕೃತ ಕೃಷಿಗೆ ಮೊರೆಹೋಗಿದ್ದೇವೆ. ಆದರೂ ಕೂಲಿ ಕಾರ್ಮಿಕರ ಸಮಸ್ಯೆ ನಿವಾರಣೆಯಾಗದಿದ್ದರೆ ಕೃಷಿ ಕಸುಬು ಇನ್ನೂ ಸಂಕಷ್ಟಕ್ಕೆ ಸಿಲುಕಬಹುದು.

* ನಿಮ್ಮ ಮಕ್ಕಳನ್ನು ಕೃಷಿಯಲ್ಲಿ ತೊಡಗಿಸುತ್ತೀರಾ?

ಖಂಡಿತ ಅವರನ್ನು ಕೃಷಿಯೆಡೆಗೆ ಕರೆತರುವ ಕೆಲಸ ಮಾಡುತ್ತೇನೆ. ನನಗೆ ಮೂವರು ಮಕ್ಕಳು. ಒಬ್ಬ ಮಗ ಪೈಲಟ್ ಆಗಿ ಕೆಲಸ ಮಾಡುತ್ತಿದ್ದಾನೆ. ಇನ್ನಿಬ್ಬರು ಅಮೆರಿಕದಲ್ಲಿದ್ದಾರೆ. ನಾವು ಹಿಂದೆ ಮುಂಬೈನಲ್ಲಿದ್ದವರು ಕೃಷಿಯೆಡೆಗೆ ಹೊರಳಿದ್ದೇವೆ. ನನ್ನ ಮಕ್ಕಳೂ ಈಗೀಗ ಕೃಷಿಯೆಡೆಗೆ ಆಕರ್ಷಿತರಾಗುತ್ತಿದ್ದಾರೆ. ಕನಿಷ್ಟ ಒಬ್ಬನಾದರೂ ಇಲ್ಲಿಗೆ ಮರಳಿ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಾನೆ.

* ನೀವು ನಡೆಸುತ್ತಿರುವ ಶಾಲೆಯ ಕುರಿತು ಸ್ವಲ್ಪ ಮಾಹಿತಿ...
ನಾವು ನಡೆಸುತ್ತಿರುವ ಶಾಲೆ ಬುದ್ಧಿಮಾಂದ್ಯ ಮಕ್ಕಳಿಗೆ ಸೀಮಿತವಾಗಿದೆ. ಅಲ್ಲಿ ನಾವು ಮಕ್ಕಳ ಪೋಷಕರಿಂದ ಯಾವುದೇ ಶುಲ್ಕ ತೆಗೆದುಕೊಳ್ಳುವುದಿಲ್ಲ. ಅಲ್ಲಿಗೆ ಬರುವ ಮಕ್ಕಳಿಗೆ ಅಲ್ಪಸ್ವಲ್ಪ ಕೃಷಿ ಕೆಲಸವನ್ನೂ ಕಲಿಸುತ್ತೇವೆ. ಇದರಿಂದ ಆ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಕೃಷಿಯೆಡೆಗೆ ಬೆರಗು ಬೆಳೆಸಿಕೊಳ್ಳುತ್ತಾರೆ. ಮಕ್ಕಳಿಂದ ಕೃಷಿ ಕೆಲಸ ಮಾಡಿಸುವಾಗ ಸ್ವಲ್ಪ ಮಟ್ಟಿನ ತರಬೇತಿ ಬೇಕಾಗುತ್ತದೆ. ಅದನ್ನು ನಮ್ಮಲ್ಲಿ ಕೆಲಸ ಮಾಡುವವರಿಂದ ಕಲಿಸುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT